Thursday, December 25, 2014

ಮರುವಸೆಯ ಕದಂಬರ ಕಾಲದ ಅಪ್ರಕಟಿತ ಶಾಸನ


ತೀರ್ಥಹಳ್ಳಿ ತಾಲ್ಲೂಕು ಮರುವಸೆಯ ಕದಂಬರ ಕಾಲದ
ಅಪ್ರಕಟಿತ ಶಾಸನ
ಪೆÇ್ರ ಜಿ.ಕೆ. ದೇವರಾಜ ಸ್ವಾಮಿ
ತೀರ್ಥಹಳ್ಳಿ ತಾಲ್ಲೂಕಿನ ಮರುವಸೆಯು ಪೌರಾಣಿಕ ಕಥಾನಕಗಳನ್ನೊಗೊಂಡು ತನ್ನ ಪ್ರಾಚೀನತೆಯನ್ನು ತಿಳಿಸುತ್ತದೆ. ಮರುವಸೆ (ಮೃಗವಧೆ)ಯಲ್ಲಿ ಪ್ರಾಚೀನ ಕಾಲದ ಆದಿ ಮಾನನು ಕ್ರಿ.ಪೂ. ಕಾಲದಲ್ಲಿ ಬರೆದ ಬಂಡೆಯ ರೇಖಾಚಿತ್ರಗಳು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನೂತನ ಶಿಲಾಯುಗದ ಆಯುಧಗಳು ದೊರೆತಿದೆ.1
ಮರುವಸೆಯಲ್ಲಿ ಕೆಳದಿ ಅರಸರ ಕಾಲದಲ್ಲಿ ಜೀರ್ಣೋದ್ಧಾರವಾದ ಮಲ್ಲಿಕಾರ್ಜುನ ದೇವಾಲಯವಿದೆ. ದೇವಾಲಯದ ಆವರಣದಲ್ಲಿ ಕ್ರಿ.ಶ. 11ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದ ತ್ರುಟಿತ ಶಾಸನವಿದೆ. ಕ್ರಿ.ಶ. 1162ರ ಕೋಡಿಮಠದ ಶಾಸನದಲ್ಲಿ ಮರುವಸೆಯನ್ನ ಕೇದಾರೇಶ್ವರ ದೇವಾಲಯದ ಕೈಂಕರ್ಯಗಳಿಗಾಗಿ ದಾನ ನೀಡಿದ್ದನ್ನು ದಾಖಲಿಸಿದೆ.2
ಮಲ್ಲಿಕಾರ್ಜುನ ದೇವಾಲಯವು ‘ಬ್ರಾಹ್ಮೀ’ ಎಂಬ ಚಿಕ್ಕನದಿಯ ದಂಡೆಯ ಮೇಲಿದೆ. ಇಲ್ಲಿಂದ ಎರಡು ಕಿ.ಮೀ. ದೂರದಲ್ಲಿ ಇದೇ ನದಿಗೆ ಹೊಂದಿಕೊಂಡಿರುವ ಬಂಡೆಯಲ್ಲಿ ಆದಿಮಾನವನು ಬರೆದ ಚಿತ್ರಗಳಿವೆ.
ಪ್ರಸ್ತುತ ಶಾಸನವು ಪ್ರಸ್ತುತ ದೇವಾಲಯದ ಹಿಂಭಾಗದ ಚೌಕಿಯ ಗೋಡೆಯಲ್ಲಿ ಸ್ಥಾಪಿತವಾಗಿದೆ. ಕಣಶಿಲೆಯಲ್ಲಿರುವ ಶಾಸನವು ಸುಮಾರು ಎರಡು ಅಡಿ ಉದ್ದ ಹಾಗೂ ಒಂದೂವರೆ ಅಡಿ ಅಗಲವಾಗಿದೆ. ಶಾಸನವು ಯಾವುದೇ ಚಿತ್ರಗಳಿಲ್ಲದೆ ಎರಡು ಸಾಲುಗಳಲ್ಲಿ ಕ್ರಮವಾಗಿ ನಾಲ್ಕು ಅಕ್ಷರದಂತೆ ಒಟ್ಟು ಎಂಟು ಅಕ್ಷರಗಳನ್ನು ಹೊಂದಿದೆ. ಅಕ್ಷರಗಳು ಸರಾಸರಿ ಎರಡೂವರೆ ಇಂಚು ಉದ್ದ ಹಾಗೂ ಎರಡು ಇಂಚು ದಪ್ಪವಾಗಿದ್ದು ಅಲಂಕಾರಯುತವಾಗಿದೆ. ಶಾಸನ ಪಾಠ: 1. ಗು ವ ಕ ದು, 2. ಯ ಮ ವಾ ದ ಅಕ್ಷರಗಳ ತಲೆಕಟ್ಟುಗಳನ್ನು ಚೌಕ ಮತ್ತು ಆಯುತಾಕಾರದಲ್ಲಿ ರಚಿಸಿ ಆಳವಾಗಿ ಕೊರೆಯಲಾಗಿದೆ. ಮೊದಲ ಸಾಲಿನ ಅಕ್ಷರಗಳಿಗೆ ಕೊಂಬು ನೀಡುವಾಗ ತಂಬಾ ಕೆಳಮುಖವಾಗಿ ಇಳಿಸಿ ಎಡದಿಂದ ಮೇಲ್ಭಾಗಕ್ಕೆ ಚಲಿಸಿ ಮೂಲ ಅಕ್ಷರಕ್ಕೆ ಸೇರಿಸಿ ಕೊಂಬು ನೀಡಲಾಗಿದೆ. ‘ವ’ ಅಕ್ಷರವನ್ನು ಕೆಳಮುಖವಾಗಿ ಇಳಿಸಿ ತುಂಬಾ ಉದ್ದರಚನೆಯನ್ನು ಹೊಂದಿದ್ದು ತಲೆಕಟ್ಟು ಮತ್ತು ಮೂಲ ಅಕ್ಷರದ ಅಂತರವನ್ನು ಹೆಚ್ಚಿಸಿದೆ.
‘ಕ’ಕಾರವು ‘ವ’ಕಾರದಂತೆ ಕಂಡರೂ ‘ಕ’ ಅಕ್ಷರದ ಅಡ್ಡಗೆರೆಯು ಬಲಕ್ಕೆ ಮುಂದುವರೆದು ಬಾಗಿದೆ. ‘ಕ’ ಅಕ್ಷರದ ಎಡಭಾಗ ಮತ್ತು ಬಲಭಾಗದಲ್ಲಿ ಕಲ್ಲುಚಕ್ಕೆ ಎದ್ದಿದೆ.
ಎರಡನೆಯ ಸಾಲಿನಲ್ಲಿ ಸಮಚೌಕಾಕೃತಿಯಲ್ಲಿ ಅಕ್ಷರಗಳಿದ್ದು, ತಲೆಕಟ್ಟನ್ನು ಚೌಕವಾಗಿ ರಚಿಸಲಾಗಿದೆ. ‘ವ’ ಅಕ್ಷರದ ತಲೆಕಟ್ಟು ಬಲಕ್ಕೆ ವೃದ್ಧಿಸಿ ತ್ರಿಕೋನಾಕೃತಿ ಹೊಂದಿದ್ದು. ‘ವಾ’ ದೀರ್ಘಾಕ್ಷರವನ್ನು ಸೂಚಿಸುವಂತೆ ರಚಿಸಿದೆ. ಬಲಭಾಗದ ರೇಖೆಗೆ ಸಮಾನಾಂತರ ರೇಖೆಯನ್ನು ಎಳೆದಿದೆ. ಇದು ಶಿಲ್ಪಿಯ ಅಚಾತುರ್ಯವೋ ಅಥವಾ ‘ವಾ’ ದೀರ್ಘಸೂಚನೆಯೇ ತಿಳಿಯದು.
ಈ ರೀತಿಯ ಲಿಪಿ ಸ್ವರೂಪದ ಕದಂಬ ಶಾಸನಗಳು ಕರ್ನಾಟಕದಲ್ಲಿ ದೊರೆತಿಲ್ಲದಿದ್ದರೂ ಸಾಮಾನ್ಯ ಹೋಲಿಕೆ ಇರುವ ಒಂದು ಶಾಸನ ಚಿತ್ರದುರ್ಗದ ಚಂದ್ರವಳ್ಳಿ ಸಮೀಪ ಹುಲಿಗೊಂದಿಯ ಬಂಡೆಯ ಮೇಲಿದೆ.3 ಇದರಲ್ಲಿ ಮೂರು ಅಕ್ಷರಗಳಿದ್ದು ‘ಮಯಮ’ ಎಂದಿದೆ. ಈ ಶಾಸನದ ‘ಮ’ ಮತ್ತು ‘ಯ’ ಅಕ್ಷರಗಳು ಮರುವಸೆಯ ಶಾಸನದ ‘ಮ’ ಮತ್ತು ‘ಯ’ ಅಕ್ಷರಗಳನ್ನು ಹೋಲುತ್ತವೆ. ಆದರೆ ಮರುವಸೆಯ ಶಾಸನದ ಅಕ್ಷರಗಳ ತಲೆಕಟ್ಟು ಸ್ಪಷ್ಟ ಚೌಕಾಕಾರ ಹೊಂದಿದ್ದು ಸ್ಪಷ್ಟ ಕದಂಬ ಲಿಪಿಯನ್ನು ಹೊಂದಿದೆ. ಚಿತ್ರದುರ್ಗದ ಶಾಸನ ಲಿಪಿಯು ಆಂತರಿಕ ಆಧಾರಗಳಿಂದ ಶಾತವಾಹನರ ಕಾಲದ್ದೆಂದು ಪÉÇ್ರ. ಲಕ್ಷ್ಮಣ ತೆಲಗಾವಿ ಅವರು ಕೃತಿಯಲ್ಲಿ ತಿಳಿಸಿದ್ದಾರೆ.4
ಮರುವಸೆಯ ಶಾಸನವು ಕದಂಬ ಕಾಲದ್ದೆಂದು ಸ್ಪಷ್ಟತೆಗೆ ಕಾರಣ ಲಿಪಿ ಸ್ವರೂಪ ಹಾಗೂ ಮಲ್ಲಿಕಾರ್ಜುನ ದೇವಾಲಯದ ಬಲಭಾಗದ ಕಾಡಿನಲ್ಲಿ ಗುರುತಿಸಲಾಗುತ್ತಿರುವ ಅರಮನೆ ಕೋಟೆ ಎಂದು ಗುರುತಿಸುತ್ತಿರುವ ಸ್ಥಳದ ಪ್ರಾಚ್ಯಾವಶೇಷಗಳು. ಇಲ್ಲಿ ಎತ್ತರವಾದ ದಿಣ್ಣೆ ಹಾಗೂ ಗೋಡೆ ರೀತಿಯಲ್ಲಿರುವ ರಚನೆ, ತಳಪಾಯಗಳು ಇತ್ಯಾದಿ. ಮುಖ್ಯವಾಗಿ ಈ ಕಟ್ಟಡಗಳಿಗೆ ಬಳಸಿದ ಇಟ್ಟಿಗೆಯು ಈವರೆಗೆ ಕದಂಬರ ಕಾಲದ್ದೆಂದು ಹೇಳುವ ಇಟ್ಟಿಗೆಗೆ ಸಮನಾದ ಉದ್ದ ಹಾಗೂ ದಪ್ಪಗಳನ್ನು ಹೊಂದಿದೆ. ಇಟ್ಟಿಗೆಯ ಬಣ್ಣವೂ ಕೂಡ ಕದಂಬ ಉತ್ಖನನಗಳಲ್ಲಿ ದೊರೆತ ಇಟ್ಟಿಗೆ ಬಣ್ಣಕ್ಕೆ ಸರಿ ಹೊಂದುತ್ತದೆ. ಈಗಲೂ ಇಟ್ಟಿಗೆಗಳನ್ನು ಕಾಣಬಹುದಾಗಿದೆ. ಸ್ಥಳೀಯ ವಿದ್ವಾಂಸರೂ ಸಂಶೋಧಕರೂ ಆದ ಶ್ರೀಧರ ಅವರು ತಮ್ಮ ಮನೆಯಲ್ಲಿ ಸಂಗ್ರಹಿಸಿದ್ದಾರೆ.
ಮರುವಸೆ ಪ್ರದೇಶವು ಬನವಾಸಿ ಮಹಾಮಂಡಲಕ್ಕೆ ಸೇರಿದ ಸ್ಥಳವೂ, ನಂತರ ನಾಗರಕಂಡ 70ರ ಭಾಗವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಶಾಸನ, ಪ್ರಾಚ್ಯಾವಶೇಷ ಹಾಗೂ ಇಂದಿಗೂ ‘ಮರುವಸೆ’ ‘ಹೊಸಬೀಡು’ ‘ಅರಮನೆಕೇರಿ’ ಎಂಬ ಸ್ಥಳನಾಮಗಳನ್ನು ಎರಡು ಕಿ.ವಿೂ. ಅಂತರದಲ್ಲಿ ಹೊಂದಿದೆ. ಇದನ್ನು ಗಮನಿಸಿದಾಗ ಸ್ಥಳೀಯ ರಾಜವಂಶ (ಕದಂಬಶಾಖೆ?)ವು ಕಾರಣಾಂತರದಿಮದ ಈ ಸ್ಥಳಗಳಲ್ಲಿ ಸ್ಥಾನಪಲ್ಲಟವಾಗಿರುವುದನ್ನು ಸೂಚಿಸುತ್ತದೆ.
ಪ್ರಸ್ತುತ ಶಾಸನವು ಅಲಂಕಾರಿಕ ಲಿಪಿ ಸ್ವರೂಪ ರಚನೆ ಇದ್ದು ಕದಂಬ ಕಾಲದ ಲಿಪಿ ಅಧ್ಯಯನ ದೃಷ್ಟಿಯಿಂದ ಮಹತ್ವದ್ದಾಗಿದೆ. ಶಾಸನೋಕ್ತ ‘ಗುವಕದು’ ಮತ್ತು ‘ಯಮವಾದ’ ಎಂಬ ಪದಗಳ ಅರ್ಥ ಸ್ಪಷ್ಟವಿಲ್ಲ. ಕದಂಬ ಕೃಷ್ಣವರ್ಮನ ಅರೇತಲಗದ್ದೆ ಶಾಸನದಲ್ಲಿ 109 ಬ್ರಾಹ್ಮಣರ ಗೋತ್ರ ಚರಣ ಹೆಸರಿಸಿದೆ ಈರೀತಿಯ ಹೋಲಿಸಬಹುದಾದ ಪದಗಳು ಮರುವಸೆ ಶಾನಸದಲ್ಲಿ ಬಂದಿವೆ.5 ಉದಾಹರಣೆ: ಗೋದುಕನ್ದ, ಗೋದುಭವ, ಗೋದುದಿವಾ ಮುಂತಾದವು. ಆದ್ದರಿಂದ ಈ ಶಾಸನೋಕ್ತ ಪದಗಳು ವ್ಯಕ್ತಿಯ ಹೆಸರಿಗೆ ಸಂಬಂಧಿಸಿದ್ದಾಗಿರಬೇಕು. ಈ ಶಾಸನದ ಕಾಲವನ್ನು ಕ್ರಿ.ಶ. ಸುಮಾರು 5ನೇ ಶತಮಾನವೆಂದು ಹೇಳಬಹುದು. ಉತ್ಖನನವಾದಲ್ಲಿ ಹೆಚ್ಚಿನ ಐತಿಹಾಸಿಕ ಅಂಶವು ದೊರೆಯುವುದು. ಒಟ್ಟಾರೆ ಮರುವಸೆ (ಮೃಗವಧೆ)ಯು ಪ್ರಾಗೈತಿಹಾಸಿಕ ಕಾಲದಿಂದ ಈ ವರೆಗೂ ಜನಸಮುದಾಯದಿಂದ ಕೂಡಿ ತನ್ನ ಮಹತ್ವವನ್ನು ಹೆಚ್ಚಿಸಿಕೊಂಡು ಪ್ರಸ್ತುತ ಪ್ರಸಿದ್ಧ ಕ್ಷೇತ್ರವಾಗಿದೆ.
[ಈ ಸಂಶೋಧನೆಯಲ್ಲಿ ನನಗೆ ಹೆಚ್ಚಿನ ಮಾಹಿತಿ ಹಾಗೂ ಸಹಾಯ ನೀಡುತ್ತಿರುವ ಮೃಗವಧೆಯ ಗೆಳೆಯರಾದ ಶ್ರೀಧರ್ ಹಾಗೂ ಸೂರ್ಯನಾರಾಯಣ ಸಹೋದರರಿಗೆ ನನ್ನ ಕೃತಜ್ಞತೆಗಳು.]

ಆಧಾರಸೂಚಿ ಮತ್ತು ಟಿಪ್ಪಣಿಗಳು
1. ಇತಿಹಾಸ ದರ್ಶನ ಸಂಪುಟ, 16, (2001), ಮೃಗವಧೆಯಲ್ಲಿ ಪ್ರಾಗೈತಿಹಾಸಿಕ ಚಿತ್ರಗಳು, ಪುಟ 12-13.
2. E.C. Nl VIII part I,, ಶಿಕಾರಿಪುರ 102 102 (Rice) page 192-193, [ಮರುವಸೆ ಬಗ್ಗೆ ಸ್ಪಷ್ಟವಾಗುತ್ತಿಲ್ಲವೆಂದು ವಿದ್ವಾಂಸರು ಬರೆದಿದ್ದಾರೆ. ತೀರ್ಥಹಳ್ಳಿ ತಾಲ್ಲೂಕಿನ ಮೃಗವಧೆಯೇ ಮರುವಸೆ ಎಂಬುದರಲ್ಲಿ ಸಂಶಯವಿಲ್ಲ. ಲೇ].
3. ಮೌರ್ಯ ಮತ್ತು ಶಾತವಾಹನ ಯುಗ, ಪÉÇ್ರ. ಲಕ್ಷ್ಮಣ ತೆಲಗಾವಿ, ಪ್ರಸಾರಂಗ, ಕ.ವಿ.ವಿ., ಹಂಪಿ, 2004,  ಪುಟ 156-157.
4. ಅದೇ.
5. ಕದಂಬರ ಅರತಲಗದ್ದೆಯ ಅಪೂರ್ವ ತಾಮ್ರ ಶಾಸನಗಳ ಭಂಡಾರ, ಡಾ. ಎಸ್.ಜಿ. ಸಾಮಕ್, ಡಾ. ಜಗದೀಶ, ಡಾ.
ಎಂ.ವಿ. ರಮೇಶ್ ಜೋಯಿಸ್, ಕರ್ನಾಟಕ ಇತಿಹಾಸ ಸಂಶೋಧನ ಮಂಡಲ, ಧಾರವಾಡ, 2008, ಪುಟ 10-11.

   # 56, `ತ್ರಯೀ’ ಮೈಸೂರು ಲ್ಯಾಂಪ್ಸ್ ಲೇಔಟ್, ಚನ್ನನಾಯಕನ ಪಾಳ್ಯ, 2ನೇ ಹಂತ, ನಾಗಸಂದ್ರ ಅಂಚೆ, ಬೆಂಗಳೂರು-72.

No comments:

Post a Comment