Friday, August 14, 2015

ಚಾರಣ್ಯಕವಿ ಚರಿತ್ರಕಾರನಾದಾಗ; ಕವಿ ಗೋವಿಂದ ವೈದ್ಯರ ಕಾವ್ಯ, ಕಂಠೀರವ ನರಸರಾಜ ವಿಜಯ*
ಡಾ. ಲೀಲಾ ಬಿ.
ಚಾರಣ ಕವಿಯೆಂದು ಕವಿ ಗೋವಿಂದ ವೈದ್ಯರನ್ನು ಮೊದಲು ಗುರುತಿಸಿ ಕರೆದವರು ಬೆಟಗೇರಿ ಕೃಷ್ಣಶರ್ಮರು. ಚಾರಣ ಗೀತೆಗಳನ್ನು ಹಾಡುವ ಕವಿಗಳು ರಾಜಸ್ಥಾನದಲ್ಲಿಯೂ ಮತ್ತು ಮಹಾರಾಷ್ಟ್ರದಲ್ಲಿಯೂ ಬಹಳ ಜನ ಸಿಗುವರು. ರಾಜರ ಸಾಹಸ, ಶೌರ್ಯ, ಯುದ್ಧ ಕೈಗೊಂಡ ರೀತಿ ಮನಮುಟ್ಟುವಂತೆ ಕಥಾರೂಪಕದಲ್ಲಿ ಹಾಡುವರು ಮತ್ತು ಹಾಡಿನ ಮೂಲಕ ದೇಶಪ್ರೇಮವನ್ನು ಹೊಡೆದೆಬ್ಬಿಸುವದು ಈ ಕವಿಗಳ ಉದ್ದೇಶ. ಮಧ್ಯಯುಗದಲ್ಲಿ ಇವರನ್ನು ‘ಷಾಹಿದ್’ ಎಂದು ಕರೆದರು. ಷಾಹಿದ್ ಎಂದರೆ ಪರ್ಷಿಯನ್ ಭಾಷೆಯಲ್ಲಿ ಹುತಾತ್ಮರು ಎಂದರ್ಥ. ಮಹಾರಾಷ್ಟ್ರದಲ್ಲಿ ‘ಶಾಹಿರ್‍ಗೀತ’ ಎಂದು ಕರೆಯಲ್ಪಟ್ಟಿತು. ಶಾಹಿರ್‍ಗೀತೆಗಳಲ್ಲಿ ವಿರಸ ತುಂಬಿದೆ. ಕರ್ಣಾಟಕದಲ್ಲಿ ಗೀಗಿ ಪದಮೇಳಗಳು ಇದನ್ನು ಹೋಲಿದರೂ, ಅದರಲ್ಲಿ ವೀರರಸಕ್ಕಿಂತ ಹೆಣ್ಣು, ಗಂಡುಗಳ ಹೊಡೆದಾಟವನ್ನು ಮಾತ್ರ ಕಾಣುತ್ತೇವೆ.
ಹಲವಾರು ಕನ್ನಡ ಸಾಮ್ರಾಜ್ಯಗಳು (ಕದಂಬರಿಂದ ಹೊಯ್ಸಳದವರೆಗೆ) ಅಂದರೆ 5-6 ಶತಮಾನದಿಂದ 15ನೇ ಶತಮಾನದವರೆಗೆ ಆಳಿದ್ದರೂ, ಅವರ ವೀರ ಪರಂಪರೆಯನ್ನು ಬಿಂಬಿಸುವ, ‘ಶಾಹಿರ್ ಗೀತೆ’ ಕಂಡುಬರುವುದಿಲ್ಲ. ಆದರೆ 19ನೇ ಶತಮಾನದಲ್ಲಿ ನಮಗೆ ಹಲವಾರು ಗೀತೆಗಳು ಕಂಡುಬರುವದು. ಬಹುಷಃ ಕನ್ನಡಿಗರ ಪರಾಧೀನ ಜೀವನ ಪರಂಪರೆಯಲ್ಲಿ ನಷ್ಟವಾಗಿರಬಹುದು.
ನಮಗೆ ಸಿಕ್ಕುವ ಮೊದಲನೆ ಚಾರಣ ಕವಿ ರಚನೆ; ಕವಿ ನಂಜುಂಡನ ಕುಮಾರರಾಮನ ಚರಿತ್ರೆ (1525). ಗಂಗಕವಿ, ಕುಮಾರರಾಮನನ್ನು ಆಧಾರವಾಗಿಟ್ಟು ಬರೆದ ಕಥೆ ‘ಕುಮಟಿರಾಮ’ (1651). ಕವಿ ನಂಜುಂಡನ ‘ಕುಮಾರರಾಮನ ಕಥೆ’ ಮೊದಲ ಚಾರಣಕವಿತೆಯೆಂದು ಬೆಟ್ಟಗೇರಿ ಕೃಷ್ಣಶರ್ಮರು ಖಚಿತವಾಗಿ ಅಭಿಪ್ರಾಯ ಪಡುತ್ತಾರೆ. ಇದು ಒಂದು ಐತಿಹಾಸಿಕವಾದ ಸಂಗತಿ. ಇದರಲ್ಲಿ ತುರುಕರೊಡನೆ ಕಾದಾಡಿದ ವೀರಕಥೆ ಇದೆ. ಇದರ ಸಮಗ್ರ ಕಥಾನಕವನ್ನು ಒ.ಊ.ಖಚಿmಚಿshಚಿಡಿmಚಿರವರು ‘Sಣuಜies iಟಿ ಗಿiರಿಚಿಥಿಚಿಟಿಚಿgಚಿಡಿ ಊisಣoಡಿಥಿ’ ಎಂಬ ಪ್ರಬಂಧದಲ್ಲಿ ಚರ್ಚಿಸಿರುವರು2. ಮತ್ತೊಂದು ಪ್ರಬಂಧ ‘ಇxಠಿಟoiಣs oಜಿ ಏಚಿmಠಿiಟಚಿ ಚಿಟಿಜ ಏumಚಿಡಿಚಿ ಖಚಿmಚಿಟಿಚಿಣhಚಿ3, ಸುದೀರ್ಘವಾಗಿ ಕೊಟ್ಟಿದೆ. ಮುಂದೆ ಹುಲ್ಲೂರು ಶ್ರೀನಿವಾಸ ಜೋಯಿಸರು4 ತಮ್ಮ ‘ಏumಚಿಡಿಚಿ ಖಚಿmಚಿ’ ಪ್ರಬಂಧದಲ್ಲಿ ಸಂಕ್ಷಿಪ್ತ ವರದಿ ಕೊಟ್ಟಿರುತ್ತಾರೆ. ಇವೆಲ್ಲಾ ಆಧಾರದಿಂದ ನಮಗೆ ಕುಮಾರರಾಮನ ಸಾಹಸ ಕಥಾನಕ ಚಿಂತನೆ ಇವುಗಳ ಲಭ್ಯವಿದೆ. 1960ರಲ್ಲಿ ಅನಂತರಂಗಾಚಾರ್ಯರ ಸಂಪಾದಕತ್ವದಿಂದ ಹೊರಬಂದ ಕುಮಾರರಾಮನ ಸಾಂಗತ್ಯ ಸಂಗ್ರಹದಲ್ಲಿ ಮೂಲರೂಪದಲ್ಲಿ ಸಾಹಿತ್ಯ ದೊರಕುತ್ತದೆ. “ಕುಮಾರರಾಮ”ನ ಸಾಂಗತ್ಯ ಕರ್ಣಾಟಕದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.
ಕವಿ ಗೋವಿಂದ ವೈದ್ಯ: ಗೋವಿಂದ ವೈದ್ಯರ ತಂದೆ ಶ್ರೀನಿವಾಸ ಪಂಡಿತರು, ಗೋವಿಂದ ವೈದ್ಯರ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ದೊರಕಿಲ್ಲ. ಕವಿ ತನ್ನ ಸ್ಥಳವನ್ನು ಹೇಳಿಲ್ಲ. ಆದರೆ ‘ಶ್ರೀ ಕಂಠೀರವ ನರಸರಾಜ ವಿಜಯ’ ಗ್ರಂಥದ ಆರಂಭದಲ್ಲಿ, ಮತ್ತು ಕೊನೆಯಲ್ಲಿ ಶ್ರೀರಂಗನಾಥನ ಸ್ತುತಿ ಇದೆ. ಅವರು ರಾಜನ ಆಸ್ಥಾನ ಕವಿಯಾದ್ದರಿಂದ, ಮೂಲತಃ ಶ್ರೀರಂಗಪಟ್ಟಣ ಸ್ಥಳವಾಗಿರಬಹುದೆಂದು ಅಭಿಪ್ರಾಯವಿದೆ5. ಕವಿ ಸಂಸ್ಕೃತ ಮತ್ತು ಕನ್ನಡದಲ್ಲಿ ಹೆಚ್ಚು ಪರಿಶ್ರಮ ಪಡೆದಿದ್ದರು. ಈ ಗ್ರಂಥವನ್ನು 1648ರಲ್ಲಿ ರಚಿಸಿದ್ದಾಗಿ ಗ್ರಂಥದ ಕೊನೆಯ ಪದ್ಯದಿಂದ ತಿಳಿದುಬರುತ್ತೆ. ಈ ಕಾವ್ಯವನ್ನು ತಾನು ಪದ್ಯದಿಂದ ರಚಿಸಿ ಭಾರತಿ ನಂಜುಂಡನೆಂಬುವನಿಂದ ರಾಜಾಸ್ಥಾನದಲ್ಲಿ ಓದಿಸಿದರು ಎಂಬುದಾಗಿ ಮುನ್ನುಡಿಯಲ್ಲಿ ತಿಳಿಸಿದೆ. ಇದರಲ್ಲಿ 26 ಸಂಧಿಗಳಿವೆ. ಇದರ ಶೈಲಿ ಷಟ್ಪದಿ ಗ್ರಂಥ ಶೈಲಿಯನ್ನು ಅನುಸರಿಸಿದೆ. ಸಾಮಾನ್ಯ ಮನುಷ್ಯನಿಗೆ ಅರ್ಥವಾಗುವ ಸಾಂಗತ್ಯ ವಾಕ್ಯದಿಂದ ರಚಿಸಿದೆ. ಇದರಲ್ಲಿ ವೀರರಸ ಪ್ರಧಾನವಾಗಿದೆ.  ದ್ರಾಕ್ಷಾಪಾಕದಂತಿದೆ ಎಂದಿದ್ದಾನೆ ಕವಿ. ಇದರಲ್ಲಿರುವ ವಿಶೇಷ ಚರಿತ್ರಾಂಶವೆಂದರೆ ಕವಿ ತಾನು ನೋಡಿದನ್ನು, ಕಂಡಿದ್ದನ್ನು ಮತ್ತು ಹಲವರಿಂದ ಕೇಳಿದ್ದನ್ನು ಯಥಾವತ್ತಾಗಿ ಬರೆದಿರುವದರಿಂದ ಈ ಪುಸ್ತಕ ಚರಿತ್ರಕಾರನಿಗೆ ಮಹತ್ವವೆನಿಸುತ್ತದೆ.
ಕಂಠೀರವ ನರಸರಾಜ ವಿಜಯ (1648): ಮೈಸೂರು ರಾಜರಾಗಿದ್ದ ಕಂಠೀರವ ನರಸರಾಜರನ್ನು ವರ್ಣಿಸುವ ರೋಮಾಂಚಕವಾದ ಶೂರರಾದ ಕಥೆ. ಇದರಲ್ಲಿ ಕನ್ನಡಿಗರು ತಮ್ಮ ದೊರೆಯ ಬಗ್ಗೆ ಹೆಮ್ಮೆ ಮತ್ತು ಸ್ಪೂರ್ತಿ ಪಡೆಯುವಂತಿದೆ. ರಾಜಸ್ಥಾನದಲ್ಲಿದ್ದರೂ ಕವಿ ಮುಖ್ಯವಾಗಿ ಜನ ಸಾಮಾನ್ಯರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಬರೆದದ್ದಾಗಿದೆ. ಈ ಕಾವ್ಯ ಸ್ವದೇಶಾಭಿಮಾನದಿಂದ ಕೂಡಿದೆ. ಕವಿ ತನ್ನ ಸ್ಪದೇಶಾಭಿಮಾನವನ್ನು ಹಲವಾರು ಬಾರಿ ಹೇಳಿರುವನು.
ಕಂಠೀರವ ನರಸರಾಜ 1638-59: ತಾಳೀಕೋಟೆಯ ಯುದ್ಧದ ನಂತರ ಇನ್ನೂರು ವರ್ಷದಲ್ಲಿ ದಕ್ಷಿಣ ಭಾರತದಲ್ಲಿ ಅತ್ಯಂತ ಪ್ರಭಾವ ಬೀರಿದ್ದು ಮೈಸೂರು ಒಡೆಯರ ವಂಶಸ್ಥರು. ಮೈಸೂರು ಕಂಠೀರವ ನರಸರಾಜ ಒಡೆಯರ್ (ಬೆಟ್ಟದ ಚಾಮರಾಜ ಒಡೆಯರ ಪುತ್ರ) ಎಲ್ಲಾ ವಿದ್ಯೆಯಲ್ಲೂ ಪಾರಂಗತರಿದ್ದರು. ನಂಜರಾಜ, ಲಿಂಗರಾಜ ಇವರ ಗುರುಗಳು. ಅಲಸಿಂಗಾಚಾರ್ಯರೂ ಇವರ ಗುರು. ಕಂಠೀರವ ನರಸರಾಜ ಒಡೆಯರ್ ಶ್ರೀರಂಗಪಟ್ಟಣದಲ್ಲಿ ರಾಜ್ಯವನ್ನು ಕಟ್ಟಿ ಸಕಲ ಸಾಮಂತರನ್ನೂ ಸ್ವಾಧೀನ ಪಡಿಸಿಕೊಂಡಿದ್ದರು. ಸುಲ್ತಾನ್ ಮಹಮೂದ್ ಖಾನ್ ಪಾದುಷ, ಬಿಜಾಪುರದ ರಾಜನು, ಕರ್ಣಾಟಕವನ್ನು ವಶಪಡಿಸಿಕೊಳ್ಳಲೆಂದು ರಣದುಲ್ಲಾಖಾನ್ ಎಂಬ ಸೇನಾಪತಿಯನ್ನು ಅಸಂಖ್ಯಾತ ಸೈನ್ಯದೊಂದಿಗೆ ಕಳುಹಿಸಿದನು. ರಣದುಲ್ಲಾಖಾನನು ಹಲವು ಪಾಳೇಗಾರರನ್ನು ಗೆದ್ದನಾದರೂ, ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಿ, ಆಕ್ರಮಿಸಿದರೆ, ಮಿಕ್ಕವರೆಲ್ಲಾ ತನ್ನ ಕೈವಶ ಆಗುವರೆಂದು ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಿದನು. ಆದರೆ ರಣಧೀರ ಕಂಠೀರವ ನರಸರಾಜ ಒಡೆಯರ್ ಮಹಾರಾಜರು ತಮ್ಮ ಸಾಹಸ ಶೌರ್ಯದಿಂದ ತುರುಕರನ್ನು ಸೋಲಿಸಿದ್ದಲ್ಲದೆ ಬಹಳ ಜನರಿಗೆ ಮೂಗು ಕತ್ತರಿಸಿ ಮುಖ ಭಂಗ ಮಾಡಿದರು. 1639ರಲ್ಲಿ ಖಾನ್‍ಖಾನ್ ಎಂಬುವನು ಶ್ರೀರಂಗಪಟ್ಟಣದ ದೊರೆಯ ಮೇಲೆ ತಾನು ಸಮರ್ಥವಾಗಿ ಯುದ್ಧ ಮಾಡಲಾರೆ ಎಂದು ದೂರದಿಂದಲೇ ಹಿಂದಿರುಗಿದನು. ಇನ್ನೊಬ್ಬ ಮುಸ್ತಾಫಾ ಖಾನ್ ದೊಡ್ಡದಾದ ಸೈನ್ಯದೊಡಗೂಡಿ ಬಂದರೂ ಕಂಠೀರವ ನರಸರಾಜರಿಂದ ಪರಾಜಿಸಲ್ಪಟ್ಟನು.
ಹೀಗೆ ಕಂಠೀರವ ನರಸರಾಜ ವಿಜಯ ಕನ್ನಡಿಗರು ತಮ್ಮ ಮತ್ತು ತಮ್ಮ ರಾಜನು, ತನ್ನ ದೇಶಕ್ಕಾಗಿ ಅಭಿಮಾನದಿಂದ ವೈರಿಗಳೊಂದಿಗೆ ಹೊಡೆದಾಡಿ ನಡೆಸಿದ ಯುದ್ಧ. ಆದ್ದರಿಂದ ಇದು ಚಾರಣ ಕವಿತೆ. ಇನ್ನು ಈ ಕಾವ್ಯದಲ್ಲಿರುವ ವೈವಿಧ್ಯತೆಯೆನ್ನು ಗುರುತಿಸೋಣ.
ರೂಢಿಯಿಂದ ಕೂಡಿದ ತಿಳಿಕನ್ನಡದಲ್ಲಿ ಜನ ಸಾಮಾನ್ಯನಿಗೆ ಅರ್ಥವಾಗುವ ಶೈಲಿಯಲ್ಲಿ ಇರುವ ಈ ಕಾವ್ಯದಲ್ಲಿ; ಜನರ ವೈವಿಧ್ಯತೆ, ಉಡುಪುಗಳು, ಸಾಮಾಜಿಕ ಜನಜೀವನ, ಯುದ್ಧ ತಯಾರಿಕೆ ಮತ್ತು ಶತ್ರುಗಳನ್ನು ಎದುರಿಸುವ ರೀತಿ ಹೇಳಿದೆ. ಅಂದಿನ ಸಾಮಾಜಿಕ ಜೀವನದ ಸಮಗ್ರ ಚಿತ್ರ ಇಲ್ಲಿದೆ. ಆದ್ದರಿಂದ ಇದನ್ನು ಸಾಮಾಜಿಕ ಚರಿತ್ರೆಯೆಂದರೆ ಉತ್ಪ್ರೇಕ್ಷೆಯಾಗಲಾರದು. ಇಲ್ಲಿ ಕರ್ಣಾಟಕದ ವರ್ಣನೆ ಕೇವಲ ಮೈಸೂರಿಗೆ ಮಾತ್ರ ಸೀಮಿತ. ಬಿಜಾಪುರ, ಉತ್ತರ ಕರ್ಣಾಟಕ ಸೇರಿಸಿಲ್ಲ. ಈ ಕಾವ್ಯದಲ್ಲಿ 26 ಸಂಧಿಗಳಿವೆ. 501 ಪುಟದ ಪುಸ್ತಕದಲ್ಲಿ ಹಲವಾರು ಚಾರಿತ್ರಿಕ, ಸಾಮಾಜಿಕ ವಿಷಯಗಳು ಇದ್ದರೂ ಕೂಡ ಹಲವನ್ನು ಮಾತ್ರ ಆರಿಸಿ ಕಾಣಿಸಿದೆ. (ವಿವರಗಳಿಗೆ ಅಡಿ ಟಿಪ್ಪಣಿ ನೋಡಿ)
ಕವಿಯ ದೇಶಾಭಿಮಾನ: ಮೈಸೂರು ಮತ್ತು ಮೈಸೂರು ರಾಜನ ಮೇಲೆ ಕವಿ ಅತ್ಯಂತ ಅಭಿಮಾನ ಹೊಂದಿದ್ದನು.  ಕಂಠೀರವ ನರಸರಾಜರ ಶೌರ್ಯವನ್ನು ವಿವರಿಸುತ್ತಾ,
(6) ಕರ್ಣಾಟಕವನ್ನು ಕೆಡಿಸಲು ಬಂದ ತುರುಕರ
ನಿರ್ಣಾಮ ಮಾಡಿ ಜಗವ
ಪೂರ್ಣದೆ ಸಲಹಿದ ಕಂಠೀರವೇಂದ್ರ ಸು
ಪರ್ಣವಾಹನ ಮೂರ್ತಿಯೈಸೆ |
ಎಂದು ಹೆಮ್ಮೆಯಿಂದ ಹೊಗಳಿರುವನು.
ಮಹಮ್ಮದೀಯರು ದಂಡೆತ್ತಿ ಬಂದ ಸಂಗತಿಯನ್ನು ಮತ್ತು ರಣದುಲ್ಲಾಖಾನನ ಸೈನ್ಯವು ಶ್ರೀರಂಗಪಟ್ಟಣಕ್ಕೆ ಧಾಳಿ ಮಾಡಿ ಮೊದಲು ಚಿಕ್ಕಪುಟ್ಟ ಪಾಳೆಗಾರರನ್ನೂ ಆಕ್ರಮಿಸಿ, ಹಲವು ಪ್ರದೇಶಗಳನ್ನೂ ಧೂಳಿಪಟ ಮಾಡಿದ್ದನು. ಕವಿ ಬಣ್ಣಿಸಿರುವುದು ಹೀಗೆ.
(7) ಕಣ್ಣಿನೊಳಗೆ ಖಾನ ಕನಸಿನೊಳಗೆ ಖಾನ
ಬಣ್ಣಿಸೆ ಮನದೊಳಗೆ ಖಾನ
ಕಿಣ್ಣವಡೆದ ಖಾನನ ಸುದ್ಧಿ ಜಪವಾಗಿ
ಬಣ್ಣಗೆಟ್ಟುದು ಲೋಕವೆಲ್ಲ
ಖಾನನ ಹಾವಳಿಗೆ ಕಂಗೆಟ್ಟು
(8) ಗಿಡುವಿನೊಳಗೆ ಹೆತ್ತವರ ಗರ್ಭಿಣಿಯರ
ನೊಡನೆ ಸಾಗಿಸಲಾರದವರು
ಕಡುಗಲಿ ರಣಧೂಳಿ ಖಾನನೊಬ್ಬರ ರಂಜಿ
ಯಡವಿಯ ಹೊಕ್ಕರೇನೆಂಬ
ಆದರೆ ರಣಧೂಳಿ ಖಾನನ ಆಟ ಹೆಚ್ಚು ದಿವಸ ನಡೆಯಲಿಲ್ಲ. ಕಗ್ಗೊಲೆ ಕಾಳಗದಲ್ಲಿ ಮೈಸೂರಿನ ವೀರರು ಹೆಸರುವಾಸಿ ಎಂಬುದನ್ನು ಕವಿ ತಿಳಿಸಿರುವನು.
ಕಗ್ಗೊಲೆಗಳ ಕಾಳಗದೆ ಮೈಸೂರವ
ರಗಳೆಯರು ಜನದೊಳಗೆ
ಬಗ ನಿಲ್ಲಿಂದೈದಿ ನಾವು ನಮ್ಮಯ ಗುಡಿ
ದುರ್ಗ ಹೊತ್ತಲಿ ನಿಲ್ಪೆನೆಂದ
ರಣಧೂಳಿಖಾನ್ ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಿದಾಗ ಕಂಠೀರವ ನರಸಿಂಹರಾಜರು, ಖಾನರನ್ನು ಸದೆ ಬಡಿದರು.
(9) ನರಸಿಂಹನ ದಿವ್ಯನಾಮಸ್ಮರಣೆಗೆ
ತರಿಕಗಲ್ ಪರಿದೋಡುವಂತೆ
ದೊರೆರಾಯ ಕಂಠೀರವೇಂದ್ರನ ಶೌರ್ಯವು
ಮುರಿಗೆಡೆದೋಡಿದರ್ಖಳರು
ನರಸಿಂಹನನ್ನು ಕೆಣಕಿದ ತುರುಕರು ತಮ್ಮ ದುರ್ಗತಿಯನ್ನು ತಾವೆ ಕಂಡುಕೊಂಡರು. ಅದಲ್ಲದೆ ತುರುಕರ ಬಲ ಕುಗ್ಗಿತು.
(10) ತುರುಗವ ಸುಳಿದು ಖಂಡೆಯವ ಬಿಸುಟು ನಮ್ಮ
 ಹೊರಟ ಸಲಹಿಕೊಳ್ಳೆನುತ
 ಕರವ ಮುಗಿದು ಕಲಿಗಳಿಗೆ ಬಿಡಿಸಿಕೊಂಡು
 ತುರುಕ ರಾವುತರೋಡಿದರು
ಖಾನ್ ಪರಾಭವಗೊಂಡು ತನ್ನ ಊರಿಗೆ ಹಿಂತಿರುಗಿದನು.
ಇದೆಲ್ಲಾ ಪದ್ಯಗಳನ್ನು ಓದುವಾಗ ಸ್ವದೇಶಾಭಿಮಾನ ಜಾಗ್ರತಗೊಳ್ಳುತ್ತದೆ.
ನಾವು ಈಗ ಶ್ರೀರಂಗ ಪಟ್ಟಣದ ವರ್ಣನೆ ನೋಡೋಣ: ಇಲ್ಲಿ ಬ್ರಾಹ್ಮಣರ ಬೀದಿ, ಕವಿಗಳ ಬೀದಿ, ಮಂತ್ರಿಗಳ ಶೃಂಗಾರ ಗೃಹ, ಕರುಣಿಕರ ಮನೆ, ರಾಜರಿಗೆ ನಿಮಿಷದಲ್ಲಿ ಸಲಹೆ ಕೊಡಲು, ಸಕಾಲದಲ್ಲಿ ಸೂಕ್ತ ಉತ್ತರ ನೀಡಲು ಹಲವಾರು ವಿದ್ವಾಂಸರಿದ್ದರು. ಮತ್ತು ಸಕಲರಿಗೂ ಔಷಧಿ ಒದಗಿಸಲು ಘನವೈದ್ಯರ ನಿಕರಕೇರಿ ಒಂದಿತ್ತು. ಇವರು ನಾಟಿ ವೈದ್ಯರಲ್ಲ. ಇವರಲ್ಲಿ ಘನವೈದ್ಯರಿದ್ದರು.
(11) ಸಕಲ ರುಜೆಯ ಔಷದಿಗಳನಿತ್ತು
 ಸುಖವ ಪುಟ್ಟಸಿ ಸರ್ವಜನಕೆ
 ಅಕಳಂಕರೆನಿಸಿ ಮೆರೆವ ಘನವೈದ್ಯರ
 ನಿಕರದ ಕೇರಿಯೊಪ್ಪಿದುವು.
ಶ್ರೀರಂಗಪಟ್ಟಣದ ವರ್ಣನೆಯಲ್ಲಿ ಮತ್ತೊಂದು ವಿಷಯ ಸರ್ವಕಾಲಕ್ಕೂ ಪ್ರಸ್ತುತವಾಗಿದೆ. ಧಾನ್ಯವನ್ನು ಬೆಳೆದು ಅದನ್ನು ಸರಿಯಾಗಿ ವಿತರಣೆ ಮಾಡುವದು, ಪಾಲಿಸಬೇಕಾದ ನಿಯಮ. ಆದರೆ, ನಿಯಮ ಈ ಕಾಲದಲ್ಲಿ ತಪ್ಪುತಿರುವದರಿಂದ ಈ ಪದ್ಯ ಇಂದಿಗೂ ಪ್ರಸ್ತುತವಾಗಿದೆ.
(12) ಅಕ್ಕರೊಳಗೆ ಬಹುಬಗೆಯ ಧಾನ್ಯಗಳನು
 ಚೊಕ್ಕಟವಾಗಿಯೆ ಬೆಳೆದು
 ಎಕ್ಕರುಳದೆ ಧರ್ಮಮಾರ್ಗದೆ ರಾಜಿಸು
 ವೊಕ್ಕಲಿಗರ ಕೇರಿಯಿಹುವು
ಮತ್ತೊಂದು ಕಡೆ ಮುತ್ತುಗಳನ್ನು ಮಾರಾಟ ಮಾಡುವ ಹಲವಾರು ಮಳಿಗೆಗಳಿದ್ದವು.
(13) ಹರಸಖ ನವನಿಧಿಗಳನೀ ಪುರದೊಳ
 ಗಿರಿಸಿದನೆಂಬಂದದಲಿ
 ಪಿರಿದೆನಿಸುವ ಹೊನ್ನ ರಾಸಿಗಳಿಂ ಬಿನ್ನ
 ವರದರ ಮಳಿಗೆಯೊಪ್ಪಿದುವು.
ಮುತ್ತಿನ ಮಳಿಗೆಗಳಲ್ಲಿ ಹಲವಾರು ವೈವಿಧ್ಯಮಯವಾದ ಮುತ್ತುಗಳನ್ನು ಜೋಡಿಸಿಟ್ಟಿರುವದನ್ನು ಮಳಿಗೆಗಳಲ್ಲಿ ಕಾಣಬಹುದಿತ್ತು. ಬಿಳಿಮುತ್ತು, ಕೆನ್ನೀರಮುತ್ತು, ಕಟ್ಟಾಣಿ ಮುತ್ತು, ಮೂಕುತಿ ಮುತ್ತು, ಕಂಠಮಾಲೆಯ ತೋರಮುತ್ತು ಹೀಗೆ ಹಲವು ಮುತ್ತುಗಳಿದ್ದವು.
ಒಂದೆಡೆ ಮುತ್ತಿನ ಮಳಿಗೆ ಇದ್ದಂತೆ, ಇನ್ನೊಂದೆಡೆ ಪವಳದ ಮಳಿಗೆ, ಸಣ್ಣ ಪವಳ, ಕೈಕಟ್ಟಿನ ಪವಳ, ಬಣ್ಣ ಸಂದ ಜಾತಿ ಪವಳ, ಹೀಗೆ ಉತ್ಕೃಷ್ಟವಾದ ಪವಳ ದೊರೆಯುತ್ತಿತ್ತು. ನೀಲದ ಸರ, ಮಾಣಿಕದ ಕುಚ್ಚು, ವಜ್ರದ ಮೇಲು ಗೊಂಚಲು ವೈಢೂರ್ಯದ ಬಲು ಸುಂದರವಾದ ಅಂಗಡಿಗಳು ಸಾಲಾಗಿದ್ದವು.
ಅತ್ಯುತ್ತಮವಾದ ಸೀರೆ ಜವಳಿಗಳ ಮಳಿಗೆಗಳ ಸುಂದರ ವರ್ಣನೆ ಇಲ್ಲಿ ಇದೆ. ನಾನಾ ವಿಧವಾದ, ವಸ್ತ್ರ ವಿನ್ಯಾಸ ಹಲವಾರು ಬಣ್ಣದೊಂದಿಗೆ ಅಂದವಾಗಿ ಜೋಡಿಸಿದೆ. ಪಪ್ಪುಳಿ ಸೀರೆ ಜವಳಿ ಮಳಿಗೆ ಸುಂದರವಾಗಿದೆ. ಮತ್ತೊಂದು ಕಡೆ ಇಲ್ಲಿ ಬೆಳೆಯುವ ಎಲ್ಲಾ ಹೂವುಗಳನ್ನು ಅಲಂಕಾರ ಮಾಡಿ ಜೋಡಿಸಿಟ್ಟಿರುವದು ವೈಶಿಷ್ಟ್ಯ.
ಕಸ್ತೂರಿ (ಕಸ್ತೂರಿ ಇರಬಹುದು) ಸೇವಂತಿಗೆ, ದುಂಡುಮಲ್ಲಿಗೆ, ಮೊತ್ತದ ಜಾಜಿ, ಸಂಪಿಗೆ ಹೂವು ಕಟ್ಟಿ ಮಾರುತ್ತಿರುವ ದೃಶ್ಯ. ಹೆಂಗಸರು ಅಂದವಾಗಿ ಹೂವುಗಳನ್ನು ಕಟ್ಟಿ ರಸ್ತೆಯ ಬದಿಯಲ್ಲಿ ಇಟ್ಟು ಮಾರುತಿದ್ದರು.
ಮತ್ತೊಂದು ಅತಿ ಮುಖ್ಯವಾದ ಕೆಲಸವೆಂದು ರಾಜ ಪರಿಗಣಿಸಿದ್ದು ಪ್ರಜಾಹಿತವನ್ನು ಸದಾ ಬಯಸುವ ವರ್ಗ. ಇವರ ಮುಖ್ಯವಾದ ಕೆಲಸ.
(14) ಭುವನದ ಬಡವರ ಬಿನ್ನಹವನಿತಂ
 ದವನೀಶ್ವರರಿಗೆ ಪೇಳಿ
 ತವಕದೆ ಕಾಣಿಸಿಯಿಷ್ಟಾರ್ಥಗೊಳಿಸುತಿ
 ರ್ಪವರ ಕೇರಿಗಳೊಪ್ಪುತಿಹುವು
ವರ್ತಕರನ್ನು ಕವಿ (ಹರದರ) ಎಂದು ಕರೆದಿದ್ದಾನೆ. ಇಲ್ಲಿ ಹಲವಾರು ಜನ ಯಾರಿಗೂ ವಂಚನೆ ಮಾಡದೆ ವ್ಯಾಪಾರ ಮಾಡುತ್ತಿರುವರು. ಬೀದಿಗೆ ಹತ್ತಿರವಾಗಿಯೇ ಸೂಳೆಗೇರಿ ಇದೆ. ಅನೇಕ ಹೆಂಗಳೆಯರು ಶೃಂಗಾರ ಮಾಡಿಕೊಂಡು ಪಗಡೆ, ಜೂಜಾಟ ನೆಪದಿಂದ ತಿರುಗುವರು (ಸೂಳೆಗೇರಿಯ ಸವಿಸ್ತಾರವಾದ, ವಾಸ್ತವವಾದ ಚಿತ್ರ ಕವಿ ವರ್ಣಿಸಿರುವನು).
ಕಲಾಜೀವನ: ಪ್ರಾಚೀನರು ಕಲೆಗೆ ಮಹತ್ವಸ್ಥಾನವನ್ನು ಕೊಟ್ಟಿರುವದನ್ನು ಕವಿ ಸುಂದರವಾಗಿ ಚಿತ್ರಿಸಿರುವನು. ಸಂಗೀತ ನೃತ್ಯದಲ್ಲಿ ಸ್ತ್ರೀಯರು ಅತ್ಯಂತ ಪರಿಣಿತರಾಗಿ ಭಾವಪೂರ್ಣ ಪ್ರದರ್ಶನವನ್ನು ದೊರೆಯ ಮುಂದೆ ಪ್ರದರ್ಶಿಸಿದಾಗ ದೊರೆಗಳು ಮೆಚ್ಚಿದರು.
(15) ಕರದೊಳು ಪಿಡಿದು ವೀಣೆಯ ವಾಣಿಯಂದದೆ
 ಕೊರಳು ಬೆರಳನೊಂದುಗೂಡಿ
 ಹರುಷದೆ ಪಾಡಿ ಗಾನಾಮೃತವನು ಕರ್ಣ
 ಕಿರದೆ ಸೂಸಿದಳೊರ್ವ ನೀರೆ
ಇಲ್ಲಿ ಹೆಂಗಳೆಯರು, ಮುಖ್ಯ ಪಾತ್ರವಹಿಸುವುದನ್ನು ನಾವು ಕಾಣಬಹುದು. ತರ್ಕಶಾಸ್ತ್ರ, ಪುರಾಣ ನೀತಿ ಚಿಂತಾಮಣಿ ಇವುಗಳ ಬಗ್ಗೆ ರಾಜರಿಗೆ ಬಣ್ಣಿಸಿ ರಾಜರ ಹೆಗ್ಗಳಿಕೆಗೆ ಹೆಂಗಳೆಯರು ಪಾತ್ರವಾಗಿರುವುದನ್ನು ಕಾಣಬಹುದು.
ಕವಿ, ಜನಸಾಮಾನ್ಯರ ಊಟದ ಬಗ್ಗೆ ಹೇಳದಿದ್ದರೂ, ಶ್ರೀಮಂತರ ಊಟ ಹೇಗೆ ಇರುತ್ತಿತ್ತೆಂದು ವರ್ಣಿಸಿರುವನು. ಇಲ್ಲಿ ನಮಗೆ ಹಲವಾರು ಉಪ್ಪಿನಕಾಯಿಗಳ ಪರಿಚಯವಾಗುವದು.
ಬಾಳಕ ಸಂಡಿಗೆ*, ಎಣ್ಣೆಯಲ್ಲಿ ಹುರಿದು ಮಾಡಿದ ಪಲ್ಯ ಸೀಕರಣೆ, ಕೋಸಂಬರಿ, ಪಚ್ಚಡಿ, ತೊಗರಿಬೇಳೆ ಸೂಪ (ತೊವ್ವೆ), ಸೊಪ್ಪಿನ ಮೇಲೋಗರ, ಹಾಲುಂಡೆ (ನಮ್ಮ ಫೆಡ) ಜೇನೊಡ (ಘೀವರ್) ಉದ್ದಿನಕಡುಬು, ಹೂರಣ ಕಡುಬು, ರೊಟ್ಟಿ ಉಂಡಲಿಗೆ ಮತ್ತು ವಿಧವಿಧವಾದ ಪಾಯಸ, ಮಂಡಿಗೆ ಬಿಸಿಯದೋಸೆ, ಸಣ್ಣಕ್ಕಿಯ ಪಾಯಸ, ಸಕ್ಕರೆಯ ಪಾಯಸ, ಗೌಲೆಯ ಪಾಯಸ, ನಾನಾ ತರಹದ ಪಾಯಸದ ಪರಿಚಯವಾಗುವದು.
ಇಂದಿನ ಕಲಬೆರಿಕೆ ಕಾಲದಲ್ಲಿ, ಆಗಿನ ಕಾಲದ, ಅಪ್ಪಟ ಹಾಲಿನ ವಿವರ ದೊರಕುವದು. ಚೆಲುಪಾಲು, ಕಂಬಾಲು, ಕೆನೆವೆರೆಸಿದ ಪಾಲು, ಬಟ್ಟಪಾಲು, ಗಟ್ಟಿಯಾದ ಕಟ್ಟು ಮೊಸರು ಸಿಕ್ಕುತ್ತಿತ್ತು.
ಊಟವಾದ ಮೇಲೆ ಕರ್ಪೂರದ ವೀಳ್ಯೆವನ್ನು ಕೊಡುವ ಪದ್ಧತಿ ಇತ್ತು.
ಉಡುಪುಗಳು: ಈಗಿನ ಕಾಲದಲ್ಲಿ ಎಲ್ಲರ ಉಡುಪು ಸಾಮಾನ್ಯವಾಗಿ ಒಂದೇ ತರಹ ಇರುತ್ತದೆ. ಆದರೆ ಅಧಿಕಾರ ವರ್ಗದಲ್ಲಿ, ಇದ್ದವರ ಆಗಿನ ಜನರ ಉಡುಪು ಆಕರ್ಷಕ ಪ್ರದರ್ಶನೀಯವಾಗಿದ್ದವು.
ಮಾಂಡಲೀಕರು: ಚೌಕಳಿ, ಹೊನ್ನಸರ ಕಡಗ, ಕಂಕಣ ಮೊದಲಾದ ಆಭರಣ ಧರಿಸಿ ಜನರು ನೋಡಿದ ತಕ್ಷಣ ಇವನು ಮಾಂಡಲೀಕ ಎಂದು ಗುರುತಿಸುತ್ತಿದ್ದರು. ಪೈರಣಿ ಮೇಲೆ ದುಪ್ಪಟ, ತಲೆಗೆ ಮುಂಡಾಸು ಧರಿಸುತ್ತಿದ್ದರು.
ನಾಯಕರು: ಮುಂಗೈಯ ಮುರಿ, ಮುರಡಿಯ ಸರಪಳಿ ಉಂಗುರ, ತೋಳು ಬಾಪುರಿಗಳಿಂದ ಸಿಂಗರಿಸಿಕೊಂಡಿರುತ್ತಿದ್ದರು. ರಾವುತರು ಮೈಗೆ ಹೊಕ್ಕಿಕೊಂಡಿರುವ ಹೊನ್ನದಗಲೆ, ದಿವ್ಯಾಯಕದ ಆಭರಣಗಳು ಬಿರುದಿನ ಚಂದೆಗಳಿಂದ ಕೂಡಿರುವರು. ಭಟರುಗಳು ಪಟ್ಟಿಯದಟ್ಟಿ, ಕುಂಕುಮ ಗಾಸೆ ಉಟ್ಟಿರುವರು ಒಂಟೆಯ ಸವಾರರು, ಉತ್ತರಿಗೆ, ಹೊನ್ನರಸ, ಘಂಟೆ ಸರಪಳಿ ಮುತ್ತಿನ ಕಡುಕಗಳಿಂದ ಶೋಭಿತರಾಗಿರುತ್ತಿದ್ದರು!
ಮೈಗಾವಲು ಊಳಿಗದವರು, ಚಿನ್ನದ ಹಂಡೆ, ಬಿರುದಿನ ಬೆಳ್ಳಿ ಕಟ್ಟಿನ ಬರ್ಜಿಗಳನ್ನು ಕೈಯಲ್ಲಿ ಹಿಡಿದುಕೊಂಡಿರುವರು.
ಹೆಂಗಸರ ಆಭರಣಗಳು: ವಿಧ ವಿಧವಾದ ಆಭರಣ ಪ್ರಿಯರಾದ ಹೆಂಗಸರ ಒಡವೆಗಳನ್ನು ಕವಿ ವರ್ಣಿಸಿರುವನು. ಅಂಗುಟಿಕೆ, ವೀರಮುದ್ರೆ, ಹೊನ್ನ ಕಾಲುಂಗರ, ಪಿಲ್ಲಿ, ಮೆಂಟಿಕೆ, ತಿರುಪಲ್ಲಿ, ಚರಣ ಪಂಡೆಯ, ಪಾಯವಟ್ಟ, ಹೊನ್ನಿನ ಘಂಟೆಸರ, ಕಟಿಸೂತ್ರ, ಕಾಂಚಿಧಾಮ, ಪ್ರಸ್ತ ಮುಕ್ತಳಿ, ರತ್ನ ಪದಕ, ರತ್ನದ ಬೊಟ್ಟು, ಹರಳೋಲೆ, ಚಿತಾಕು, ಮೂಗುತಿ, ಕಡಗ, ಕಂಕಣ, ಮುದ್ರೆಯುಂಗರ, ಚೌಸರ, ನೂಪರ ಕೊಪ್ಪು ವೆಂಟಿಯ ಚೌಳಿ, ಜಡೆಬಂಗಾರ, ಮೊದಲಾದ (ಕೊರಳು, ಕಿವಿ, ಮೂಗು, ಸೊಂಟ, ಕಾಲು, ತಲೆಗಳ ಚೆಲುವನ್ನು ಇಮ್ಮಡಿಸುವ ಆಭರಣ)ವನ್ನು ಧರಿಸುತ್ತಿದ್ದರು.
ಸರಿಗೆ ಅಂಚಿನ ರವಿಕೆ ಧರಿಸುತ್ತಿದ್ದರು, ಬೇರೆ ಬೇರೆ ಪ್ರಾಂತ್ಯದಿಂದ ಬಂದಂತ; ತೆಲುಗು, ಮಲಯಾಳ, ಕೊಡಗು, ತಿಗುಳ್ಯ ತುರುಕು ನಾರಿಯರ ಉಡುಗೆ ತೊಡುಗೆಗಳ ವರ್ಣನೆ ಕೂಡ ಸಿಗುತ್ತದೆ.
ಕುದುರೆಗಳು: ಕುದುರೆಗಳೂ ರಾಜರ ಆಸ್ಥಾನದಲ್ಲಿ ಮುಖ್ಯ ಸ್ಥಾನವನ್ನು ತೊಟ್ಟಿರುವುದು ಕಾಣುತ್ತದೆ. ಕುದುರೆಗಳನ್ನು ಅತ್ಯಂತ ಸುಂದರವಾಗಿ ಅಲಂಕರಿಸಲ್ಪಡುತ್ತಿದ್ದು, ಅದಕ್ಕೆ ನವರತ್ನದ ಕಾಲುಂಗುರ, ಗೆಜ್ಜೆ, ಮುತ್ತಿನ ಕುಚ್ಚು, ಜೇನುಗಳನ್ನು ಬಂಗಾರದ ಬಣ್ಣದ ಕಡಿವಾಣ, ಮೊಗಗನ್ನಡಿ, ಇರುತ್ತಿತ್ತು. ಕೊರಳಿಗೆ ಮುತ್ತಿನ ಸರದಿಂದ, ಸಿಂಗಾರ ಮಾಡಿರುತ್ತಿತ್ತು. ಹೊಕ್ಕುಳಲ್ಲಿ ಪುಟಾಣಿ ಘಂಟೆ ಇರುತ್ತಿತ್ತು.
ಇಲ್ಲಿ ಆನೆಗಳ ವರ್ಣನೆ ಕೂಡ ಇದೆ. ಆನೆಗಳ ಎರಡು ಕಿವಿಗಳಲ್ಲಿ ಮುತ್ತಿನ ಗೊಂಚಲನ್ನು ಕಟ್ಟಿರುವರು. ಎದೆಗೆ ದಪ್ಪಗಿನ ಹಗ್ಗಗಳನ್ನು ಕಟ್ಟಿರುವರ್ರು. ಹಣೆಯ ಮೇಲೆ ಕನ್ನಡಿಯಿಂದ ಶೋಭಿತವಾಗಿದ್ದು ಕೊರಳಲ್ಲಿ ಸರಘಂಟೆ ಪಕ್ಕೆಯಲ್ಲಿ ಘಂಟೆ ಬಿರುದಿನ ಪಟ, ಇವೆಲ್ಲದರಿಂದ ಸಿಂಗರಿಸ ಹೊರಟ ಆನೆಗಳು ರಾಜಠೀವಿಯಿಂದ ನಡೆಯುತ್ತಿದ್ದವು.
ದೇವಸ್ಥಾನದಲ್ಲಿ ನಡೆಯುವ ಸೇವೆ, ಕಟ್ಮಲೆ, ಉತ್ಸವ ಕವಿ ಸುಂದರವಾಗಿ ವರ್ಣಿಸಿದ್ದರೂ, ಅವುಗಳು ಸಂಪ್ರದಾಯವಾಗಿ 21ನೇ ಶತಮಾನದಲ್ಲೂ ನಡೆಯುತ್ತಿರುವದರಿಂದ ಅವುಗಳನ್ನು ವಿವರಿಸಿಲ್ಲ.
ಹೀಗೆ ಚಾರಣಕವಿ ಗೋವಿಂದ ವೈದ್ಯರು 1648ರಲ್ಲೇ ಕನ್ನಡಿಗರ ಜನರ ಸಂಸ್ಕೃತಿಯನ್ನು ಸರಳ ಕನ್ನಡಿಯಲ್ಲಿ ಬಿಂಬಿಸಿರುವದರಿಂದ, ಕಂಠೀರವ ನರಸರಾಜ ವಿಜಯ ಗ್ರಂಥವು ಕರ್ಣಾಟಕದ ಸಾಮಾಜಿಕ ಚರಿತ್ರೆಗೆ ಒಂದು ಅಮೂಲ್ಯ ಕೊಡುಗೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಮತ್ತು ಹಲವಾರು ವಿಷಯಗಳು, ಇಂದಿಗೂ ಆಚರಣೆಯಲ್ಲಿದೆ ಮತ್ತು ಅನುಕರಣೀಯವಾಗಿದೆ.
* ಈ ಗ್ರಂಥವನ್ನು ಬೇರೊಬ್ಬರು ಬರೆದಿರುವರು ಎಂಬ ಅಭಿಪ್ರಾಯವಿದೆ.

ಆಧಾರಸೂಚಿ
1. ಬೆಟಗೇರಿ ಕೃಷ್ಣಶರ್ಮ, ಕರ್ಣಾಟಕ ಜನಜೀವನ, ಬೆಂಗಳೂರು ವಿಶ್ವ ಕನ್ನಡ ಸಮ್ಮೇಳನ, 1983.
2. ಕಿuಚಿಡಿಣeಡಿಟಥಿ ಎouಡಿಟಿಚಿಟ oಜಿ ಣhe ಒಥಿಣhiಛಿ Soಛಿieಣಥಿ, ಗಿoಟ. ಘಿಘಿ. 1929-30.
3. ಕಿಎಒS ಗಿoಟ. ಘಿಘಿ ಆeಛಿ. 1929.
4. ಕಿಎಒS ಗಿoಟ. ಘಿಘಿಘಿII, 1941-42.
5. ಗೋವಿಂದ ವೈದ್ಯ; ಕಂಠೀರವ ನರಸರಾಜ ವಿಜಯ, ಪುಟ 9.
6. ಸಂಧಿ 18, ಪದ್ಯ 134 ಪುಟ 351.
7. ಸಂಧಿ 11, ಪದ್ಯ 54, ಪುಟ 210.
8. ಸಂಧಿ 11, ಪದ್ಯ 53, ಪುಟ 210.
9. ಸಂಧಿ 15, ಪದ್ಯ 105, ಪುಟ 292.
10. ಸಂಧಿ 15, ಪದ್ಯ 100, ಪುಟ 290.
11. ಸಂಧಿ 6, ಪದ್ಯ 42, ಪುಟ 92.
12. ಸಂಧಿ 6, ಪದ್ಯ 55, ಪುಟ 95.
13. ಸಂಧಿ 6, ಪದ್ಯ 65, ಪುಟ 95.
14. ಸಂಧಿ 6, ಪದ್ಯ 46, ಪುಟ 91.
15. ಸಂಧಿ 8, ಪದ್ಯ 74, ಪುಟ 150.

  `ಶ್ಯಾಮಲ’, ಪ್ಲಾಟ್ 46, 1ನೇ ಮಹಡಿ, ಡಾನ್‍ಬಾಸ್ಕೋ ಹೈಸ್ಕೂಲ್ ಹತ್ತಿರ, ಮಾತುಂಗ, ಮುಂಬೈ-400019.



No comments:

Post a Comment