Friday, May 30, 2014

ವಿಷ್ಣುವರ್ಧನನ ಕಾಲದ ಶಾಸನೋಕ್ತ ಮಂಡ್ಯ ಪ್ರದೇಶ

ಹೊಯ್ಸಳ ವಿಷ್ಣುವರ್ಧನನ ಕಾಲದ   ಶಾಸನೋಕ್ತ ಮಂಡ್ಯ ಪ್ರದೇಶ

ಡಾ. ಎಸ್. ಶಿವರಾಮು

ಮಂಡ್ಯ ಜಿಲ್ಲೆಯಲ್ಲಿ ಇದುವರೆಗೂ ಹೊಯ್ಸಳ ವಂಶಕ್ಕೆ ಸಂಬಂಧಿಸಿದಂತೆ ಸುಮಾರು 246 ಶಾಸನಗಳು ವರದಿಯಾಗಿವೆ. ಈ ಶಾಸನಗಳ ಪೈಕಿ ಹೊಯ್ಸಳ ವಿಷ್ಣುವರ್ಧನನ ಕಾಲಕ್ಕೆ ಸಂಬಂಧಿಸಿದಂತೆ ಸುಮಾರು 32ಕ್ಕೂ ಹೆಚ್ಚು ಶಾಸನಗಳು ಲಭ್ಯವಿದ್ದು, ರಾಜಕೀಯ ಮಹತ್ವದ ದೃಷ್ಟಿಯಿಂದ ಈತನ ಕಾಲದ ಶಾಸನಗಳು ಗಮನಾರ್ಹವಾಗಿವೆ.
ಒಂದನೆಯ ಬಲ್ಲಾಳನ ನಂತರ ಕ್ರಿ.ಶ.1108ರಲ್ಲಿ ವಿಷ್ಣುವರ್ಧನನು ಸಿಂಹಾಸನವನ್ನೇರಿ 1152ರವರೆಗೂ ಪ್ರಬಲನಾಗಿ ಆಳ್ವಿಕೆ ಮಾಡಿದನು. ಹೊಯ್ಸಳ ಚಕ್ರವರ್ತಿಗಳ ಪೈಕಿ ಈತನನ್ನು ರಾಜಕೀಯವಾಗಿ ಹಾಗೂ ಆಡಳಿತಾತ್ಮಕವಾಗಿ ಅತ್ಯಂತ ಜನಪ್ರಿಯ ರಾಜನೆಂದು ಪರಿಗಣಿಸಲಾಗಿದೆ. ವಿಷ್ಣುವರ್ಧನನು ಗಂಗವಾಡಿ ಪ್ರಾಂತದ ಮೇಲೆ ಪ್ರಭುತ್ವ ಸಾಧಿಸುವ ಯತ್ನದಲ್ಲಿ ಚೋಳರನ್ನು ಮೂಲೋತ್ಪಾಟನೆ ಮಾಡಿ, ಆ ಪ್ರಾಂತವನ್ನು ವಶಪಡಿಸಿಕೊಂಡು ಜೋಳ ಸಾಮಂತ ಆದಿಯಮ ಹಾಗೂ ದಂಡನಾಯಕ ನರಸಿಂಹವರ್ಮರನ್ನು ಕಂಚಿಯವರೆವಿಗೂ ಬೆನ್ನಟ್ಟಿ ಹೋಗಿ ಚೋಳರ ಸೊಕ್ಕನ್ನು ಮುರಿಯುವಲ್ಲಿ ವಿಷ್ಣುವರ್ಧನನ ದಂಡನಾಯಕ ಗಂಗರಾಜನ ಪಾತ್ರ ಮಹತ್ತರವಾದದು. ಈ ಮಹತ್ತರವಾದ ಸಾಧನೆಯನ್ನು ಮದ್ದೂರು ತಾಲ್ಲೂಕಿನ ಕ್ರಿ.ಶ.1117ಕ್ಕೆ ಸೇರಿದ ತಿಪ್ಪೂರಿನ ಶಾಸನವು ತಿಳಿಸುತ್ತದೆ. ಈ ಗ್ರಾಮವನ್ನು ಅರಸನಿಂದ ಕೊಡುಗೆಯಾಗಿ ಪಡೆದ ಗಂಗರಾಜನು ಅದನ್ನೇ ತನ್ನ ಗುರು ಮೂಲಸಂಘ ಕಾಣೂರ್ಗಣ ಮತ್ತು ತಿಂತ್ರಿಣಿಗಚ್ಚದ ಮೇಘಚಂದ್ರ ಸಿದ್ಧಾಂತದೇವರಿಗೆ ದಾನ ನೀಡಿದ್ದನ್ನು ತಿಳಿಸುತ್ತದೆ.1 ವಿಷ್ಣುವರ್ಧನನು ತಲಕಾಡನ್ನು ಗೆಲ್ಲಲು ಹಲವು ಸಾಮಂತರ ಸಹಾಯವನ್ನು ಪಡೆದುಕೊಂಡನು. ಆನಂತರ ಈ ಕಾರ್ಯವನ್ನು ಹೆಚ್ಚಿನ ಸಾಮಥ್ರ್ಯವನ್ನು ಹೊಂದಿದ್ದ ಮತ್ತು ಅಪಾರ ವಿಶ್ವಾಸವನ್ನಿಟ್ಟಿದ್ದ ದಂಡನಾಯಕ ಗಂಗರಾಜನಿಗೆ ವಹಿಸಿದ್ದನು. ಅವನಿಗೆ ತಿಪ್ಪೂರು ಗ್ರಾಮವಲ್ಲದೇ ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಗ್ರಾಮವನ್ನೂ ದತ್ತಿಯನ್ನಾಗಿ ನೀಡಿ ಪೆÇ್ರೀತ್ಸಾಹಿಸಿದನು.2 ಕ್ರಿ.ಶ.1114ರ ಶಾಸನಗಳು ಕೂಡ ವಿಷ್ಣುವರ್ಧನನು ‘ತಲಕಾಡುಗೊಂಡ’ ಎಂಬ ಬಿರುದನ್ನು ಧರಿಸಿದನೆಂದು ತಿಳಿಸುತ್ತವೆ.3 ಕ್ರಿ.ಶ.1114ರಿಂದ ಚೋಳರ ಶಾಸನಗಳು ತಲಕಾಡಿನಲ್ಲಿ ದೊರಕದೆ ಇರುವುದರಿಂದ ಕ್ರಿ.ಶ.1114ರ ವೇಳೆಗೆ ಅವರ ಆಳ್ವಿಕೆ ಅಂತ್ಯಗೊಂಡು ಹೊಯ್ಸಳರು ತಮ್ಮ ಅಧಿಕಾರವನ್ನು ಸ್ಥಾಪಿಸಿದುದು ಮನದಟ್ಟಾಗುತ್ತದೆ.4 ಇದರ ಜೊತೆಗೆ ಅವನು ‘ವೀರಗಂಗ’ ಎಂಬ ಬಿರುದನ್ನು ಧರಿಸಿದನೆಂದು ವಿಷ್ಣುವರ್ಧನನು ಹೊರಡಿಸಿದ ಶಾಸನಗಳಿಂದ ಮೊಟ್ಟ ಮೊದಲನೆಯದಾಗಿ ತಿಳಿದುಬರುತ್ತದೆ.5 ವಿಷ್ಣುವರ್ಧನನ ಸೋದರ ವಿನಯಾದಿತ್ಯನು ಕ್ರಿ.ಶ.1120ರ ಸುಮಾರಿಗೆ ಶ್ರೀರಂಗಪಟ್ಟಣದಲ್ಲಿ ಅಧಿಕಾರಿಯಾಗಿದ್ದು, ನಂತರ ಬಹುಶಃ ಅವನು ಚೋಳರ ವಿರುದ್ಧ ಯುದ್ಧದಲ್ಲಿ ಹತನಾದನೆಂದು ತಿಳಿದುಬರುತ್ತದೆ. ಇದಲ್ಲದೇ ಮಂಡ್ಯ ಜಿಲ್ಲೆಯ ತೊಣ್ಣೂರು ಹೊಯ್ಸಳರ ಕಾಲದಲ್ಲಿ ಒಂದು ಪ್ರಮುಖ ಆಡಳಿತ ಕೇಂದ್ರವಾಗಿತ್ತು. ತೊಣ್ಣೂರು ವಿಷ್ಣುವರ್ಧನನ ದ್ವಿತೀಯ ರಾಜಧಾನಿಯಾಗಿತ್ತೆಂಬ ಅಭಿಪ್ರಾಯವೂ ಇದೆ. ನಾಗಮಂಗಲ ತಾಲ್ಲೂಕಿನ ಕಂಬದಹಳ್ಳಿಯ ಶಾಸನವು ಹೊಯ್ಸಳ ವಿಷ್ಣುವರ್ಧನನ ಪರವಾಗಿ ಪಿರಿಯ ದಂಡನಾಯಕ ಗಂಗರಾಜನು ಚೋಳರ ವಶದಲ್ಲಿದ್ದ ತಲಕಾಡನ್ನು ದಾಳಿ ಮಾಡಿ ವಶಪಡಿಸಿಕೊಂಡ ವಿಷಯವನ್ನು ಪ್ರಸ್ತಾಪಿಸುತ್ತದೆ. ಇದೇ ಶಾಸನವು ಬಿಂಡಿಗನವಿಲೆಯ ತೀರ್ಥಕ್ಕಾಗಿ ನೀಡಿದ ಭೂದಾನವನ್ನು ಉಲ್ಲೇಖಿಸುತ್ತದೆ.6
ಕನ್ನಂಬಾಡಿಯ ಕ್ರಿ.ಶ.1118ರ ಶಾಸನವು ವಿಷ್ಣುವರ್ಧನನು ತಲಕಾಡಿನಿಂದ ಆಳುತ್ತಿದ್ದ ಎಂದು ದಾಖಲಿಸಿದೆ.7 ವಿಷ್ಣುವರ್ಧನನು ಕ್ರಿ.ಶ.1116ರಲ್ಲಿ ಚೋಳರಿಂದ ತಲಕಾಡನ್ನು ಗೆದ್ದ ನಂತರ ಅಲ್ಲಿನ ಆಡಳಿತವನ್ನು ಸರಿಪಡಿಸಲು ಸ್ವಲ್ಪ ಕಾಲ ಅಲ್ಲಿಯೇ ನೆಲೆಸಿ, ಆಡಳಿತ ನಡೆಸಿರುವ ಸಾಧ್ಯತೆಗಳಿವೆ. ಈ ಶಾಸನದ ಪ್ರಕಾರವೇ ಕನ್ನಂಬಾಡಿಯಲ್ಲಿದ್ದುದು ಕನ್ನಗೊಂಡೇಶ್ವರ ದೇವಾಲಯ, ಅಂದರೆ ಕಣ್ಣನ್ನು ಕೊಂಡವರ ದೇವಾಲಯ ಕನ್ನಂಗೊಂಡೇಶ್ವರ ದೇವರಿಗೆ ವಿಷ್ಣುವರ್ಧನನ ಮಹಾಪ್ರಧಾನ ದಂಡನಾಯಕ ಲಿಂಗಪಯ್ಯ ನೀಡಿದ ದಾನವನ್ನು ದಾಖಲಿಸುವುದು ಶಾಸನದ ಮುಖ್ಯ ಉದ್ದೇಶವಾದರೂ, ಬೇಡರ ಕಣ್ಣಪ್ಪನ ಕಾರಣದಿಂದಾಗಿ ಕನ್ನಂಬಾಡಿ ಎಂದು ಹೆಸರು ಬಂದಿದೆ ಎಂದು ಮೊದಲ ಬಾರಿಗೆ ಅನಿಸಿದರೂ, ಕನ್ನಂಬಾಡಿಗೂ ಕನ್ನರದೇವ ಎಂಬ ವ್ಯಕ್ತಿಗೂ ಸಂಬಂಧ ಇರುವ ಸುಳಿಯನ್ನು ಶಾಸನ ನೀಡುತ್ತದೆ.
ವಿಷ್ಣುವರ್ಧನನ ಆಳ್ವಿಕೆಯ ಕಾಲದ, ಆದರೆ ಖಚಿತ ಕಾಲ ನಮೂದಾಗಿಲ್ಲದ ಶಂಭುನಹಳ್ಳಿಯ ಶಾಸನವು ವಿಷ್ಣುವರ್ಧನನು ತನ್ನ ತಾಯಿ ಮಾದಲಮಹಾದೇವಿ ಕಟ್ಟಿಸಿದ್ದ ತುವ್ವಲೇಶ್ವರ ದೇವರಿಗೆ ಗ್ರಾಮ ದಾನವನ್ನು ನೀಡಿದಾಗ, ಗ್ರಾಮಕ್ಕೆ ಮೊದಲಿದ್ದ ಯಾದವಪುರ ಎಂಬ ಹೆಸರನ್ನು ಶಂಕರನಹಳ್ಳಿ ಎಂದು ಮರುನಾಮಕರಣ ಮಾಡಿದ ಸೂಚನೆಯನ್ನು ಶಾಸನ ನೀಡುತ್ತದೆ. ಅಂದಿನ ಶಂಕರನಹಳ್ಳಿಯು ಈಗ ಶಂಭುವನಹಳ್ಳಿಯಾಗಿ ಪುನರ್ನಾಮಕರಣಗೊಂಡಿದೆ.8
ಮದ್ದೂರು ತಾಲ್ಲೂಕಿನ ವೈದ್ಯನಾಥಪುರದ ಶಾಸನದಲ್ಲಿ ಕ್ರಿ.ಶ.1132ರಲ್ಲಿ ಹೊಯ್ಸಳ ವಿಷ್ಣುವರ್ಧನನು ಗಂಗವಾಡಿ-96000, ನೊಳಂಬವಾಡಿ-32000, ಬನವಾಸಿ-12000 ಮತ್ತು ಹಾನುಂಗಲ್ 500 ಮೊದಲಾದ ಆಡಳಿತ ವಿಭಾಗಗಳನ್ನು ತನ್ನ ರಾಜಧಾನಿಯಾದ ದೋರಸಮುದ್ರದಿಂದ ಆಳ್ವಿಕೆ ನಡೆಸುತ್ತಿದ್ದನೆಂದು ದಾಖಲಿಸಿದೆ.9 ಅಲ್ಲದೆ ಈ ಶಾಸನವು ಹೊಯ್ಸಳ ವಿಷ್ಣುವರ್ಧನನ ಬಹುಮುಖ್ಯವಾದ ಬಿರುದು ಗಳಾದ ‘ತಲಗಾಡುಗೊಂಡ, ಕೊಂಗು ನಂಗಲಿ ಬನವಾಸಿ, ಹಾನಗಲ್, ಉಚ್ಛಂಗಿಕೊಂಡ ಮುಂತಾದವುಗಳ ಬಗ್ಗೆಯೂ ತಿಳಿಸುತ್ತದೆ.10 ಕೃಷ್ಣರಾಜಪೇಟೆ ತಾಲ್ಲೂಕಿನ ಮಾಳಗೂರು ಕೆರೆಯ ಹಿಂದಿರುವ ಈಶ್ವರ ದೇವಾಲಯದಲ್ಲಿರುವ ಶಾಸನದಲ್ಲಿ ಕ್ರಿ.ಶ.1117ರಲ್ಲಿ ತನ್ನ ವ್ಯಾಪ್ತಿಯಲ್ಲಿದ್ದ ಮಾಳಿಗೆಯೂರು ಎಂಬ ಆಡಳಿತ ವಿಭಾಗವನ್ನು ಪಟ್ಟಮಹಾದೇವಿ ಶಾಂತಲೆಯು ತನ್ನ ಮೈದುನ ಬಲ್ಲೆಯನಾಯಕನ ಅಧೀನದಲ್ಲಿ ಆಳ್ವಿಕೆ ಮಾಡುತ್ತಿದ್ದುದನ್ನು ಉಲ್ಲೇಖಿಸಿದೆ. ಮಾಳಿಗೆಯೂರು ಹೊಯ್ಸಳರ ಕಾಲದಲ್ಲಿ ತರುನಾಡಿನ ಭಾಗಕ್ಕೆ ಒಳಪಟ್ಟಿತ್ತು ಹಾಗೂ ಬಲ್ಲೆಯನಾಯಕ ಮತ್ತು ಈ ಸ್ಥಳದ ಗಾವುಂಡುಗಳು ಊರಿನ ಐವತ್ತು ಒಕ್ಕಲುಗಳ ಸಮ್ಮುಖದಲ್ಲಿ ಮಾಳಿಗೆಯ ಕರ್ಮಟೇಶ್ವರ ದೇವರಿಗೆ ನೀಡಿದ ಭೂದಾನದ ಬಗ್ಗೆ ದಾಖಲಿಸಿದೆ.11 ಕೃಷ್ಣರಾಜಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದ ಪಾಶ್ರ್ವನಾಥ ಬಸದಿಯ ದಕ್ಷಿಣಕ್ಕಿರುವ ಶಾಸನವು ಕ್ರಿ.ಶ.1118ರಲ್ಲಿ ಗಂಗವಾಡಿ-96000 ಆಡಳಿತ ವಿಭಾಗದ ಮೇಲೆ ಹೊಯ್ಸಳರ ಆಳ್ವಿಕೆಯನ್ನು ದಾಖಲಿಸಿದೆ. ಅಲ್ಲದೆ ಕತ್ತರಿಘಟ್ಟ ಎಂಬ ಸ್ಥಳದಲ್ಲಿ ನೊಳಂಬಿಸೆಟ್ಟಿ ಅಥವಾ ದೋರಸಮುದ್ರದ ಪಟ್ಟಣಸ್ವಾಮಿ ನೊಳಂಬಸೆಟ್ಟಿಯ ಪತ್ನಿ ದೇಮಿಕಬ್ಬೆಯು ತ್ರಿಕೂಟಜಿನಾಲಯವನ್ನು ನಿರ್ಮಿಸಿದ ಬಗ್ಗೆ ತಿಳಿಸುತ್ತದೆ.12 ವಿಷ್ಣುವರ್ಧನನು ಬೆಳಗೊಳ ವಿಭಾಗದ ಆಡಳಿತವನ್ನು ಮಾಡುತ್ತಿದ್ದಾಗ ಬೆಳಗೊಳಕ್ಕೆ ವಿಷ್ಣುವರ್ಧನ ಚತುರ್ವೇದಿ ಮಂಗಳಮ್ ಎಂದು ಕರೆದಿರುವುದು ಉಲ್ಲೇಖಾರ್ಹ.
ಹಿಂದಿನ ಅರಸರು ಕೊಟ್ಟಿದ ದಾನವನ್ನು ಊರ್ಜಿತಗೊಳಿಸಿ ಪುನರ್ದತ್ತಿ ನೀಡಿದ ಘಟನೆ ಆ ಕಾಲದ ಅರಸರ ಮನೋವೈಶಾಲ್ಯ ಹಾಗೂ ಜೀವನ ಮೌಲ್ಯಗಳನ್ನು ಬಿಂಬಿಸುತ್ತದೆ. ಪೂರ್ವದಲ್ಲಿ ಶಿವಮಾರಸಿಂಹನೆಂಬ ಗಂಗ ಅರಸ ನೀಡಿದ್ದ ದಾನಕ್ಕೆ ಸಂಬಂಧಿಸಿದ ತಾಮ್ರಶಾಸನವನ್ನು ನೋಡಿ, ಓದಿಸಿ ಕೇಳಿ ತಿಳಿಸಿದ ಅರಸ ವಿಷ್ಣುವರ್ಧನ ಶಿವಪುರದ ಸ್ವಯಂಭು ವೈಜನಾಥದೇವರಿಗೆ ಹಲಗೂರು ಗ್ರಾಮವನ್ನು ಒಪ್ಪಿಸಿದ ಇದು ದೇವಾಲಯದ ಪ್ರಾಚೀನತೆಯ ಬಗೆಗೂ ಬೆಳಕು ಬೀರುತ್ತದೆ.13
ಪಾಂಡವಪುರ ತಾಲ್ಲೂಕಿನ 12ನೆಯ ಶತಮಾನದ ಸುಂಕಾತೊಣ್ಣೂರು ಶಾಸನವು ಹೊಯ್ಸಳ ವಿಷ್ಣುವರ್ಧನನ ದಿಗ್ವಿಜಯದ ಬಗ್ಗೆ ಬೆಳಕನ್ನು ಚೆಲ್ಲುತ್ತದೆ. ಹೊಯ್ಸಳ ರಾಜ್ಯವನ್ನು ವಿಸ್ತರಿಸಿದ ಧೀರ. ನಂಗಲಿ, ಕೊಂಗು, ಸಿಂಗಮಲೆ, ರಾಯಪುರ, ತಲಕಾಡು, ರೊದ್ದ, ಬೆಂಗಿರಿ, ಚಕ್ರಗೊಟ್ಟ, ಉಚ್ಚಂಗಿ, ವಿರಾಟನಪೆÇಳಲು ಅಥವಾ ಹಾನುಗಲ್ಲು, ಬಂಕಾಪುರ, ಬನವಸೆ, ಕೋಯತೂರು, ನೀಳಾದ್ರಿ, ಪಡಿಯಘುಟ್ಟ, ಏಳುಮಲೆ ಅಥವಾ ತಿರುಪತಿ, ಕಂಚಿ, ತುಳುದೇಶ ರಾಜೇಂದ್ರಪುರ, ಕೋಳಾಲ, ಬಯಲ್ನಾಡು, ಹಲಸಿಗೆ, ಬೆಳುವಲ, ಹುಲಿಗೆರೆ, ಲೊಕ್ಕಿಗುಂಡಿ ಮತ್ತು ಕೃಷ್ಣಾನದಿಯವರೆಗಿನ ಪ್ರದೇಶಗಳನ್ನು ವಿಷ್ಣುವರ್ಧನ ಜಯಿಸಿದನೆಂದು ತಿಳಿಸುತ್ತದೆ.14 ಹಾಗೆಯೇ ಬಳ್ಳಾರಿ, ವಿರಾಟನಗರ, ವಲ್ಲೂರು, ಇರುಂಗೋಳನಕೊಟೆ, ಕಾರುಕನಕೊಳ್ಳ, ಕುಮ್ಮಟ, ಚಿಂಚಿಲೂರು, ರಾಚವೂರು ಮತ್ತು ಮುದಗನೂರು ಮೊದಲಾದ ದುರ್ಗಗಳು ಕೂಡ ವಿಷ್ಣುವರ್ಧನನ ವಶವಾಗಿದ್ದವೆಂದು ನಾಗಮಂಗಲ ತಾಲ್ಲೂಕಿನ ಹಟ್ಟಣದಲ್ಲಿ ದೊರೆತಿರುವ ಶಾಸನದಿಂದ ತಿಳಿದುಬರುತ್ತದೆ.15
ಕೃಷ್ಣರಾಜಪೇಟೆ ತಾಲ್ಲೂಕು, ನಾಗರಘಟ್ಟ ಕೆರೆಯ ಬಳಿಯಿರುವ ಮಲ್ಲೇಶ್ವರ ದೇವಾಲಯದ ಶಾಸನವು ಭಗ್ನಗೊಂಡಿದ್ದು, ಹೊಯ್ಸಳ ವಿಷ್ಣುವರ್ಧನನು ಯಶಸ್ವಿಯಾಗಿ ಕೈಗೊಂಡ ತಲಕಾಡು, ವಿರಾಟಪುರ ಅಥವಾ ಹಾನಗಲ್ ಮೊದಲಾದ ದಿಗ್ವಿಜಯಗಳ ಬಗ್ಗೆ ದಾಖಲಿಸುತ್ತಾ ರಾಜನ ವಿವರಗಳನ್ನು ನೀಡುತ್ತದೆ. ಈ ಶಾಸನವು ಕೇರಳನಾಯಕ ಹಾಗೂ ಮಲ್ಲಜೀಯನ ಮಗ ಮಹಾದೇವನೆಂಬ ಆಡಳಿತಾಧಿಕಾರಿಯು ನಾಗರಘಟ್ಟ ಗ್ರಾಮದಲ್ಲಿ ಮಹಾದೇವ ದೇವಾಲಯವನ್ನು ನಿರ್ಮಿಸಿ ದತ್ತಿಬಿಟ್ಟ ವಿಚಾರವನ್ನು ದಾಖಲಿಸಿದೆ.16. ನಾಗಮಂಗಲದಲ್ಲಿರುವ ಕ್ರಿ.ಶ.1134ಕ್ಕೆ ಸೇರಿದ ಸವೆದುಹೋದ ಶಾಸನ ಪಲ್ಲವವಂಶದ ಗೋವಿಂದರ ಮತ್ತು ಚಾವುಂಡಬ್ಬರಸಿಯ ಮಗಳಾದ ಹಾಗೂ ವಿಷ್ಣುವರ್ಧನನ ಪಟ್ಟದರಿಸಿಯಾದ ಬಮ್ಮಲದೇವಿಯನ್ನು ಉಲ್ಲೇಖಿಸುತ್ತದೆ. ವಿಷ್ಣುವರ್ಧನನ ಪಟ್ಟದರಸಿ ಶಾಂತಲೆಯು ಕ್ರಿ.ಶ.1131ರಲ್ಲಿ ಮರಣ ಹೊಂದಿದ್ದು, ಅವಳ ಸ್ಥಾನಮಾನ ಅವಳ ನಂತರ ಬಮ್ಮಲದೇವಿಗೆ ದೊರೆಯಿತು. ಈ ರಾಣಿ ಕಲ್ಕಣಿನಾಡಿಗೆ ಸೇರಿದ ನಾಗಮಂಗಲದ ಶಂಕರನಾರಾಯಣ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿ, ದೇವರ ಪೂಜೆ ನೈವೇದ್ಯಾದಿಗಳಿಗೆ ಅಂಕನಕಟ್ಟ ಗ್ರಾಮವನ್ನು ದಾನವಾಗಿತ್ತಳು. ದಾನವನ್ನು ಸ್ವೀಕರಿಸಿದಾತ ಸೂರ್ಯಾಭರಣ ಪಂಡಿತ.17 ಕೃಷ್ಣರಾಜಪೇಟೆ ತಾಲ್ಲೂಕಿನ ಭದ್ರನಕೊಪ್ಪಲು ಶಾಸನದಲ್ಲಿ ವಿಷ್ಣುವರ್ಧನನು ನುಂಗಲಿ ಗ್ರಾಮದ ಮೇಲೆ ದಾಳಿ ಮಾಡುವ ಮುನ್ನ ತೊಳೊಂಚೆಯ ಕರಿದೇವರಿಗೆ ಪೂಜೆ ಸಲ್ಲಿಸಿ ಹಲವು ದಾನಗಳನ್ನು ಉತ್ತರಾಯಣ ಸಂಕ್ರಾಂತಿಯ ದಿನದಂದು ನೀಡಿದ ಬಗ್ಗೆ ದಾಖಲಿಸಿದೆ.18 ಪಾಂಡವಪುರ ತಾಲ್ಲೂಕಿನ ಸುಂಕಾ ತೊಂಡನೂರು ಗ್ರಾಮದಲ್ಲಿ ದೊರೆತ ವೀರಗಲ್ಲು ಪ್ರಮುಖವಾಗಿದ್ದು, ಇದರಲ್ಲಿ ಮಹಾಮಂಡಳೇಶ್ವರ ಹೊಯಿಸಳದೇವನು ದೋರಸಮುದ್ರದಲ್ಲಿ ರಾಜ್ಯವಾಳುತ್ತಿದ್ದನೆಂದಿದೆ. ಈ ವೀರಗಲ್ಲಿನ ಮೇಲಿರುವ ಶಾಸನ ಸವೆದಿದೆ. ಮಾರಗೌಂಡನೆಂಬುವವನು ಕೆಲವರನ್ನು ಕೊಂದು ತಾನು ಹೋರಾಟದಲ್ಲಿ ಮರಣ ಹೊಂದಿದ ವಿಚಾರ ತಿಳಿಸುವುದಲ್ಲದೇ ಆತನ ಮಡದಿ ಸೋಮವ್ವದೇವಿ ದತ್ತಿ ಸ್ವೀಕರಿಸಿದಳೆಂದು ತಿಳಿಸುತ್ತದೆ. ಈ ಶಾಸನ ವಿಷ್ಣುವರ್ಧನ ದೇವನದೆಂದು ನರಸಿಂಹಾಚಾರ್ಯರು ತಿಳಿಸಿದ್ದಾರೆ.19 ಕೃಷ್ಣರಾಜಪೇಟೆ ತಾಲ್ಲೂಕಿನ ಬಸ್ತಿ ಎಂಬ ಸ್ಥಳದಲ್ಲಿಯ ಶಾಸನದಲ್ಲಿ ವಿಷ್ಣುವರ್ಧನನು ಮಂತ್ರಿಯಾಗಿದ್ದ ಪುಣಿಸಮಯ್ಯನು ಬಸದಿಯನ್ನು ನಿರ್ಮಿಸಿದ ಬಗ್ಗೆ ಹಾಗೂ ಮಾಣಿಕ್ಯ ದೊಡಲೂರು ಮತ್ತು ಮಾವಿನಕೆರೆ ಗ್ರಾಮಗಳನ್ನು ಬಸದಿಗಾಗಿ ದತ್ತಿಬಿಟ್ಟ ವಿಚಾರವನ್ನು ತಿಳಿಸುತ್ತದೆ. ಶಾಸನದ ಬಹುಭಾಗ ಭಗ್ನ ಹಾಗೂ ಅಸ್ಪಷ್ಟವಾಗಿದೆ.20 ಇದೇ ತಾಲ್ಲೂಕಿನ ಹುಬ್ಬನಹಳ್ಳಿಯ ಶಾಸನವು ಕ್ರಿ.ಶ.1140ರಲ್ಲಿ ಹೊಯ್ಸಳ ವಿಷ್ಣುವರ್ಧನನು ಹಳ್ಳದಬೀಡು (ಹಳೇಬೀಡು) ಆಳ್ವಿಕೆ ಮಾಡುತ್ತಿದ್ದಾಗ ಮಹಾಸಾಮಂತ ಮಾಚಯ್ಯ ನಾಯಕನು ಮಾರ್ಕೆಶ್ವರ ದೇವಾಲಯವನ್ನು ಹಾಗೂ ಕೆರೆಯನ್ನು ನಿರ್ಮಿಸಿದ ಬಗ್ಗೆ ದಾಖಲಿಸುತ್ತದೆ. ಈ ಶಾಸನದಲ್ಲಿ ಮಾಚಯ್ಯನಾಯಕನ ವಂಶವೃಕ್ಷವನ್ನು ನೀಡಲಾಗಿದೆ.21
ಕೃಷ್ಣರಾಜಪೇಟೆ ತಾಲ್ಲೂಕು, ಹಿರೀಕಳಲೆಯ ಬಸವ ದೇವಾಲಯದ ಮುಂದೆ ನಿಂತಿರುವ ಶಾಸನವು ತ್ರಿಭುವನಮಲ್ಲ ಹೊಯ್ಸಳ ವಿಷ್ಣುವರ್ಧನನು ಗಂಗವಾಡಿ 96000ದಲ್ಲಿ ತನ್ನ ಆಡಳಿತ ಹತೋಟಿಯನ್ನು ಪ್ರತಿಷ್ಠಾಪಿಸಿದ ತರುವಾಯ ಪಿರಿಯ ಕಳಿಲೆಯು ಕಿಕ್ಕೇರಿ-12 ಆಡಳಿತ ವಿಭಾಗದ ವ್ಯಾಪ್ತಿಯಲ್ಲಿದ್ದು, ಅಲ್ಲಿನ ಚಿನ್ನಮ್ಮ ಎಂಬ ಅಧಿಕಾರಿಯು ಆಡಳಿತ ನಡೆಸುತ್ತಿದ್ದುದರ ಬಗ್ಗೆ ತಿಳಿಸುತ್ತದೆ.22 ಇದೇ ತಾಲ್ಲೂಕಿನ ಸಾಸಲು ಗ್ರಾಮದ ಶಾಸನ ಹೊಯ್ಸಳ ಬಿಟ್ಟಿದೇವನು ಕ್ರಿ.ಶ.1121ರಲ್ಲಿ ಭೋಗೇಶ್ವರ ದೇವರಿಗೆ ನೀಡಿದ ಭೂದಾನವನ್ನು ದಾಖಲಿಸಿದೆ.23
ಪಾಂಡವಪುರ ತಾಲ್ಲೂಕಿನ ತೊಣ್ಣೂರಿನ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದಲ್ಲಿ ಅಮ್ಮನವರ ಗುಡಿಯ ನವರಂಗ ಮಂಟಪದ ಕಂಬದಲ್ಲಿರುವ ಶಾಸನದಲ್ಲಿ ವಿಷ್ಣುವರ್ಧನ ಪ್ರತಾಪ ಹೊಯ್ಸಳ ದೇವರನ್ನು ಪ್ರಸ್ತಾಪಿಸಿ ಮಹಾಪ್ರಧಾನ, ತಂತ್ರಾಧಿಷ್ಟಾಯಕ, ಮಹಾಪಸಾಯಿತ, ಹೆಗ್ಗಡೆ ಸುರಿಗೆಯ ನಾಗಯ್ಯನು ಓಲಗ ಶಾಲೆಯನ್ನು (ನವರಂಗ ಮಂಟಪ) ಮಾಡಿಸಿದನೆಂದು ಹೇಳಿದೆ.24 ಕೃಷ್ಣರಾಜಪೇಟೆ ತಾಲ್ಲೂಕಿನ 21ನೆಯ ಶಾಸನದಲ್ಲಿ ವಿಷ್ಣುವರ್ಧನನ ಹಿರಿಯ ರಾಣಿಯಾದ ಚಂದಲದೇವಿಯು ತನ್ನ ತಮ್ಮನಾದ ದುದ್ದಮಲ್ಲ ದೇವನೊಡಗೂಡಿ ವೀರಕೊಂಗಾಳ್ವ ಜಿನಾಲಯಕ್ಕೆ ಮಾಡಿದ ದಾನದ ಪ್ರಸ್ತಾಪವಿದೆ. ದಾನ ಮಾಡಿದ ಕಾವನಹಳ್ಳಿ ಮಂದಗೆರೆಯ ಸಿಮೆಯೊಳಗಣ ಒಂದು ಗ್ರಾಮ. ಮಂದಗೆರೆಯನ್ನು ಅರಸಿಯು ತನ್ನ ಬಪ್ಪಪ್ರಿಥ್ವಿಯಕೊಂಗಾಳ್ವದೇವರಿಂದ ಬಳುವಳಿಯಾಗಿ ಪಡೆದುದಾಗಿ ಹೇಳಿದೆ. ಶಾಸನವನ್ನು ಪಡೆದ ಪ್ರಭಾಚಂದ್ರಸಿದ್ಧಾಂತದೇವರು ಮೇಘಚಂದ್ರ ತ್ರೈವಿದ್ಯದೇವರ ಶಿಷ್ಯನಾಗಿದ್ದು, ಮೂಲಸಂಘ ದೇಸಿಗಣ, ಪುಸ್ತಕಗಚ್ಛಕ್ಕೆ ಸೇರಿದ್ದರೆಂದು ಶಾಸನದಲ್ಲಿ ಹೇಳಿದೆ.25
ನಾಗಮಂಗಲ ತಾಲ್ಲೂಕಿನ ಲಾಲನಕೆರೆಯ ವಿಷ್ಣುವರ್ಧನನ ಕಾಲದ 61ನೆಯ ಶಾಸನದಲ್ಲಿ ದಂಡನಾಯಕ ಏಚಿರಾಜದಂಡಾಧೀಶ, ಅವನ ಮಡದಿ ಕಾಮಿಯಕ್ಕ ಮತ್ತು ಅವರ ಐವರು ಗಂಡು ಮಕ್ಕಳ ಬಗೆಗೆ ಉಲ್ಲೇಖವಿದೆ. ಈ ದಂಡನಾಯಕರು ನಾಲನಕೆರೆಯನ್ನು ಗೌಡಕೆಯ ಉಂಬಳಿಯಾಗಿ ಪಡೆದುದನ್ನು ಈ ಶಾಸನ ತಿಳಿಸಿರುವುದು ಕುತೂಹಲಕಾರಿಯಾಗಿದೆ. ಆದ್ದರಿಂದ ಇದು ದಂಡನಾಯಕತನಕ್ಕಾಗಿ ಆತನು ಪಡೆದ ಸಂಭಾವನೆಯಾಗಿದ್ದಿರಬಹುದು. ಕೇತಜೀಯನ ಮಗ ಜಕ್ಕಜೀಯನಿಗೆ ಈತನು ಆ ಗ್ರಾಮ ಭೂಮಿಯನ್ನು ದತ್ತಿ ಬಿಟ್ಟಿದ್ದಾನೆ. ಈ ಜಕ್ಕಜೀಯನು ಲಾಲನ ಕೆರೆಯ ಮಲ್ಲಿಕಾರ್ಜುನ ದೇವಾಲಯದ ಪೂಜಾರಿಯಾಗಿದ್ದನೆಂಬುದು ಸ್ಪಷ್ಟ. ಈ ಶಾಸನವನ್ನು ರಚಿಸಿದವನು ಸಾಂತಮಹಂತ.26.
ಇದೇ ತಾಲ್ಲೂಕಿನ ಯಲ್ಲಾದಹಳ್ಳಿಯ ಶಾಸನವು ವಿಷ್ಣುವರ್ಧನನ ಮಹಾಪ್ರಧಾನ, ಕೌಶಿಕಗೋತ್ರದ ದೇವರಾಜನನ್ನು ಉಲ್ಲೇಖಿಸುತ್ತದೆ. ದೊರೆಯು ಆತನಿಗೆ ತಂತ್ರವೆರ್ಗಡೆತನವನ್ನು ಕೊಟ್ಟುದಾಗಿ ಶಾಸನ ತಿಳಿಸುತ್ತದೆ. ಈ ಅಧಿಕಾರಿಯು ಸೂರನಹಳ್ಳಿಯಲ್ಲಿ ತ್ರಿಕೂಟ ಬಸದಿಯನ್ನು ಕಟ್ಟಿಸಿ ದೇವರ ಅಷ್ಟವಿಧಾರ್ಚನೆ ಮತ್ತು ಆಹಾರ ದಾನಕ್ಕಾಗಿ ತಾನು ರಾಜನಿಂದ ಪಡೆದ, ಬಹುಶಃ 40 ಹೊನ್ನಿನ ವಾರ್ಷಿಕ ಉತ್ಪನ್ನವಿದ್ದ ಆ ಹಳ್ಳಿಯ ಮೊದಲ ಹತ್ತು ಹೊನ್ನಿನ ಹುಟ್ಟುವಳಿಯ ಭೂಮಿಯನ್ನು ಮುನಿಚಂದ್ರದೇವನಿಗೆ ಧಾರೆಯೆರೆದಿದ್ದಾನೆ. ದತ್ತಿಬಿಟ್ಟ ಗ್ರಾಮದ ಭಾಗಕ್ಕೆ ಪಾಶ್ರ್ವಪುರವೆಂಬ ಹೆಸರು ಕೊಟ್ಟಂತೆ ತೋರುತ್ತದೆ.27 ಹೊಯ್ಸಳ ಪ್ರಭು ಬಿಟ್ಟಿದೇವ (ವಿಷ್ಣುವರ್ಧನ)ನು ಕಿಕ್ಕೇರಿಯ ಬ್ರಹ್ಮೇಶ್ವರ ದೇವರಿಗೆ 15 ಖಂಡುಗ ಗದ್ದೆ ಹಾಗೂ ಬೂವನಹಳ್ಳಿಯನ್ನು ಬ್ರಹ್ಮರಾಶಿ ಪಂಡಿತರಿಗೆ ದತ್ತಿ ನೀಡಿದನೆಂದು ತಿಳಿದುಬರುತ್ತದೆ.28 ಮದ್ದೂರಿನ ಕೊಪ್ಪದ ಜೈನಬಸದಿಗೆ ಹೊಯ್ಸಳದೇವ ದಾನ ನೀಡಿದನು. ಮಳವಳ್ಳಿಯ ಪ್ರಭು ಮತ್ತು ಮಹಾಮಂಡಳೇಶ್ವರ ಕಲಿದೇವ ಎಂಬ ದೇವಸ್ಥಾನವನ್ನು ನಿರ್ಮಿಸಿದನು. ಇನ್ನೂ ಕೆಲವು ವ್ಯಕ್ತಿಗಳು ದೇವತೆ ಭಗವತಿಯ ವಿಗ್ರಹವನ್ನು ಪ್ರತಿಷ್ಠಾಪಿಸಿದರು. ಮಳವಳ್ಳಿಯ ಜನತೆಯು ಆ ದೇವಸ್ಥಾನದ ಪೂಜೆಗೋಸ್ಕರ ಪುರೋಹಿತ ಧರ್ಮೇಶ ಪಂಡಿತನಿಗೆ ಭೂಮಿಯನ್ನು ನೀಡಿದರು.
ವಿಷ್ಣುವರ್ಧನ ಮೊದಲು ಜೈನನಾಗಿದ್ದ; ಬಿಟ್ಟಿಗ ಎಂಬ ಹೆಸರಿದ್ದ ವ್ಯಕ್ತಿ; ರಾಮಾನುಜಾಚಾರ್ಯರ ಪ್ರಭಾವದಿಂದ ವೈಷ್ಣವ ಮತ ಸ್ವೀಕರಿಸಿ ವಿಷ್ಣುವರ್ಧನನಾಗಿ ಪರಿವರ್ತಿತನಾದ ಎಂಬ ಪ್ರತೀತಿ ಇದೆ. ಆದರೆ ಇದಕ್ಕೆ ಆಧಾರವಿಲ್ಲ.29 ವಿಷ್ಣುವರ್ಧನ ಎಂಬುದು ಅವನ ನಾಮಾಂಕಿತವಲ್ಲ, ಅದು ಬಿಟ್ಟ-ವಿಠಲ ವಿಷ್ಣು ಎಂಬ ರೂಪಾಂತರ ಮಾತ್ರ, ಅಲ್ಲದೆ ಅವನಿಗೆ ಬಾಲ್ಯದಿಂದಲೂ ಬಿಟ್ಟಿದೇವ ಮತ್ತು ವಿಷ್ಣುದೇವ ಎಂಬ ಎರಡು ಅಂಕಿತಗಳು ಇದ್ದವು. ರಾಜನ ಮತಾಂತರ ಕ್ರಿ.ಶ.1110ರ ಸುಮಾರಿನಲ್ಲಿ ನಡೆದಿರಬೇಕೆಂದು ಹೇಳಲಾಗಿದೆ. ಆದರೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ದೊರೆತಿರುವ ಕ್ರಿ.ಶ.1095ರ ಶಾಸನವೊಂದರ ಪ್ರಕಾರ ಅವನು ತನ್ನ ತಾತನ ಆಳ್ವಿಕೆಯ ಕಾಲದಲ್ಲಿ ಬೆಳಗೊಳದ ಸೀತಾರಾಮ ದೇವಾಲಯಕ್ಕೆ ವಿಶೇಷ ದತ್ತಿಗಳನ್ನು ನೀಡಿ ಆ ಗ್ರಾಮವನ್ನು ಅಗ್ರಹಾರವನ್ನಾಗಿ ಪರಿವರ್ತಿಸಿದನು. ಮಿಗಿಲಾಗಿ ಆ ವೇಳೆಗಾಗಲೇ ವಿಷ್ಣುವರ್ಧನ ಎಂಬ ಹೆಸರಿನಿಂದಲೇ ಪ್ರಸಿದ್ಧನಾಗಿದ್ದನು. ಶ್ರೀವೈಷ್ಣವಧರ್ಮಕ್ಕೆ ವಿಷ್ಣುವರ್ಧನನು ನೀಡಿದ ಪೆÇ್ರೀತ್ಸಾಹ ತೋರಿಸಿದ ಅನುಕಂಪನಗಳು ಆತ ಮತಾಂತರಗೊಂಡನೆಂಬ ಪ್ರಚಲಿತ ಕಥೆಗೆ ಎಡೆ ಮಾಡಿಕೊಟ್ಟಂತಾಗಿದೆ ಎಂದು ಕೆ.ಟಿ. ರಾಮಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.30 ಸಾಲಿಗ್ರಾಮದಿಂದ ಶ್ರೀ ರಾಮಾನುಜಾಚಾರ್ಯರು ಪಾಂಡವಪುರ ತಾಲ್ಲೂಕಿನ ತೊಣ್ಣೂರಿಗೆ ತೆರಳಿದರು. ಇಂದಿನ ತೊಣ್ಣೂರು ಮೂಲತಃ ಯಾದವಪುರ ಎಂಬ ಹೆಸರನ್ನು ಹೊಂದಿದ್ದು, ಕ್ರಿ.ಶ.1127ರಲ್ಲಿ ವಿಷ್ಣುವರ್ಧನ ಉಪ ರಾಜಧಾನಿಯಾಗಿತ್ತೆಂದು ತಿಳಿದುಬಂದಿದೆ.31 ಶ್ರೀ ರಾಮಾನುಜಾರ್ಯರು ತೊಣ್ಣೂರಿಗೆ ಬಂದಾಗ ಇದಕ್ಕೆ ಯಾದವಪುರ ಎಂಬ ಹೆಸರಿದ್ದಿತು. ತಮ್ಮ ಭಕ್ತರೂ, ದಾಸರೂ ಆದ ಅನೇಕ ಶಿಷ್ಯರೊಡನೆ ಅವರು ಇಲ್ಲಿಗೆ ಬಂದು ನೆಲೆಸಿದ ಬಳಿಕ ಇದಕ್ಕೆ ತೊಂಡನೂರು ಎಂಬ ಹೆಸರು ಬಂದಿತು ಎಂದು ಊಹಿಸಬಹುದಾಗಿದೆ. ತೊಣ್ಣೂರಿನಲ್ಲಿ ಯೋಗನರಸಿಂಹ, ಲಕ್ಷ್ಮೀನಾರಾಯಣ ಮತ್ತು ಕೃಷ್ಣ ಎಂಬ ಮೂರು ಶ್ರೀವೈಷ್ಣವ ದೇವಾಲಯಗಳಿವೆ.
ವಿಷ್ಣುವರ್ಧನನ ಅರಸಿಯಲ್ಲಿ ನಾಲ್ವರನ್ನು ಮಂಡ್ಯ ಜಿಲ್ಲೆಯ ಶಾಸನಗಳು ಉಲ್ಲೇಖಿಸುತ್ತವೆ. ಪಿರಿಯರಸಿ ಪಟ್ಟಮಹಾದೇವಿ ಶಾಂತಲದೇವಿ,32 ಪಟ್ಟಮಹಿಷಿ ಲಕ್ಷ್ಮಾದೇವಿ,33 ಪಲ್ಲವರಾಜಪುತ್ರಿ ಬಮ್ಮಲದೇವಿ34 ಹಾಗೂ ಕೊಂಗಾಳ್ವ ರಾಜಪುತ್ರಿ ಚಂದಲದೇವಿ35 ಇದೇ ಅಲ್ಲದೇ ಈತನ ಅನೇಕ ಬಿರುದುಗಳನ್ನು ಶಾಸನಗಳು ಉಲ್ಲೇಖಿಸುತ್ತವೆ.
ಹೊಯ್ಸಳ ವಿಷ್ಣುವರ್ಧನನ ಕಾಲದಲ್ಲಿ ಮಂಡ್ಯ ಪ್ರದೇಶದಲ್ಲಿ ಹಲವಾರು ದೇವಾಲಯಗಳು, ಬಸದಿಗಳು ಹಾಗೂ ಸ್ಮಾರಕಗಳು ನಿರ್ಮಿತಗೊಂಡಿವೆ. ಅವುಗಳಲ್ಲಿ ಮುಖ್ಯವಾದವು ನಾಗಮಂಗಲದ ಸೌಮ್ಯಕೇಶವ ದೇವಾಲಯ ಸುಮಾರು ನಾಲ್ಕು ಅಡಿ ಎತ್ತರದ ಜಗತಿಯ ಮೇಲೆ ನಿಂತಿದೆ. ಈ ತ್ರಿಕೂಟ ದೇವಾಲಯದ ನಿರ್ಮಾಣ ವಿಷ್ಣುವರ್ಧನನ ಕಾಲದಲ್ಲೇ ನಿರ್ಮಿಸಲ್ಪಟ್ಟಿತ್ತೆಂದು ತಿಳಿದುಬರುತ್ತದೆ.36 ಕೇಶವ ದೇವಾಲಯದ ನಕ್ಷತ್ರಾಕಾರದ ಜಗತಿ ಐದು ಅಂತಸ್ತುಗಳನ್ನು ಹೊಂದಿದೆ. ಮಧ್ಯ ಗರ್ಭಗುಡಿಯಲ್ಲಿ ಸೌಮ್ಯಕೇಶವ ಪಕ್ಕದವುಗಳಲ್ಲಿ ನರಸಿಂಹ ಮತ್ತು ವೇಣುಗೋಪಾಲ ವಿಗ್ರಹಗಳಿವೆ. ಭುವನೇಶ್ವರ ದೇವಾಲಯ ವಿಷ್ಣುವರ್ಧನನ ಕಾಲದಲ್ಲಿ ನಿರ್ಮಿಸಲ್ಪಟ್ಟಿತು. ಅದರ ನೈರುತ್ಯದಲ್ಲಿರುವ ಶಾಸನದಿಂದ ವಿಷ್ಣುವರ್ಧನನ ರಾಣಿಯಾದ ಬಮ್ಮಲಾದೇವಿ 1135 ರಲ್ಲಿ ಇಲ್ಲಿನ ಅಗ್ರಹಾರವನ್ನು ಜೀರ್ಣೋದ್ಧಾರ ಮಾಡಿಸಿದಳೆಂದು ತಿಳಿದುಬರುತ್ತೆ.37 ಗರ್ಭಗುಡಿಯಲ್ಲಿ ಲಿಂಗವಿದ್ದು, ಇದನ್ನು ಶಾಸನದಲ್ಲಿ ಶಂಕರನಾರಾಯಣ ಎಂದು ಕರೆಯಲಾಗಿದೆ. ನವರಂಗದಲ್ಲಿ ದುರ್ಗ, ಚಂಡಿಕೇಶ, ಅರ್ಧನಾರೀಶ್ವರ, ಗಣೇಶ, ನಂದಿ ಮುಂತಾದ ಮೂರ್ತಿಗಳಿವೆ.
ಹೊಯ್ಸಳ ವಿಷ್ಣುವರ್ಧನನ ಕಾಲದಲ್ಲಿ ರಾಜಪರಿವಾರದವರು ಮಾತ್ರವಲ್ಲದೇ ಸೇನಾಧಿಕಾರಿಗಳು ಸಹಾ ಹಲವಾರು ಜೈನ ಸ್ಮಾರಕಗಳನ್ನು ಮಂಡ್ಯ ಪ್ರದೇಶದಲ್ಲಿ ನಿರ್ಮಿಸುವುದರ ಮೂಲಕ ಜೈನ ವಾಸ್ತುಶಿಲ್ಪಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಕ್ರಿ.ಶ.1131ರ ಶಾಸನದ ಪ್ರಕಾರ ವಿಷ್ಣುವರ್ಧನ ದಂಡನಾಯಕನಾದ ಗಂಗರಾಜನ ಮಗನಾದ ಬೊಪ್ಪನು ತನ್ನ ತಂದೆಯ ವಿಶಿಷ್ಟ ಬಿರುದುಗಳಲ್ಲೊಂದಾದ ದ್ರೋಹಘರಟ್ಟ ಎಂಬ ಹೆಸರಿನಲ್ಲಿ ‘ದ್ರೋಹಘುರಟ್ಟ ಬಸದಿ’ಯನ್ನು ನಿರ್ಮಿಸಿ ಅದರಲ್ಲಿ ಶಾಂತಿನಾಥನನ್ನು ಪ್ರತಿಪ್ಠಾಪಿಸಿದನೆಂದು ತಿಳಿದುಬರುತ್ತದೆ.38 ಈ ಬಸದಿಯು ನಾಗಮಂಗಲದಿಂದ ಪಶ್ಚಿಮಕ್ಕೆ ಶ್ರವಣಬೆಳಗೊಳ ಮಾರ್ಗದಲ್ಲಿ 16 ಕಿ.ಮೀ. ದೂರದ ಕಂಬದಹಳ್ಳಿಯಲ್ಲಿದೆ. ಇದು ದಿಗಂಬರ ಜೈನ ಕ್ಷೇತ್ರವೆಂದೇ ಹೆಸರು ಪಡೆದಿದೆ. ತಳವಿನ್ಯಾಸದಲ್ಲಿ ಗರ್ಭಗೃಹ. ಸುಕನಾಸಿಗಳಿಂದ ಕೂಡಿದ ಒಂಭತ್ತು ಅಂಕಣಗಳನ್ನುಳ್ಳ ನವರಂಗವಿದೆ. ಗರ್ಭಗೃಹದಲ್ಲಿ ಅಷ್ಟದಿಕ್ಪಾಲಕರನ್ನು ಹೊಂದಿರುವ ಕಮಲಪೀಠದ ಮೇಲೆ ನಿಂತಿರುವ ಶಾಂತಿನಾಥನ ಮೂರ್ತಿ ಇದೆ.
ಹೊಯ್ಸಳರು ದ್ವಾರಸಮುದ್ರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳುತ್ತಿದ್ದಾಗ ಮಂಡ್ಯ ಜಿಲ್ಲೆಯು ಹಲವು ಸಂಸ್ಥಾನಗಳಾಗಿ, ಪಂಗಡವಾಗಿ ಹೊಯ್ಸಳ ಆಶ್ರಿತ ಸಾಮಂತರ ಆಡಳಿತಕ್ಕೆ ಒಳಪಟ್ಟಿದ್ದು ಕಂಡುಬರುತ್ತದೆ. ಇಂತಹ ಸಂಸ್ಥಾನಗಳಲ್ಲಿ ಕಲ್ಕುಣಿ ಒಂದು, ಈಗ ಕಲ್ಕುಣಿ ಮಂಡ್ಯ ಜಿಲ್ಲೆಯ ಒಂದು ಚಿಕ್ಕ ಗ್ರಾಮ. ನಾಗಮಂಗಲ ತಾಲ್ಲೂಕಿನ ಕಸಲಗೆರೆಯಲ್ಲಿ ಕಲ್ಕುಣಿ ನಾಡಿನ ಸ್ಥಾನಿಕ ಪ್ರಭುಗಳಿಗೆ ಸಂಬಂಧಿಸಿದ ಮೂರು ಶಾಸನಗಳು ದೊರಕಿವೆ. ಕ್ರಿ.ಶ.1142ರ ನಾಗಮಂಗಲ ತಾಲ್ಲೂಕಿನ 169ನೆಯ ಶಾಸನ ಕಲ್ಕುಣಿ ನಾಡನ್ನಾಳುತ್ತಿದ್ದ ವಿಷ್ಣುವರ್ಧನನ ಸಾಮಂತರಾಗಿದ್ದ ಸೋಮನನ್ನು ಕುರಿತದ್ದಾಗಿದ್ದು ಈ ಶಾಸನದಲ್ಲಿ ಸೋಮನ ವಂಶಾವಳಿಯನ್ನು ನೀಡುತ್ತಾ, ಈ ವಂಶದ ಮೂಲಪುರುಷ ಅಯ್ಕಣನ ಬಗೆಗೆ ಒಂದು ಘಟನೆ ವರ್ಣಿತವಾಗಿದೆ. ವೀರಗಂಗ ಪೆರ್ಮಾಡಿಯು ಚೋಳರ ಮೇಲೆ ದಂಡೆತ್ತಿ ಹೋಗುತ್ತ ಹೃದುವನಕೆರೆಯಲ್ಲಿ ಬೀಡುಬಿಟ್ಟಿದ್ದಾಗ ಕಾಡಾನೆಯೊಂದು ಬೀಡಿನ ಮೇಲೆ ನುಗ್ಗಿತು, ಅದನ್ನು ಕಂಡ ಅಯ್ಯಣನು ಬಾಣದಿಂದ ಆನೆಯನ್ನು ಹೊಡೆದುರುಳಿಸಿದನು. ಅದರಿಂದ ಅವನಿಗೆ ಕರಿಯಯ್ಕಣನೆಂಬ ಹೆಸರೂ ಕಲುಕುಣಿ ನಾಡೊಡೆತನವೂ ಗಂಗ ಅರಸನಿಂದ ದೊರೆತವು. ಕಲ್ಕುಣೆನಾಡಿಗೆ ಸೇರಿದ ಹಬ್ಬದಿರುವಾಡಿಯಲ್ಲಿ ಹೊಸದಾಗಿ ಒಂದು ಬಸದಿಯನ್ನು ನಿರ್ಮಿಸಿ ಅಲ್ಲಿ ಪಾಶ್ರ್ವದೇವನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಯಿತು. ಆ ಸಂದರ್ಭದಲ್ಲಿ ಸಾಮಂತ ಸೋಮನು ಪಾಶ್ರ್ವದೇವರ ಅಂಗಭೋಗ, ಆಹಾರದಾನ, ಬಸ್ತಿಯ ಜೀರ್ಣೋದ್ಧಾರ ಕಾರ್ಯಗಳಿಗೆಂದು ಅರುಹನಹಳ್ಳಿ ಗ್ರಾಮವನ್ನು ದತ್ತಿ ಬಿಟ್ಟನು. ಮೂಲಸಂಘ ಸೂರಸ್ತಗಣದ ಬ್ರಹ್ಮದೇವನು ದತ್ತಿ ಸ್ವೀಕರಿಸಿದನು.39 ಸುಮಾರು 12ನೆಯ ಶತಮಾನಕ್ಕೆ ಸೇರಿದ ಕಸಲಗೆರೆಯ 171ನೆಯ ಶಾಸನ ಮುಖ್ಯವಾಗಿ ಮಾರದೇವನ ಹೆಂಡತಿ ಮಹಾದೇವಿ ಸತಿಹೋದ ಸಂಗತಿಯನ್ನು ತಿಳಿಸುತ್ತದೆ.
ಕಿಕ್ಕೇರಿ ಪನ್ನೆರಡು ಆಡಳಿತ ವಿಭಾಗವು ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಅಸ್ತಿತ್ವದಲ್ಲಿದ್ದು, ಇದು ಪ್ರಾಯಶಃ ಕಬ್ಬಾಹು ಸಾಸಿರ ಪ್ರಾಂತದ ಉಪ ಪ್ರಾಂತವಾಗಿರಬಹುದು. ಹೊಯ್ಸಳ ದೊರೆ ವಿಷ್ಣುವರ್ಧನನ ಹಿರೀಕಳಲೆಯ ಕ್ರಿ.ಶ. ಸುಮಾರು 12ನೆಯ ಶತಮಾನದ ಶಾಸನದಲ್ಲಿ ಈ ಪ್ರಾಂತದ ಉಲ್ಲೇಖವಿದೆ. ಈ ಪ್ರಾಂತದಲ್ಲಿ ವಿಷ್ಣುವರ್ಧನನ ಮಹಾಸಾಮಂತ ಚಿಣ್ಣಮನು ಆಳ್ವಿಕೆ ನಡೆಸಿದ್ದಾನೆ. ಇಂದಿನ ಕಿಕ್ಕೇರಿ ಈ ಪ್ರಾಂತದ ಮುಖ್ಯಪಟ್ಟಣ ಮತ್ತು ರಾಜಧಾನಿಯಾಗಿತ್ತು. ಕಿಕ್ಕೇರಿಯನ್ನೊಳಗೊಂಡಂತೆ ಇದರ ಸುತ್ತಮುತ್ತಲಿನ ಹನ್ನೆರಡು ಗ್ರಾಮಗಳು ಈ ಪ್ರಾಂತದಲ್ಲಿ ಸೇರಿಕೊಂಡಿದ್ದವು.40
ನಾಗಮಂಗಲ ತಾಲ್ಲೂಕಿನ ಸುಖದರೆಯ ಕ್ರಿ.ಶ.1120ರ ಶಾಸನದಲ್ಲಿ ವಿಷ್ಣುವರ್ಧನನ ಆಳ್ವಿಕೆಯಲ್ಲಿ ಜಕಶೆಟ್ಟಿ ಎಂಬುವನು ಸುಖದರೆಯಲ್ಲಿ ಬಸದಿ ಹಾಗೂ ಕೆರೆಯನ್ನು ನಿರ್ಮಿಸಿ ಭೂದಾನ ನೀಡಿ ತೆಪ್ಪಸುಂಕದೊಂದಿಗೆ ಸಣ್ಣಕೆರೆ ಯನ್ನು ದಾನವಾಗಿ ನೀಡಿದ್ದನ್ನು ದಾಖಲಿಸಿದೆ.41 ಮೆಳ್ಳಹಳ್ಳಿಯ ಈಶ್ವರ ದೇವಾಲಯ ಕ್ರಿ.ಶ.1114ರ ವೀರಗಲ್ಲು ಶಾಸನವು ಹೊಯ್ಸಳ ಮನೆತನದ ವಿಷ್ಣುವರ್ಧನನ ಆಳ್ವಿಕೆಯನ್ನು ಪರಿಚಯಿಸುತ್ತದೆ. ಆಯ ಸಂವತ್ಸರದಂದು ಬಿಟ್ಟಿಯಮಾರಯ್ಯ ಸೆಟ್ಟೆಯಣ್ಣನು ಮಳೆಯೂರ ಕಾಳಗದಲ್ಲಿ ತುರುಗಳನ್ನು ರಕ್ಷಿಸಿ ಹಲವರನ್ನು ಕೊಂದು ಮರಣವನ್ನಪ್ಪಿದನು. ಸೆಟ್ಟಿಗಾವುಂಡ, ಜಕ್ಕಯ ನಾಯಕ, ಕೇತಣ್ಣ ಇವರುಗಳು ಮೈಯುದನಹಳ್ಳಿಯ ಶಿವಾಲಯಕ್ಕೆ ಭೂಮಿಯನ್ನು ದಾನ ಮಾಡಿದರು.42
ಕೆ.ಆರ್. ಪೇಟೆ ತಾಲ್ಲೂಕಿನ ಕುಂದನಹಳ್ಳಿಯಲ್ಲಿ ಹೊಸ ಶಾಸನವನ್ನು ಡಾ. ರಂಗಸ್ವಾಮಿ ಸಂಶೋಧಿಸಿದ್ದು ಅದು ವಿಷ್ಣುವರ್ಧನನ ಬಗ್ಗೆ ಹೊಸ ಬೆಳಕನ್ನು ಚೆಲ್ಲುತ್ತದೆ. ಈ ಶಾಸನದಲ್ಲಿ ಹೊಯ್ಸಳ ಮನೆತನದ (ವಿಷ್ಣುವರ್ಧನು) ಬಿಟ್ಟಿಗನು ರಾಜ್ಯವಾಳುತ್ತಿದ್ದ ಪ್ರಸ್ತಾಪವಿದೆ. ಸೆಟ್ಟಿಯ ಮಗ ಧರ್ಮಸೆಟ್ಟಿಯು ಧರ್ಮಪಟ್ಟಣವೆಂದು ಊರಿಗೆ ಹೆಸರಿಟ್ಟು, ಅಲ್ಲಿ ಕೆರೆಯನ್ನು ಕಟ್ಟಿಸಿ ಅದಕ್ಕೆ ಮಲ್ಲಸಮುದ್ರವೆಂದು ಹೆಸರಿಟ್ಟು, ಅದರ ಕೀಳೇರಿಯಲ್ಲಿ ಮಹಾದೇವರನ್ನು ಪ್ರತಿಷ್ಠೆ ಮಾಡಿ ಗುಡಿಯನ್ನು ಕಟ್ಟಿಸಿ, ಅದರ ಪೂರ್ವಕ್ಕಿದ್ದ ಗದ್ದೆ ಮತ್ತು ಬೆದ್ದಲೆ ಭೂಮಿಯನ್ನು ದೇವರಿಗೆ ಕೊಟ್ಟ ವಿವರವಿದೆ. ಈ ಶಾಸನದ ಕಾಲ ಕ್ರಿ.ಶ.1113 ನಂದನ ಸಂವತ್ಸರ-ಅಶ್ವಿಜ ಶುದ್ಧ 5. ಅದೇ ತಾಲ್ಲೂಕಿನ ಹೊಸಹೊಳಲುವಿನಲ್ಲಿ ದೊರೆತಿರುವ ಶಾಸನದಲ್ಲಿ ಕುಕ್ಕಟಾಸನ ಮಲಧಾರಿದೇವನ ಮುನಿಯ ಶಿಷ್ಯ. ಶುಭಚಂದ್ರ ಸಿದ್ಧಾಂತ ಮುನಿಯ ಶಿಷ್ಯ ನೊಳಂಬಸೆಟ್ಟಿ ಶಿಲ್ಪವನ್ನು ಪ್ರತಿಪ್ಠಾಪಿಸಿದ ವಿಚಾರವಿದೆ. ಕಾಲ ಕ್ರಿ.ಶ.ಸುಮಾರು 12ನೆಯ ಶತಮಾನ. ಲಿಪಿ ಕನ್ನಡ, ಜೈನ ಪೀಠ ಶಾಸನ ಗ್ರಾಮದ ಭೈರವೇಶ್ವರ ದೇವಾಲಯದ ಆವರಣದಲ್ಲಿದೆ.
ಹೀಗೆ ಹೊಯ್ಸಳ ವಿಷ್ಣುವರ್ಧನನ ಆಳ್ವಿಕೆಯಲ್ಲಿ ಮಂಡ್ಯ ಪ್ರದೇಶವು ರಾಜಕೀಯ, ಆಡಳಿತ ಹಾಗೂ ಸಾಂಸ್ಕøತಿಕವಾಗಿ ಪ್ರಗತಿಗೊಂಡಿತು. ವಿಷ್ಣುವರ್ಧನನು ಮಂಡ್ಯ ಪ್ರದೇಶದ ಹಲವಾರು ಹಳ್ಳಿಗಳಲ್ಲಿ ದೇವಾಲಯಗಳ ನಿರ್ಮಾಣ, ಅವುಗಳ ನಿರ್ವಹಣೆಗೆ ದಾನದತ್ತಿಗಳನ್ನು ನೀಡಿದ್ದುದಲ್ಲದೆ, ಆತನ ದಂಡನಾಯಕರು ಸಹಾ ಮಂಡ್ಯ ಪ್ರದೇಶದ ಅಭಿವೃದ್ದಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ.

ಆಧಾರಸೂಚಿ
1. ಇ.ಅ ಗಿII. ಒಜ.54, 1117 ಂ.ಆ.P. 282.
2. ಇ.ಅ.ಗಿII.ಓg.33, 1118 ಂ.ಆ.P. 20.
3. ಇ.ಅ.Iಗಿ.ಓg. 91.
4. ರಂಗಸ್ವಾಮಯ್ಯ ಜಿ.ಆರ್., ಮಂಡ್ಯ ಜಿಲ್ಲೆಯ ಸಂಕ್ಷಿಪ್ತ ಇತಿಹಾಸ, ಇಕ್ಷುಕಾವೇರಿ (48ನೇ ಕನ್ನಡ ಸಾಹಿತ್ಯ ಸಮ್ಮೇಳನ ನೆನಪಿನ ಸಂಚಿಕೆ), ಮಂಡ್ಯ, ಪುಟ 81.
5. Ibiಜ, ಓg. 91.
6. ಇ.ಅ.ಗಿII.ಓg.33, 1118-1119 ಂ.ಆ. PP 19-20.
7. ಇ.ಅ.ಗಿI.PP.41. 1118 ಂ.ಆ. P.130.
8. ಇ.ಅ.ಗಿII.PP.11,12ಣh ಅeಟಿಣuಡಿಥಿ PP-110-11.
9. ಇ.ಅ.ಗಿIII.ಒಜ. 68, 1132-ಂ.ಆ.P.293.
10. ಡಾ. ಎನ್.ಎಸ್. ರಂಗರಾಜು, ಮಂಡ್ಯ ಮತ್ತು ತುಮಕೂರು ಜಿಲ್ಲೆಯ ಹೊಯ್ಸಳ ದೇವಾಲಯಗಳು, ಪುಟ 6.
11. ಇ.ಅ.ಗಿI.ಏಡಿ..66., 1117 ಂ.ಆ.P.48
12. ಇ.ಅ.ಗಿI.ಏಡಿ.3.1118 ಂ.ಆ.P.4
13. ಇ.ಅ.ಗಿIII, ಒಜ. 68, 1132.ಂ.ಆ.P.293
14. ಇ.ಅ.ಗಿI. P.P.236, 12ಣh ಅeಟಿಣuಡಿಥಿ PP 315-316
15. ಇ.ಅ.ಗಿII. ಓg. 118, 1178 ಂ.ಆ.P.117-118
16. ಇ.ಅ.ಗಿI.ಏಡಿ. 60 P.42
17. ಇ.ಅ.ಗಿII.ಓg.7 1134 ಂ.ಆ.P.67
18. ಇ.ಅ.ಗಿI. ಏP 56P.40
19. ಒಂಖ 1912 P.41
20. ಇ.ಅ.ಗಿI ಏಡಿ.107 P.96
21. ಇ.ಅ.ಗಿI, ಏಡಿ.62, 1140 ಂ.ಆ.P.44
22. ಇ.ಅ.ಗಿI, ಏಡಿ. 73, P.59
23. ಇ.ಅ.ಗಿI, ಏಡಿ. 59, 1121 ಂ.ಆ.P. 41
24. ಇ.ಅ.ಗಿI, PP 73, P.148
25. ಇ.ಅ.ಗಿI, ಏಡಿ. 21 P. 15
26. ಇ.ಅ.ಗಿII. ಓg. 61, 1138 ಂ.ಆ.P.33
27. ಇ.ಅ.ಗಿII. ಓg. 64, 1145 ಂ.ಆ.P. 45
28. ಇ.ಅ.ಗಿI. ಏಡಿ.37 1095-96 ಂ.ಆ.P.21
29. ಡಾ. ಎಸ್. ಶ್ರೀಕಂಠಶಾಸ್ತ್ರಿ, ಭಾರತೀಯ ಸಂಸ್ಕøತಿ-ಪುಟ 109 & 141-142.
30. ಆಡಿ.ಃ.Sheiಞ ಂಟi- (ಇಜ) ಖಿhe ಊoಥಿsಚಿಟಚಿ ಆಥಿಟಿಚಿsಣಥಿ-P. 304
31. ಉoಠಿಚಿಟ ಃ.ಖ.(ಇಜ) ಇ.ಅ.ಗಿoಟ.ಗಿ.ಒಥಿ.135
32. ಇ.ಅ.ಗಿI ಏಡಿ.66, 1117 ಂ.ಆ.P. 48
33. ಇ.ಅ.ಗಿII. ಓg. 63 1165 ಂ.ಆ.P. 41-42
34. ಇ.ಅ.ಗಿII ಓg. 7 1134-P.6-7
35. ಇ.ಅ.ಗಿI.ಏಡಿ. 21, 12ಣh ಅeಟಿಣuಡಿಥಿ-P.15
36. ಂSಒಂಖ (1939) P.31
37. ಇ.ಅ.ಗಿII ಓg. 7 P.6-7
38. ಇ.ಅ.ಗಿII ಓg. 29-30, 1131 ಂ.ಆ.
39. ಇ.ಅ.ಗಿII ಓg. 169, 1142 ಂ.ಆ.P.167
40. ಗೋಪಾಲ್ ಆರ್.(ಸಂ.), ಮಂಡ್ಯ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ, ಪುಟ 52.
41. ಇ.ಅ.ಗಿII ಓg.1120 ಂ.ಆ.
42. ಗೋಪಾಲ್ ಆರ್. (ಸಂ.), ಪೂರ್ವೋಕ್ತ, ಪುಟ 354.

W  ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಿರಿಯಾಪಟ್ಟಣ, ಮೈಸೂರು ಜಿಲ್ಲೆ-571107.

Wednesday, May 28, 2014

ಬೆಳಗಾವಿ ಜಿಲ್ಲಾ ಪ್ರದೇಶದ ದೇವಾಲಯ ವಾಸ್ತುಶಿಲ್ಪ

ಬೆಳಗಾವಿ ಜಿಲ್ಲಾ ಪ್ರದೇಶದ ದೇವಾಲಯ ವಾಸ್ತುಶಿಲ್ಪ ಒಂದು ವಿಶ್ಲೇಷಣೆ
ಡಾ. ಸ್ಮಿತಾ ಸುರೇಬಾನಕರ
ಪೀಠಿಕೆ
ಮನಮೋಹಕ ಪ್ರಾಕೃತಿಕ ರಚನೆ, ಹಿತಕರವಾದ ಹವಾಗುಣ, ಸುಸಂಸ್ಕøತ ಜನಸಮುದಾಯದ ಹೂರಣವಾದ ಬೆಳಗಾವಿ ಮಿಶ್ರ ಸಂಸ್ಕøತಿಯ ಆಗರ. ಐತಿಹಾಸಿಕ, ಧಾರ್ಮಿಕ, ಸಾಮಾಜಿಕ ಶ್ರೀಮಂತಿಕೆಯಂತೆಯೇ ಸಾಂಸ್ಕøತಿಕ ಶ್ರೀಮಂತಿಕೆಯ ಕರ್ನಾಟಕಂತರ್ಗತ ಬೆಳಗಾವಿ ಜಿಲ್ಲಾ ಪ್ರದೇಶ ವಾಸ್ತುಶಿಲ್ಪ ಪರಂಪರೆಯಲ್ಲಿಯೂ ಶ್ರೀಮಂತ, ಸಮೃದ್ಧ ನಾಡು. ಜಿಲ್ಲೆಯಾದ್ಯಂತ ಪಸರಿಸಿರುವ ಅಸಂಖ್ಯ ಸ್ಮಾರಕಗಳು ಬೆಳಗಾವಿಯ ಸಾಂಸ್ಕøತಿಕ ನೆಲೆಗಟ್ಟನ್ನು ಸಾರಿ ಹೇಳುತ್ತವೆ.
ಇತಿಹಾಸದ ಹೆಜ್ಜೆಗುರುತುಗಳು, ಸಂಸ್ಕøತಿಯ ಪಡಿಯಚ್ಚುಗಳು, ನಾಗರೀಕತೆಯ ಕುರುಹುಗಳು ಎನಿಸಿದ ನಾಡಿನ ಸ್ಮಾರಕಗಳು ಬೆಳಗಾವಿ ಜಿಲ್ಲಾ ಪ್ರದೇಶದಲ್ಲಿ ಗಾತ್ರ, ಸಂಖ್ಯೆ, ಗುಣವೈಶಿಷ್ಟ್ಯ, ವಾಸ್ತುಶಿಲ್ಪ ಶೈಲಿ, ವೈವಿಧ್ಯತೆ, ಸಾಂಸ್ಕøತಿಕ ಮೌಲ್ಯ-ಈ ಎಲ್ಲ ದೃಷ್ಟಿಯಿಂದ ಕುತೂಹಲ ಮೂಡಿಸಿವೆ. ವಾಸ್ತುಶಿಲ್ಪ ಪರಂಪರೆಯ ಅಧ್ಯಯನವನ್ನು ಪ್ರಾದೇಶಿಕ ಮಟ್ಟದಲ್ಲಿ ಕೈಗೊಳ್ಳುವುದರಿಂದ ಪ್ರಾದೇಶಿಕ ಭಿನ್ನತೆ, ವೈವಿಧ್ಯತೆಯನ್ನು ಬಿಂಬಿಸುವುದರ ಜೊತೆಗೆ ಪ್ರಾದೇಶಿಕ ಸೊಗಡನ್ನು ಈ ಸ್ಮಾರಕಗಳು ಸೂಸುತ್ತವೆ. ಆದರೆ ಬೆಳಗಾವಿ ಜಿಲ್ಲಾ ಪ್ರಾದೇಶಿಕ ವಾಸ್ತುಶಿಲ್ಪದ ಅವಲೋಕನಾತ್ಮಕ ವಿಶ್ಲೇಷಣೆ ಮಾಡುವ ಸಂದರ್ಭದಲ್ಲಿ ಸಮುದ್ರವನ್ನು ಕಲಶದಲ್ಲಿ ಹಿಡಿದಂತೆನಿಸಿ ಅಧ್ಯಯನದ ಅನುಕೂಲತೆಗಾಗಿ ಪ್ರಸ್ತುತ ಪ್ರಬಂಧ ವನ್ನು ದೇವಾಲಯ ವಾಸ್ತುಶಿಲ್ಪಕ್ಕೆ ಸೀಮಿತಗೊಳಿಸಲಾಗಿದೆ.
ಬೆಳಗಾವಿ ಜಿಲ್ಲೆಯ ವಾಸ್ತುಶಿಲ್ಪ ಪರಂಪರೆಯನ್ನು ಕಾಲಕ್ರಮಣಿಕೆ ಆಧಾರವಾಗಿ ಅಭ್ಯಸಿಸಬಹುದು. ಪ್ರಾಗೈತಿಹಾಸ ಕಾಲ, ಪ್ರಾಚೀನ ಕಾಲ, ಮಧ್ಯಯುಗೀನ ಕಾಲ ಮತ್ತು ಆಧುನಿಕ ಕಾಲವೆಂದು ವರ್ಗೀಕರಿಸಬಹುದು. ಅದರಲ್ಲಿ ಪ್ರಾಗೈತಿಹಾಸ ಯುಗದ ಕಲ್ಗೋರಿಗಳು, ಇತಿಹಾಸ ಪ್ರಾರಂಭಯುಗದ ಶಾತವಾಹನ ಕಾಲದ ವಡಗಾವ್-ಮಾದವಪುರದ ವಾಸ್ತುಶಿಲ್ಪ ಕುರುಹುಗಳು, ಜೈನಚೈತ್ರವೆನಿಸಿದ ಹಲಸಿಯ ಆದಿ ಕದಂಬಕಾಲೀನ ದೇವಾಲಯ, ಬಸದಿಗಳು, ಚಾಲುಕ್ಯ ಕಾಲೀನ ಅಸಂಖ್ಯಾತ ಶೈವ ದೇವಾಲಯಗಳು. ಮಧ್ಯಯುಗೀನ ಮುಸ್ಲಿಂ ಸ್ಮಾರಕಗಳಾದ, ದರ್ಗಾ, ಗೋರಿ, ಬುರುಜು ಮತ್ತು ಮಸೀದಿಗಳು, ಯುರೋಪಿಯನ್ ವಸಾಹತು ವಾಸ್ತುಶಿಲ್ಪ ಪ್ರತಿಬಿಂಬಿಸುವ ಅನೇಕಾನೇಕ ಇಗರ್ಜಿ, ಚರ್ಚುಗಳು, ಗೋಥಿಕ್ ಶೈಲಿಯ ಆಡಳಿತ ಕಚೇರಿ ಕಟ್ಟಡಗಳು, ಕಾರ್ಯನಿರ್ವಾಹಕ ಸೌಧಗಳಾದ ಅಂಚೆ-ಕಚೇರಿ, ರೈಲು ನಿಲ್ದಾಣ, ನ್ಯಾಯಾಲಯಗಳು ಮತ್ತು ಮಿಲಿಟರಿ ಸೌಧಗಳು ಇದಲ್ಲದೆ ರಕ್ಷಣಾವಾಸ್ತುಶಿಲ್ಪದ ವೈವಿಧ್ಯ ಬಿಂಬಿಸುವ ಜಿಲ್ಲೆಯಾದ್ಯಂತ ಹರಡಿಸುವ ವೈವಿಧ್ಯಮಯವಾದ ಕೋಟೆ ಕೊತ್ತಲಗಳು, ರಕ್ಷಣಾ ಗೋಡೆ ಮತ್ತು ಬುರುಜುಗಳು ಒಂದೆಡೆಯಾದರೆ ಇನ್ನೊಂದೆಡೆ ಪ್ರದೇಶವನ್ನಾಳಿದ ದೇಶಗತಿಯ ದೇಸಾಯಿ, ದೇಶಪಾಂಡೆ, ಸರದೇಶಪಾಂಡೆ, ಕುಲಕರ್ಣಿ, ಇನಾಮದಾರ, ನಾಯಕ, ಶಿಂಧೆ, ಭೋಸಲೆ ಅಧಿನಾಯಕರ ಭವ್ಯ ವಾಡೆಗಳು, ಅಚ್ಚ ದೇಶಿ ಪರಂಪರೆ ಸೂಸುವ ಜಮೀನದಾರರ ಭವ್ಯಸೌಧಗಳು, ಶೈಕ್ಷಣಿಕ ಸೌಧಗಳು ಇವೇ ಎಂಬಿತ್ಯಾದಿಯಾಗಿ ಅಭ್ಯಸಿಸುವ ಅವಶ್ಯಕತೆ ಇದೆ.
ಪ್ರಸ್ತುತ ಸಂದರ್ಭದಲ್ಲಿ ಬೆಳಗಾವಿ ಪ್ರಾದೇಶಿಕ ವಾಸ್ತುಶಿಲ್ಪ ಪರಂಪರೆಗೆ ದೇವಾಲಯ ವಾಸ್ತುಶಿಲ್ಪ 10-14ನೆಯ ಶತಮಾನದ ಕಾಲಘಟ್ಟದಲ್ಲಿ ಕಲ್ಯಾಣ ಚಾಲುಕ್ಯರ ಮತ್ತು ಅವರ ಅಧೀನತ್ವದ ಸಾಮಂತ ರಾಜರಿಂದ ನಿರ್ಮಾಣವಾದ ಜೈನ, ಶೈವ ಮತ್ತು ವೈಷ್ಣವ ದೇವಾಲಯಗಳ ವಾಸ್ತುಶಿಲ್ಪಶೈಲಿ, ವೈವಿಧ್ಯತೆ, ವೈಶಿಷ್ಟ್ಯತೆಗಳ ವಿಭಿನ್ನ ನಿಲುವಿನಲ್ಲಿ ಸಮೀಕ್ಷಾ ಸ್ವರೂಪದಲ್ಲಿ ಚಿಂತಿಸುವ ಪ್ರಯತ್ನ ಮಾಡಲಾಗಿದೆ. ದೇವಾಲಯ ವಾಸ್ತುಶಿಲ್ಪಶೈಲಿ, ಪ್ರಭೇದ, ಪ್ರಯೋಗ, ಸಂವಿಧಾನ, ಬೆಳಗಾವಿ ಪ್ರಾದೇಶಿಕ ವಾಸ್ತುಶಿಲ್ಪದ ಹರವು ಗುರುತಿಸಲಾಗಿದೆ.
ಬೆಳಗಾವಿ ಜಿಲ್ಲಾ ಪ್ರದೇಶದಲ್ಲಿ ವಾಸ್ತುಶಿಲ್ಪ ಪರಂಪರೆ
ಕುಂತಲನಾಡು, ಕುಹುಂಡಿ ಮಂಡಲ, ಕುಂದರ ನಾಡೆಂದು ಹೆಸರಿಸಿಕೊಂಡ ಬೆಳಗಾವಿ ಪ್ರದೇಶದಲ್ಲಿ ಕಳಚದ ಇತಿಹಾಸದ ಕೊಂಡಿಯನ್ನು ಗುರುತಿಸಬಹುದು. ಪ್ರಾಗೈತಿಹಾಸ ಕಾಲದಲ್ಲಿ ಮಾನವ ನೆಲೆಯ ಕುರುಹುಗಳನ್ನು ಜಿಲ್ಲೆಯ ಗೋಕಾಕ, ಕೊಣ್ಣೂರು, ತೋರಗಲ್, ಬೂದಿಹಾಳ, ಎಕ್ಷಂಬಾ, ಸತ್ತಿ, ಮಂಗಸೂಳಿ, ಖಾನಾಪೂರ ಸಮೀಪದ ಹಲಸಿ, ಹುಕ್ಕೇರಿ, ರಾಯಬಾಗ ಮುಂತಾದೆಡೆ ಶೋಧಿಸಲಾಗಿದೆ. ಕ್ರಿ.ಪೂ.800ರ ಕಾಲದ ಬೃಹದಾಕಾರದ ಕಲ್ಲು ಚಪ್ಪಡಿಗಳನ್ನು ಬಳಸಿ ನಿರ್ಮಿಸಿದ ಬೃಹತ್ ಶಿಲಾಯುಗದ ಕಂಡಿಕೋಣಿ ಗೋರಿಗಳು ನಿರ್ವಾಣಹಟ್ಟಿ, ಕೊಣ್ಣೂರು, ಹಲಸಿ ಮುಂತಾದೆಡೆ ದೊರೆಯುತ್ತವೆ. ಇವು ಸಾಂಸ್ಕøತಿಕವಾಗಷ್ಟೇ ಅಲ್ಲದೇ ನಿರ್ಮಾಣ ತಂತ್ರಗಾರಿಕೆಗೂ ಉತ್ತಮ ಉದಾಹರಣೆಗಳು. ಇದೇ ರೀತಿ ಬೆಳಗಾವಿ ನಗರದ ಕೇಂದ್ರಭಾಗದಲ್ಲಿರುವ ಶಾತವಾಹನರ ನೆಲೆಯಾದ ವಡಗಾಂವ್ ಮಾಧವಪುರದ ಉತ್ಖನಗಳಲ್ಲಿ ಎರಡು ಕೊಠಡಿಗಳು ಹಾಗೂ ಅವುಗಳಿಗೆ ಹೊಂದಿಕೊಂಡಿರುವ ಮೊಗಸಾಲೆಯಿದ್ದ ಮನೆಯ ಅಡಿಪಾಯದ ಅವಶೇಷಗಳು ಮತ್ತು ಇದರ ಪಕ್ಕದಲ್ಲಿರುವ ವೃತ್ತಾಕಾರದ ಗುಳಿ, ವಿಸ್ತಾರವಾದ ಸಭಾಂಗಣ ಮತ್ತು ಅದಕ್ಕೆ ಹೊಂದಿಕೊಂಡಿರುವ ವಾಸದ ಕೊಠಡಿಗಳು, ಧಾನ್ಯ ಶೇಖರಣೆಯ ಉಗ್ರಾಣ, ವೃತ್ತಾಕಾರದ ಬಾವಿ, ವಿವಿಧ ಬಗೆಯ ಕಟ್ಟಡಗಳ ಅವಶೇಷಗಳು ಮುಂತಾದವುಗಳು ಕಂಡುಬಂದಿವೆ. ಶಾತವಾಹನ ಕಾಲದ ಇಟ್ಟಿಗೆ ಕಟ್ಟಡಗಳಿದ್ದ ಒಂದು ಪ್ರಾಚೀನ ಜನವಸತಿ ನಗರ 2000 ವರ್ಷಗಳಷ್ಟು ಮೊದಲೇ ಇತ್ತೆಂಬುದನ್ನು ಸಂಶೋಧನೆಗಳು ದೃಢಪಡಿಸಿವೆ. ಕ್ರಿ.ಶ.2ನೆಯ ಶತಮಾನಕ್ಕೆ ಸೇರಿದ ಈ ಕಟ್ಟಡಗಳ ಅವಶೇಷಗಳು ಜೊತೆಗೆ ಜೇಡಿಮಣ್ಣಿನಿಂದ ನಿರ್ಮಿಸಿದ ಪ್ರಾಚೀನ ಬೀದಿಯನ್ನು ಗುರುತಿಸಲಾಗಿದೆ. ಇದು ವಾಸ್ತುನಿರ್ಮಿತಿಯ ಜೊತೆಗೆ ನಗರ ಯೋಜನೆಯ ಸಿರಿವಂತ ಸಂಸ್ಕøತಿಯ ಮೇಲೆ ಬೆಳಕು ಬೀರುತ್ತದೆ. ಮುಂದೆ ಕ್ರಿ.ಶ.4-6ನೆಯ ಶತಮಾನದವರೆಗೆ ಆಳ್ವಿಕೆ ನಡೆಸಿದ ಬನವಾಸಿ ಕದಂಬರ ಸಾಂಸ್ಕøತಿಕ ಪ್ರತೀಕವಾದ ದೇವಾಲಯ, ಬಸದಿ ಮತ್ತು ಕೋಟೆಗಳು ಹಲಸಿ ಮತ್ತು ಬೆಳಗಾವಿಯಲ್ಲಿ ದೊರೆಯುತ್ತವೆ. ಕರ್ನಾಟಕದ ಪ್ರಾಚೀನ ಜೈನಬಸದಿ ಎನಿಸಿದ ಹಲಸಿಯ ಜೈನಬಸದಿ ಗರ್ಭಗೃಹ ಮತ್ತು ಸುಕನಾಸಿಗಳನ್ನೊಳಗೊಂಡಿದ್ದು ಸರಳ ವಾಸ್ತುಶಿಲ್ಪ ಹೊಂದಿದೆ. ಇದಲ್ಲದೆ ಆದಿಕದಂಬರ ಕಾಲದಲ್ಲಿ ನಿರ್ಮಾಣಗೊಂಡ ನರಸಿಂಹನ ಇಟ್ಟಿಗೆಯ ದೇವಾಲಯವಿದ್ದ ಪ್ರತೀಕವಾಗಿ ದ್ವಿಭುಜನರಿಸಂಹನ ಶಿಲ್ಪ ಹಲಸಿಯಲ್ಲಿದೆ. ಹೂಲಿಯ ಪಂಚಲಿಂಗೇಶ್ವರ ಹೂಲಿಯ ಪಂಚಲಿಂಗೇಶ್ವರ ದೇವಾಲಯ ಮೂಲತಃ ಬಾದಾಮಿ ಚಾಲುಕ್ಯರ ಕಾಲದಲ್ಲಿ ಜೈನಬಸದಿಯಿದ್ದ ಉಲ್ಲೇಖ ಮಂಗಳೇಶನ ಹೂಲಿ ಶಾಸನದಿಂದ ವಿದಿತವಾಗುತ್ತದೆ.
ಆದರೆ ಬೆಳಗಾವಿ ಪ್ರದೇಶದಲ್ಲಿ ಹೇರಳ ಪ್ರಮಾಣದಲ್ಲಿ ದೊರೆಯುವ ದೇವಾಲಯಗಳು ಅದರಲ್ಲೂ ಶೈವ ದೇವಾಲಯಗಳು ಕಲ್ಯಾಣ ಚಾಳುಕ್ಯರ ಮತ್ತು ಅವರ ಮಾಂಡಲಿಕರಾದ ಗೋವೆ ಕದಂಬರು, ಸವದತ್ತಿ ರಟ್ಟರು ಮತ್ತು ಕೊಲ್ಹಾಪುರದ ಶೀಲಾಹಾರರ ಕಾಲದಲ್ಲಿ ನಿರ್ಮಾಣಗೊಂಡದ್ದಾಗಿವೆ.
ಐತಿಹಾಸಿಕ ಹಿನ್ನೆಲೆ : ಇತಿಹಾಸಪೂರ್ವ ಕಾಲದ ಮಾನವನ ಚಟುವಟಿಕೆಯ ನೆಲೆವೀಡಾದ ಬೆಳಗಾವಿ ಪ್ರದೇಶ, ಕರ್ನಾಟಕದ ವಿವಿಧ ಅರಸುಮನೆತನಗಳ ಆಳ್ವಿಕೆಯಲ್ಲಿ ಅಭಿವೃದ್ಧಿ ಹೊಂದಿ, ಕರ್ನಾಟಕದ ಸಂಸ್ಕøತಿ ಕುಸುಮವಾಗಿ ವಿಕಸನಗೊಂಡು, ಸಮೃದ್ಧಿ ಹೊಂದುವಲ್ಲಿ ಪ್ರಮುಖಪಾತ್ರ ವಹಿಸಿದೆ. ಶಾತವಾಹನ, ಆದಿ ಕದಂಬ,  ಬಾದಾಮಿ ಚಲುಕ್ಯ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಗೋವೆ ಕದಂಬ, ಸುಗಂಧವರ್ತಿಯ ರಟ್ಟರು, ದೇವಗಿರಿಯ ಸೇವುಣರು ಮುಂತಾದ ಅರಸು ಮನೆತನಗಳ ಆಳ್ವಿಕೆಯ ಕುರುಹಾಗಿ ಅನೇಕ ಸ್ಮಾರಕಗಳು ಜಿಲ್ಲೆಯ ವಿವಿಧೆಡೆ ಲಭ್ಯವಾಗಿವೆ. ಈ ಅರಸು ಮನೆತನಗಳ ವಿವಿಧ ದೊರೆಗಳು ಸರ್ವಧರ್ಮ ಸಹಿಷ್ಣುತಾ ನೀತಿಯನ್ನು ಅನುಸರಿಸಿ ಶೈವ, ವೈಷ್ಣವ ಜೈನಮತಗಳಿಗೆ ರಾಜಾಶ್ರಯ ನೀಡಿದ್ದಲ್ಲದೆ, ಅವರಡಿಯ ಅಧಿಕಾರಿಗಳು, ಮಂತ್ರಿಗಳು, ಮಾಂಡಲಿಕರಾದಿಯಾಗಿ ದೇಗುಲ ನಿರ್ಮಾಣದ ಕೈಂಕರ್ಯಗೈದರು. ಇವರು ಹಲಸಿ, ದೇಗಾಂವೆ, ದೇಗುಲಹಳ್ಳಿ, ಕಿತ್ತೂರು, ಒಕ್ಕುಂದ, ದೊಡವಾಡ, ಕಾದರೊಳ್ಳಿ, ನೇಸರಗಿ, ಹಣ್ಣಿಕೇರಿ, ಹೂಲಿ, ಸವದತ್ತಿ, ಮುನವಳ್ಳಿ, ಮುರಗೋಡ, ಮಮದಾಪುರ, ಗೋಕಾಕ, ಕೋಣ್ಣೂರು, ಬೆಳಗಾವಿ, ರಾಮದುರ್ಗ, ತೋರಗಲ್ಲ, ಸೊಗಲ, ಸುರೇಬಾನ, ಕುಂದರಗಿ, ಶಿರಸಂಗಿ, ಗೊಡಚಿ, ನಂದಗಾಂವ, ಮಂಗಸೂಳಿ, ಅಥಣಿ, ರಾಯಬಾಗ ಮುಂತಾದೆಡೆ ನಿರ್ಮಾಣಗೊಂಡ ಅಸಂಖ್ಯ ದೇವಾಲಯಗಳು ತಲವಿನ್ಯಾಸ, ಬಾಹ್ಯರೂಪ, ಆಂತರಿಕ ಅಲಂಕಾರ, ವಿನ್ಯಾಸ, ಶೈಲಿ, ಪ್ರಬೇಧ, ರಚನಾ ತಂತ್ರಗಾರಿಕೆ ಇತ್ಯಾದಿ ದೃಷ್ಟಿಕೋನಗಳಿಂದ ಗಮನಾರ್ಹವಾಗಿದ್ದು ಪ್ರಾದೇಶಿಕ ವಾಸ್ತುಶಿಲ್ಪ ವೈವಿಧ್ಯವನ್ನು ಪ್ರತಿಬಿಂಬಿಸುತ್ತವೆ. 10-14ನೆಯ ಶತಮಾನಗಳ ಕಾಲಾವಧಿಯಲ್ಲಿ ನಿರ್ಮಾಣಗೊಂಡ ಮಹತ್ವದ ಕೆಲವು ದೇವಾಲಯಗಳನ್ನು ವಾಸ್ತುಶಿಲ್ಪ ಶೈಲಿಯ ದೃಷ್ಟಿಕೋನದಿಂದ ವರ್ಗೀಕರಿಸಿ, ವಿಶ್ಲೇಷಿಸಿ, ಪರಿಶೀಲಿಸುವ ಪ್ರಯತ್ನವನ್ನು ಪ್ರಸ್ತುತ ಪ್ರಬಂಧದಲ್ಲಿ ಮಾಡಲಾಗಿದೆ.
ಬೆಳಗಾವಿ ಪ್ರದೇಶದ ದೇವಾಲಯ ವಾಸ್ತುಶಿಲ್ಪದ ಪ್ರಕಾರಗಳು
ದೇವಾಲಯ ವಿಮಾನಗಳ ಶೈಲಿಯನ್ನವಲಂಬಿಸಿ ದೇವಾಲಯ ವಾಸ್ತುಶಿಲ್ಪಶೈಲಿ-ಪ್ರಭೇದಗಳನ್ನು ವಿಂಗಡಿಸಲಾಗಿದೆ. ದೇವಾಲಯ ವಾಸ್ತುಶಿಲ್ಪದಲ್ಲಿ ಮುಖ್ಯವಾಗಿ ನಾಗರ, ಕಲಿಂಗ, ದ್ರಾವಿಡ, ವೇಸರ ಎಂಬ ಶೈಲಿಗಳಿದ್ದು ಇವು ಬಹುಮಟ್ಟಿಗೆ ಭೌಗೋಳಿಕ ಪ್ರದೇಶಗಳಿಗೆ ಸೀಮಿತವಾದಂತೆ ತೋರುತ್ತದೆ. ನಾಗರಶೈಲಿ ಉತ್ತರ ಭಾರತದಲ್ಲಿ, ವೇಸರ ವಿಂಧ್ಯಪರ್ವತಗಳಿಗೂ ಕೃಷ್ಣಾ ನದಿಗೂ ನಡುವಣ ಪ್ರದೇಶದಲ್ಲಿಯೂ ಹಾಗೂ ಕೃಷ್ಣೆಯ ದಕ್ಷಿಣದ ದಕ್ಷಿಣ ಭಾರತದಲ್ಲಿ ದ್ರಾವಿಡಶೈಲಿ ಪ್ರಚಲಿತವಾಗಿದ್ದ ಪ್ರಾದೇಶಿಕ ಶೈಲಿಗಳೆಂದು ಪರಿಗಣಿಸಲ್ಪಟ್ಟಿದೆ. ಈ ಶೈಲಿಗಳು ಮೂಲತಃ ಶಿಖರದ ಆಕಾರದ ಆಧಾರದ ಮೇಲೆ ವರ್ಗೀಕೃತಗೊಂಡಿವೆ. ಈ ಶೈಲಿಗಳು ಪ್ರಾದೇಶಿಕವೆಂದರೂ ಅನ್ಯ ಪ್ರದೇಶಗಳಲ್ಲಿ ನಿರ್ಮಾಣಗೊಂಡಿದೆ. ದ್ರಾವಿಡಶೈಲಿಯ ದೇವಾಲಯಗಳು ಮಹಾರಾಷ್ಟ್ರದಲ್ಲಿ ನಾಗರಶೈಲಿಯ ದೇವಾಲಯಗಳು ಆಂಧ್ರ-ಕರ್ನಾಟಕದಲ್ಲಿ, ಭೂಮಿಜ/ವೇಸರ ಶೈಲಿಯ ದೇವಾಲಯಗಳು ಯಾದವರು ಮುಂತಾದವರು ಅನುಸರಿಸಿದರು.
ದೇವಾಲಯಗಳನ್ನು ವಿವಿಧ ಅರಸು ಮನೆತನಗಳಿಗೆ ಸೇರಿದ ವಿವಿಧ ರಾಜರು, ಅವರ ಸಾಮಂತರು, ಅಧಿಕಾರ ವರ್ಗ, ವ್ಯಾಪಾರಸ್ಥರು, ಶ್ರೀಮಂತ ಪ್ರಜೆಗಳು ಆಯಾ ರಾಜ್ಯಗಳಲ್ಲಿ ಕಟ್ಟಿಸಿದ್ದರಾದ್ದರಿಂದ ಆಯಾ ಅರಸರ, ಮಾಂಡಲಿಕ ಮನೆತನದ ಹೆಸರನ್ನೇ ಆಯಾ ದೇವಾಲಯ ಶೈಲಿಗಳಿಗೂ ಇಡಲಾಗಿದೆ. ಉದಹರಣೆಗೆ ಚಾಲುಕ್ಯಶೈಲಿ, ಹೊಯ್ಸಳ ಶೈಲಿ, ನೊಳಂಬ-ಪಲ್ಲವಶೈಲಿ ಮುಂತಾದವುಗಳು. ಅನೇಕ ಸಲ ಈ ವಿವಿಧ ಶೈಲಿಗಳ ಪ್ರಭಾವ, ಪರಿಣಾಮ ಈ ದೇವಾಲಯ ವಾಸ್ತುಶಿಲ್ಪ ನಿರ್ಮಾಣದಲ್ಲಿ ಪ್ರತ್ಯೇಕ ಮತ್ತು ಪೂರಕವಾಗಿರುವುದು ಗಮನಾರ್ಹ.
ಆದರೆ ಕರ್ನಾಟಕ ವಾಸ್ತುಶಿಲ್ಪದ ಉಚ್ಛ್ರಾಯ ಕಾಲವೆನಿಸಿದ್ದ 10-15ನೆಯ ಶತಮಾನದವರೆಗಿನ ಕಾಲವನ್ನು ಬಾದಾಮಿ ಚಾಲುಕ್ಯರಿಂದ ವಿಕಸನಗೊಂಡ ಮುಂದಿನ ಹಂತದ ಶೈಲಿಯು ಬೆಳೆದು ಬಂದಿತು. ಬಳಸುವ ಕರಿಕಲ್ಲಿನಲ್ಲಿ ಎತ್ತರದ ಬದಲಿಗೆ ವಿಸ್ತಾರದಲ್ಲಿ, ವಿಸ್ತೀರ್ಣ ಹೆಚ್ಚಿಸಲು ಕಂಬಗಳ ಸಂಖ್ಯೆಯಲ್ಲಿ ಹೆಚ್ಚಳ, ಅಲಂಕರಣಕ್ಕೆ, ನಾಜೂಕತೆಯ ನಿರ್ಮಾಣಕ್ಕೆ ಕೊಟ್ಟ ಒತ್ತು ಇವೇ ಮುಂತಾದ ಬದಲಾವಣೆಗಳಾದವು. ಬಂಧನ ಸಾಮಗ್ರಿಗಳ ಬಳಕೆಯಲ್ಲದೆ ಚಪ್ಪಡಿ ಕಲ್ಲುಗಳನ್ನು ಒಂದರ ಮೇಲೊಂದರಂತೆ ಜೋಡಿಸಿ ತಂತ್ರಜ್ಞಾನದಲ್ಲೂ ಮಾರ್ಪಾಡುಗಳಾದದ್ದು ಗಮನಾರ್ಹ.
ಪ್ರಸ್ತುತ ಅಧ್ಯಯನದಲ್ಲಿ ಕಲ್ಯಾಣ ಚಾಲುಕ್ಯ, ಅವರ ಮಾಂಡಲಿಕರು, ಅಧಿಕಾರವರ್ಗ ಮತ್ತು ಶ್ರೀಮಂತ ಪ್ರಜೆಗಳಿಂದ ನಿರ್ಮಾಣಗೊಂಡ ಅನೇಕ ದೇವಾಲಯಗಳನ್ನು ಅಧ್ಯಯನ ಮಾಡಲಾಗಿದೆ. ಬೆಳಗಾವಿ ಪ್ರದೇಶದಲ್ಲಿ ಇಟಗಿಯ ಮಹಾದೇವ, ಡಂಬಳದ ಶಿವಾಲಯ, ಕುಕನೂರಿನ ಕಲ್ಲೇಶ್ವರ, ಕುರುವತ್ತಿಯ ಮಲ್ಲಿಕಾರ್ಜುನ ದೇವಾಲಯಗಳ ವಾಸ್ತುಶಿಲ್ಪ ವೈಭವ ಸೂಸುವಂತಹ ದೇವಾಲಯಗಳು ವಿರಳವೆಂದೇ ಹೇಳಬಹುದು.
ಕದಂಬನಾಗರ/ಸೋಪಾನ ಶೈಲಿಯ ದೇವಾಲಯಗಳು
ಬೆಳಗಾವಿ ಪ್ರದೇಶದಲ್ಲಿ ಸೋಪಾನ ಶೈಲಿಯ ದೇವಾಲಯ ಹೆಚ್ಚಿನ ಸಂಖ್ಯೆಯಲ್ಲಿವೆ. ಸರಳೀಕರಣ ಈ ಶೈಲಿಯ ದೇವಾಲಯಗಳ ವೈಶಿಷ್ಟ್ಯವಾಗಿದ್ದು ತೀರ ಸರಳವಾದ ಶಿಖರವನ್ನು ಹೊಂದಿರುತ್ತವೆ. ಮಡಿಕೆಗಳುಳ್ಳ ಅಧಿಷ್ಠಾನ, ಅಲಂಕಾರರಹಿತ ಭಿತ್ತಿ, ಒಂದರ ಮೇಲೊಂದರಂತೆ ಇರಿಸಿರುವ, ಮೇಲೆ ಹೋದಂತೆ ಪಿರಾಮಿಡ್ಡಿನ ಆಕಾರದಲ್ಲಿ ಕಿರಿದಾಗುತ್ತ ಸಾಗುವ ಕಪೆÇೀತ, ಗ್ರೀವಗಳ ಅಡ್ಡಪಟ್ಟಿಕೆಗಳು, ಆ ಪಟ್ಟಿಗಳ ಅಂಚಿನ ಗ್ರೀವದಲ್ಲಿ ಕಾಣುವ ಅಲಂಕರಣ, ಮೇಲ್ಗಡೆ ಗಂಟೆಯಾಕಾರದ ಶಿಖರ ಹಾಗೂ ಕಲಶ ಇವು ಕದಂಬಸಾಗರ ಶೈಲಿಯ ದೇವಾಲಯ ವಾಸ್ತುಶಿಲ್ಪದ ಮುಖ್ಯ ಲಕ್ಷಣಗಳು. ಕೆಲವು ದೇವಾಲಯಗಳು ಪರಿವಾರ ದೇವತೆಗಳಾಗಿ ನಿರ್ಮಿಸಿರುವ ದೇವಕೋಷ್ಠಗಳನ್ನು ಹೊಂದಿರುತ್ತವೆ. ಬಾಂಧನಾಪಟ್ಟಿಯಲ್ಲಿ ಶಿಲ್ಪಗಳ ಸಾಲುಗಳನ್ನು ಗುರುತಿಸಬಹುದು. ಅನೇಕ ವಿಶಿಷ್ಟ ವಿನ್ಯಾಸದ ಶುಕನಾಸಗಳನ್ನು ಹೊಂದಿರುತ್ತವೆ.
ಕಲ್ಯಾಣ ಚಾಳುಕ್ಯರ ಮಾಂಡಲೀಕರಾದ ಸುಗಂಧವರ್ತಿಯ ರಟ್ಟರು ಮತ್ತು ಗೋವೆಯ ಕದಂಬರು ಆಳಿದ ಪ್ರದೇಶಗಳಲ್ಲಿ ಸೋಪಾನ ಶೈಲಿಗೆ ಆದ್ಯತೆಯನ್ನು ನೀಡಲಾಯಿತು. ಬೆಳಗಾವಿ ಪ್ರದೇಶದಲ್ಲಿರುವ ಏಕಕೂಟ (ಒಂದೇ ಗರ್ಭಗೃಹ) ದೇವಾಲಯಗಳಲ್ಲಿ ಮಹತ್ವವಾದವುಗಳೆಂದರೆ ದೇಗುಲಹಳ್ಳಿಯ ರಾಮಲಿಂಗೇಶ್ವರ, ಹಲಸಿಯ ಕಲ್ಮೇಶ್ವರ, ಸುವಣೇಶ್ವರ ಮತ್ತು ರಾಮೇಶ್ವರ ದೇವಾಲಯಗಳು, ಬೆಳಗಾವಿ ನಗರದಲ್ಲಿರುವ ಕಮಲಬಸದಿ, ಗೋಕಾಕ ಜಲಪಾತದ ಬದಿಗಿರುವ ಮಹಾಲಿಂಗೇಶ್ವರ ದೇವಾಲಯ ಮುಂತಾದವುಗಳು. ಕೊಣ್ಣೂರಿನ ಚಿಕಲೇಶ್ವರ ಮತ್ತು ಪಾಶ್ರ್ವನಾಥ ಬಸದಿ, ತೋರಗಲ್ ಕೋಟೆಯಲ್ಲಿರುವ ಭೂತನಾಥ ದೇವಾಲಯ, ಮುನವಳ್ಳಿಯ ಮಲ್ಲಿಕಾರ್ಜುನ ಮತ್ತು ಪಂಚಲಿಂಗೇಶ್ವರ ನೇಸರಿಗೆಯ ವೀರಭದ್ರ ಗುಡಿ (ಮೂಲತಃ ಜೈನಬಸದಿ), ಹಲಸಿಯ ಭೂವರಾಹನರಸಿಂಹ ದೇಗುಲ ಮತ್ತು ಸುಪ್ರಸಿದ್ಧ ಜೋಡುಗುಡಿ ದ್ವಿಕೂಟ (ಎರಡು ಗರ್ಭಗೃಹ) ಮಾದರಿಗೆ ಉತ್ತಮ ಉದಾಹರಣೆಗಳಾದರೆ ಹತ್ತರಗಿಯ ಶಿಖರೇಶ್ವರ, ಸವದತ್ತಿಯ ಪುರದೇಶ್ವರ, ಗೋಕಾಕದ ಕಾಡಸಿದ್ದೇಶ್ವರ, ಮುರಗೋಡದ ಮಲ್ಲಿಕಾರ್ಜುನ ಮತ್ತು ನಾರಾಯಣ ಗುಡಿಗಳು, ದೇಗಾಂವದ ಕಲನಾರಾಯಣ ದೇವಾಲಯ ಮುಂತಾದವುಗಳು ತ್ರಿಕೂಟ (ಮೂರು ಗರ್ಭಗೃಹ) ದೇವಾಲಯಗಳು. ಬೆಳಗಾವಿಯಲ್ಲಿ ಕದಂಬ ನಾಗರಶೈಲಿಯ ದೇವಾಲಯಗಳು ಅಪಾರವಾಗಿವೆ.
ತೋರಗಲ್ ಕೋಟೆಯ ಆವರಣದೊಳಗಿರುವ ಭೂತನಾಥ ದೇವಾಲಯ ಸಮೂಹ ಫಾಂಸನ ಶೈಲಿಯಲ್ಲಿದ್ದು ಶಿಖರವನ್ನು ರೂಪಿಸಿರುವ ಕಪೆÇೀತ ಪಟ್ಟಿಗಳ ಮಧ್ಯಭಾಗದಲ್ಲಿ ದೊಡ್ಡ `ನಾಸಿ’ಗಳನ್ನು ರಚಿಸಿ ದೇವತೆಗಳ ಚಿಕಣಿಶಿಲ್ಪಗಳನ್ನು ಕೆತ್ತಲಾಗಿದೆ. ಸರಳ ಸುಂದರವಾದ ಈ ದೇವಾಲಯದ ಭಿತ್ತಿ ಅಲಂಕಾರರಹಿತವಾಗಿದ್ದು ದೇವಕೋಷ್ಠಗಳಿವೆ. ಮುಖಮಂಟಪದ ಕಕ್ಷಾಸನದ ಹೊರಭಾಗದಲ್ಲಿ ಮಿಥುನ ಶಿಲ್ಪಗಳಿದ್ದು ಶಿಥಿಲಗೊಂಡಿವೆ. ಇಡೀ ದೇವಾಲಯ ಸಮೂಹ ಹೆಚ್ಚು ಕಡಿಮೆ ಒಂದೇ ಮಾದರಿಯಲ್ಲಿದ್ದು ಪಡಿಯಚ್ಚಿನಿಂದ ತಯಾರಿಸಿದಂತೆ ಭಾಸವಾಗುತ್ತದೆ. ಇದು ಪುರಾತತ್ವ ಇಲಾಖೆಯ ರಕ್ಷಿತ ಸ್ಮಾರಕವಾಗಿದೆ. ಮುರಗೋಡದ ತ್ರಿಕೂಟ ಮಲ್ಲಿಕಾರ್ಜುನ ದೇಗುಲದ ಸಭಾಮಂಪಟದ ಮೂರು ಶಿಖರಗಳೂ ಫಾಂಸನಶೈಲಿಯಲ್ಲಿದ್ದು ವಿಮಾನದಲ್ಲಿ ಬಾಂಧನಾ ಪಟ್ಟಿ ಮತ್ತು ದೇವಕೋಷ್ಠಗಳಿವೆ. ಸಂವರಣ ರೀತಿಯ ಶಿಖರಗಳು ನಾರಾಯಣ ದೇವಾಲಯದ ಮಹಾಮಂಟಪದ ಮೇಲಿವೆ. ಈ ವಾಸ್ತುಶಿಲ್ಪಿ ವೈಶಿಷ್ಟ್ಯ ಮುರಗೋಡದಲ್ಲಿ ಮಾತ್ರ ಕಂಡುಬರುವುದು ಗಮನಾರ್ಹ. ವಿಮಾನದ ಗೋಡೆಗಳಲ್ಲಿ ಅಲಂಕಾರರಹಿತ ಶಿಖರವಿರುವ ದೇವಕೋಷ್ಠವಿದೆ. ಈ ದೇವಾಲಯದ ಶುಕನಾಸಿಯಲ್ಲಿರುವ ಹದಿನಾರು ಕೈಗಳ ನಟರಾಜಶಿಲ್ಪ ಮನಮೋಹಕವಾಗಿದ್ದು ಜಿಲ್ಲೆಯಲ್ಲಿಯೇ ವಿಶಿಷ್ಟವಾದುದಾಗಿದೆ. ದೇವಾಲಯದ ಹೊರಪ್ರಾಂಗಣ ದಲ್ಲಿರುವ ನಂದಿ ಶಿಲ್ಪ ಆಕರ್ಷಣೀಯವಾಗಿದೆ.
ಬೆಳಗಾವಿ ನಗರದ ಕೋಟೆ ಆವರಣದಲ್ಲಿರುವ ರಟ್ಟರ ಕಾಲೀನ ಉತ್ತರಾಭಿಮುಖವಾದ ಬಸದಿ ಶಾಸನೋಲ್ಲೇಖಿತವಾಗಿದ್ದು ಗರ್ಭಗೃಹ ಮತ್ತು ಮಹಾಮಂಟಪದ ಮೇಲೆ ಫಾಂಸನ ಮತ್ತು ಶೈಲಿಯ ಛಾವಣಿಯಿದೆ. ಗರ್ಭಗೃಹ, ಅಂತರಾಳ, ಗೂಢ ಮಂಟಪ, ಮುಖಮಂಟಪಗಳನ್ನು ಹೊಂದಿದ ಕಮಲಬಸದಿಯಲ್ಲಿ ದೇವಕೋಷ್ಠ, ನಾಜೂಕು ಕೆತ್ತನೆಯ ಸಪ್ತಶಾಖಾ ದ್ವಾರಬಂಧ ಜಿನಬಿಂಬವಿರುವ ಲಲಾಟ, ನೃತ್ಯಗಾರ್ತಿಯರು ಮತ್ತು ಸಂಗೀತವಾದ್ಯ ನುಡಿಸುವವರ ಕಿರು ಶಿಲ್ಪವನ್ನೊಳಗೊಂಡ ಮಹಾಮಂಟಪದ ಕಕ್ಷಾಸಸ, ಶುಕನಾಸದ ಮೇಲಿರುವ ಶಿಖರದ ಕೋಷ್ಠ ಇವು ಕಮಲಬಸದಿಯ ವಾಸ್ತುಶಿಲ್ಪ ಲಕ್ಷಣಗಳು. ಈ ಬಸದಿಯ ಮಹಾಮಂಟಪದ ಭುವನೇಶ್ವರ ದೇವಾರಿಯ ಕಲಾನೈಪುಣ್ಯತೆ ಎತ್ತಿ ತೋರಿಸುತ್ತದೆ. ಈ ಭುವನೇಶ್ವರಿಯಲ್ಲಿ ಏಕಕೇಂದ್ರ ಕಲದಿಂದಾಗಿ ಇದಕ್ಕೆ ಕಮಲಬಸದಿ ಎಂಬ ಹೆಸರು ಬಂದಿದೆ. ಭುವನೇಶ್ವರದಲ್ಲಿ ವಿವಿಧ ತೀರ್ಥಂಕರರ ಕಿರುಶಿಲ್ಪಗಳಿವೆ. ಈ ಬಸದಿಯ ಜಾಲಂದರಗಳು ಗಮನಾರ್ಹವಾಗಿವೆ. ಇಲ್ಲಿಯ ನವರಗಂದ ನಾಲ್ಕು ಕಂಬಗಳ ಮೇಲ್ಭಾಗದಲ್ಲಿ ಚಚ್ಚಾಕಾದಲ್ಲಿ ಲತಾ ಸುರುಳಿಗಳಿದ್ದು ಇವುಗಳಲ್ಲಿ ಹಂಸ, ಪದ್ಮ ಮುಂತಾದವುಗಳನ್ನು ಕಾಣಬಹುದು. ನುಣುಪು ಹೊಳಪಿನ 14 ಕಂಬಗಳನ್ನು ಮಹಾಮಂಟಪದಲ್ಲಿ ಕಾಣಬಹುದು. ಗರ್ಭಗೃಹದ ಪೀಠದ ಮೇಲೆ ಹಿಂದೆ ಶಾಂತಿನಾಥ ತೀರ್ಥಂಕರ ಶಿಲ್ಪವಿತ್ತು. ಈಗ 22ನೆಯ ತೀರ್ಥಂಕರ ನೇಮಿನಾಥರ ಶಿಲ್ಪವಿದೆ.
ನೇಸರಗಿಯ ವೀರಭದ್ರರ ದೇವಾಲಯ ಮೂಲತಃ ಜೈನಬಸದಿಯಾಗಿದ್ದು ಉಪಪೀಠವನ್ನು, ಲಲಾಟದಲ್ಲಿ ಜೈನಬಿಂಬವನ್ನು ಹೊಂದಿದೆ. ಪೀಡಾ ದೇಗುಲಗಳಿಗೆ ಹೋಲುವ ಅಲಂಕಾರಿತ ವಿವರ ಮತ್ತು ಗೋಡೆಯ ಮಡಿಕೆಗಳನ್ನು ಇಲ್ಲಿ ಕಾಣಬಹುದು. ನವರಂಗದ ಮೇಲ್ಛಾವಣಿಯ ಭುವನೇಶ್ವರದಲ್ಲಿ ತೀರ್ಥಂಕರ ಶಿಲ್ಪಗಳಿವೆ.
ಬೆಳಗಾವಿಯ ಸೈನಿಕಪಾಳ್ಯದಲ್ಲಿರುವ ಶಾಸನೋಲ್ಲೇಖಿತವಾದ ಯಾದವಕಾಲೀನ ಹಾಳು ಬಿದ್ದ ಶಿವಾಲಯದಲ್ಲಿಯ ಕಂಬಗಳು ಹದಿನಾರು ಮುಖಗಳ ಕಾಂಡಭಾಗದಲ್ಲಿ ಹೂ, ಲತೆ ಮತ್ತು ಮುತ್ತಿನಾಕಾರದ ಅಲಂಕಾರ ಹೊಂದಿದೆ. ಹೊರಗೋಡೆಯ ಅರ್ಧಗಂಬದ ಮೇಲೆ ಮದನಿಕೆಯರ ಶಿಲ್ಪಗಳು ಮತ್ತು ನವರಂಗದಲ್ಲಿ ಮೇಲೆ ಶಿಖರವನ್ನು ಹೊಂದಿದ ಎಂಟು ದೇವಕೋಷ್ಟಗಳು ವಿಶಿಷ್ಟವಾಗಿವೆ. ಇದು ನಾಜೂಕು ಕೆತ್ತನೆಗೆ ಕಲಾ ಕುಸುರಿಗೆ ಮತ್ತು ಅಲಂಕರಣಕ್ಕೆ ಖ್ಯಾತವಾಗಿದೆ.
ಕ್ರಿ.ಶ.1175ರಲ್ಲಿ ಗೋವೆ ಕದಂಬರಿಂದ ರಚಿತವಾದ ದೇಗಾಂವೆಯ ಕಮಲನಾರಾಯಣ ದೇವಾಲಯ ಬೆಳಗಾವಿ ಜಿಲ್ಲೆಯ ವಾಸ್ತುಶಿಲ್ಪಶೈಲಿಯ ದೃಷ್ಟಿಯಿಂದ ಕಳಶಪ್ರಾಯವಾದ ದೇಗುಲ. ಬೆಳಗಾವಿಯ ಕೆಲವೇ ವೈಷ್ಣವದೇಗುಲ ಗಳಲ್ಲೊಂದಾದ ಇದು ಸಮಾನಾಂತರವಾದ ಮೂರು ಗರ್ಭಗೃಹಗಳನ್ನು ಹೊಂದಿದ್ದು, ಅಂತರಾಳ ಸಹಿತವಾಗಿ ಸಭಾಮಂಟಪದೊಂದಿಗೆ ಜೋಡಿಸಲ್ಪಟ್ಟಿದೆ. ವಿನ್ಯಾಸ ಹೊಂದಿದ ಈ ರೀತಿಯ ತಲವಿನ್ಯಾಸ ಇನ್ನೊಂದೆಡೆ ಕಂಡುಬರುವದು ವಿರಳ. ಫಾಂಸನ ಮಾದರಿಯ ಇದರ ಶಿಖರ ಬರಿ ಮೂರು ಸ್ಥರದಲ್ಲಿ ಮಾತ್ರ ಉಳಿದಿದ್ದು ವಿಮಾನದ ಮೇಲ್ಗಡೆ ಬಿದ್ದುಹೋಗಿದೆ. ಆದರೆ ಅಲ್ಲಲ್ಲಿ ಅಲಂಕರಣಕ್ಕಾಗಿ ಶಿಖರಗಳನ್ನು ಬಿಂಬಿಸಾಗಿದೆ. ಇದು ತ್ರಿಕೂಟ ಮಾದರಿಗೆ ಉತ್ತಮ ಉದಾಹರಣೆ. ಆಭರಣದ ವಿನ್ಯಾಸದ ಕುಸುರಿ ಕೆತ್ತನೆಯಿಂದ ಕೂಡಿದ ಎಂಟು ಕಂಬಗಳ ಸಾಲಿದ್ದು ಕಕ್ಷಾಸನದ ಹೊರಭಾಗದಲ್ಲಿ ಬೇರೆ ಬೇರೆ ಶಿಲ್ಪಾಕೃತಿಯ ಅಲಂಕರಣವಿದೆ. ತಿಮ್ಮೋಜ ಮುಂತಾದ ಶಿಲ್ಪಿಗಳ ಹೆಸರನ್ನೊಳಗೊಂಡ ಶಿಲಾಶಾಸನಗಳನ್ನು ಕಂಬದ ಮೇಲೆ ಕೆತ್ತಲಾಗಿದೆ. ಗರ್ಭಗೃಹದ ಇಕ್ಕೆಲಗಳಲ್ಲಿರುವ ಜಯ-ವಿಜಯದ ಶಿಲ್ಪಗಳು ಸೂಕ್ಷ್ಮ ಕೆತ್ತನೆಯ ವಿನ್ಯಾಸದ ಜಾಲಂಧರಗಳು, ಹಳೆಬೀಡಿನ ಮಾದರಿಯ ಶಿಲ್ಪಗಳು, ವಿಭಿನ್ನ ಭಂಗಿಯ ನೃತ್ಯಗಾತಿಯರು, ಗಾಯಕಿಯರು ರಾಜ್ಯಚಿನ್ಹೆಯ ರೂಪದಲ್ಲಿರುವ ಸಾಲು ಸಿಂಹಗಳ ಶಿಲ್ಪಗಳು ಮಂತ್ರಮುಗ್ಧಗೊಳಿಸುವಂತಿವೆ. ಚಾಲುಕ್ಯ ಗೋವೆಕದಂಬರ ಕಾಲದ ಈ ದೇವಾಲಯದ ಮೇಲೆ ಚಾಲುಕ್ಯ-ಹೊಯ್ಸಳಶೈಲಿಯ ಪ್ರಭಾವ ಎದ್ದು ಕಾಣುತ್ತದೆ. ದೇವಾಲಯದ ಹೊರಾಂಗಣದಲ್ಲಿರುವ ಗೂಢಮಂಟಪದಲ್ಲಿರುವ ಚಿಕ್ಕ ಮಂಟಪಗಳು ಇಂದು ಶಿಲ್ಪರಹಿತವಾಗಿವೆ. ಆದರೆ ಎಡಪಾಶ್ರ್ವದಲ್ಲಿರುವ ಮಂಟಪದಲ್ಲಿ ಹಲವು ಹೆಡೆಗಳ ಆಕರ್ಷಕ ನಾಗಶಿಲ್ಪವಿದೆ. ಬನವಾಸಿಯ ಮಧುಕೇಶ್ವರ ದೇವಾಲಯದ ನಾಗಶಿಲ್ಪವನ್ನು ಹೋಲುತ್ತದೆ. ಪೌರಾಣಿಕ ಪ್ರಸಂಗಗಳನ್ನು ಬಿಂಬಿಸುವ ನಿರೂಪಣಾ ಶಿಲ್ಪಗಳಾದ ಗೋವರ್ಧನಗಿರಿಧಾರಿ, ರಾಮಲೀಲಾ ಪ್ರಸಂಗಗಳು, ಮಿಥುನ ಶಿಲ್ಪಗಳು, ಪ್ರಾಣಿಗಳ ಸಮಾಗಮ ಮುಂತಾದವುಗಳು ಮನಮೋಹಕವಾಗಿವೆ. ಇದು ಕೇಂದ್ರ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಯ ಸಂರಕ್ಷಿತ ಸ್ಮಾರಕವಾಗಿವೆ.
ನೇಸರಗಿಯ ಪ್ರಸಿದ್ಧ ಜೋಡುಗುಡಿ ರಟ್ಟರ ನಿರ್ಮಾಣವಾಗಿದ್ದು ಕದಂಬನಾಗರಶೈಲಿಯ ಉತ್ಕøಷ್ಟ ಉದಾಹರಣೆ, ಗರ್ಭಗೃಹ, ಶುಕನಾಶಗಳನ್ನು ಮಾತ್ರ ಹೊಂದಿದ್ದು ನವರಂಗ ಮತ್ತು ಮುಖಮಂಪಟಗಳಿದ್ದ ದ್ಯೋತಕವಾಗಿ ಅವುಗಳ ಅಧಿಷ್ಠಾನದ ಅವಶೇಷಗಳಿವೆ. ಹನ್ನೊಂದು ಹಂತದ ಕದಂಬನಾಗರ ಶೈಲಿಯ ಶಿಖರ ಎರಡು ಗರ್ಭಗೃಹಗಳ ಮೇಲಿದ್ದು ಇದು ಶೈವ ದೇವಾಲಯವಾಗಿದೆ. ಹಲಸಿಯ ಭೂವರಾಹನರಸಿಂಹ ದೇವಾಲಯ ಕಲ್ಯಾಣ ಚಾಲುಕ್ಯ ಶೈಲಿಯ ಲಕ್ಷಣಗಳನ್ನೊಳಗೊಂಡ ಮುಕುಟಪ್ರಾಯವಾದ ನಯನ ಮನೋಹರ ದೇವಾಲಯ. ಬೆಣಚುಕಲ್ಲಿನಿಂದ ನಿರ್ಮಾಣ ಗೊಂಡ ದ್ವಿಕೂಟ ಮಾದರಿಯ ಶಾಸನೋಲ್ಲೇಖಿತ ಈ ದೇವಾಲಯ ಸಂಕೀರ್ಣ ಮಾದರಿಯ ದೇವಾಲಯ ವಾಗಿದೆ. ತಳವಿನ್ಯಾಸದಲ್ಲಿ ಎರಡು ಗರ್ಭಗೃಹಗಳು, ಎರಡು ಅಂತರಾಳಗಳು, ನವರಂಗ, ನಾಲ್ಕು ದ್ವಾರವುಳ್ಳ ಪ್ರಾಕಾರಕ್ಕೆ ಹೊಂದಿಕೊಂಡು ಒಳಗಡೆ ಶಂಕರನಾರಾಯಣ, ಲಕ್ಷ್ಮೀನಾರಾಯಣ, ಈಶ್ವರ ಮತ್ತು ಗರುಡ ದೇವಾಲಯಗಳಿವೆ. ಆರು ಶಾಖೆಗಳ ದ್ವಾರಬಂಧ ಗರ್ಭಗೃಹಕ್ಕಿದ್ದು, ಅಂತರಾಳ ದ್ವಾರದಲ್ಲಿ ಪುಷ್ಪಾಲಂಕೃತ ಜಾಲಂಧರಗಳಿವೆ. ನವರಂಗದಲ್ಲಿ ನಾಲ್ಕು ಚೌಕ ಕಂಬಗಳಿದ್ದು ಒಳಗೋಡೆಯಲ್ಲಿ ಆರು ಮತ್ತು ಹೊರಗೋಡೆಗಳಿಗೆ ಹತ್ತಿಕೊಂಡಂತೆ ಹದಿನಾರು ಕಂಬಗಳಿವೆ. ಪೂರ್ವಾಭಿಮುಖವಾದ ಗರ್ಭಗೃಹದ ಮೇಲೆ ಕದಂಬ ನಾಗರಶೈಲಿಯ ಹನ್ನೊಂದು ಹಂತಗಳಿರುವ ಗೋಪುರವಿದೆ.
ಹಲಸಿ ಗ್ರಾಮದ ಉತ್ತರಕ್ಕಿರುವ ಕಲ್ಮೇಶ್ವರ ದೇವಾಲಯ ಪೂರ್ವಾಭಿಮುಖವಾಗಿದ್ದು, ಏಕಕೂಟ ಮಾದರಿಯಲ್ಲಿರುವ ಶೈವಾಲಯದ ಅಧಮಂಟಪದಲ್ಲಿ ಎರಡು ಕೋಷ್ಠಗಳು ಹಾಗೂ ಎರಡು ಕಂಬಗಳಿವೆ. ನವರಂಗದಲ್ಲಿ ನಾಲ್ಕು ಕಂಬಗಳಿದ್ದು ಛತ್ತು ಬಿದ್ದುಹೋಗಿದೆ. ಇಲ್ಲಿರುವ ಕದಂಬ ನಾಗರ ಅಥವಾ ಫಾಂಸನಶೈಲಿಯ ಇನ್ನೊಂದು ಉತ್ತಮ ಉದಾಹರಣೆ ಎಂದರೆ ರಾಮತೀರ್ಥ ಬೆಟ್ಟದ ಮೇಲಿರುವ ರಾಮೇಶ್ವರ ದೇವಾಲಯ. ಕದಂಬನಾಗರಶೈಲಿಯ ವಿಮಾನವನ್ನು ಗರ್ಭಗೃಹದ ಮೇಲೆ ಹೊಂದಿರುವ ಇದು ಈ ಪ್ರದೇಶದ ದೇವಾಲಯ ವಾಸ್ತುಶಿಲ್ಪದ ವಿಕಸಿತ ಹಂತವನ್ನು ನಿರೂಪಿಸುತ್ತದೆ.
ಬೆಳಗಾವಿ ಪ್ರದೇಶದಲ್ಲಿ ಮುಕುಟಪ್ರಾಯವೆನಿಸಿದ ದೇವಾಲಯಗಳಲ್ಲಿ ನಂದಗಾಂವದ ಅತ್ಯದ್ಭುತ ಶೈವ ದೇವಾಲಯ ಉಲ್ಲೇಖಾರ್ಹವಾದುದು. ಕಲ್ಯಾಣ ಚಾಲುಕ್ಯ ಕಾಲ ಮತ್ತು ಶೈಲಿಯಲ್ಲಿರುವ ಕ್ರಿ.ಶ.11-12ನೆಯ ಶತಮಾನದ ಡೆಕ್ಕನ್ ಟ್ರಾಪ್ ಶಿಲೆಯಿಂದ ನಿರ್ಮಿತವಾದ ಈ ದೇವಾಲಯ ರಾಜ್ಯ ಪುರಾತತ್ತ್ವ ಇಲಾಖೆಯಲ್ಲಿದ್ದರೂ ದುಸ್ಥಿತಿಯಲ್ಲಿದೆ. ಇದು ತ್ರಿಕೂಟಚಲವಾಗಿದ್ದು ಮೂರು ಗರ್ಭಗೃಹ, ಪ್ರತ್ಯೇಕ ಮೂರು ಅಂತರಾಳ, ಒಂದು ಸಭಾಮಂಟಪ ಮತ್ತು ಮುಖಮಂಟಪವನ್ನು ಹೊಂದಿದ್ದು, ಮುಖಮಂಟಪ ಮತ್ತು ಸಭಾಮಂಟಪವನ್ನು ಜೋಡಿಸುವ ಕಿರುಮಂಟಪವಿದೆ. ಗರ್ಭಗೃಹದ ದ್ವಾರಬಂಧದ ಲಲಾಟದಲ್ಲಿ ಕ್ರಮವಾಗಿ ಗಣೇಶ ಮತ್ತು ವಿಷ್ಣುವಿನ ಚಿಕಣಿ ಶಿಲ್ಪಗಳಿವೆ. ಗರ್ಭಗೃಹ ಪ್ರವೇಶದ್ವಾರದ ಮೇಲೆ ಅಷ್ಟದಿಕ್ಪಾಲಕರು, ಮಕರತೋರಣ ಮತ್ತು ಎಲ್ಲಕ್ಕೂ ಮುಖ್ಯವಾಗಿ ಸುಂದರವಾದ ನಟರಾಜನ ಶಿಲ್ಪವಿದೆ. ಅಂತರಾಳದಲ್ಲಿ ಜಾಲವಾತಾಯನವಿದೆ. ಮುಖಮಂಟಪದ ನಾಲ್ಕು ಗೋಡೆಗಳ ಮೇಲೆ ಜಾಲಂಧರಗಳನ್ನು ಹೋಲುವ ಹೂವಿನ ವಿನ್ಯಾಸದ ಕೆತ್ತನೆಯಿದೆ.
ತಿರುಳಗನ್ನಡ ನಾಡೆಂಬ ಖ್ಯಾತಿಯ ಒಕ್ಕುಂದದ ಮುಕ್ತೇಶ್ವರ ದೇವಾಲಯ ಮೂಲತಃ ಜೈನ ಬಸದಿ. ಶಿಥಿಲಾವಸ್ಥೆಯಲ್ಲಿರುವ ಪೂರ್ವಾಭಿಮುಖವಾದ ಕ್ರಿ.ಶ.12ನೆಯ ಶತಮಾನದ ಈ ದೇವಾಲಯ ಗರ್ಭಗೃಹ, ಅಂತರಾಳ ಮತ್ತು ನಾಶ ಹೊಂದಿರುವ ಸಭಾಮಂಟಪವಿದೆ. ಗರ್ಭಗೃಹದ್ವಾರದ ಲಲಾಟದಲ್ಲಿ ಜಿನಬಿಂಬವಿದ್ದು ಅಂತರಾಳದ ಮೇಲ್ಛಾವಣಿ ನಕ್ಷತ್ರಾಕಾರದಲ್ಲಿದೆ. ಒಕ್ಕುಂದದ ಇನ್ನೊಂದು ಮಲ್ಲಿಕಾರ್ಜುನ ದೇವಾಲಯ ಬೆಳಗಾವಿ ಪ್ರದೇಶದಲ್ಲಿ ವಿರಳವಾಗಿರುವ ಸಾಂಧಾರ ದೇವಾಲಯ ಉತ್ತರಾಭಿಮುಖವಾಗಿರುವ ಇದರ ಗರ್ಭಗೃಹ ಮತ್ತು ಅಂತರಾಳದ ದ್ವಾರದಲ್ಲಿ ಪಂಚಶಾಖೆಗಳಿವೆ. ಅಂತರಾಳದ ಛಾವಣಿಯಲ್ಲಿ ಪದ್ಮವಿದೆ. ಗರ್ಭಗೃಹದ್ವಾರದ ಲಲಾಟದಲ್ಲಿ ಜೀನಬಿಂಬವಿದೆ. ಮುಖಮಂಟಪದ ಕಕ್ಷಾಸನ, ಸಭಾಮಂಟಪ ದಲ್ಲಿ ವಾತಾಯನಗಳು, ಬಿದ್ದುಹೋದ ಶಿಖರ ಈ ದೇವಾಲಯದ ಇತರ ಲಕ್ಷಣಗಳಾಗಿವೆ.
ಹನ್ನೆರಡನೆಯ ಶತಮಾನದ ನಿರ್ಮಿತವಾದ ಕಲ್ಯಾಣ ಚಾಲುಕ್ಯ ಶೈಲಿಯಲ್ಲಿರುವ ಬೆಳಗಾವಿ ಪ್ರದೇಶದ ಇನ್ನಿತರ ದೇವಾಲಯಗಳೆಂದರೆ: ಯಡೂರಿನ ವೀರಭದ್ರ ದೇವಾಲಯ, ಸಂಕೇಶ್ವರದ ಶಂಕರಲಿಂಗ ದೇವಾಲಯ, ಕಾಗವಾಡದ ಕಗ್ಗೋಡುರಾಯ ಅಥವಾ ಬ್ರಹ್ಮನಾಥದೇವಾಲಯ, ಅಥಣಿಯ ಅಮೃತೇಶ್ವರ ದೇವಾಲಯ ಮುಂತಾದವುಗಳು ಉಲ್ಲೇಖ ನೀಯ.
ಉತ್ತರದ ನಾಗರಶೈಲಿಯ ಮತ್ತು ಅದರ ಉಪಶೈಲಿಯ ದೇವಾಲಯಗಳು
ಉತ್ತರಭಾರತದ ದೇವಾಲಯ ವಾಸ್ತುಶೈಲಿ ಎನಿಸಿದ ರೇಖಾನಾಗರಶೈಲಿಯ ಪ್ರಾಸಾದಗಳು ಹೆಚಿನ ಸಂಖ್ಯೆಯಲ್ಲಿಲದಿದ್ದರೂ ಪ್ರಚಲಿತವಿದ್ದವು. ಇದರ ಉಪಶೈಲಿಗಳೆಂದರೆ `ಶೇಖರ’ `ಲತೀನ’ ಮತ್ತು `ಭೂಮಿಜ’ ಮಾದರಿಗಳು. `ರಥ’ ವಿನ್ಯಾಸದ ಮೇಲೆ ರಚಿತವಾಗಿರುವ `ಲತೀನ’ ಶಿಖರವು ರೇಖಾರೀತಿಯಲ್ಲಿ ಅಂದರೆ ಮೇಲಕ್ಕೆ ಹೋದಂತೆ ಕ್ರಮೇಣ ಒಳಬಾಗುತ್ತ ಹೋಗುವಂತೆ ನಿರ್ಮಿತವಾಗಿದೆ. ಮಸ್ತಕದಲ್ಲಿ `ಗಳ’ `ಆಮಲಕ’ ಕಲಶವಿದೆ. ಶಿಖರದ ಕೋನಗಳಲ್ಲಿ ಹಂತ ಹಂತದಲ್ಲಿ `ಕರ್ಣಾಮಲಕ’ಗಳಿವೆ. ಶಿಖರದ ಪ್ರತಿಯೊಂದು ಮಗ್ಗಲಿನ ಮಧ್ಯಭಾಗ ಮುಂಚಾಚಿದ್ದು ಬಳ್ಳಿಗಳ ಆಕಾರವಿದೆ.
ಗಮನಾರ್ಹವಾದ ಶಿಖರ ಶೈಲಿಯಿಂದಾಗಿ ಶಿಖರೇಶ್ವರ ಎಂದು ಹೆಸರು ಪಡೆದ ಹತ್ತರಗಿಯ ಶಿಖರೇಶ್ವರ ದೇವಾಲಯ, `ಲತೀನ’ ಶೈಲಿಗೆ ಉತ್ತಮ ಉದಾಹರಣೆ. ಆದರ ಶಿಖರದಲ್ಲಿ ಕರ್ಣಾಮಲಕಗಳಿಗೆ ಬದಲಾಗಿ ಹಲ್ಲಿನ ಆಕಾರದ ಕಚ್ಚುಗಳಿರುವುದು ವಿಶೇಷವಾಗಿದೆ. ಇದು ಸಮಕಾಲೀನ ದೇವಾಲಯಗಳಲ್ಲಿ ಗೋಕಾಕ, ದೇಗಾಂವ, ಹೂಲಿ ಮುಂತಾದೆಡೆ ಹೊರಗೋಡೆಯ ಮೇಲೆ ಅಲಂಕರಣಕ್ಕಾಗಿ ಮಾಡಿರುವ ಮಾದರಿಗಳನ್ನು ನೆನಪಿಸುತ್ತದೆ. ರೇಖಾನಾಗರ ಶೈಲಿಯ ಈ ಶಿಖರದಲ್ಲಿ ಚೈತ್ಯಗೂಡುಗಳಿಂದ ಕೆತ್ತಿದ ಉದ್ದ ಪಟ್ಟಿಕೆಗಳಿವೆ. ಮೂಲತಃ ತ್ರಿಕೂಟಾಚಲವಾದ ಈ ದೇಗುಲದ ದೊಡ್ಡ ದೊಡ್ಡ ಕಲ್ಲುಗಳನ್ನು ಜೋಡಿಸಿ ಎಬ್ಬಿಸಲಾದ ಗೋಡೆಗಳಲ್ಲಿರುವ ಗೂಡುಗಳು ನಿರಾಡಂಬರವಾಗಿವೆ. ನವರಂಗ ಮತ್ತು ಗರ್ಭಗೃಹದ ದ್ವಾರಗಳ ಮೇಲೆ ಅಲಂಕರಣಕ್ಕಾಗಿ ನಿರ್ಮಿಸಿದ ದ್ರಾವಿಡ ಮತ್ತು ಫಾಂಸನ ಮಾದರಿಯ ಸಾಲು (ಐದು) ಶಿಖರಗಳಿದ್ದುದನ್ನು ಗಮನಿಸಬಹುದು. ಬೆಳಗಾವಿ ಪ್ರದೇಶದ ಅನೇಕ ದೇವಾಲಯಗಳಲ್ಲಿರುವಂತೆ ಇದ ಕೂಡ ನಿರಂಧರ/ಹೊರ ಪ್ರದಕ್ಷಿಣಾ ಪಥವನ್ನು ಹೊಂದಿದೆ. ಬಂಧನ ಸಾಮಗ್ರಿಗಳನ್ನು ಬಳಸದೆ ಚಪ್ಪಡಿಗಳನ್ನು ಒಂದರ ಮೇಲೊಂದರಂತೆ ಜೋಡಿಸಿಕೊಂಡು ಹೋಗುವ ತಂತ್ರಜ್ಞಾನವನ್ನು ಬಳಸಲಾಗಿದೆ. ಶಿಖರೇಶ್ವರ ದೇವಾಲಯ ವಾಸ್ತುಶಿಲ್ಪಶೈಲಿಯ ದೃಷ್ಟಿಯಿಂದ ಇಡಿ ಬೆಳಗಾವಿ ಜಿಲ್ಲಾ ಪ್ರದೇಶದಲ್ಲೇ ಏಕಮೇವಾದ್ವಿತಿಯ ಎನಿಸಿದೆ.
ಕಪ್ಪುಮಿಶ್ರಿತ ಹಸಿರು ಛಾಯೆಯ ನುಣುಪು ಕಲ್ಲು (ಕ್ಲೊರೈಟಕ್ ಷಿಸ್ಟ) ಬೆಳಗಾವಿ ಪ್ರದೇಶದಲ್ಲಿ ಮಧ್ಯಯುಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸಿದ್ದನ್ನು ಕಾಣಬಹುದು. ಅಲಂಕರಣಕ್ಕೆ ಅನುಕೂಲಕರವಾದ ಈ ಶಿಲೆ ವಾಸ್ತುಶೈಲಿಯ ಕಲಾಪ್ರೌಢಿಮೆಗೆ ಸಹಾಯವಾಯಿತು. ಅಲ್ಲದೆ ಬಳಪದ ಕಲ್ಲಿನ ಹೊರತಾಗಿ ಅಪರೂಪಕ್ಕೆ ಬೆಣಚುಕಲ್ಲು, ಮರಳು ಶಿಲೆಗಳನ್ನೂ ಬಳಸಲಾಗಿದೆ. ಪರಿಸರದ ಸೌಲಭ್ಯ, ಸ್ಥಳೀಯ ಲಭ್ಯತೆ, ಸಾಗಾಣಿಕೆಯ ಅನುಕೂಲ, ಪೆÇೀಷಕರ ಆರ್ಥಿಕ ಸಾಮಥ್ರ್ಯ ಮುಂತಾದವುಗಳ ಮೇಲೆ ವಾಸ್ತುಶಿಲ್ಪದ ಗುಣವತ್ತೆ ಅವಲಂಬಿತವಾಗಿತ್ತು.
ರೇಖಾನಾಗರ ಪ್ರಾಸಾದದ ಉಪಶೈಲಿಯಾದ `ಶೇಖರಿ’ ಮಾದರಿಯಲ್ಲಿ (ಪ್ರಾಕಾರದಲ್ಲಿ) ಕೇಂದ್ರದಲ್ಲಿ ದೊಡ್ಡ ಶೈಲಿಯ ಶಿಖರದ ಸುತ್ತ ಅದೇ ಮಾದರಿಯ ಶಿಖರಗಳ ಸಮೂಹ ಸುತ್ತುವರಿದು ಪರ್ವತಾವಳಿಯಂತೆ ಕಾಣುತ್ತದೆ. (ಖಜುರಾಹೊ ಕಂಡರಾಯ ಮಹಾದೇವ ದೇವಾಲಯ ಮಾದರಿಯದು). ಹೂಲಿಯ ಬೆಟ್ಟದಡಿಯಿರುವ ದೇವಾಲಯ ಸಮೂಹಗಳಲ್ಲಿ ಮತ್ತು ದೇಗಾಂವೆಯ ಕಮಲನಾರಾಯಣ ದೇವಾಲಯದ ಪಾಶ್ರ್ವಗೋಡೆಯ ಹೊರಭಾಗದ ದೇವಕೋಷ್ಠದ ಮೇಲೆ `ಶೇಖರಿ’ ಮಾದರಿಯ ಶಿಖರ ಮತ್ತು ಇನ್ನುಳಿದ ಕೋಷ್ಠಗಳ ಮೇಲೆ ರೇಖಾನಾಗರ ಮಾದರಿಗಳನ್ನು ನಿರೂಪಿಸಲಾಗಿದೆ.
ರೇಖಾನಾಗರ ಪ್ರಾಸಾದದ ಉಪಶೈಲಿಯಾದ `ಭೂಮಿಜ’ ಶೈಲಿಯಲ್ಲಿ ಮಹಡಿಯೋಪಾದಿಯಲ್ಲಿ ಶಿಖರವು ಸಾಲಾಗಿ, ಸುವ್ಯವಸ್ಥಿತವಾಗಿ ಉಬ್ಬುಶಿಲ್ಪ ರೀತಿಯಲ್ಲಿ ಜೋಡಿಸಲಾಗಿರುತ್ತದೆ. ಬೆಳಗಾವಿ ಜಿಲ್ಲಾ ಪ್ರದೇಶದಲ್ಲಿ ಭೂಮಿಜ ಶೈಲಿಯ ಏಕಮೇವ ಉದಾಹರಣೆ ಎಂದರೆ ಗೋಕಾಕ ಸಮೀಪದ ಮಮದಾಪುರದಲ್ಲಿರುವ 14ನೆಯ ಶತಮಾನಕ್ಕೆ ಸೇರಿದ ಅಂಬಾಬಾಯಿ ದೇವಾಲಯ ಎಂಬುದು ಇಲ್ಲಿ ಉಲ್ಲೇಖನೀಯ. ವಾಸ್ತುವಿಶಿಷ್ಟತೆಯಿಂದ ಕೂಡಿದ ಇನ್ನೊಂದು ಗಮನಾರ್ಹ ದೇವಾಲಯವೆಂದರೆ ರಾಮದುರ್ಗ ತಾಲ್ಲೂಕಿನ ಸುರೇಬಾನದಲ್ಲಿರುವ ಶಬರಿದೇವಾಲಯ. ವಾಸ್ತುಶಾಸ್ತ್ರ ಗ್ರಂಥಗಳಲ್ಲಿ ಉಲ್ಲೇಖಿತವಾದ ಬಂಡಿಯ ಛಾವಣಿಯ ಆಕಾರದ `ಶಾಲಾಕಾರ’ ದೇಗುಲಕ್ಕೆ ಉತ್ತಮ ನಿರ್ದೇಶನ ಇದು. ದೇವಿಯ ದೇಗುಲಗಳಿಗೆ ಮಾತ್ರ ಈ ಆಕಾರದ ದೇಗುಲಗಳು ನಿರ್ಮಾಣವಾಗುತ್ತಿದ್ದದು ಇಲ್ಲಿ ಗಮನಿಸಬೇಕಾದ ಅಂಶ. ಆಯಾತಾಕಾರದ ವಿನ್ಯಾದಲ್ಲಿರುವ ಗರ್ಭಗೃಹ, ವಿಸ್ತಾರವಾದ ಮತ್ತು ಚೌಕಾಕಾರದ ಕಂಬಗಳಿಂದ ಕೂಡಿದ ನವರಂಗ, ತಲವಿನ್ಯಾಸ ಮತ್ತು ಬಾಹ್ಯನೋಟದ ವಿವರಗಳು ಈ ಶಬರಿ ದೇವಾಲಯವನ್ನು ಅಪರೂಪದ್ದಾಗಿಸಿವೆ.
ಬೆಳಗಾವಿ ಪ್ರದೇಶದಲ್ಲಿ ರೇಖಾನಗರ ವಿಮಾನವನ್ನು ಮೂಲಗರ್ಭಗೃಹದಲ್ಲಿ ಹೊಂದಿದ ಶಿಖರಗಳು (ಶಿಖರೇಶ್ವರ ದೇವಾಲಯ ಹೊರತುಪಡಿಸಿ) ಇಲ್ಲದೇ ಹೋದರು ಅಲಂಕರಣ ವಿನ್ಯಾಸವಾಗಿ ದೇವಾಲಯದ ವಿವಿಧ ಭಾಗದಲ್ಲಿ-ದೇವಕೋಷ್ಠದ ಮೇಲೆ, ದ್ವಾರಬಂಧಗಳಲ್ಲಿ, ಕಕ್ಷಾಸನದ ಹೊರಭಾಗದಲ್ಲಿ, ಅರೆಗಂಬಗಳ ಮೇಲೆ ಬಿಂಬಿತವಾಗಿದ್ದು ಉಲ್ಲೇಖನೀಯ. ಬಹುಶಃ ದೇವಾಲಯ ನಿರ್ಮಾಣದಲ್ಲಿ ಮುಖ್ಯಸ್ಥಪತಿ ಹಾಗೂ ಆತನ ಸಹಾಯಕರಿಗೆ ಪ್ರಚಲಿತವಿದ್ದ ಸಮಕಾಲೀನ ದೇವಾಲಯ ವಾಸ್ತುಶಿಲ್ಪಶೈಲಿಯ ಪೂರ್ಣ ನಿರ್ಮಿತಿಯ ಮುಖ್ಯ ಶೈಲಿಯ ಚೌಕಟ್ಟನ್ನು ಉಪಯೋಗಿಸಿಕೊಂಡೇ ಪ್ರಯೋಗಾತ್ಮಕವಾಗಿ ಸಾಂದರ್ಭಿಕವಾಗಿ ಬದಲಾವಣೆಗಳನ್ನು ಸ್ಥಪತಿಗಳು ಅಳವಡಿಸಿಕೊಂಡದ್ದು ಶ್ಲಾಘನೀಯ.
ಕರ್ನಾಟಕ ದ್ರಾವಿಡಶೈಲಿಯ ದೇವಾಲಯಗಳು
ದಾಕ್ಷಿಣಾತ್ಯ ಶೈಲಿ ಅಂತರ್ಗತ ಕರ್ನಾಟಕ ದ್ರಾವಿಡ ದೇವಾಲಯಗಳು ಮಡಿಕೆಗಳುಳ್ಳ ಅಧಿಷ್ಠಾನ, ಕುಡ್ಯಸ್ಥಂಬಗಳ ಅಲಂಕಾರವುಳ್ಳ ಗೋಡೆ/ಭಿತ್ತಿ ಕೂಟ, ಪಂಜರ, ಶಾಲ ಘಟಕಗಳುಳ್ಳ ಹಾರ ಪ್ರತಿಯೊಂದು ಮಹಡಿಯ ಮೇಲಂಚಿನ ಗುಂಟ ಹೊಂದಿರುವುದು ಈ ಶೈಲಿಯ ಕೆಲ ಮುಖ್ಯ ಲಕ್ಷಣಗಳು. ಮೆಟ್ಟಿಲುಗಳು ಮೇಲೇರಿದಂತೆ ಕಿರಿದಾಗುತ್ತ ಪಿರಾಮಿಡ್ಡಿನ ಆಕಾರದಲ್ಲಿರುವುದು, ಮೇಲ್ಗಡೆ ಕಲಶವನ್ನು ಹೊಂದಿರುವ ಘಟ ಆಕಾರದ ಶಿಖರ-ಇವೇ ಮೊದಲಾದ ಪ್ರಧಾನ ಅಂಶಗಳನ್ನು ಹೊಂದಿರುತ್ತವೆ. ಆದರೆ ದೇವಾಲಯಗಳೆಲ್ಲವೂ ಒಂದೇ ಮಾದರಿಯದಾಗಿರಲಿಲ್ಲ. ವಿನ್ಯಾಸದಲ್ಲಿ, ಜೋಡಣೆಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವ ಸ್ವಾತಂತ್ರ್ಯ ಸ್ಥಪತಿಗಳಿಗಿತ್ತು. ಶಿಲ್ಪಶಾಸ್ತ್ರದಷ್ಟು ಕಟ್ಟುನಿಟ್ಟಿನಿಂದ ವಾಸ್ತುಶಾಶ್ತ್ರದ ಆದೇಶಗಳನ್ನು ಅನುಸರಿಸಲೇಬೇಕೆಂದು ನಿಯಮಗಳಿಗೆ ಬದ್ಧರಾಗಿರಲಿಲ್ಲ. ಇದನ್ನು ಜಾಲಂಧರ, ದ್ವಾರಶಾಖೆ, ದೇವಕೋಷ್ಠ, ಗೋಡೆಗಳ ಅಲಂಕಾರ ಮುಂತಾದವುಗಳನ್ನು ಶಾಸ್ತ್ರಗಳ ಚೌಕಟ್ಟಿನಲ್ಲಿ ಸೇರಿಸದೇ ಸ್ಥಪತಿಯ ಕಲ್ಪನಾ ಚಾತುರ್ಯದ ರೂಪಕಗಳಾಗಿರುವುದನ್ನು ಕಾಣಬಹುದು. ಕಂಬಗಳು ತಿರುಗಣಿಯಿಂದ ಮಾಡಿದಂತಿವೆ.
ಕಂಬಗಳ ಬೋದುಗೆಗಳಿಗೆ ಅಥವಾ ಹೊರಗೋಡೆಯ ಅರ್ಧಗಂಬಗಳಿಗೆ ಅನಿಸಿ ಮದನಿಕೆಯರ ಶಿಲ್ಪಗಳನ್ನು ನಿಲ್ಲಿಸಿರುವ ಸಂಪ್ರದಾಯ ಚಾಲುಕ್ಯರ, ತದನಂತರ ಹೊಯ್ಸಳರ ಕಾಲದಲ್ಲಿ ಮುಂದುವರೆಯಿತು. ಇದನ್ನು ಬೆಳಗಾವಿಯ ಸೈನ್ಯ ಪಾಳ್ಯ ಮೈದಾನದ ಪಕ್ಕಕ್ಕಿರುವ ಶಾಸನೋಲ್ಲೇಖಿತ ದೇವಗಿರಿ ಯಾದವಕಾಲೀನ ದೇವಾಲಯದ ಅವಶೇಷಗಳಲ್ಲಿ ಕಾಣಬಹುದು. ಬರಿ ನವರಂಗ ಮಾತ್ರ ಉಳಿದುಕೊಂಡಿರುವ ಈ ದೇವಾಲಯದಲ್ಲಿ ಉತ್ತಮ ಶಿಲಾಬಾಲಿಕೆಯರ ಶಿಲ್ಪವನ್ನು ಅರ್ಧಗಂಬದಲ್ಲಿ ಕಾಣಬಹುದು.
ಮೂರ್ತಿಶಿಲ್ಪ, ಪೂರ್ಣಕುಂಭ ಮುಂತಾದ ಕೆತ್ತನೆಯ ಕಂಬಗಳನ್ನು ದೇವಾಲಯಗಳ ನವರಂಗದಲ್ಲಿ ಕಾಣಬಹುದು. ಉದಾಹರಣೆಗೆ ಹೂಲಿಯ ತಾರಕೇಶ್ವರ ಮತ್ತು ನಂದಗಾಂವದ ಈಶ್ವರದೇವಾಲಯ ಕೆಲಕಡೆ ಅರ್ಧಸ್ತಂಬಗಳ ಮೇಲೆ ಮಕರತೋರಣ ಕೆತ್ತಲಾಗಿದೆ. ಇದನ್ನು ಹೂಲಿಯ ಅಂಧಕಾಸುರ ದೇವಾಲಯದಲ್ಲಿ ಕಾಣಬಹುದು. ಫಾಂಸನ ಶೈಲಿಯ ದೇವಾಲಯಗಳಿಗೆ ಹೋಲಿಸಿದರೆ ಬೆಳಗಾವಿ ಪ್ರದೇಶದಲ್ಲಿ ದ್ರಾವಿಡಶೈಲಿಯ ದೇವಾಲಯಗಳ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ರಾಷ್ಟ್ರಕೂಟಾಂತ್ಯ ಹಾಗೂ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಇವು ನಿರ್ಮಾಣಗೊಂಡಿದೆ. ಗೋಕಾಕ ಜಲಪಾತದ ತೂಗುಸೇತುವೆಯಾಚೆ ಉತ್ತರಕ್ಕಿರುವ ದತ್ತಾತ್ರೇಯ ದೇವಾಲಯ ಕರ್ನಾಟಕ ದ್ರಾವಿಡ ಶೈಲಿಯ ದ್ವಿತಲ (ಎರಡು ಮಹಡಿಯ ಮೇಲ್ಕಟ್ಟಡವಿರುವ) ವಿಮಾನ ಹೊಂದಿದೆ. ಸುಮಾರು ಹತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ನಿರ್ಮಾಣವಾದ ಈ ದೇಗುಲದ ಭದ್ರಗಳಲ್ಲಿ ಶಾಲಾ, ನಾಸಿಗಳಲ್ಲಿ ದೇವಿ, ವೈಶ್ರವಣ ಮುಂತಾದ ಚಿಕಣಿ ಶಿಲ್ಪಗಳಿವೆ. ಕಪೆÇೀತಬಂಧ ಮಾದರಿಯ ಅಧಿಷ್ಠಾನ, ಭದ್ರಕ ರೀತಿಯ ಕಂಬಗಳುಳ್ಳ ಅಂತರಾಳ, ಕಡಿಮೆ ಎತ್ತರವುಳ್ಳ ಶಿಖರ, ಅಂತರಾಳದ ಸಮತಲ ಛಾವಣಿಯಲ್ಲಿ ವರ್ತಿಸುತ್ತಿರುವ ಚಾಮುಂಡಿ, ಅದನ್ನು ಸುತ್ತುವರೆದ ಸಪ್ತಮಾತೃಕೆಯರ, ಗಣೇಶ ಮತ್ತು ವೀರಭದ್ರರ ಉಬ್ಬುಶಿಲ್ಪಗಳಿವೆ. ಆರುಶಾಖೆಗಳುಳ್ಳ ಗರ್ಭಗೃಹ ದ್ವಾರಬಂಧದಲ್ಲಿ ರತ್ನ, ವಲ್ಲಿ, ಸ್ತಂಭ ಮತ್ತು ಪದ್ಮಪತ್ರಗಳ ವಿನ್ಯಾಸವಿದೆ.
ಕ್ರಿ.ಶ.1172ರಲ್ಲಿ ರಟ್ಟ ಮುಮ್ಮಡಿ ಕಾರ್ತವೀರ್ಯನಿಂದ ನಿರ್ಮಾಣಗೊಂಡ ಜಲಪಾತದ ಪಕ್ಕಕ್ಕಿರುವ ಮಹಾಲಿಂಗೇಶ್ವರ ದೇವಾಲಯ ತ್ರಿತಲ ವಿಮಾನವನ್ನು ಹೊಂದಿದೆ. ಗೋಪುರದ ಗೋಡೆಯಲ್ಲಿ ಭದ್ರ, ಉಪಭದ್ರ, ಕರ್ಣ ಪ್ರತಿರಥ ಮುಂತಾದ ಚಾಚುಗಳಿದ್ದು, ದೇವಕೋಷ್ಠದ ಮೇಲೆ ಲತೀನ ಶೈಲಿಯ ಶಿಖರವಿದೆ. ಸ್ಥಂಭ ಪಂಜರ ದಲ್ಲಿಯೂ ಈ ರೀತಿಯ ಶಿಖರ ಮಾದರಿಗಳಿವೆ.
ಮೂಲತಃ ಜೈನಬಸದಿಯಾದ, ಸು. 10-11ನೆಯ ಶತಮಾನದ ನಿರ್ಮಿತಿಯಾದ ವಣ್ಣೂರಿನ ಪ್ರಭುದೇವರ ಗುಡಿ ದ್ರಾವಿಡಶೈಲಿಗೆ ಇನ್ನೊಂದು ನಿದರ್ಶನ. ಈ ದೇವಾಲಯದ ಹೊರಗೋಡೆಯ ಮೇಲೆ ಅಲಂಕಾರಿಕವಾಗಿ ಶೇಖರಿ, ದ್ರಾವಿಡ, ಲತೀನ ಮುಂತಾದ ಶೈಲಿಯ ಶಿಖರಗಳಿದ್ದದ್ದು ಗಮನಿಸಬೇಕಾದ ಅಂಶ. ಹೊರಭಿತ್ತಿಯಲ್ಲಿ ಅರೆಗಂಬಗಳ ಅಲಂಕರಣವಿದ್ದರೂ ಶಿಲ್ಪರಹಿತವಾಗಿವೆ. ಕೊಣ್ಣೂರಿನ ಜೈನಬಸದಿ (11ನೆಯ ಶತಮಾನ)ಯ ಹೊರಗೋಡೆಯ ಅರ್ಧಕಂಬಗಳು ಮೇಲೆಯೂ ವಿವಿಧ ಶಿಖರ ಮಾದರಿಗಳನ್ನು ಕಾಣಬಹುದು. ದ್ರಾವಿಡಶೈಲಿಯ ದೇವಾಲಯಗಳಿಗೆ ಬೆಳಗಾವಿ ಪ್ರದೇಶದ ಕಲ್ಲೂರಿನ ಸಿದ್ದೇಶ್ವರ, ಅವರಾದಿಯ ಕಲ್ಮೇಶ್ವರ, ತೋರಗಲ್ ಭೂತನಾಥ ಮುಂತಾದವುಗಳು ಇನ್ನಿತರ ಉದಾಹರಣೆಗಳು.
ಬೆಳಗಾವಿ ಜಿಲ್ಲೆಯಲ್ಲಿ ಕರ್ಣಾಟ ದ್ರಾವಿಡ ವಿಮಾನಗಳುಳ್ಳ (ಐದು ಶಿಖರಗಳು) ಐದು ಗರ್ಭಗೃಹಗಳುಳ್ಳ ಪಂಚಕೂಟ ಮಾದರಿಯ ಉತ್ಕøಷ್ಟ ದೇವಾಲಯವೆಂದರೆ ಹೂಲಿಯ ಪಂಚಲಿಂಗೇಶ್ವರ. ಆಯಾತಾಕಾರ ಸಭಾಮಂಟಪದ ಮೂರು ಪಾಶ್ರ್ವಗಳಲ್ಲಿ ಐದು ಗರ್ಭಗೃಹಗಳಿವೆ. ಪರಸ್ಪರ ಹೊಂದಿಕೊಂಡಿರುವ ಒಂದೇ ಸಾಲಿನಲ್ಲಿರುವ ಮೂರು ಗರ್ಭಗೃಹಗಳು ಮತ್ತು ಎರಡು ಪಾಶ್ರ್ವಗಳಲ್ಲಿ ಇನ್ನೆರಡು ಸಭಾಮಂಟಪ್ಕೆ ಹೊಂದಿಕೊಂಡಿರುವ ವಿಶಾಲ ಮಹಾ ಮಂಟಪವಿದ್ದು ಐದು ಗರ್ಭಗೃಹಗಳ ಮೇಲೆ ಐದು ದ್ರಾವಿಡಶೈಲಿಯ ವಿಮಾನಗಳಿವೆ. ಮುಖಮಂಟಪದ ಮೇಲ್ಛಾವಣಿ ಇಳಿಜಾರಾಗಿದೆ. ಐದು ಶಿಖರಗಳನ್ನು ಬೆಸೆದಿರುವ ರೀತಿ ಅಮೋಘವಾಗಿದ್ದು ಕಣ್ಮನ ಸೆಳೆಯುತ್ತದೆ. ಇದು ಬಾದಾಮಿ ಚಾಲಕ್ಯರ ಕಾಲದ ಜೈನ ಬಸದಿಯಾಗಿದ್ದು ತದನಂತರ ಸುಮಾರು 12ನೆಯ ಶತಮಾನದಲ್ಲಿ ಈಗಿದ್ದ ರೂಪ ತಳೆದಿದೆ.
ಬೆಳಗಾವಿ ಜಿಲ್ಲಾ ಪ್ರದೇಶದಲ್ಲಿ ದೇವಾಲಯ ವಾಸ್ತುಶಿಲ್ಪ ಪರಂಪರೆಯ ಪ್ರಮುಖ ಅಂಶಗಳು
ಬೆಳಗಾವಿ ಜಿಲ್ಲಾ ಪ್ರದೇಶದಲ್ಲಿ ದೇವಾಲಯ ವಾಸ್ತುಶಿಲ್ಪ ಪರಂಪರೆಯ ಕುರಿತಾದ ಮೇಲಿನ ವಿಶದವಾದ ವಿವರಣೆ ಮತ್ತು ವಿಶ್ಲೇಷಣೆಯಿಂದಾಗಿ ಗುರುತಿಸಬಹುದಾದ ಪ್ರಮುಖ ಅಂಶಗಳೆಂದರೆ:
1) ದ್ರಾವಿಡ, ರೇಖಾನಾಗರ ಮತ್ತು ಫಾಂಸನ ಶೈಲಿಯ ದೇವಾಲಯಗಳು ಜಿಲ್ಲೆಯಲ್ಲಿವೆ.
2) ಏಕಕೂಟ, ದ್ವಿಕೂಟ, ತ್ರಿಕೂಟ ಮತ್ತು ಅಪರೂಪವಾಗಿ ಪಂಚಕೂಟ ಮಾದರಿಯ ದೇವಾಲಯಗಳು ಇಲ್ಲಿ ಕಂಡುಬರುತ್ತವೆ.
3) ಸಮಕೋನಗಳ ಬಳಕೆ ಗಮನಾರ್ಹವಾಗಿದೆ.
4) ನೇರವಾದಂತಹ ಗೋಡೆಗಳನ್ನು ಹಿಂಚಾಚು-ಮುಂಚಾಚುಗಳಿಂದ ಒಡೆಯಲಾಗಿದೆ.
5) ತಳವಿನ್ಯಾಸವಿರುವ ದೇವಾಲಯಗಳು ಅಧಿಕವಾಗಿದ್ದು, ನಕ್ಷತ್ರಾಕಾರದ ದೇವಾಲಯಗಳು ವಿರಳ.
6) ಬಹುತೇಕ ದೇವಾಲಯಗಳು ಗರ್ಭಗೃಹ, ಅಂತರಾಳ, ನವರಂಗ ಮತ್ತು ಮುಖಮಂಟಪಗಳನ್ನು ಹೊಂದಿವೆ.
7) ದೇವಾಲಯಗಳ ಅದರಲ್ಲೂ ಪ್ರವೇಶದ್ವಾರ ಮತ್ತು ಗರ್ಭಗೃಹದ ದ್ವಾರಬಂಧಗಳು ಬಹುಶಾಖೆಗಳನ್ನು ಹೊಂದಿದ್ದು ಸೂಕ್ಷ್ಮ ಕೆತ್ತನೆಯ ಅಲಂಕರಣವಿದೆ.
8) ಹೊರಭಿತ್ತಿಯಲ್ಲಿ ಅರೆಗಂಬಗಳು, ಕೋಷ್ಠಗಳು, ಅರೆಕಂಬಗಳ ಮೇಲೆ ನಾಗರ, ಫಾಂಸನ ಮತ್ತು ದ್ರಾವಿಡಶೈಲಿಯ ಶಿಖರಗಳ ಅಲಂಕರಣವಿದೆ.
9) ದ್ವಾರಬಂಧದ ಇಕ್ಕೆಲಗಳಲ್ಲಿ ವಿವಿಧ ಅಲಂಕರಣದ ಜಾಲಂಧರಗಳಿವೆ.
10) ಬೆಳಗಾವಿ ಪ್ರದೇಶದ ಬಹುತೇಕ ದೇವಾಲಯಗಳು ಹೊರ ಪ್ರದಕ್ಷಿಣಾಪಥವನ್ನು ಹೊಂದಿದ್ದು ನಿರಂಧರ ದೇವಾಲಯಗಳಾಗಿವೆ.
11) ತಿರುಗಣೇಯಿಂದ ಹೊಳಪು ಪಡೆದ ವಿವಿಧ ಆಕಾರ ಮತ್ತು ವಿನ್ಯಾಸದ ಕಂಬಗಳನ್ನು ಹೊಂದಿವೆ.
12) ಮುಖಮಂಟಪ ಅಥವಾ ನವರಂಗದ ಭುವನೇಶ್ವರಿಯು ಸೂಕ್ಷ್ಮಕೆತ್ತನೆಯ ಅಲಂಕರಣ ಮತ್ತು ಚಿತ್ತಾಕರ್ಷಕ ಕುಸುರಿ ಕೆಲಸಕ್ಕೆ ನಿದರ್ಶನಗಳಾಗಿವೆ. ಆಳವಾದ ಗುಮ್ಮಟದಲ್ಲಿ ಕಮಲವಿದ್ದು ನಕ್ಷತ್ರಾಕಾರದ ಲೋಲಕ ಇಳಿಬಿದ್ದಿರುತ್ತದೆ.
13) ನವರಂಗದ ಒಳಗೋಡೆಯಲ್ಲಿ ಅಳವಡಿಸಿರುವ ಎರಡು, ನಾಲ್ಕು, ಎಂಟು ದೇವಕೋಷ್ಠಗಳಿವೆ.
14) ಬೆಳಗಾವಿ ಪ್ರದೇಶದ ಮಧ್ಯಕಾಲೀನ ದೇವಾಲಯಗಳಲ್ಲಿ ಉಳಿದ ಪ್ರದೇಶಗಳಿಗೆ ಹೋಲಿಸಿದರೆ ಶಿಲ್ಪ ಸಂಪತ್ತು ಕಡಿಮೆ ಎಂದು ಹೇಳಬಹುದು.
ಉಪಸಂಹಾರ
ಮೇಲಿನ ವಿಶ್ಲೇಷಣೆ ಬೆಳಗಾವಿ ಜಿಲ್ಲಾ ಪ್ರದೇಶದಲ್ಲಿ ಬೆಳೆದು ಬಂದ ದೇವಾಲಯ ವಾಸ್ತುಶಿಲ್ಪ ಪರಂಪರೆಯ ಉಗಮ, ಇತಿಹಾಸ, ಜಾಯಮಾನ, ಸಾಂದರ್ಭಿಕ ಅಂಶ, ವಸ್ತು, ಗುಣವೈಶಿಷ್ಟ್ಯಗಳ ಜೊತೆಗೆ ವಾಸ್ತುಶಿಲ್ಪ ಶೈಲಿಯ ಉಗಮ, ಬೆಳವಣಿಗೆ ಮತ್ತು ಮಧ್ಯಯುಗದಲ್ಲಿ ವಾಸ್ತುಶಿಲ್ಪ ಹೊಂದಿದ ಪರಾಕಾಷ್ಠತೆಯನ್ನು ಬಿಂಬಿಸುತ್ತದೆ. ದೇವಾಲಯ ವಾಸ್ತುಶಿಲ್ಪ ನಿರ್ಮಾಣದ ಸಾಂಪ್ರದಾಯಿಕ ಚೌಕಟ್ಟು, ಸಾಂಸ್ಕøತಿಕ ಪ್ರತಿಬಿಂಬ, ವಾಸ್ತುಶಿಲ್ಪ ಶೈಲಿಯ ಅಭಿವ್ಯಕ್ತಿ, ಕ್ರಿಯಾತ್ಮಕತೆ ಮತ್ತು ಸೃಜನಶೀಲತೆ, ಅಧ್ಯಾತ್ಮಿಕ ಚೌಕಟ್ಟು, ಕಲಾಪರಂಪರೆ ಮತ್ತು ಪೆÇೀಷಕರ ಅಭಿರುಚಿ ಗೋಚರಿಸುತ್ತವೆ. ಕರ್ನಾಟಕದ ವಿವಿದೆಡೆ ಬೆಳೆದು ಬಂದ ವಾಸ್ತುಶಿಲ್ಪ ಪರಂಪರೆ ವಿಭಿನ್ನವಾಗಿಲ್ಲ ಎಂದು ಮೇಲ್ನೋಟಕ್ಕೆ ಅನಿಸಿದರೂ ಸೂಕ್ಷ್ಮವಾದ ಪರಿಶೀಲನೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಪ್ರಾದೇಶಿಕ ಭಿನ್ನತೆ ಎದ್ದು ಕಾಣುತ್ತದೆ. ಈ ರೀತಿ ಕರ್ನಾಟಕಾಂತರ್ಗತ ವಿವಿಧ ಜಿಲ್ಲಾ ಪ್ರದೇಶಗಳ ವಾಸ್ತುಶಿಲ್ಪ ಪರಂಪರೆಯ ಅಧ್ಯಯನದ ಅವಶ್ಯಕತೆಯಿದೆ.
[ವಿಶ್ವವಿದ್ಯಾಲಯ ಅನುದಾನ ಆಯೋಗದ ಹಣಕಾಸಿನ ನೆರವಿನಿಂದ ಕೈಗೊಂಡ ಂಡಿಛಿhiಣeಛಿಣuಡಿಚಿಟ ಊeಡಿiಣಚಿge oಜಿ ಃeಟgಚಿum ಖegioಟಿ-ಂಟಿ ಂಟಿಚಿಟಥಿಣiಛಿಚಿಟ sಣuಜಥಿ ಎಂಬ ಪ್ರಾಜೆಕ್ಟಿನ ಒಂದು ಭಾಗವಾದ ಈ ಸಂಶೋಧನಾ ಪ್ರಬಂಧ ಬೆಳಗಾವಿ ಜಿಲ್ಲೆಯಾದ್ಯಂತ ಕೈಗೊಂಡ ಕ್ಷೇತ್ರ ಕಾರ್ಯಗಳ ಆಧಾರದಿಂದ ರಚಿಸಲಾಗಿದೆ.]

ಆಧಾರಸೂಚಿ
1. ಡಾ. ಸಿಂದಿಗಿ ರಾಜಶೇಖರ, ಕರ್ನಾಟಕದ ವಾಸ್ತುಶಿಲ್ಪ ಮತ್ತು ಚಿತ್ರಕಲೆ, ಧಾರವಾಡ, 1988.
2. ಡಾ. ಟಿ.ವಿ. ಮಹಾಲಿಂಗಮ್, Souಣh Iಟಿಜiಚಿಟಿ ಖಿemಠಿಟe ಅomಠಿಟex, ಆhಚಿಡಿತಿಚಿಜ.
3. ಡಾ. ಕಾಮತ ಸೂರ್ಯನಾಥ, ಃeಟgಚಿum ಆisಣಡಿiಛಿಣ ಉಚಿzeಣಣeಡಿ, ಃಚಿಟಿgಚಿಟoಡಿe, 1986.
4. ಡಾ. ಎ. ಗುಂಜೆಟ್ಟಿ (ಸಂ.), ಬೆಳಗಾವಿ ಬೆಳಕು, ಬೆಳಗಾವಿ, 2003.
5. ಡಾ. ಸ್ಮಿತಾ ಸುರೇಬಾನಕರ, ಊಚಿಟಚಿsi 12000-ಂ Sಣuಜಥಿ, uಟಿಠಿubಟisheಜ. Ph.ಆ. ಖಿhesis, ಏUಆ, 2001.
6. ಡಾ. ಬಾ.ರಾ. ಗೋಪಾಲ, ಕರ್ನಾಟಕದ ಕಲೆಗಳು-ವಾಸ್ತು, (ಮೂರನೆಯ ಆವೃತ್ತಿ) ಬೆಂಗಳೂರು, 2010.
7. ಡಾ. ಆರ್. ಗೋಪಾಲ (ಸಂ.) ಬೆಳಗಾವಿ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ತ್ವ, ಬೆಂಗಳೂರು, 2010.

 ಮುಖ್ಯಸ್ಥರು, ಇತಿಹಾಸ ವಿಭಾಗ, ರಾಣಿ ಪಾರ್ವತಿದೇವಿ ಮಹಾವಿದ್ಯಾಲಯ, ಬೆಳಗಾವಿ-590006.

Saturday, May 24, 2014

ಜಮಖಂಡಿ ತಾಲ್ಲೂಕಿನ ದೇವಾಲಯಗಳು ಮತ್ತು ಆಚರಣೆಗಳು


ಜಮಖಂಡಿ ತಾಲ್ಲೂಕಿನ ಶಾಸನೋಕ್ತ ದೇವಾಲಯಗಳು ಮತ್ತು ಆಚರಣೆಗಳು
ಕೆ. ಚನ್ನಬಸಪ್ಪ¬
ಪೀಠಿಕೆ: ಪೌರಾಣಿಕ ಹಿನ್ನೆಲೆ
ಜಮಖಂಡಿ ಬಾಗಲಕೋಟೆ ಜಿಲ್ಲೆಯ ಪ್ರಮುಖ ತಾಲೂಕು ಹಾಗೂ ಉಪವಿಭಾಗ ಕೇಂದ್ರ. ಇದು ರಾಜಕೀಯ ವಾಗಿ, ಸಾಂಸ್ಕøತಿಕವಾಗಿ, ಧಾರ್ಮಿಕವಾಗಿ ಮಹತ್ವದ ನೆಲೆಯಾಗಿ ಬೆಳೆದು ಬಂದಿರುವ ಐತಿಹಾಸಿಕ ಪಟ್ಟಣ. ಜಮಖಂಡಿ ಹಾಗೂ ತಾಲೂಕಿನ ಅನೇಕ ಹಳ್ಳಿಗಳು ರಾಮಾಯಣ ಮಹಾಭಾರತ ಸಂಬಂಧ ಕಲ್ಪಿಸುವ ಐತಿಹ್ಯ ಹೊಂದಿವೆ. ಉತ್ತರಾಭಿಮುಖವಾಗಿ ಹರಿಯುವ ಕೃಷ್ಣಾ ನದಿ ಸ್ಕಂದ, ವಾಯು, ಪದ್ಮ ಹಾಗೂ ಬ್ರಹ್ಮ ಪುರಾಣಗಳಲ್ಲಿ ಮಹಾಭಾರತದ ಸಭಾಪರ್ವ ಹಾಗೂ ಭೀಷ್ಮಪರ್ವಗಳಲ್ಲಿ, ಮಂಗಲಾಷ್ಠಕ ಹಾಗೂ ಜಾತಕಕಥೆಗಳಲ್ಲಿಯೂ ಉಲ್ಲೇಖಗೊಂಡಿರುವ ಕೃಷ್ಣಾನದಿ ಸ್ವರ್ಗದಿಂದ ಇಳಿದು ಬಂದ ದಕ್ಷ್ಷಿಣಗಂಗೆ ಎಂದೇ ಪ್ರಸಿದ್ಧಿ ಹೊಂದಿದೆ. ಅಂತೆಯೇ ನದಿ ತೀರದಲ್ಲಿನ ತಾಲೂಕಿನ ಗ್ರಾಮಗಳಾದ ಹಿಪ್ಪರಗಿ, ಮುತ್ತೂರ, ಕಂಕಣವಾಡಿ, ಶೂರ್ಪಾಲಿ, ಮುಂತಾದ ಕಡೆ ಪುಣ್ಯಕ್ಷೇತ್ರಗಳಿವೆ.
ಜಮಖಂಡಿಯನ್ನು ರನ್ನನ ಅಜಿತನಾಥ ಪುರಾಣ ಕೃತಿಯಲ್ಲಿ “ಬೆಳುಗಲಿಯಯ್ನೂರರೊಳಗ್ಗಳ ಮೆನಿಸುವ ಜಂಬುಖಂಡಿ’’ ಎಂದು ವರ್ಣಿಸಲಾಗಿದೆ. ಇಂತಹ ಖ್ಯಾತಿವೆತ್ತ ಜಂಬೂಖಂಡಿ ಪ್ರಸಿದ್ಧ ಅಗ್ರಹಾರಗಳಲ್ಲಿ ಒಂದಾಗಿ ರಾಜರ ಔದಾರ್ಯದಿಂದ ಅಭಿವೃದ್ದಿ ಹೊಂದುತ್ತಾ ಬಂದಿರುವುದನ್ನು ಕಾಣಬಹುದು.
ಜಮಖಂಡಿಯನ್ನು ಹೆಸರಿನ ನಿಷ್ಪತ್ತಿ ರೂಪಗಳಿಂದಲೂ ಗುರುತಿಸಬಹುದು.
1) ಜಂಬೂವೃಕ್ಷಗಳ ವನ ಈ ಊರಿನ ಸುತ್ತಲೂ ಇದ್ದುದರಿಂದ ಈ ಹೆಸರು ಬಂದಿದೆ.
2) ಈ ಭಾಗದಲ್ಲಿ ಜಂಬೂಕ(ನರಿ)ಗಳು ವಾಸ ಮಾಡುತ್ತಿದ್ದವು. ಆದ್ದರಿಂದ ಜಂಬೂಖಿಂಡಿ, ಜಂಬೂಖಂಡಿ ಎಂದು ಹೆಸರು ಬಂದಿದೆ.
3) ಇಲ್ಲಿ ಜಂಬುಕೇಶ್ವರ ಎಂಬ ಪ್ರಾಚೀನ ದೇವಾಲಯವಿದೆ. ಇದರಿಂದಾಗಿ ಜಂಬೂಖಂಡಿ ಎಂಬ ಹೆಸರು ಬಂದಿದೆ.
4) ಜಂಬೂ ಎಂಬ ಋಷಿ ಮುನಿ ಇಲ್ಲಿ ವಾಸ ಮಾಡುತ್ತಿದ್ದನು. ಆದ್ದರಿಂದ ಜಂಬೂಖಂಡಿ ಎಂಬ ಹೆಸರು ಬಂದಿದೆ ಎಂಬ ಅಭಿಪ್ರಾಯಗಳಿವೆ.
ಇಲ್ಲಿ ಬಾದಾಮಿ ಚಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ಯಾದವರು, ಕಲ್ಯಾಣದ ಕಲಚೂರಿಗಳು, ಹೊಯ್ಸಳರು, ಬಿಜಾಪುರದ ಸುಲ್ತಾನರು, ವಿಜಯನಗರದ ಅರಸರು, ದೇಸಗತಿ ಮನೆತನದವರು ಆಳ್ವಿಕೆ ನಡೆಸಿದ ಉಲ್ಲೇಖಗಳಿವೆ.
ಈ ತಾಲೂಕಿನಲ್ಲಿರುವ 71 ಗ್ರಾಮಗಳಲ್ಲಿ 38 ಶಾಸನಗಳು ಪ್ರಕಟಗೊಂಡಿವೆ. 2006ರಲ್ಲಿ ಈ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಪೂರ್ವಚಾಲುಕ್ಯರ ಕಾಲದ ಒಂದು ತಾಮ್ರಪಟ, ಕಳೆದ ವರ್ಷ 2011ರಲ್ಲಿ ಯಲ್ಲಟ್ಟಿ ಗ್ರಾಮದ ಬಳಿ 17ನೇ ಶತಮಾನದ್ದೆಂದು ಗುರುತಿಸಲಾದ ಬಿಜಾಪೂರ ಸುಲ್ತಾನರ ಬೆಳ್ಳಿ ನಾಣ್ಯಗಳು ದೊರೆತಿವೆ. 5-09-2012ರಂದು ಹಳಿಂಗಳಿ ಗ್ರಾಮದಲ್ಲಿ 10 ಇಂಚು ಜೈನ ತೀರ್ಥಂಕರರ ವಿಗ್ರಹ ದೊರೆತಿದೆ. ಮತ್ತು ಬೃಹತ್ ಶಿಲಾಯುಗದ ಅವಶೇಷಗಳು ದೊರೆಕಿವೆ.
ಇಂತಹ ಮಹತ್ತರ ಐತಿಹಾಸಿಕ ಸಂಗತಿಗಳನ್ನೊಳಗೊಂಡ ಈ ತಾಲೂಕಿನಲ್ಲಿ ದೊರೆತ ಶಾಸನಗಳಲ್ಲಿ ಐತಿಹಾಸಿಕ ದೇವಾಲಯಗಳ ಉಲ್ಲೇಖವಿದ್ದು ಅವುಗಳಲ್ಲಿ ಕೆಲವೊಂದು ದೇವಾಲಯಗಳು ಹಿಂದಿನ ಅಗ್ಗಳಿಕೆಯನ್ನೇ ಉತ್ಸವಗಳ ಮೂಲಕ ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಕೆಲವೊಂದು ದೇವಾಲಯಗಳು ಪ್ರಾಚ್ಯವಸ್ತು ಇಲಾಖೆಯಿಂದ ಜೀರ್ಣೊದ್ದಾರಗೊಂಡು ಹಿಂದಿನ ಹಿರಿಮೆಯನ್ನು, ಪರಂಪರೆಯನ್ನು ಉಳಿಸಿಕೊಂಡು ಬಂದಿವೆ. ಇನ್ನು ಕೆಲವು ದೇವಾಲಯಗಳು ಹಿಂದಿನಿಂದಲೂ ಕೊಡಮಾಡಿದ ಇನಾಮು(ದತ್ತ ಬಿಟ್ಟು) ಭೂಮಿಯ ಆಸ್ತಿಯ ಆದಾಯದಿಂದ ಉತ್ಸವಗಳನ್ನು ನೆಡೆಸಿಕೊಂಡು ಬಂದಿವೆ.
ಜಮಖಂಡಿ ಹಾಗೂ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಪ್ರಾಚೀನ ದೇವಾಲಯಗಳಿದ್ದು ಅವು ಅಂದಿನ ಕಾಲದ ಜನರ ಧಾರ್ಮಿಕ ಮನೋಭಾವನೆಯನ್ನು ಮತ್ತು ಶಿಲ್ಪ ಕಲಾಕೃತಿಯ ವೈಶಿಷ್ಟ್ಯತೆಯನ್ನು ತಿಳಿಸಿಕೊಡುತ್ತವೆÉ. ಅವುಗಳೆಂದರೆ, ಜಂಬುಕೇಶ್ವರ, ಕಲ್ಮೇಶ್ವರ, ನಂದಿಕೇಶ್ವರ, ರಾಮೇಶ್ವರ, ಮಘೇಪ್ರಭು, ಯೋಗನಾರಾಯಣ ದೇವಾಲಯಗಳು ಅದರಂತೆ ತಾಲೂಕಿನ ಗ್ರಾಮಗಳಾದ ಕಲ್ಹಳ್ಳಿಯ ವೆಂಕಟೇಶ್ವರ ದೇವಾಲಯ ಕಡಪಟ್ಟಿ ಬಸವೇಶ್ವರ(ಸುವರ್ಣಖಂಡಿ) ದೇವಾಲಯ ತೇರದಾಳದ ಗೊಂಕ ಜಿನಾಲಯ ಸಾವಳಗಿಯ ಶಿವಲಿಂಗೇಶ್ವರ ದೇವಾಲಯ ಕೊಣ್ಣೂರಿನ ಕರಿಸಿದ್ದೇಶ್ವರ ದೇವಾಲಯ ಮುಂತಾದವುಗಳು.
ಜಂಬುಕೇಶ್ವರ ದೇವಾಲಯ: ಜಮಖಂಡಿ ದೇವಾಲಯದ ನಿಷ್ಪತ್ತಿ ರೂಪವೇ ಜಮಖಂಡಿ ಎಂದಾಗಿದೆ. ಉತ್ತರಾಭಿಮುಖವಾಗಿರುವ ಈ ದೇವಾಲಯದ ಸುತ್ತಲೂ ವಿಶಾಲ ಪ್ರಾಂಗಣವಿದೆ. ದೇವಸ್ಥಾನ ಎತ್ತರವಾದ ಜಗಲಿಯ ಮೇಲೆ ನಿರ್ಮಿಸಲ್ಪಟ್ಟಿದೆ. ಪ್ರವೇಶದ್ವಾರದ ಎರಡೂ ಬದಿಗೆ ಗಜಾಕೃತಿಯ ಶಿಲ್ಪಿಗಳಿದ್ದು ದೇವಾಲಯವನ್ನು ಹೊತ್ತು ನಿಂತಿರುವಂತೆ ಭಾಸವಾಗುತ್ತದೆ. ಪ್ರವೇಶದ್ವಾರದಲ್ಲಿ ದೇಗುಲ ಮಾದರಿ ಛತ್ತು ಇದೆ. ಲತಾ ಪದ್ಮಲಹರಿಯ ಶಾಖೆಗಳಿವೆ. ದ್ವಾರಪಾಲಕರನ್ನು ಕೆತ್ತಲಾಗಿದೆ. ಕಂಬಗಳಲ್ಲಿ ಪೀಠ ಫಲಕ, ಕಲಶ, ಕುಂಭ ಕಾಂಡ ಎಂಬ ಭಾಗಗಳನ್ನು ಗುರುತಿಸಬಹುದು. ಇದರ ತಲವಿನ್ಯಾಸ ಮುಖಮಂಟÀಪ, ಸಭಾಮಂಟಪ, ಅಂತರಾಳವನ್ನು ಹೊಂದಿದೆ. ಮೂರು ಗರ್ಭಗೃಹಗಳಿರುವು ದರಿಂದ ಇದನ್ನು ತ್ರಿಕೂmೀಶ್ವರ ಎಂದು ಗುರುತಿಸಬಹುದು. ಒಂದು ಗರ್ಭಗೃಹ ವೃತ್ತಾಕಾರವಾಗಿದೆ. ಇದರಲ್ಲಿ ಶಿವಲಿಂಗವಿದೆ. ಗರ್ಭಗೃಹದ ಮೇಲ್ಛಾವಣೆಯಲ್ಲಿ ಸಮತಲವಾದ ಭುವನೇಶ್ವರಿ ಅಲಂಕಾರವನ್ನು ಹೊಂದಿದೆ. ಉತ್ತರಾಭಿಮುಖವಾಗಿರುವ ಒಂದು ಗರ್ಭಗೃಹದ ಎಡಬಲಗಳಲ್ಲಿ ಚಿಕ್ಕ ಗರ್ಭಗೃಹಗಳಿವೆ. ಗರ್ಭಗೃಹದ ಲಲಾಟ ಬಿಂಬಗಳಲ್ಲಿ ಶಿವಶಿಲ್ಪಗಳಿವೆ.
ದೇವಾಲಯದ ಸಭಾಮಂಟಪದಲ್ಲಿಯ ಮೇಲ್ಛ್ಚಾವಣೆಯಲ್ಲಿ ಕೂಡಾ ವಿವಿಧ ಬಳೆಯಾಕಾರದ ಆಕೃತಿಗಳನ್ನು ಕೆತ್ತಲಾಗಿದೆ. ಸಭಾಮಂಟಪದಲ್ಲಿ ನಾಲ್ಕು ಕಂಬಗಳು ನೇರವಾಗಿದ್ದು ಎರಡು ಕಡೆ ಸಾಲಾಗಿ ನಿಂತಿವೆ. ಇನ್ನುಳಿದ ನಾಲ್ಕು ಕಂಬಗಳು ಗರ್ಭಗೃಹಕ್ಕೆ ಆಧೀನವಾಗಿದ್ದು ಎರಡು ದೇವಕೋಷ್ಟಕಗಳಿವೆ. ದೇವಾಲಯಕ್ಕೆ ಶಿಖರವಿಲ್ಲ. ಬೃಹದಾಕಾರದ ಸಮತಟ್ಟಾದ ಕಲ್ಲುಗಳಿಂದ ಕೂಡಿದ ಮೇಲ್ಚಾವಣಿ ಇದೆ. ದೇವಾಲಯದ ಆವರಣದಲ್ಲಿ ತೃಟಿತ ಶಿಲ್ಪಗಳು, ಕಂಬಗಳ  ಭಾಗಗಳು  ಕಂಡು ಬರುತ್ತವೆ. ಈ  ದೇವಾಲಯಕ್ಕೆ  ದತ್ತಿಕೊಟ್ಟ ವಿಚಾರವನ್ನು ಜಮಖಂಡಿಯಲ್ಲಿ ದೊರೆತ ಶಾಸನ (ಸೌತ ಇಂಡಿಯನ್ ಇನ್ಸ್ಸ್‍ಕ್ರ್ರಿಪÀ್ಸನ್ಸ್ ಸಂ.20, ನಂ.287) ತ್ರುಟಿತವಾಗಿದೆ. ಮೊದಲ ಭಾಗ ಸಿಕ್ಕಿಲ್ಲ. 18 ಸಾಲುಗಳ ಈ ಶಾಸನ ದುಂದುಬಿನಾಮ ಸಂವತ್ಸರ ಚೈತ್ರ, ಭಾನುಶ್ರೀ, ಸೋಮವಾರ ವಿಭವ ಸಂಕ್ರಾಂತಿ ಅಂದರೆ ಕ್ರಿ.ಶ. 1082 ಸೋಮವಾರ ಮಾರ್ಚ 31ನೇ ದಿನಕ್ಕೆ ಸರಿಹೊಂದುವ ಕಾಲಮಾನ. 1082ರಲ್ಲಿ ಕಲ್ಯಾಣಿ ಚಾಲುಕ್ಯ ಚರ್ಕವರ್ತಿ 6ನೇ ವಿಕ್ರಮಾದಿತ್ಯ ಆಳುತ್ತಿದ್ದ ಕಾಲ ಈ ದೇವಾಲಯಕ್ಕೆ ಭೂದಾನ ದತ್ತಿ ಬಿಟ್ಟ ವಿಚಾರಗಳನ್ನು ತಿಳಿಸುತ್ತದೆ.
ಗೊಂಕ ದೇವಾಲಯ: ತೇರದಾಳ
ಜಮಖಂಡಿ ತಾಲ್ಲೂಕಿನ ಪ್ರಮುಖ ಪಟ್ಟಣ ಇಲ್ಲಿ ನೇಮಿನಾಥ (ಕರ್ನಾಟಕ ಇನ್ಸ್ಸ್‍ಕ್ರ್ರಿಪÀ್ಸನ್ಸ್ ಸಂ.5, ನಂ. 21) ಬಸದಿಯ ಮಂಟಪದ ಹೊರಗೋಡೆಯಲ್ಲಿ ಶಾಸನವಿದೆ.
ಇದು ಕುಂತಳನಾಡಿನ ಭಾಗವಾದ ಕೊಂಡಿ-3000 ಉಪವಿಭಾಗವಾದ ತೇರದಾಳ-12 ಗ್ರಾಮದ ಗುಣಗಾನ ಮಾಡುತ್ತದೆ. 6ನೇ ವಿಕ್ರಮಾದಿತ್ಯನ ಮಹಾಮಾಂಡಲಿಕ ರಟ್ಟ ವಂಶದ ಕಾರ್ತವೀರ್ಯನ ಮಾಂಡಲಿಕನಾದ ಗೊಂಕರಸ ತೇರದಾಳದಲ್ಲಿ ಗೂಂಕಜಿನಾಲಯವನ್ನು ನಿರ್ಮಿಸಿ ವಿಗ್ರಹ ಪ್ರತಿಷ್ಠಾಪನೆಯನ್ನು ತೇರದಾಳದ ಮುಖಂಡರ ಸಮ್ಮುಖದಲ್ಲಿ ಮಾಡಿ ಆ ಕಾಲದಲ್ಲಿಯೇ ಈ ದೇವಾಲಯಕ್ಕೆ ಅಷ್ಟ ವಿಧಾರ್ಚನೆ, ಪೂಜೆ ನಿರಂತರವಾಗಿ ನಡೆಯುವುದಕ್ಕಾಗಿ ತೆರಿಗೆಗಳಿಂದ ಎಣ್ಣೆ ಗಾಣಗಳಿಂದ ಮತ್ತಿತರ ಮೂಲಗಳಿಂದ ಬಂದ ಆದಾಯವನ್ನು ದಾನವಾಗಿ ಕೊಟ್ಟಿದ್ದನ್ನು ಇಲ್ಲಿರುವ 56 ದೀರ್ಘ ಸಾಲುಗಳುಳ್ಳ ಶಾಸನ ತಿಳಿಸುತ್ತದೆ.
ಈ ಶಾಸನ ಶಕವರ್ಷ 1045 ಶುಭಕೃತ ಗುರುವಾರ ವೈಶಾಖ ಪೂರ್ಣಿಮೆ ಅಂದರೆ ಕ್ರಿ.ಶ. 1125 ಏಪ್ರಿಲ್ 12ಕ್ಕೆ ಸರಿಹೊಂದುವ ಕಾಲ. ಇಂದಿಗೂ ಚಾತುರ್ಮಾಸ ಮತ್ತು ನೋಂಪಿ ಆಚರಣೆಗಳೊಂದಿಗೆ ಇದು ಇಂದಿಗೂ ಪ್ರಸಿದ್ಧಿಯಾಗಿದೆ.
ಕದಂಬನಾಗರ ಶೈಲಿಯಲ್ಲಿರುವ ಈ ಬಸದಿ ಪ್ರದಕ್ಷಣಾ ಪಥವನ್ನು ಹೊಂದಿದೆ. ಗರ್ಭಗೃಹ ಸುಖನಾಸಿ ರಂಗಮಂಟಪ ಹಾಗೂ ಮುಖಮಂಟಪಗಳಿಂದ ಕೂಡಿದೆ. ಗರ್ಭಗೃಹದಲ್ಲಿ ಪೀಠದ ಮೇಲೆ ಪದ್ಮಾಸನದಲ್ಲಿ ಕುಳಿತ ನೇಮಿನಾಥನ ವಿಗ್ರಹವಿದೆ. ಗರ್ಭಗುಡಿಯ ಮೇಲೆ ಶಿಖರವಿದೆ. ದೇವಾಲಯದ ಎದುರಿಗೆ ಎತ್ತರದ ದೀಪಸ್ತಂಬವಿದೆ. ಹೊರ ಮಂಟಪದ ದ್ವಾರವು ಸುಂದರ ಕುಸುರಿ ಕೆತ್ತನೆಯಿಂದ ಕೂಡಿದೆ. ದ್ವಾರದ ಮೇಲ್ಭಾಗದಲ್ಲಿ ಪದ್ಮಾಸನ ಜಿನ ಮೂರ್ತಿ ಇದೆ.
ಕರಿಸಿದ್ಧ ದೇವಾಲಯ: ಕೊಣ್ಣೂರ
ಇತ್ತೀಚಿನ ದಿನಗಳಲ್ಲಿಯೂ ಬಹಳ ಪ್ರಸಿದ್ದಿ ಹೊಂದಿದ ದೇವಾಲಯ. ಶಾಸನಗಳಲ್ಲಿ (ಎಸ್.ಐ.ಐ. ಸಂ.20, ನಂ.542, ಕ್ರಿ.ಶ. 1149-50) ಇದನ್ನು ಬೀರಣ ದೇವರು ಎಂದು ಉಲ್ಲೇಖಿಸಲಾಗಿದೆ. ಸ್ಥಳೀಯ ಐತಿಹ್ಯದ ಪ್ರಕಾರ ಒಂದು ಕಾಲದಲ್ಲಿ ದೇವಾನು ದೇವತೆಗಳೆಲ್ಲ ಸೇರಿಕೊಂಡು ಶಿವನಿಗೆ ಪಟ್ಟಕಟ್ಟುವ ಕಾಲಕ್ಕೆ ಗುಗ್ಗಳ ಹೋಮ ಮಾಡುತ್ತಿರಲು, ಹೋಮದಲ್ಲಿ ಉದ್ಭವವಾದ ಕೂಸೊಂದು ನದಿ ದಂಡೆಯ ಮೇಲೆ ಕುಳಿತುಕೊಂಡು ಸೃಷ್ಟಿಯಲ್ಲಿರುವ ಪ್ರಾಣಿಗಳಿಗೆಲ್ಲ್ಲ ಆಹಾರವನ್ನು ಬೀರುತ್ತಿದ್ದನು. ಆದ್ದರಿಂದ ಅವನಿಗೆ ಬೀರಪ್ಪ, ಬೀರೇಶ್ವರ ಎಂಬ ಹೆಸರು ಬಂದಿತು. ಮುಂದೆ ಇದೇ ಬೀರೇಶ್ವರ ಕೋಣಾಸುರ ಎಂಬ ದೈತ್ಯನನ್ನು ನಾಶ ಮಾಡಿ ದೈತ್ಯನ ಹೆಸರಿನ ಮೇಲೆ ಕೋಣಾನೂರು ಎಂಬ ಗ್ರಾಮವನ್ನು ಸ್ಥಾಪಿಸಿ, ಕೋಣಾನೂರಿನ ನಿಜಸಿದ್ದ, ಕರೆಸಿದ್ದ ಎಂಬ ಹೆಸರಿನಿಂದ ಪ್ರಸಿದ್ದಿ ಹೊಂದಿದ ಈ ದೇವರು ಈಗ ಕರಿಸಿದ್ದ ಎಂದಾಗಿದೆ. ಈ ದೇವಾಲಯ ಊರಿನ ಪಶ್ಚಿಮದಲ್ಲಿ ಪೂರ್ವಾಭಿಮುಖವಾಗಿ ಕಟ್ಟಲ್ಪಟ್ಟಿದೆ. ಮುಖ್ಯದ್ವಾರದ ಮೇಲೆ ಮಹಡಿಗಳನ್ನು ನಿರ್ಮಿಸಿರುವುದರಿಂದ ಬಹುದೂರದಿಂದಲೇ ಕಾಣುತ್ತದೆ. ಮುಖ್ಯದ್ವಾರದ ಪ್ರ್ರಾಕಾರದಲ್ಲಿರುವ ಕೋಣೆಗಳು ನಂತರದ ದಿನಗಳಲ್ಲಿ ನಿರ್ಮಿಸಿದವುಗಳಾಗಿವೆ. ಗರ್ಭಗುಡಿಯಲ್ಲಿ ಕುಳಿತ ಭಂಗಿಯಲ್ಲಿರುವ ಕರಿಸಿದ್ದದೇವರ ಕಲ್ಲಿನ ಮೂರ್ತಿ ಇದೆ. ಕಾಲಕ್ರಮೇಣ ಪಕ್ಕದಲ್ಲ್ಲಿಯೇ ಮತ್ತೊಂದು ನಿಂತಿರುವ ಮೂರ್ತಿಯನ್ನು ಪ್ರತಿಷ್ಠ್ಠಾಪಿಸಲಾಗಿದೆ.
ಇವುಗಳಿಗೆ ಕುಂತಿರಪ್ಪ, ನಿಂತಿರಪ್ಪ ಎಂದು ಕರೆಯುತ್ತಾರೆ. ಗುಡಿಯ ಪ್ರಾಂಗಣದಲ್ಲಿ ಕೋಣಾಸುರನ ವಧೆಯ ಸಂಕೇತವಾಗಿ ಎರಡು ಮಾಲಗಂಬಗಳಿವೆ. ಗರ್ಭಗುಡಿಯ ಸಭಾಮಂಟಪದ ಎದುರು ಎಡಬಲಗಳಲ್ಲಿ ಶಾಸನಗಳಿವೆ. ಈ ಭಾಗದಲ್ಲಿ ಜಾಗೃತ ದೇವಾಲಯವೆಂದೇ ಪ್ರಸಿದ್ದಿ ಹೊಂದಿದ ಈ ದೇವಾಲಯಕ್ಕೆ ಯುಗಾದಿ, ಶ್ರಾವಣ ಮಾಸದಲ್ಲಿ ಸಾಕಷ್ಟು ಜನ ಬಂದು ಸೇರುತ್ತಾರೆ. ಪ್ರತಿ ವರ್ಷ ದೀಪಾವಳಿಯಲ್ಲಿ ನರಕಾಸುರನ ಬಲಿಪಾಡ್ಯಮಿ ಎನ್ನುವಂತೆ ಕೋಣಾಸುರನ ಸಂಹಾರದ ದಿನ ಎಂಬ ಸಂಪ್ರದಾಯದಂತೆ ಅನೇಕ ದೈವೀಕ ಆಚರಣೆÉಗಳನ್ನೊಳಗೊಂಡಂತೆ ಬೃಹತ್ ಪ್ರಮಾಣದಲ್ಲಿ ಜಾತ್ರೆ ನಡೆಯುತ್ತದೆ.
ಮಘೆಪ್ರಭು ದೇವಾಲಯ: ಜಮಖಂಡಿ
ಈ ದೇವಾಲಯವನ್ನು ಪ್ರವೇಶಿಸಬೇಕಾದರೆ 8-10 ಮೆಟ್ಟಿಲುಗಳನ್ನು ಇಳಿದು ಹೋಗಬೇಕಾಗುತ್ತದೆ. ಇದು ರಾಷ್ಟ್ರಕೂಟರ ಮತ್ತು ಕಲ್ಯಾಣ ಚಾಲುಕ್ಯರ ವಾಸ್ತುಶಿಲ್ಪದ ಮಾದರಿಗಳೆರಡನ್ನೂ ಹೋಲುತ್ತದೆ. ತ್ರಿಕೂಟಾಚಲವಾಗಿದ್ದು ಮಧ್ಯದ ಗರ್ಭಗುಡಿಯಲ್ಲಿ ಪ್ರಭುದೇವರ ಜಲಾರಿ ಲಿಂಗವಿದೆ. ಅಂತರಾಳದ ಮಧ್ಯದಲ್ಲಿ ನಂದಿ ವಿಗ್ರಹವಿದೆ. ಎಡಬಲಗಳ ಗರ್ಭಗುಡಿಗಳಲ್ಲಿನ ಶಿವಲಿಂಗಗಳು ಕಾಣೆಯಾಗಿವೆ. ದೇವಾಲಯದ ಸುತ್ತಲೂ ಸ್ವಲ್ಪವೂ ಸ್ಥಳಾವಕಾಶ ಇಲ್ಲದಂತೆ ದೇವಸ್ಥಾನದ ಜಾಗವನ್ನು ಆಕ್ರಮಿಸಿ ಸ್ಥಳೀಕರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಆದ್ದರಿಂದ ದೇವಾಲಯದ ಮೂಲಸ್ವರೂಪವನ್ನು ಕಾಣುವುದಿಲ್ಲ. ಮೂರ್ನಾಲ್ಕು ತಲೆಮಾರುಗಳಿಂದ ಮನಗೂಳಿ ಮನೆತನದ ಆಚಾರ್ಯರು ಈ ದೇವಾಲಯದ ಅರ್ಚಕರಾಗಿ ವಿಧಿವಿಧಾನಗಳನ್ನು ನಡೆಸುತ್ತಾ ಬಂದಿದ್ದಾರೆ. ಈ ದೇವಸ್ಥಾನಕ್ಕೆ 10 ಎಕರೆ ಭೂಮಿ ಉಂಬಳಿ ಹಾಕಿಕೊಡಲಾಗಿದೆ. ಇದನ್ನು ಹಾರುವರ ಹೊಲ ಎಂದು ಕರೆಯುತ್ತಾರೆ. ಎಲ್ಲ ಧರ್ಮೀಯರು ಇದಕ್ಕೆ ನಡೆದುಕೊಳ್ಳುತ್ತಾರೆ. ಜಾಗೃತ ದೇವಸ್ಥಾನ ಎಂದೇ ಭಕ್ತರು ನಂಬಿದ್ದಾರೆ. ಜಮಖಂಡಿ ನಗರವಾಸಿಗಳಲ್ಲದೇ ಸುತ್ತಮುತ್ತಲಿನ ಗ್ರಾಮದ ಜನರು ನಡೆದುಕೊಳ್ಳುತ್ತಾರೆ. ಈ ದೇವಾಲಯದ ಪೂಜಾ ವಿಧಿವಿಧಾನಗಳನ್ನು ಜಂಗಮರು ಮತ್ತು ಬ್ರಾಹ್ಮಣರು ಇಬ್ಬರೂ ನೆರವೇರಿಸುತ್ತಾ ಬಂದಿರುವುದು ವಿಶೇಷ.
ಜಂಗಮ ಪೂಜಾರಿಗಳು ಪತ್ರಿ, ಪುಷ್ಪ, ಫಲಾರ್ಚನೆಗಳನ್ನು ಮಾಡಿದರೆ ಬ್ರಾಹ್ಮಣ ಜೋಯಿಸರು ಅಲಂಕಾರ ಪೂಜೆ, ಅಭಿಷೇಕ, ಹೋಮ, ಹವನ, ಸೇವೆಗಳನ್ನು ಮಾಡುತ್ತಾರೆ. ಪ್ರತಿ ಶ್ರಾವಣ ಮಾಸದಲ್ಲಿ ಅತ್ಯಂತ ವೈಭವದಿಂದ ನೃತ್ಯ, ಸಂಗೀತ ಸೇವೆ, ಬಾಜಾಭಜಂತ್ರಿ, ಕರಡಿವಾದನ, ಸಂಬಾಳವಾದನ, ಜಾಗಟೆ, ನಗಾರಿ ವಾದನ, ಮೊದಲಾದ ಕಾರ್ಯಕ್ರಮಗಳು ಅತೀ ವಿಜೃಂಭಣೆÉಯಿಂದ ನಡೆಯುತ್ತಿದ್ದವು. ಈ ದೇವರಿಗೆ ಭಕ್ತಿಸೇವೆಗಾಗಿ ಭೂಮಿಯನ್ನು ದತ್ತಿ ಬಿಟ್ಟ ವಿವರಗಳು ಸಿಗುತ್ತವೆ.
ರಾಮೇಶ್ವರ ದೇವಾಲಯ: ರಾಮತೀರ್ಥ
ಜಮಖಂಡಿಯ ನೈರುತ್ಯಕ್ಕೆ ಗುಡ್ಡದ ಸಾಲಿನಲ್ಲಿ 2 ಕಿ.ಮೀ. ದೂರದಲ್ಲಿರುವ ವೇಸರ ಮಾದರಿಯ ಹೊಯ್ಸಳರ ಕಾಲದ ದೇವಾಲಯ. ತೆರೆದ ಸಭಾಮಂಟಪ, ಅಂತರಾಳ ಮತ್ತು ಗರ್ಭಗೃಹವನ್ನು ಹೊಂದಿದೆ. ಸಭಾಮಂಟಪದಲ್ಲಿ 4 ಕಂಬಗಳಿದ್ದು ಎತ್ತರಕ್ಕೆ ಕಟ್ಟೆಯನ್ನು ಕಟ್ಟಲಾಗಿದೆ. ಕಟ್ಟೆಯ ಮೇಲೆ ಅರ್ಧ 5 ಕಂಬಗಳಿವೆ. ಈ ಕಂಬಗಳು ಛತ್ತಿಗೆ ಅಂಟಿಕೊಂಡು ಹೊರಗೆ ಹೋಗಲು ದಾರಿಗಳಾಗಿವೆ. ದೇವಸ್ಥಾನದ ಎಡಬಲಕ್ಕೆ ಹೋಗಲು ದಾರಿ ಇದೆ. ಅಲಂಕೃತವಾದ ಕೆತ್ತನೆಯ ಒಟ್ಟು 10 ಕಂಬಗಳಿವೆ. ಗರ್ಭಗೃಹದಲ್ಲಿ ಬೃಹದಾಕಾರವಾಗಿರುವ ಶಿವಲಿಂಗವಿದೆ. ಗರ್ಭಗೃಹದ ಮುಂದೆ ಬೃಹತ್ ನಂದಿ ವಿಗ್ರಹವಿದೆ. ಮೇಲ್ಛಾವಣಿ ಕಲ್ಲಿನಿಂದ ನಿರ್ಮಿಸಲ್ಪಟ್ಟಿದೆ. ದೇವಾಲಯದ ದ್ವಾರಬಾಗಿಲಿನ ಲಲಾಟಬಿಂಬದಲ್ಲಿ ಓಂ ಅಕ್ಷರ ಹಾಗೂ ಹೂವಿನ ಚಿತ್ರವಿದೆ. ಇತ್ತೀಚಿಗೆ ದ್ವಾರಬಾಗಿಲಿನ ಮೇಲ್ಭಾಗದಲ್ಲಿ ಶಿವಪಾರ್ವತಿಯರ ಶಿಲ್ಪವನ್ನು ನಿರ್ಮಿಸಿದ್ದಾರೆ. ದೇವಾಲಯದ ಎಡಭಾಗದಲ್ಲಿ ಕಲ್ಲಿನಲ್ಲಿ ಕೆತ್ತಿದ ಸಳ ಹುಲಿಯೊಡನೆ ಸೆಣೆಸಾಡುತ್ತಿರುವ ಶಿಲ್ಪ ಚಿತ್ರವಿದೆ. ದೇವಾಲಯದ ಹೊರನೋಟ ನಕ್ಷತ್ರಾಕಾರದಂತೆ ಕಾಣಿಸುತ್ತದೆ.
1857ರ ಬಂಡಾಯದಲ್ಲಿ ಭಾಗವಹಿಸಿದ್ದನು ಎಂಬ ಆರೋಪದ ಮೇರೆಗೆ ಈ ಪ್ರಾಂತದ ಮುಖಂಡ ರಾಮಚಂದ್ರರಾವ್ ಪಟವರ್ಧನರನ್ನು ಬಂಧಿಸಿ, ನಂತರ ಬಿಡುಗಡೆ ಮಾಡಿದ ಬಳಿಕ ರಾಮಚಂದ್ರರಾವ್ ತಮ್ಮ ವಸತಿಯನ್ನು ಬದಲಿಸಿ ಊರ ಹೊರಗಿರುವ ರಾಮತೀರ್ಥದ ಈ ದೇವಾಲಯದ ಪಕ್ಕದಲ್ಲಿ (ವಸತಿ) ಅರಮನೆ ನಿರ್ಮಿಸಿಕೊಂಡು ಸುತ್ತಲೂ ಸಣ್ಣ್ಣ ಸಣ್ಣ್ಣ ದೇವಾಲಯಗಳನ್ನು ನಿರ್ಮಿಸಿಕೊಂಡು ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಇನ್ನೊಂದು ವಿಶೇಷವೆಂದರೆ ಪ್ರತಿ ವರ್ಷ ಶ್ರಾವಣ ಮಾಸದ ಪೂರ್ತಿ ತಿಂಗಳಲ್ಲಿ ಜಮಖಂಡಿ ಹಾಗೂ ಹತ್ತಿರಕ್ಕೆ ಹೊಂದಿಕೊಂಡಿರುವ ಪ್ರದೇಶಗಳ ಜನರು ಪ್ರತಿ ದಿನ ಬೆಳಗಿನ ಜಾವ 4 ಗಂಟೆಯಿಂದ 9 ಗಂಟೆಯವರೆಗೆ ದರ್ಶನ ಪಡೆದು ಹೋಗುತ್ತಾರೆ. ಪ್ರತಿ ಸೋಮವಾರ ವಿಶೇಷವಾಗಿ ಅನ್ನದಿಂದ ತಯಾರಿಸಿದ “ಬುತ್ತಿ”ಯಿಂದ ಶಿವಲಿಂಗವನ್ನು ವಿವಿಧ ಭಂಗಿಗಳಲ್ಲಿ ನಿರ್ಮಿಸಿ ಪೂಜಿಸುತ್ತಾರೆ. ಕೊನೆಯ ಶ್ರಾವಣ ಸೋಮವಾರ ವಿಶೇಷ ಪೂಜೆಯೊಂದಿಗೆ ರಾಮೇಶ್ವರ ರಥೋತ್ಸವ ಬಹು ವಿಜೃಂಭಣೆÉಯಿಂದ ದೇವಾಲಯದ ಆವರಣದಲ್ಲಿಯೇ ನಡೆಯುತ್ತದೆ. ಏಕೆಂದರೆ ಜಮಖಂಡಿ ಸಂಸ್ಥಾನದ ಪ್ರಥಮ ಅರಸ ರಾಮಚಂದ್ರ ಪÀಂತ್ ಅವರಿಗೆ ಮರಾಠಾ ಪೇಶ್ವೆಗಳು ಜಮಖಂಡಿಯನ್ನು ಜಹಗೀರಾಗಿ ಕೊಟ್ಟ ಸಂದರ್ಭದಲ್ಲಿ ಪಾಂಡು. ಬಾ. ತಾತ್ಯಾ ಸುಖದೇವ ಆಡಳಿತಾಧಿಕಾರಿಯಾಗಿದ್ದನು. ಇವನು ಜಮಖಂಡಿಯನ್ನು ಬಿಟ್ಟು ಕೊಡಲು ನಿರಾಕರಿಸಿದನು. ಇದರಿಂದ ಕೋಪಗೊಂಡ ರಾಮಚಂದ್ರ ಪÀಂತ್ ತಮ್ಮ ಸೇನಾಬಲದೊಂದಿಗೆ ಸುಖದೇವನನ್ನು ಸೋಲಿಸಿ ಜಮಖಂಡಿಯನ್ನು ವಶಪಡಿಸಿಕೊಂಡಿದ್ದು ಶ್ರಾವಣ ಸೋಮವಾರದಂದು. ಅಂದಿನಿಂದಲೂ ಈ ಆಚರಣೆ ನಡೆಯುತ್ತಾ ಬಂದಿದೆ. ಈಗ ಪೂನಾದಲ್ಲಿ ವಾಸ್ತವ್ಯ ಹೂಡಿರುವ ಪಟವರ್ಧನ ಮನೆತನದವರು ಈ ರಥೋತ್ಸವಕ್ಕೆ ತಪ್ಪದೇ ಬಂದು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾ ಬಂದಿರುವುದು ಒಂದು ವಿಶೇಷವಾಗಿದೆ.

ಆಧಾರಸೂಚಿ
1. ಪ್ರೊ. ಎಸ್.ಬಿ. ಮಟೋಳಿ , ಜಮಖಂಡಿ ಇತಿಹಾಸ ದರ್ಪಣ, ಪುಟ 5.
2. ಬಜಂತ್ರಿ ದೊಡ್ಡಣ್ಣ (ಸಂ) ತ್ರಿದಳ ಸೌರಭ ಸ್ಮರಣ ಸಂಚಿಕೆ, ಲೇಖನ ಪುಟ 3.
3. ಮಲ್ಲಿಕಾರ್ಜುನ ಎಂ. (ಸಂ), ಜೈ ಜಮಖಂಡಿ ಪಾಕ್ಷಿಕ ಸಂಚಿಕೆ 7, ಪುಟ 3.
4. ಡಾ|| ಕೆ.ಪಿ. ಈರಣ್ಣ, ತೇರದಾಳ ಗೊಂಕ ಜಿನಾಲಯ ಲೇಖನ, ಪುಟ 152.
5. ಕೆ. ಚನ್ನಬಸಪ್ಪ, ಜಮಖಂಡಿ ತಾಲ್ಲೂಕಿನ ಶಾಸನಗಳು ಒಂದು ಸಾಂಸ್ಕøತಿಕ ಅಧ್ಯಯನ.


¬ ಮುಖ್ಯಸ್ಥರು, ಇತಿಹಾಸ ವಿಭಾಗ, ಬಿ.ಎಲ್.ಡಿ.ಇ.ಎ. ಪ್ರಥಮದರ್ಜೆ ಕಾಲೇಜು, ಜಮಖಂಡಿ-586301. ಬಾಗಲಕೋಟೆ ಜಿಲ್ಲೆ.

Wednesday, May 7, 2014

ಶ್ರೀ ಆದಿಶಂಕರರ ಕಾಲಘಟ್ಟ

ಶ್ರೀ ಆದಿಶಂಕರರ ಕಾಲಘಟ್ಟ : ಒಂದು ಚರ್ಚೆ
ಡಾ. ಎಸ್.ಕೆ. ಜೋಶಿ
ಅತ್ಯಂತ ಪ್ರಾಚೀನ ಭಾರತದ ಚಿಂತಕರಲ್ಲಿ, ಮನು, ವಾಲ್ಮೀಕಿ, ವ್ಯಾಸ ಯಾಜ್ಞವಲ್ಕ್ಯರು ಖ್ಯಾತನಾಮರು. ಪ್ರಥುಲೋರು ಫ್ರೆಂಕದಲಿ ಜಗವು ಎಚ್ಚರಗೊಳ್ಳುತ್ತಿರುವಾಗ, ಅದಾಗಲೇ ಈ ಪ್ರಭುಗಳು ಜ್ಞಾನ ಅರುಣೋದಯವನ್ನು ಪ್ರಕಾಶಿಸಿದವರು.
ವೇದಗಳು ನಮ್ಮೀ ವರ್ತಮಾನ ಕಾಲದ ಹಿಂದೆ ಎಂಟು ಸಾವಿರ ವರುಷಗಳ ಸುತ್ತಿನಲ್ಲಿ ಜ್ಞಾನದ ಹರವನ್ನು ಹರಡಿವೆ. ಡಾ. ಆರ್.ಜಿ. ಭಾಂಡಾರಕರ್, ವಿದ್ ಎಂಬ ಮೂಲ ಧಾತುವಿನಿಂದ ವೇz ಶಬ್ದೋತ್ಪತ್ತಿ. ವೇದ ಅಂದರೆ ಸಂಕ್ಷಿಪ್ತತೆಯಲ್ಲಿ ಜ್ಞಾನ, ಅರಿವು, ತಿಳಿವಳಿಕೆ ಎಂತಾಗಿ ಅರ್ಥೈಸುತ್ತವೆ.
ಈ ವೇದಗಳು ಚತುರ್ವೇದಗಳ ದಾಂಗುಡಿ ಬಿಟ್ಟು, ಋಗ್ವೇದ, ಯಜುರ್ವೇದ, ಅಥರ್ವಣವೇದ ಹಾಗೂ ಸಾಮವೇದ ಅದು. ಸರ್ವ ಜೀವಾತ್ಮಗಳನ್ನು ಪ್ರೀತಿಸುವ ಪ್ರಕ್ರಿಯೆ. ಯಜ್ಞ, ಯಾಗ, ಪಶುಬಲಿಗಳಂಥ ನಿಖರ ಕೆಲವು ಆಚರಣೆಗಳು ದೂರೀಕರಿಸಲ್ಪಡಲು ಹತ್ತಿದವು ಆಗ್ಗೆ ಬಂದ ಬುದ್ಧನಿಂದ.
ಬುದ್ಧ ಪೂರ್ವ ಕಾಲದಲ್ಲಿ ವೇದಕಾಲೀನ ಕಟಿಬದ್ಧ ಧರ್ಮಾಚರಣೆಯು ಕೆಲ ಆಚರಣೆಗಳಲ್ಲಿ ಅಸಹನೀಯ ಅನುಷ್ಠಾನಗಳನ್ನು ತಂದುದರಿಂದ, ಬಹ್ವಂಶ ಜನಮಾನಸಕ್ಕೆ ಧಾರ್ಮಿಕ ಕ್ರಿಯೆಗಳಲ್ಲಿ ಕಾಠಿಣ್ಯತೆ ತೋರಿತು. ಯಜ್ಞ ಯಾಗಾದಿಗಳು ಸಾಕಾದವು. ಅವುಗಳಲ್ಲಿ ಹಿಂಸೆಯಡಗಿತ್ತು. ಸರಳ ಸೌಮ್ಯ ಶಾಂತ ಪ್ರಶಾಂತ ಅಹಿಂಸೆಯ ಧರ್ಮದ ದಾರಿ ಬೇಕಾಗಿತ್ತು. ಅದಾಗಿ, ಬುದ್ಧನು ಧರ್ಮವನ್ನು ‘ಸಂಯೋಗ್ಯ ದಾರಿ (Pಚಿಣh oಜಿ ಡಿighಣesಟಿess) ಎಂದು ವ್ಯಾಖ್ಯಾನಿಸಿದನು.
ಬುದ್ಧನ ‘ಅಹಿಂಸಾ ಸಮಾಜ ನಿರ್ಮಾಣವಾಯಿತು. ಎಲ್ಲೆಡೆಯೂ ಸೌಮ್ಯ ಸರಳ ಶಾಂತ ಸಮಾಜದ ಅಡಿಗಲ್ಲಿನ ಮೇಲೆ ಇಡೀ ಜನಸಮುದಾಯದ ಬೌದ್ಧನಿಲಯ ನಿರ್ಮಾಣವಾಯಿತು.
ಆದರೆ, ಈ ತರಹದ ‘ಅಹಿಂಸಾ ಪರಮೋಧರ್ಮಃ ಬುದ್ಧಂ ಶರಣಂ ಗಚ್ಛಾಮಿ, ಧಮ್ಮಂ ಶರಣಂ ಗಚ್ಛಾಮಿ ಸಂಘಂ ಶರಣಂ ಗಚ್ಛಾಮಿ ಎಂಬ ಘೋಷಣಾಚಾರಣೆಗಳು ಸುತ್ತಲೂ ಹರಡಿ, ಸಮಾಜವನ್ನು ಅಬಲವಾಗಿ, ಅಶಕ್ತವಾಗಿ ನಿಷ್ಕ್ರಿಯೆಯಾಗಿ ಮಾಡಿತ್ತು. ಇದೂ ಕೂಡಾ ಕೆಲ ಶತಕದ ನಂತರ (ಕ್ರಿ.ಪೂ. ಶತಕ ೫ರಿಂದ ಕ್ರಿ.ಶ. ೬-೭ ಶತಮಾನದ ವರೆಗೆ) ನಿಶ್ಯಕ್ತ ರಾಷ್ಟ್ರವನ್ನಾಗಿ ಪರಿವರ್ತಿಸಿತು.
ಆಗ ೬-೭ ಶತಕಗಳ ಕಾಲ ಸಂಧಿಯಲ್ಲಿ ಪ್ರವೇಶ ವಾಯಿತು. ಆದಿಶಂಕರರ ‘ಅಹಂ ಬ್ರಹ್ಮಾಸಿ ಎಂಬ ಆತ್ಮದ ಗುಡುಗು. ಶ್ರೀ ಆದಿಶಂಕರರ ವಿಚಾರಗಳು ಆಧ್ಯಾತ್ಮ ಶಕ್ತಿಯಿಂದ ಬೆಳೆದು, ಮುಪ್ಪರಿಗೊಂಡ ದೇಹ-ದೇಶ-ಆತ್ಮಗಳ ಹಿಂದಿನಿಂದ ಬಂದ ನಿಶ್ಯಕ್ತ ಸಮಾಜವನ್ನು ಹುರಿದುಂಬಿಸಿತು. ಅದು ಶ್ರೀ ಶಂಕರಾಚಾರ್ಯರ ಐತಿಹಾಸಿಕ ಕೊಡುಗೆ ಭಾರತವನ್ನು ಪುನರಪಿ ಕಟ್ಟುವಲ್ಲಿ.
ಶ್ರೀ ಶಂಕರರ ಮಾರ್ಗದರ್ಶನ ಇದು “ಸರಿದು ಹೋದ ಸಿದ್ಧಾಂತಗಳನ್ನು ಆಚರಣೆಗಳನ್ನು ಇಂದಿನ ವರ್ತಮಾನದಲ್ಲಿ ನೋಡುವ ಹಾಗೂ ಅದರ ಪರಿಣಾಮವನ್ನು ವಿನಿಯೋಗಿಸುವ  ನವ್ಯ ಚಿಂತನವನ್ನು ಶ್ರೀ ಶಂಕರರು ದೇಶಕ್ಕೆ ನೀಡಿದರು. ‘ನಿನ್ನೆಗಳನ್ನು, ದಂತಕಥೆಗಳನ್ನು, ಪುರಾಣಗಳನ್ನು ಹಾಗೂ ಇತಿಹಾಸವನ್ನು ವರ್ತಮಾನದ ದೃಷ್ಟಿಯಿಂದ ನೋಡಿರಿ ಆಗ ಮಾತ್ರ ಅವುಗಳ ಅರ್ಥವಾಗುತ್ತದೆ, ಮೌಲ್ಯ ತಿಳಿಯುತ್ತದೆ ಹಾಗೂ ಉಪಯೋಗ-ಉಪಕರಣವಾಗುತ್ತದೆ. ಅರ್ಥ ಹಾಗೂ ಅನು‌ಅರ್ಥವಾಗಿ, ಸಮಾಜಕ್ಕೆ ನೈಜ ಮಾರ್ಗದರ್ಶನ ದೊರೆಯುತ್ತದೆ ಎಂದರು ಶ್ರೀ ಶಂಕರರು. ಇದು ಕರ್ಮ ಪ್ರಧಾನ ನೀತಿ, ಬರಿ ಶಬ್ಧ ನೀತಿಯಲ್ಲ. ಸದೃಢ ರಾಷ್ಟ್ರ ಕಟ್ಟುವ ನೀತಿ-ಶಕ್ತಿ ಎಂದು ಹೇಳಬಹುದು.
ಇನ್ನು ‘ಆದಿಶಂಕರರ ಸಮಯವಾವುದು ? ಎಂಬುದು ಇನ್ನೂ ನಿರ್ದಿಷ್ಟಗೊಳ್ಳಬೇಕಾಗಿದೆ. ಇಲ್ಲಿ ಅದರ ಬಗ್ಗೆ ಇನ್ನೂ ಕೆಲವೊಂದು ಚಿಂತನಪರ ಅಂಶಗಳನ್ನು ತೋರಿಸಲಾಗಿದೆ. ನಿಷ್ಕರ್ಶೆ ಇನ್ನು ವಿದ್ವಾಂಸರಿಗೆ ಬಿಟ್ಟುಕೊಟ್ಟದ್ದು. ಈ ಶೋಧನೆ, ಭಗವತ್‌ಪಾದರ ಸಾಹಿತ್ಯ ಹಾಗೂ ಅವರ ಸಮಕಾಲೀನ ವಿದ್ವಾಂಸರ ಪ್ರಸಂಗಗಳನ್ನು ಆಧರಿಸಿದೆ.
ಕೆಲವು ಸಾಂಗತ್ಯಗಳು ಶ್ರೀ ಆದಿಶಂಕರರ ಕಾಲ ಕ್ರಿ.ಶ.೬೩೨ ರಿಂದ ೬೬೪ರ ವರೆಗೆಂದೂ, ಅಥವಾ ಕ್ರಿ.ಶ.೬೮೦ ರಿಂದ ೭೧೨ರ ವರೆಗೆಂದೂ ಹೇಳುತ್ತಿವೆ. ಇನ್ನು ಕೆಲ ಸಿದ್ದಾಂತಗಳು ಕ್ರಿ.ಶ.೬೫೦ರಿಂದ ೬೮೨ ರವರೆಗೂ ಉಸಿರುತ್ತೇನೆ.
ಶ್ರೀ ಶಂಕರರ ಸಮಕಾಲೀನ ಕೆಲವು ವಿದ್ವಾಂಸರ ಹೆಸರುಗಳು ಕೇಳಿಬರುತ್ತಿವೆ. ಆ ಮಹನೀಯರ ಕಾಲ ಕೃತಿಗಳಿಂದ ತಿಳಿದುಬರುತ್ತವೆ. ಮಂಡನಮಿಶ್ರಾ ಪಂಡಿತನು ಮಿಥಿಲಾ ಪ್ರದೇಶದಲ್ಲಿ ಪ್ರಸಿದ್ಧಿ ಪಡೆದುದು ಕ್ರಿ.ಶ.೬೫೦ರ ಸುತ್ತಮುತ್ತ. ಶ್ರೀ ಶಂಕರಿಗೂ ಅವನಿಗೂ ಧಾರ್ಮಿಕ ಚರ್ಚೆಗಳಾದುದು ಅದೇ ಕಾಲದಲ್ಲಿ. ಹೀಗಾಗಿ ಇವರಿಬ್ಬರೂ ಸಮಕಾಲೀನರು.
ವಿದ್ಯಾವಾಚಸ್ಪತಿ ಕುಮಾರಿಲಭಟ್ಟರು ಕ್ರಿ.ಶ.೬೫೦ರ ಸುತ್ತಮುತ್ತ ಇದ್ದು, ಇವರು ಶ್ರೀ ಶಂಕರರ ಬ್ರಹ್ಮಸೂತ್ರಕ್ಕೆ ವ್ಯಾಖ್ಯಾನ ಬರೆದರು, ಹಾಗೂ ಅದಕ್ಕೆ, ಅರ್ಥಪೂರ್ಣತೆಯಿಂದ, ತನ್ನ ಪತ್ನಿಯ ಹೆಸರನ್ನೇ ಇಟ್ಟದು-‘ಭಾಮಿನೀ ಎಂದು. ಏಕೆಂದರೆ ಇದರಲ್ಲಿ ವಿಶೇಷತೆ ಇದೆ. ಯುವಕನಾದ ಕುಮಾರಿಲ ಭಟ್ಟನು ಭಾಮಾ ಯುವತಿಯನ್ನು ಮದುವೆಯಾಗಿ ಸಾಂಸಾರಿಕನಾದನು. ಆದರೆ ಆತನು ತನ್ನ ಕೃತಿ ರಚನೆಯಲ್ಲಿ ಇಷ್ಟೊಂದು ಮಗ್ನನಾಗಿದ್ದನು. ದಿನಂಪ್ರತಿ ಕ್ಷಣ ಕ್ಷಣಕ್ಕೂ ಸೇವೆ ಮಾಡುತ್ತ ಭಾಮಾ ಮುದುಕಿಯಾದಳು, ಜೊತೆಗೆ ಪತಿ ಕುಮಾರಿಲಭಟ್ಟ ಕೂಡ. ಒಬ್ಬರನ್ನೊಬ್ಬರು ನೋಡಿದುದು ಆ ಕಾವ್ಯರಚನೆ ಮುಗಿದ ಮೇಲೆಯೇ. ಇಬ್ಬರೂ ಹಣ್ಣಾದ ವೃದ್ಧರಾಗಿರುತ್ತಾರೆ. ಗಂಡ ಹೆಂಡತಿಯನ್ನು ಗುರುತಿಸಿ “ಭಾಮಾ ಎಷ್ಟು ಮುದುಕಿಯಾಗಿರುವೆ ? ಎಂದಾಗ, ಆಕೆಯೂ ಕೂಡ ತಾವೂ ಕೂಡ ಈಗ ಮುದುಕರು ಎಂದಳು. ಇಡೀ ಆಯುಷ್ಯವನ್ನೇ ಈ ಬ್ರಹ್ಮಸೂತ್ರಕ್ಕೆ ವ್ಯಾಖ್ಯಾನ ಬರೆಯುವಲ್ಲಿ ಕಳೆಯಿತು, ಒಬ್ಬರಿಗೊಬ್ಬರು ಅಪರಿಚಿತರಂತೆ ಬದುಕಿದೆವು. ಈಗ ಈ ಮಹಾನ್ ಕಾವ್ಯ ನಿರ್ಮಾಣವಾಯ್ತು. ನಿನ್ನ ತ್ಯಾಗದ ಸೇವೆಯಿಂದ ಇದಕ್ಕೆ ನಿನ್ನ ಹೆಸರನ್ನೇ ಇಡುವೆ ‘ಭಾಮಿನಿ ಎಂದು. ಹೃದಯಸ್ಪರ್ಶಿ ದೃಶ್ಯ. ಅಂದಿನಿಂದ ಕುಮಾರಿಲಭಟ್ಟರ ಕಾವ್ಯಗ್ರಂಥ ‘ಭಾಮಿನಿ ಆಗಿ, ಅಮರ ವಾಯಿತು. ಹೀಗಾಗಿ, ಕುಮಾರಿಲಭಟ್ಟರು ಶ್ರೀ ಶಂಕರರ ಅನತಿ ದೂರದ ಕಾಲದಲ್ಲಿ ವಾಸಿಸಿದರೆಂದು ಇಲ್ಲಿ ಅರ್ಥೈಸಬಹುದು.
ಶ್ರೀ ಶಂಕರರ ವೈಶೇಷಿತಗಳು (ಮಠಗಳ ಸ್ಥಾಪನೆ) ಶ್ರೀ ಶಂಕರರ ಪೀಠಗಳ ಸ್ಥಾಪನೆಯ ರೀತಿಯು ವಿಶಿಷ್ಟವಾಗಿತ್ತು. ಶಾಸ್ತ್ರ ಬೋಧೆ ಮತ್ತು ಧಾರ್ಮಿಕ ಮಾರ್ಗದರ್ಶನಕ್ಕಾಗಿ, ಆಚಾರ್ಯರು ಮಠಗಳನ್ನು ಸ್ಥಾಪಿಸಿದರು. ಶ್ರೀ ಕಾರ್ಯಕ್ಕಾಗಿ ಅವರು ನಿರ್ದಿಷ್ಟ ಸ್ಥಳಗಳನ್ನು ನಿರ್ಧರಿಸಿದರು.
ಅದರಂತೆ ಜಗನಾಥ (ಪುರಿ), ದ್ವಾರಕಾ (ಗುಜರಾಥ) ಹಾಗೂ ಬದ್ರಿ (ಉತ್ತರ ಪ್ರದೇಶ)ಗಳಲ್ಲಿ ಪೀಠಗಳನ್ನು ಸ್ಥಾಪಿಸಿ, ನಾಲ್ಕನೆಯ ಪೀಠವನ್ನು ರಾಮೇಶ್ವರದಲ್ಲಿ ಸ್ಥಾಪಿಸಲು ದಕ್ಷಿಣದ ಕಡೆಗೆ ಹೊರಟರು.
ಆದರೆ, ಶೃಂಗೇರಿಯ ತುಂಗಾ ನದಿಯ ದಡದಲ್ಲಿ ಶ್ರೀ ಸರಸ್ವತಿಯು ತಮ್ಮನ್ನು ಹಿಂಬಾಲಿಸಿ ಬರುತ್ತಿದ್ದಾಳೆಯೇ  ಎಂಬುದನ್ನು ದೃಢಪಡಿಸಲು ಹಿಂದಿರುಗಿ ನೋಡಲು ಅದರ ನೆಪವಾಗಿ ದೇವಿಯು ಅಲ್ಲಿಯೇ ನಿಂತುಬಿಟ್ಟಳಂತೆ. ದೇವಿಯ ಇಂಗಿತ ತಿಳಿದ ಆಚಾರ್ಯರು ಅಲ್ಲಿಯೇ ಪೀಠವನ್ನು ಸ್ಥಾಪಿಸಿದರು.
ಹೀಗೆ ಜಗನ್ನಾಥ ಪುರಿ, ಶ್ರೀಕೃಷ್ಣನ ದ್ವಾರಕಾ ಹಾಗೂ ಬದರಿ (ನಾರಾಯಣ) ಹೀಗೆ ಮೂರು ತಮ್ಮ ಸಂಕಲ್ಪದಂತೆ ಮಾಡಿದ್ದು. ಆದರೆ ಶೃಂಗೇರಿಯದು ದೇವೀ ಸಂಕಲ್ಪಕ್ಕೆ ಅನುಸಾರವಾಗಿ ಸ್ಥಾಪಿತವಾಯಿತು. ಶಂಕರರು ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸುವ ಮೂಲಕ ತಮ್ಮ ಲೋಕಸಂಗ್ರಹ ಕಾರ್ಯವನ್ನು ನೆರವೇರಿಸಿದರು. ಈ ಪೀಠಗಳು ನಾಲ್ಕು ವೇದಗಳನ್ನು ಪ್ರತಿನಿಧಿಸುತ್ತಿವೆ. ಅವುಗಳ ಪೀಠಾಧೀಶರು ಆಯಾ ದಿಕ್ಕುಗಳಿಗೆ ಸೇರಿದವರು. ಶಾಸ್ತ್ರಜ್ಞರು, ಲೋಕಜ್ಞರು ಬ್ರಹ್ಮಜ್ಞರು ಪರಿವ್ರಾಜಕ ಸನ್ಯಾಸಿಗಳಾಗಿದ್ದರು. ೧) ಶ್ರೀ ಶಂಕರಾಚಾರ್ಯರ ಪ್ರಥಮ ಶಿಷ್ಯರಾದ ಪದ್ಮಪಾದರು. ೨) ಶ್ರೀ ಸುರೇಶಾಚಾರ್ಯರು, ೩) ಶ್ರೀ ಹಸ್ತಮಲಕರು ಮತ್ತು ೪) ತೋಟಕಾಚಾರ್ಯರು ಈ ಅಧ್ವರ್ಯುಗಳಿಂದ ವೈದಿಕಧರ್ಮ ಪೋಷಣೆಗೆ ಶಾಶ್ವತ ಏರ್ಪಾಡು ಮಾಡಿದರು.
ಖಗೋಲ ಶಾಸ್ತ್ರಜ್ಞ ಭಾಸ್ಕರಾಚಾರ್ಯರು ಹಾಗೂ ಶ್ರೀ ಶಂಕರರೂ ವೈಚಾರಿಕವಾಗಿ ಸ್ಪಂದಿಸಿದವರು ಸ್ವಲ್ಪ ಸಮಯದ ಪೂರ್ವದಲ್ಲಿ ಖಗೋಲ ಸಂಶೋಧನೆಗೈದ ಭಾಸ್ಕರಾಚಾರ್ಯರನ್ನು ಆದಿಶಂಕರರು ಸ್ಮರಿಸುತ್ತಾರೆ. ಆ ಕೃತಿಗಳು ಶ್ರೀ ಶಂಕರಾಚಾರ್ಯರ ಬ್ರಹ್ಮಸೂತ್ರ ಹಾಗೂ ಧರ್ಮಕೀರ್ತಿಗಳಾಗಿವೆ.
ಸೌಂದರ್ಯ ಲಹರಿ ಕೃತಿ ಕೂಡ ಆದಿಶಂಕರರ ಯುವ ಬದುಕಿನ ಸೌಂದರ್ಯದ ಚಿತ್ರಣವಾಗಿದ್ದು, ಅದು ಅವರ ಯುವ ಜೀವನದ ಕಾಲಿಕವಾಗಿರಲು (ಸಾಕು ೬೫೭-೫೮) ಅವರು ಭರ್ಜರಿ ಯುವಕರಾಗಿದ್ದಾಗ ಇಪ್ಪತ್ತೈದರ ಯುವಕರಾಗಿದ್ದಾಗ (೬೩೨+೨೫=೬೫೭) ಮೃತ್ಯು (೬೬೪) ಮುಂದೆ ೭ ವರ್ಷಗಳ ಅಂತ್ಯದಲ್ಲಿ ಅವರು ಅಸ್ತಂಗತರಾದುದು (ಜನನ ೬೩೨-ಯುವ ೨೫+೭=ಅಂತ್ಯ ಕ್ರಿ.ಶ. ೬೬೪) ಜನನ ಅಂತ್ಯ ಮೂವತ್ತೆರಡು ವರ್ಷ.
ನಮ್ಮ ಸಮಕಾಲೀನ ಕಲಾ ಇತಿಹಾಸಕಾರ (ಂಡಿಣ hisಣoಡಿiಚಿಟಿ) ಶ್ರೀ ಎಸ್.ಕೆ. ರಾಮಚಂದ್ರರಾಯರು ತಮ್ಮ ಕೃತಿಯಾದ ಶಂಕರವಾಣಿಯಲ್ಲಿ, ಬಹಳಷ್ಟು ಆಕರಗಳನ್ನು ಹುಡುಕಿ, ಆದಿಶಂಕರರ ಕಾಲ ಕ್ರಿ.ಶ.೬೩೨ರಿಂದ ಕ್ರಿ.ಶ.೬೬೪ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಶ್ರೀ ಶಂಕರರು ಬದುಕಿದುದು ಕೇವಲ ೩೨ ವರುಷಗಳು ಎಂದು ಹೇಳುತ್ತದೆ.
ಸುಬ್ಬರಾಯರು, ಯಳ್ಳೂರ ಬಳ್ಳಿ, ಮೈಸೂರು ಸಂಸ್ಥಾನ, ಇವರು ತಮ್ಮ ಬದುಕಿನ ಉತ್ತರಾರ್ಧದಲ್ಲಿ ಶ್ರೀ ಸಾತಿಕಾನಂದ ಸ್ವಾಮಿಗಳಾದರು, ಹಾಗೂ ಸುಮಾರು ೨೦೦ ಇಂಗ್ಲಿಷ್, ಕನ್ನಡ ಲೇಖನಗಳನ್ನು ಆಧ್ಯಾತ್ಮಿಕ ಸಂಶೋಧನ ಪಾರ್ಶ್ವದಲ್ಲಿ ಕರೆದರು. ಅವರು ಶ್ರೀ ಆದಿಶಂಕರರನ್ನು ಕ್ರಿ.ಶ.೬೮೦ ರಿಂದ ೭೧೨ರವರೆಗೆ ಮೂವತ್ತೆರಡು ವರುಷ ವ್ಯಾಪಿಸುತ್ತದೆ.
ಇನ್ನೋರ್ವ ನಮ್ಮ ಸಮಕಾಲೀನ ಆಧ್ಯಾತ್ಮ ಚಿಂತಕರು, ವೇದ-ಶಾಸ್ತ್ರ-ಪುರಾಣ, ಭಾಷ್ಯ ಭಾಷೆಗಳ ಪರಿಣಿತರು ಆದ ಪಾವಗಡದ ಡಾ. ಪ್ರಕಾಶ್‌ರಾವ್ ಅವರು ಆದಿಶಂಕರರನ್ನು ಕ್ರಿ.ಶ.೬೩೨ ರಿಂದ ೬೬೪ರ ಕಾಲಘಟ್ಟಕ್ಕೆ ನಿಶ್ಚಿತವಾಗಿ ಜೋಡಿಸುತ್ತಾರೆ (ದೂ.ದ. ವ್ಯಾಖ್ಯಾನದಲ್ಲಿ) ಅವರ ಕಾಲದ ಬಗ್ಗೆ ಅತ್ತಿಂದಿತ್ತ ಇತ್ತಿಂದತ್ತ ತೂರಾಡುವುದು ಬೇಡ.
ತಾತ್ಪರ್ಯ
ಶ್ರೀ ಶಂಕರರು ತತ್ವದರ್ಶಿಗಳು, ಜ್ಞಾನಿಗಳು ಕೇವಲ ಶಾಸ್ತ್ರವಿದರಷ್ಟೇ ಆಗಿರದೆ, ಆತ್ಮವಿದರೂ ಆದ ಗುರುಗಳಾಗಿದ್ದರು. ಜ್ಞಾನಾರ್ಜನೆಯಲ್ಲಿ ಮತ್ತು ಜ್ಞಾನೋಪದೇಶದಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗದೆ, ಲೋಕ ಸಂಗ್ರಹ ಕಾರ್ಯದಲ್ಲೂ ತೊಡಗಿಸಿಕೊಂಡ ಲೋಕ ಹಿತೈಷಿಗಳಾಗಿದ್ದಾರೆ. ತಾತ್ವಿಕ ಸಿದ್ಧಾಂತವೊಂದರ ಪ್ರತಿಪಾದನೆಯ ಜೊತೆಗೆ ಸದಾಚಾರದ ಅನುಷ್ಠಾನಕ್ಕೂ ಯೋಗ್ಯ ಮಾರ್ಗದರ್ಶನ ನೀಡಿದರು. (ಪ್ರೊ. ನಂಜನಗೂಡು ಬಾಲಸುಬ್ರಹ್ಮಣ್ಯ).
ವೈಯಕ್ತಿಕ ಸಿದ್ಧಿಯಿಂದ ತೃಪ್ತರಾಗದೆ, ಸಾಮಾಜಿಕ ಸಜ್ಜೀವನದ ಮೇಲ್ವಿಚಾರಣೆಗೆ ಸೂಕ್ತವಾದ ವ್ಯವಸ್ಥೆಯನ್ನು ಕಲ್ಪಿಸಿದರು. ತಮ್ಮ ಸ್ವಂತ ಆಚಾರ ವಿಚಾರಗಳ ನಡೆ-ನುಡಿಗಳ ಮೂಲಕ ಭಾರತದ ಆಧ್ಯಾತ್ಮಿಕ ಸಂಸ್ಕೃತಿಯ ಆದರ್ಶಮೂರ್ತಿಗಳಾಗಿ ಆಚಾರ್ಯ ಪುರುಷರೆನಿಸಿದರು ಶ್ರೀ ಶಂಕರರು.

ಆಧಾರಸೂಚಿ
೧. ಡಾ. ಎಂ.ಎನ್. ಜೋಶಿ, ಕ.ವಿ.ವಿ., ಧಾರವಾಡ, ಅದ್ವೈತಚಿಂತನ, ಆಗಸ್ಟ್ ೨೦೧೨.
೨. ಡಾ. ಆರ್.ಜಿ. ಭಂಡಾರಕರ್, ಧರ್ಮಶಾಸ್ತ್ರ.
೩. ಡಾ. ಎಸ್. ರಾಧಾಕೃಷ್ಣನ್, ಖಿhe hiಟಿಜu ತಿಚಿಥಿ oಜಿ ಟiಜಿe.
೪. ಡಾ. ಶಂ.ಬಾ. ಜೋಶಿ, ಋಗ್ವೇದ ರಹಸ್ಯ.
೫. ವಿದ್ವಾನ್ ಆರ್.ಎಸ್. ಪಂಚಮುಖಿ, ವೇದೋಪನಿಷತ್ತುಗಳ ಅಧ್ಯಯನ, ಕ.ಇ. ಮಂಡಳ, ಧಾರವಾಡ.
೬. ಪ್ರೊ. ನೀಲಕಂಠಶಾಸ್ತ್ರಿ, . ಚಿಜvಚಿಟಿಛಿeಜ ಊisಣoಡಿಥಿ oಜಿ Iಟಿಜiಚಿ ಂಟಿ. ,.
೭. ಕೆ.ಎಂ. ಮುನ್ಸಿ, ಊiಟಿಜuism, ಃhಚಿಡಿಚಿಣiಥಿಚಿ ಗಿiಜಥಿಚಿ ಃhಚಿvಚಿಟಿ, ಃombಚಿಥಿ
೮. ಲೇಖಕನ ಸ್ಥಳ ಸಮೀಕ್ಷೆ, ಶೃಂಗೇರಿ, ಸೋಮನಾಥಪುರಿ (ಕೇದಾರನಾಥ ಇಲ್ಲ).
೯. ಪ್ರೊ. ನಂಜನಗೂಡು ಬಾಲ ಸುಬ್ರಹ್ಮಣ್ಯ, ಲೋಕ ಹಿತೈಷಿ ಶ್ರೀ ಶಂಕರರು, ಕೆ.ಆರ್. ಸಾಗರ, ಮೈಸೂರು.
೧೦. ಬ್ರಹ್ಮಶ್ರೀ ರಾಮಚಂದ್ರ ಶಾಸ್ತ್ರಿ, ಸೂರಿ, ಕರ್ಕಿ, ಅದ್ವೈತ ತತ್ವಪ್ರಕಾಶಿಕಾ, ಧಾರವಾಡ.
೧೧. ಡಾ. ಎ.ಕೆ. ಶಾಸ್ತ್ರಿ, ಶೃಂಗೇರಿ ಕಡತಗಳು-ಅಧ್ಯಯನ.
೧೨.ಸಿಲ್ವರ್ ಆರ್ಚರ್ಡ್, ಧಾರವಾಡ-೫೮೦೦೦೧.








Saturday, May 3, 2014

ವಿದ್ಯಾರಣ್ಯರ ಉಲ್ಲೇಖ ಇರುವ ಒಂದು ಶಿಲಾಶಾಸನ

ವಿದ್ಯಾರಣ್ಯರ ಉಲ್ಲೇಖ ಇರುವ ಒಂದು ಪ್ರಾಚೀನ ಶಿಲಾಶಾಸನ

ಡಾ. ಪಿ.ಎನ್. ನರಸಿಂಹಮೂರ್ತಿ

ವಿಜಯನಗರ ಸ್ಥಾಪನೆಯ ವಿಚಾರದಲ್ಲಿ ವಿದ್ಯಾರಣ್ಯ ಶ್ರೀಪಾದಂಗಳ ಪಾತ್ರದ ಬಗ್ಗೆ ಬಹಳ ಚರ್ಚೆಗಳಾಗಿವೆ. ಈ ಚರ್ಚೆಗಳು ನಾನಾ ಮನೋಭಿಲಾಷೆಯ ಸ್ವರೂಪದವುಗಳಾಗಿರುವುದು ಎಲ್ಲರಿಗೂ ತಿಳಿದ ವಿಷಯ. ಈ ಚರ್ಚೆಗಳಿಗೆ ಗ್ರಾಸವಾಗಿದ್ದುದು ಆ ಕಾಲಕ್ಕೆ ಸಂಬಂಧಿಸಿದಂತೆ ಸರಿಯಾದ ಪುರಾವೆಗಳು ಅಲಭ್ಯವಾಗಿದ್ದುದು. ಆದರೆ ದೊರೆತಿದ್ದ ಕೆಲವು ಆಧಾರಗಳನ್ನು ಕೂಟ ಎಂದು ಕಡೆಗಾಣಿಸಿದ್ದೂ ಇದೆ. ಇವುಗಳಿಗೆ ಉತ್ತರ ಎಂಬಂತೆ ದೊರೆತಿದೆ ಹಾಲ್ಕಾವಟಗಿ ತಾಮ್ರಶಾಸನ. ಬಹುತೇಕ ಒಂದೇ ರೀತಿಯಲ್ಲಿ ವಿದ್ಯಾರಣ್ಯರನ್ನು ಈ ಶಾಸನಗಳು ಚಿತ್ರಿಸಿವೆ.  ಈ ತಾಮ್ರಶಾಸನ ಒಂದು ರೀತಿಯಲ್ಲಿ ಎಲ್ಲ ವಾದಗಳಿಗೂ ತೆರೆ ಎಳೆಯುವಂತಿದ್ದರೂ ಅದಕ್ಕೆ ಬಲ ಕೊಡಬಲ್ಲ ಇತರೇ ಮೂಲದ ಆಧಾರದ ಕೊರತೆ ಇತ್ತು. ಆ ಕಾಲದ ಶಿಲಾಶಾಸನಗಳಾವುವೂ ವಿದ್ಯಾರಣ್ಯರನ್ನು ಉಲ್ಲೇಖಿಸಿರಲಿಲ್ಲ ಅಥವಾ ಅವರನ್ನು ಹೆಸರಿಸುವ ಪ್ರಾಚೀನ ಶಿಲಾಶಾಸನ ಯಾವುದೂ ದೊರೆತಿರಲಿಲ್ಲ. ಈಗ ಆ ಕೊರತೆ ನೀಗಿದೆ. ವಿದ್ಯಾರಣ್ಯರನ್ನು `ವಿದ್ಯಾರಂಣ್ಯ ಶ್ರೀಪಾದಂಗಳು’ ಎಂದೇ ಹೆಸರಿಸಿ ಅವರಿಗೆ ಒಂದನೆಯ ಬುಕ್ಕರಾಯನು ಭೂದಾನ ಮಾಡಿದ ವಿಷಯವನ್ನು ತಿಳಿಸುವ ಶಿಲಾಶಾಸನವೊಂದು ಮಂಗಳೂರು ಬಳಿಯ ನೀರುಮಾರ್ಗ ಗ್ರಾಮದಲ್ಲಿ ದೊರೆತಿದೆ. ಇದರ ಕಾಲ ಕ್ರಿ.ಶ. ಸುಮಾರು 1353.  ಪ್ರಾಯಶಃ ವಿದ್ಯಾರಣ್ಯರನ್ನು ಹೆಸರಿಸುವ ಇಷ್ಟು ಪ್ರಾಚೀನವಾದ ಶಿಲಾಶಾಸನ ಇದೊಂದೆ ಆಗಿದೆ. 76 ಮುಡಿ ಬೀಜ ಬಿತ್ತುವ ವಿಸ್ತಾರವಾದ ಭೂಮಿಯನ್ನು ಒಂದನೆಯ ಬುಕ್ಕರಾಯನಿಂದ ಪಡೆದು ಅದರ ಉತ್ಪತ್ತಿಯಿಂದ ಅಲ್ಲಿಯ ದೇವಾಲಯದಲ್ಲಿ ಪೂಜಾಕಾರ್ಯಗಳು ಮತ್ತು ಅದರ ಛತ್ರದಲ್ಲಿ ಊಟದ ವ್ಯವಸ್ಥೆ ತಡೆಯಿಲ್ಲದೆ ನಿತ್ಯ ನಡೆಯುವಂತೆ ಮಾಡಿದರು ವಿದ್ಯಾರಣ್ಯ ಶ್ರೀಪಾದಂಗಳು. ನೀರುಮಾರ್ಗದ ಈ ಶಿಲಾಶಾಸನ ವಿಜಯನಗರದ ಸ್ಥಾಪಕ ಅರಸರಿಗೂ ಮತ್ತು ವಿದ್ಯಾರಣ್ಯರಿಗೂ ಸಂಬಂಧವಿದ್ದುದನ್ನು ಪರೋಕ್ಷವಾಗಿ ತಿಳಿಸುತ್ತದೆ. ಇದರಿಂದ ವಿದ್ಯಾರಣ್ಯರೆಂಬ ಒಬ್ಬ ಮುನಿ ಇದ್ದರೆ ಮತ್ತು ಅವರಿಗೂ ವಿಜಯನಗರಕ್ಕೂ ಸಂಬಂಧವಿತ್ತೇ ಎಂಬ ಪ್ರಶ್ನೆಗಳು ಇನ್ನು ಅಪ್ರಸ್ತುತವಾಗುತ್ತವೆ.
ಶಾಸನ ಪತ್ತೆಯಾದ ರೀತಿ: ನೀರುಮಾರ್ಗದ ಕ್ಷೇತ್ರಕಾರ್ಯ ಮಾಡುವ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಬೆಳಕಿಗೆ ಬಂದ ದಾಖಲೆ ಇದು. ಬಾವಿಕಟ್ಟೆಯ ನೆಲಕ್ಕೆ ಹಾಕಲಾಗಿದ್ದ ಈ ಕಲ್ಲು ಕಾಲು ತೊಳೆಯಲು ಅಲ್ಲಿಗೆ ಹೋದಾಗ ಗೋಚರಕ್ಕೆ ಬಂತು.  ಮನೆಯ ಯಜಮಾನರಿಗೆ (ಶಾಲಾ ಅಧ್ಯಾಪಕರು) ಈ ಶಾಸನದ ಪ್ರಾಮುಖ್ಯತೆಯ ಬಗ್ಗೆ ಅಲ್ಲೇ ತಿಳಿಸಿ ಅದನ್ನು ಸರಿಯಾದ ರೀತಿಯಲ್ಲಿ ರಕ್ಷಿಸಬೇಕೆಂದು ಕೇಳಿಕೊಂಡೆ. ಕೆಲ ವರ್ಷಗಳ ನಂತರ ಅದೇ ಗ್ರಾಮಕ್ಕೆ ಹೋಗಬೇಕಾದ ಸಂದರ್ಭ ಬಂದಾಗ ಈ ಶಾಸನಕಲ್ಲನ್ನು ನೋಡಲು ಹೋದೆ. ನಾನು ಮೊದಲು ನೋಡಿದ ಸ್ಥಳದಲ್ಲೇ ಬಟ್ಟೆ ಒಗೆಯುವ ಕಲ್ಲಾಗಿಯೇ ಈ ಶಾಸನ ಕಲ್ಲು ಇತ್ತು. ಅದರ ಸ್ಥಿತಿ ನೋಡಿ ಖೇದವಾಯಿತು. ಶಿಕ್ಷಕರಾದರೂ ದಾಖಲೆಗಳನ್ನು, ಸ್ಮಾರಕಗಳನ್ನೂ ಸರಿಯಾದ ರೀತಿಯಲ್ಲಿ ರಕ್ಷಿಸಬೇಕೆಂಬ ಮನೋಭಾವ ಅವರಲ್ಲಿ ಬೆಳೆಯದಿದ್ದುದು ಬೇಸರ ಹುಟ್ಟಿಸುವ ಸಂಗತಿಯಾಗಿತ್ತು. ಈ ಶಾಸನದ ಪಡಿಯಚ್ಚನ್ನು ತೆಗೆದುಕೊಳ್ಳುವುದಕ್ಕೆ ನನ್ನೊಂದಿಗೆ ಸಹಕರಿಸಿದವರು ಇವರೇ! ಅದಕ್ಕಾಗಿ ಇವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಕಲ್ಲಿನಲ್ಲಿ ಬರಹದ ಸ್ಥಿತಿ: ಬಟ್ಟೆ ಒಗೆಯುವ ಕಲ್ಲಾಗೇ ಬಹಳ ಕಾಲದಿಂದ ಉಪಯೋಗಿಸುತ್ತಾ ಇರುವುದರಿಂದ ಇದರಲ್ಲಿನ ಬರಹ ಬಹಳ ಮಾಸಿದೆ. ಸುಮಾರು 18 ಘಿ 23 ಇಂಚು ಅಳತೆಯ ಈ ಕಲ್ಲಿನ ಬಲದ ಮೂಲೆ ಸ್ವಲ್ಪ ತುಂಡಾಗಿದೆ. ಇದರಿಂದ ಕೊನೆಯ ಎರಡು ಸಾಲಿನ ಕೆಲವು ಅಕ್ಷರಗಳು ನಷ್ಟವಾಗಿವೆ. ಕಲ್ಲಿನ ಮೇಲ್ಭಾಗ ವೃತ್ತಾಕಾರದಲ್ಲಿದ್ದು ಇದರ ಪರಿಧಿಯಲ್ಲಿ ಒಂದು ಸಾಲು ಬರಹ ಇದೆ. ಇದರ ಕೆಳಗೆ ಸರಳ ರೇಖೆಯಲ್ಲಿ ಒಂದು ಸಾಲು ಬರಹ ಇದೆ.  ಇದರ ಕೆಳಗೆ ಹದಿಮೂರು ಸಾಲು ಬರಹ ಇದೆ. ಒಟ್ಟು ಹದಿನೈದು ಸಾಲುಗಳು.
ಶಾಸನ ಪಾಠ :
1 * * * ವಿಜೆಯ * ಮ * * * * * *
2 * (ಹಡಪ) * * * ಡೆ * * * * *
3 ಸ್ವಸ್ತಿ ಶ್ರೀ ವೀರ ಬುಕ್ಕರಾಯನ ನಿರೂಪದಿಂದ ಪಂ-
4 ಡರಿ ದೇವ(ರು) ಗಳು ನೀರುಮಾರ್ಗದೊಳಗೆ (ಕಟ್ಟಿ)ದ ಮಠ
5 ಛತ್ರದ (ಧರ್ಮದ) ವೋರೆಯನು * * (ಸೋಮ) * * * * *
6 * ನಿವೇದ್ಯ ಯತಿಗಳ (ಭಿಕ್ಷೆ) * * ಶ್ರೀ ವಿದ್ಯಾರಂ-
7 ಣ್ಯ ಶ್ರೀ ಪದ(ಂ)ಗಳಿಗೆ ಧಾರಾ ಪೂರ್ವಕವಾಗಿ
8 ಬಿತ್ತುವಾನೆ * * ಮ ಮೂಡೆ 76 ಯಿದಕುಳ್ಳ (ವತ್ತಾರ)
9 ಕುರುಂಭೆ £ಡಿಲು ಚತು ಸೀಮೆ ಸಹಿತ ಕೊಟ-
10 ರು ಮಲ್ಲಿಯ ವೊಡೆತನ ಶ್ರೀ ಪದಂಗಳಿಗೆ ಅ-
11 ಲ್ಲದೆ ಮತಾರಿಗೆ ಸಲ್ಲದು [|*] ಆರೊಬ್ಬರು ತಪ್ಪಿ-
12 ದಾದಡೆ ಅರ (ಸಿಂಗೆ ಕ) ಗ 2000 ತಪ್ಪಿದ
13 ಅಡಕ [|*] ಈ ಧಮ್ರ್ಮಕೆ ವೊಕ್ರವಾದಡೆ
14 1000 ಕವಿಲೆನೂ ಕೊಂದ ದೋ (ಷ) * *
15 ಗಳ ಮಹಾ ಶ್ರೀ ಶ್ರೀ ಶ್ರೀ * * * * * [||*]
ಇದರ ಅರ್ಥ: (ಒಂದನೆಯ) ಬುಕ್ಕರಾಯನ ನಿರೂಪದಿಂದ ಪಂಡರಿದೇವನು ನೀರುಮಾರ್ಗದಲ್ಲಿ ನಿರ್ಮಿಸಿದ ಮಠ ಮತ್ತು ಛತ್ರ, ಇಲ್ಲಿ ನಡೆಯುವ (ದೇವರ ಪೂಜೆ) ನೈವೇದ್ಯ ಮತ್ತು ಯತಿಗಳ ಭಿಕ್ಷೆಗಾಗಿ 76 ಮುಡಿ (ಬೀಜ) ಬಿತ್ತುವ (ಅಷ್ಟು ವಿಸ್ತಾರವಾದ) ಭೂಮಿಯನ್ನು ಅದಕ್ಕಿದ್ದ ಚತುಃಸೀಮೆ ಸಹಿತ ಶ್ರೀ ವಿದ್ಯಾರಂಣ್ಯ ಶ್ರೀಪಾದಂಗಳಿಗೆ ಧಾರೆಯೆರದು ಕೊಟ್ಟ. ಇದರ ಮೇಲಿನ ಒಡೆತನ ಶ್ರೀಪಾದಂಗಳಿಗಲ್ಲದೆ ಬೇರಾರಿಗೂ ಸಲ್ಲದು ಎಂದು ಕಟ್ಟು ಮಾಡಿದ. ಇದಕ್ಕೆ ತಪ್ಪಿದರೆ ಅರಸನಿಗೆ (ದಂಡ ಕ.) ಗದ್ಯಾಣ 2000 (ತೆರುವ) ಅಡಕ. ಈ ಧರ್ಮಕ್ಕೆ ಅಡ್ಡಿ ಬಂದರೆ 1000 ಕವಿಲೆಯನು ಕೊಂದ ದೋಷ. ಮಂಗಳವಾಗಲಿ ಶ್ರೀ.
ಶಾಸನದ ಕಾಲ: ಶಾಸನದಲ್ಲಿ ಅಕ್ಷರಗಳು ಸ್ವಲ್ಪ ಮಾಸಿರುವುದರಿಂದ ಇಲ್ಲಿ ಇರಬಹುದಾದ ಕಾಲ ನಿರ್ದೇಶನ ಸರಿಯಾಗಿ ಅರ್ಥವಾಗುವುದಿಲ್ಲ. ಮೊದಲನೆಯ ಸಾಲಿನಲ್ಲಿ ‘ವಿಜೆಯ’ ಎಂಬ ಅಕ್ಷರಗಳನ್ನು ಗುರುತಿಸಬಹುದಾದರೆ ಎರಡನೆಯ ಸಾಲಿನಲ್ಲಿ ಅಸ್ಪಷ್ಟವಾಗಿ `ಹಡಪ’ ಅಕ್ಷರಗಳನ್ನು ಗುರುತಿಸಬಹುದು. ಇಲ್ಲಿ `ವಿಜೆಯ’ ಏನನ್ನು ಸೂಚಿಸುತ್ತದೆ ಎಂಬುದನ್ನು ಸುಲಭವಾಗಿ ಹೇಳಲು ಆಗುವುದಿಲ್ಲ. ಆದರೆ `ಹಡಪ’ ಎನ್ನುವುದನ್ನು ಅರ್ಥೈಸಬಹುದು. ಒಂದನೆಯ ಹರಿಹರನ ಆಳ್ವಿಕೆ ಕಾಲದಲ್ಲಿ ಹಡಪದ ಗೌತರಸ ಎಂಬಾತ ಮಂಗಳೂರು ರಾಜ್ಯದ ರಾಜ್ಯಪಾಲನಾಗಿ ಕಾರ್ಯ ನಿರ್ವಹಿಸಿದ್ದ. ಈ ವಿಷಯವನ್ನು ತಿಳಿಸುವ ಒಂದು ದಾಖಲೆ ಕಾರ್ಕಳ ತಾಲೂಕಿನಲ್ಲಿದೆ. ಈ ಶಿಲಾಶಾಸನ ಕಾನ್ತಾವರದ ಕಾನ್ತೇಶ್ವರ ದೇವಾಲಯದ ಪ್ರಾಕಾರದಲ್ಲಿದೆ (ಎಸ್.ಐ.ಐ. ಸಂ.7, ನಂ.231). ಇದರ ತೇದಿ ಸರ್ವಧಾರಿ ಸಂವತ್ಸರ, ವೃಷಭ 4, ಮಂಗಳವಾರ. ಇಲ್ಲಿ ಶಕವರ್ಷದ ಉಲ್ಲೇಖ ಇಲ್ಲ. ಪೂರಕ ಮಾಹಿತಿಗಳ ಆಧಾರದಲ್ಲಿ ಡಾ. ಕೆ.ವಿ. ರಮೇಶ ಅವರು ಇದರ ಕಾಲವನ್ನು (ಶಕ 1270) ಕ್ರಿ.ಶ. 1348 ಏಪ್ರಿಲ್ 29 ಎಂದು ನಿಗದಿಪಡಿಸಿದ್ದಾರೆ (ನೋಡಿ: “ಎ ಹಿಸ್ಟರಿ ಆ¥sóï ಸೌತ್ ಕೆನರ”, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ (1970) ಪು. 151). ಈ ಶಾಸನದಲ್ಲಿ ಗೌತರಸನನ್ನು `ಪ್ರಧಾನಂ’ ಎಂದು ಉಲ್ಲೇಖಿಸಲಾಗಿದೆ. ಅಂದರೆ ಒಂದನೆಯ ಹರಿಹರನ ಪ್ರಧಾನಿಯಾಗಿದ್ದ ಈತ ಮಂಗಳೂರಿನಂತಹ ಆಯಕಟ್ಟಿನ ರಾಜ್ಯಕ್ಕೆ ಆಡಳಿತಾಧಿಕಾರಿಯಾಗಿ (ರಾಜ್ಯಪಾಲನಾಗಿ) ನಿಯುಕ್ತನಾಗಿದ್ದ. ಇದು ರಾಜನೊಂದಿಗೆ ಈತನಿಗಿದ್ದ ನಿಕಟತೆಯನ್ನು ಪರೋಕ್ಷವಾಗಿ ತಿಳಿಸುತ್ತದೆ. ಈ ದೃಷ್ಟಿಯಲ್ಲಿ ನೋಡಿದಾಗ `ವಿಜೆಯ’ವನ್ನು ಸಂವತ್ಸರವಾಗಿ ತೆಗೆದುಕೊಂಡರೆ ಅದು ಶಕ 1275 ಆಗುತ್ತದೆ.  ಇದು ಕ್ರಿ.ಶ.1353-54ಕ್ಕೆ ಸರಿಹೊಂದುತ್ತದೆ.
ಪ್ರಾಯಶಃ ಹಡಪದ ಗೌತರಸನು ಮಂಗಳೂರು ರಾಜ್ಯದ ರಾಜ್ಯಪಾಲನಾಗಿದ್ದಾಗ ಪಂಡರಿದೇವನು ಸ್ವಲ್ಪ ಸಮಯ ಇಲ್ಲಿದ್ದು ಬುಕ್ಕರಾಯನ ಆಣತಿಯಂತೆ ನೀರುಮಾರ್ಗದಲ್ಲಿ ಒಂದು ಮಠ ಮತ್ತು ಛತ್ರಗಳನ್ನು ನಿರ್ಮಿಸಿ ಅಲ್ಲಿಯ ದೇವರ ಪೂಜೆ, ನೈವೇದ್ಯಾದಿಗಳಿಗೆ ಮತ್ತು ಯತಿಗಳ ಭಿಕ್ಷೆಗಾಗಿ ವಿಶಾಲವಾದ ಭೂಮಿಯನ್ನು ಶ್ರೀ ವಿದ್ಯಾರಂಣ್ಯ ಶ್ರೀಪಾದಂಗಳಿಗೆ ಧಾರಾಪೂರ್ವಕವಾಗಿ ಕೊಟ್ಟ. ನೀರುಮಾರ್ಗದ ಈ ಮಠದಲ್ಲಿ ಯತಿಗಳು ಇದ್ದರು.  ಇವರು ಶೃಂಗೇರಿ ಪರಂಪರೆಯ ಅದ್ವೈತ ಸಂಪ್ರದಾಯದವರು. ಇವರ ಭಿಕ್ಷಾಕಾರ್ಯ ನಿರಂತರ ನಡೆಯುವ ಸಲುವಾಗಿಯೂ ಭೂಮಿ ದಾನ ಮಾಡಿರುವುದು. ಇದನ್ನು ಸ್ವೀಕರಿಸಿದವರು (ಶೃಂಗೇರಿಯ) ಗುರುಗಳಾದ ವಿದ್ಯಾರಂಣ್ಯ ಶ್ರೀಪಾದಂಗಳು. ಇದೊಂದು ಮುಖ್ಯವಾದ ವಿಷಯ.
ಒಂದನೆಯ ಬುಕ್ಕರಾಯನು ಶೃಂಗೇರಿ ಮಠಕ್ಕೆ ಅದರಲ್ಲೂ ಮುಖ್ಯವಾಗಿ ವಿದ್ಯಾರಂಣ್ಯ ಶ್ರೀಪಾದಂಗಳಿಗೆ ಮಂಗಳೂರು ಭಾಗದಲ್ಲಿ ಹಲವಾರು ದಾನಗಳನ್ನು ಮಾಡಿದ ಉಲ್ಲೇಖ ಇವನ ಶಾಸನಗಳಲ್ಲಿವೆ. ಇವೆಲ್ಲವೂ ಶಿಲಾಶಾಸನಗಳು. ಇಲ್ಲಿ ಒಂದನ್ನು ಉದಾಹರಿಸುವುದು ಸೂಕ್ತ. ಕ್ರಿ.ಶ.1375 ಅಕ್ಟೊಬರ್ 25ಕ್ಕೆ ಸೇರುವ ಈ ಶಾಸನ ಕುಡುಪು ದೇವಾಲಯದಲ್ಲಿ ದೊರೆತುದು (ಎಸ್.ಐ.ಐ. ಸಂ.27, ಸಂ.56).
‘ಸಿಂಗೇರಿಯ ಶ್ರೀ ವಿದ್ಯಾರಂಣ್ಯ ಶ್ರೀ ಪಾದಂಗಳಿಗೆ’ ಸ್ವತಃ ಬುಕ್ಕರಾಯನೇ ಕೊಡಮಾಡಿದ ದಾನವನ್ನು ಈ ಕುಡುಪು ಶಾಸನ ದಾಖಲಿಸಿದೆ. ಶಾಸನದಲ್ಲಿ ಕುಡುಪು ಮತ್ತು ಮಾಲೂರು ಎಂಬ ಎರಡು ಗ್ರಾಮಗಳನ್ನು, 240 ಕಾಟಿ ಗದ್ಯಾಣಗಳನ್ನು ಮತ್ತು ವಾರ್ಷಿಕ 420 ಮುಡಿ ಉತ್ಪತ್ತಿಯ ಗದ್ದೆಗಳನ್ನು ಶ್ರಿ ವಿದ್ಯಾರಂಣ್ಯರಿಗೆ ರಾಜ ದಾನ ಮಾಡಿದ ವಿಚಾರ ಉಲ್ಲೇಖಗೊಂಡಿದೆ. ಆಗ ಮಂಗಳೂರು ರಾಜ್ಯಕ್ಕೆ ರಾಜ್ಯಪಾಲನಾಗಿದ್ದವ ಮೇಲೆ ಹೆಸರಿಸಿರುವ ಪಂಡರಿದೇವನೇ.
ಕುಡುಪು ಮತ್ತು ನೀರುಮಾರ್ಗ ಗ್ರಾಮಗಳು ಮಂಗಳೂರು ತಾಲೂಕಿನಲ್ಲಿರುವ ಅಕ್ಕ-ಪಕ್ಕದ ಗ್ರಾಮಗಳು. ಕಾರ್ಕಳ-ಮಂಗಳೂರು ಹೆದ್ದಾರಿ ಕುಡುಪು ಮೂಲಕ ಹೋಗಿರುವುದರಿಂದ ಈ ಸ್ಥಳ ಹೆಚ್ಚು ಪರಿಚಿತವಾಗಿದೆ. ಆದರೆ ನೀರುಮಾರ್ಗ ಒಳನಾಡಿನ ಭಾಗದಲ್ಲಿದ್ದು ಇಂದಿನ ಸೌಕರ್ಯಗಳಿಂದ ವಂಚಿತವಾಗಿದೆ. ಭೌಗೋಳಿಕವಾಗಿ ಎರಡೂ ಗ್ರಾಮಗಳು ಬೆಟ್ಟ-ಗುಡ್ಡ, ಕಣಿವೆ-ಕಾಡುಗಳಿಂದ ಆವೃತವಾಗಿವೆ. ನಂಬಿಕೆ ಮತ್ತು ಐತಿಹ್ಯಗಳ ಪ್ರಕಾರ ಈ ಎರಡೂ ಗ್ರಾಮಗಳಿಗೆ ಪ್ರಾಚೀನ ಕಾಲದಲ್ಲಿ (ನಾಗಾರಾಧನೆ ವಿಷಯವಾಗಿ) ಪರಸ್ಪರ ಸಂಬಂಧ ಇತ್ತು. ಬುಕ್ಕರಾಯನ ಶೃಂಗೇರಿಯ ಶ್ರೀ ವಿದ್ಯಾರಣ್ಯರಿಗೆ ಕೊಡಮಾಡಿದ ದಾನಗಳನ್ನು ಉಲ್ಲೇಖಿಸುವ ಶಾಸನಗಳು ಈ ಗ್ರಾಮಗಳಲ್ಲೂ ದೊರೆತಿವೆ. ಇದು ವಿಜಯನಗರದ ಆಳ್ವಿಕೆಯ ಪ್ರಾರಂಭಿಕ ಕಾಲದಲ್ಲಿ ಈ ಎರಡೂ ಗ್ರಾಮಗಳು ಹೊಂದಿದ್ದ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ. ಎರಡು ಕಡೆಗಳಲ್ಲಿ ಪ್ರಾಚೀನವಾದ ಸುಬ್ರಹ್ಮಣ್ಯ ದೇವಾಲಯಗಳಿವೆ.  ನೀರುಮಾರ್ಗದಲ್ಲಿ 10-11ನೆಯ ಶತಮಾನಕ್ಕೆ ಸೇರುವ ಸುಂದರವಾದ ಸ್ಕಂದನ ವಿಗ್ರಹ ಇದ್ದರೆ ಕುಡುಪುವಿನಲ್ಲಿ ನಾಗ-ಸುಬ್ರಹ್ಮಣ್ಯ; ಆದರೆ ಇಲ್ಲಿ ದೇವರನ್ನು ಅನಂತಪದ್ಮನಾಭಸ್ವಾಮಿ ಎಂದು ಕರೆಯುತ್ತಾರೆ.
ಕುಡುಪು ಶಾಸನೋಕ್ತ ದಾನದಲ್ಲಿರುವ ವಿಶೇಷತೆ :
ಕುಡುಪು ದಾನದಲ್ಲಿ ಹಲವು ವಿಶೇಷತೆಗಳಿವೆ. ರಾಜ ಕೊಡಮಾಡಿರುವ ದಾನವನ್ನು ಯಾವ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂಬುದಕ್ಕೆ ನಿರ್ದೇಶನವಿದೆ. ‘ರಾಯನ ಸಿಂಗೇರಿಯ ವಿದ್ಯಾರಂಣ್ಯ ಶ್ರೀಪಾದಂಗಳಿಗೆ ಸಮರ್ಪಿಸಿದ ಧರ್ಮದ ಕ್ರಮವೆಂತೆಂದತಾ(ವೆಂತೆಂದರೆ) ಕುಡುಪಿನ ದೇವಾಲ್ಯದಲು ಯತಿಗಳು ಬ್ರಾಹ್ಮಣರಿಗೆ ಪ್ರತಿ ದಿನ (ಜನ) 12ಕಂ ಭೋಜನ ನಡವಂತಾಗಿ (ಶಾಸನ ಪಾಠ ಸಾಲು:5-8). ಇದನ್ನು ನಿರ್ವಹಿಸುವ ಛತ್ರದ ವೆಚ್ಚಕ್ಕಾಗಿ 360 ಮುಡಿ ಬತ್ತ ಮತ್ತು ಇದರ ಮೇಲು ವೆಚ್ಚಕ್ಕಾಗಿ 90 ಮಂಗಳೂರು ಕಾಟಿ ಗದ್ಯಾಣಗಳನ್ನು ನಿಗದಿ ಮಾಡಿದ.  ದಾನದ ಎರಡನೆಯ ಭಾಗ: ‘ಕುಡುಪಿನ ದೇವರಿಗೆ ಯಿರುಳಿನ ನಿವೇದ್ಯಕ್ಕೆ ಮಾಲೂರು ಹರವರಿಯಿಂದ ಭತ್ತ ಮೂಡೆ 60 ಕುಡಿ ಅಕಿ ಹಾನೆ (32) ನು ನಡವುದು’ (ಶಾಸನ ಪಾಠ ಸಾಲು: 11-13). ಮುಂದೆ ‘ಶಂಕರ ದೇವರ ಅಮೃತಪಡಿ * * ಮಂಗಳೂರು ಕಾ.ಗ. 150 ಅಂತು ಕಾ.ಗ. 240 ಭತ್ತ ಮೂಡೆ 420 ವರುಷಂ ಪ್ರತಿಯಲು ನಡೆವುದು’ ಎಂದು ಹೇಳಿ ನಂತರ ‘ಯಿ ಸ್ತಾನವನೂ ಧರ್ಮವನೂ ಶ್ರೀಪಾದಂಗಳ ನಿರೂಪದಿಂದಲಿ * * * ಶಂಕರ ರಾಮನಾಥ ದೇವರಿಗೆ ಧಾರಾಪೂವ್ರ್ವಕ ನಡವಂತಾಗಿ ಕೊಟ್ಟರು’ ಎಂದಿದೆ (ಶಾಸನ ಪಾಠ ಸಾಲು: 15-17). ಅಂದರೆ ಕುಡುಪಿನ ಈ ದೇವಾಲಯದಲ್ಲಿ ಒಂದು ಮಠ ಸಹ ಇತ್ತು, ಅದರಲ್ಲಿ ಯತಿಗಳೂ ಇದ್ದರು. ಇದಕ್ಕೆ ಸೇರಿದಂತೆ ಒಂದು ಛತ್ರವೂ ಇತ್ತು. ಪ್ರಾಯಶಃ ಇವುಗಳ ಪುನರುತ್ಥಾನವನ್ನು ಶ್ರೀ ವಿದ್ಯಾರಂಣ್ಯರು ಮಾಡಿದರು. ಆಗ ಕಂಡುಬಂದ ನ್ಯೂನತೆಗಳನ್ನು ಸರಿಪಡಿಸುವ ಸಲುವಾಗಿ ಬುಕ್ಕರಾಯ ಇದಕ್ಕೆ ಭೂ ಮತ್ತು ಹಿರಂಣ್ಯ ದಾನಗಳನ್ನು ಮಾಡಿದ.  ಅದರೊಂದಿಗೆ ವ್ಯವಸ್ಥೆ ನಡೆಯಬೇಕಾದ ರೂಪುರೇಖೆಗಳನ್ನೂ ನಿರೂಪಿಸಿ ಕೊಟ್ಟ. ಕೊನೆಯಲ್ಲಿ ‘ಯಿ (ಯೀ)ಊರ ವೊಡೆತನಮುಂ ಶ್ರೀಪಾದಂಗಳಿಗಲ್ಲದೆ ಅರಸಿನ ವೊಡೆತನ ಸಲ್ಲದು’ ಎಂದು ಕಟ್ಟು ಮಾಡಿ ದಾನವನ್ನು ಸಂಪೂರ್ಣ ತೆರಿಗೆ ರಹಿತವನ್ನಾಗಿ ಮಾಡಿ ಶಾಸನ ಹಾಕಿಸಿ ಕೊಟ್ಟ.
ನೀರುಮಾರ್ಗದ ಶಾಸನದ ಪ್ರಕಾರ ಬುಕ್ಕರಾಯನ ಆಜ್ಞಾವರ್ತಿಯಾದ ಪಂಡರಿದೇವನು ನೀರುಮಾರ್ಗದಲ್ಲಿ ಮಠವನ್ನು ಕಟ್ಟಿಸಿ ಅಲ್ಲಿಯ ದೇವಾಲಯ, ಛತ್ರ ಮತ್ತು ಮಠಗಳಲ್ಲಿನ ಕಾರ್ಯಗಳು ನಿರಂತರವಾಗಿ ನಡೆಯುವಂತೆ ವ್ಯವಸ್ಥೆ ಮಾಡಿದ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನೆರೆಯ ಗ್ರಾಮಗಳೆರಡರಲ್ಲೂ ಶೃಂಗೇರಿಯ ಅದ್ವೈತ ಪರಂಪರೆಗೆ ಸೇರಿದ ಮಠಗಳು ಇದ್ದುದು ಮತ್ತು ಅಲ್ಲಿ ಯತಿಗಳೂ ಇದ್ದರು ಎಂಬುದು. ಇದು ಸಾಧ್ಯವೇ ಎಂಬ ಸಮಸ್ಯೆ ಬಂದರೆ ಅಲ್ಲೆ ‘ಇದು ಹೀಗಿರಬಾರದೆಂದೇನು ಇಲ್ಲವಲ್ಲ!’ ಎಂಬ ಉತ್ತರ ಇದೆ.
ಬುಕ್ಕರಾಯನು 1353ರ ವೇಳೆಗೆ ಯುವರಾಜನಾಗಿದ್ದ. ಅದನ್ನೇನು ನೀರುಮಾರ್ಗದ ಶಾಸನ ಹೇಳುವುದಿಲ್ಲ.  ಆದರೆ ವಿದ್ಯಾರಂಣ್ಯರನ್ನು ‘ಶ್ರಿಪಾದಂಗಳು’ ಎಂದು ಉಲ್ಲೇಖಿಸಿರುವು ಗಮನಾರ್ಹ. ಆಗ ಶೃಂಗೇರಿಯ ಪೀಠಾಧಿಪತಿಗಳಾಗಿದ್ದವರು ಶ್ರೀ ಭಾರತಿ (ಭಾರತೀಕೃಷ್ಣ)ತೀರ್ಥರು. ಇವರ ಉಲ್ಲೇಖ ಎರಡೂ ಶಾಸನಗಳಲ್ಲಿ ಇಲ್ಲ.  ಹಾಗೆಂದ ಮಾತ್ರಕ್ಕೆ ಈ ಶಾಸನಗಳನ್ನು ಕೂಟ ಎಂದು ನಿರ್ಧರಿಸುವುದಕ್ಕಾಗಲಿ ಅಥವಾ ವಿದ್ಯಾರಂಣ್ಯರ ಪಾತ್ರವನ್ನು ಕೀಳು ಅಭಿರುಚಿಯಿಂದ ನೋಡುವುದಕ್ಕಾಗಲೀ ಆಸ್ಪದವಿಲ್ಲ. ಒಂದನೆಯ ಬುಕ್ಕರಾಯನಿಗೆ ವಿದ್ಯಾರಂಣ್ಯರು ಒಂದು ಸಂಚಾರೀ ಶಕ್ತಿಯಾಗಿದ್ದರು. ಅವರನ್ನು ಕೇವಲ ಯತಿಗಳೆಂದು ಸಂಬೋಧಿಸುವ ಮನಸ್ಸು ಇವನಿಗೆ ಇಲ್ಲವಾಗಿತ್ತು.  ಹಾಗಾಗಿ ಅವರನ್ನು ‘ಶ್ರಿಪಾದ’ರೆಂದೇ ಸಂಬೋಧಿಸಿ ತನ್ನ ಭಕ್ತಿ. ಶ್ರದ್ಧೆ ಮತ್ತು ನಂಬಿಕೆಗಳನ್ನು ಈತ ಪ್ರಕಟಿಸಿದ. ರಾಜನ ಈ ಭಾವನೆಗೆ ಯಾರಿಂದಲೂ ವಿರೋಧವಿರಲಿಲ್ಲವಾದರೂ ಸ್ವತಃ ವಿದ್ಯಾರಂಣ್ಯರು ತಮಗೆ ಸಂದಾಯವಾದ ಎಲ್ಲ ಗೌರವ, ಸಮ್ಮಾನಗಳನ್ನು ವಿನಮ್ರತೆಯಿಂದ ಗುರುಗಳಾದ ಭಾರತೀತೀರ್ಥರಿಗೆ ಅರ್ಪಿಸಿ ಗುರು-ಶಿಷ್ಯ ಸಂಬಂಧದ ಮಹತ್ವವನ್ನು ಎತ್ತಿ ಹಿಡಿದರು. ಒಟ್ಟಿನಲ್ಲಿ ವಿದ್ಯಾರಂಣ್ಯರನ್ನು ಉಲ್ಲೇಖಿಸುವ ಪ್ರಥಮ ಮತ್ತು ಪ್ರಾಚೀನ ಶಿಲಾಶಾಸನವಾಗಿದೆ ನೀರುಮಾರ್ಗದ ಈ ಶಾಸನ. [ಈ ಶಾಸನದ ಪಾಠ ಶೃಂಗೇರಿ ಮಠದೊಂದಿಗೆ ದಕ್ಷಿಣ ಕನ್ನಡದ ಸಂಬಂಧ-ಲೇಖಕರು : ಪಿ.ಎನ್. ನರಸಿಂಹಮೂರ್ತಿ, ಪ್ರಕಟನೆ: ಶತನಮನ {ಜಿ.ವಿ. ಅಭಿನಂದನ ಗ್ರಂಥ, (ಪ್ರ ಸಂ) ಪಿ.ವಿ. ನಾರಾಯಣ}, ಶ್ರೀಜಯರಾಮ ಸೇವಾ ಮಂಡಲಿ, ಜಯನಗರ, ಬೆಂಗಳೂರು-2012, ಪುಟ 94 ಎಂಬಲ್ಲಿಯೂ ಪ್ರಕಟವಾಗಿದೆ].
[ವಿದ್ಯಾರಣ್ಯರ ಶಾಸನಗಳ ಸೂಚಿಯನ್ನು ಬೆಂಗಳೂರಿನ ಸಂಶೋಧಕರಾದ ಎಸ್. ಕಾರ್ತಿಕ್ ಅವರು ಸಿದ್ಧಪಡಿಸಿದ್ದಾರೆ. ಅದನ್ನು ಇಲ್ಲಿ ನೀಡಲಾಗಿದೆ. ಈ ಸೂಚಿಯನ್ನು ಉಲ್ಲೇಖಿಸುವವರು ಎಸ್. ಕಾರ್ತಿಕ್ ಅವರ ಹೆಸರಿನಲ್ಲಿ ಉಲ್ಲೇಖಿಸಬೇಕು. ಇಲ್ಲಿ ಇದನ್ನು ಪ್ರಕಟಿಸಲು ಒಪ್ಪಿಗೆಯಿತ್ತ ಎಸ್. ಕಾರ್ತಿಕ್ ಅವರಿಗೆ ಕೃತಜ್ಞತೆಗಳು.]
 # 2031, ಗುರುಕೃಪ, 10ನೆಯ ಅಡ್ಡರಸ್ತೆ, ಕಲ್ಲಹಳ್ಳಿ, ವಿ.ವಿ. ನಗರ, ಮಂಡ್ಯ-571401.