Wednesday, February 26, 2014

ತುಮುಕೂರು ಜಿಲ್ಲೆಯ ಕೆಲವು ಅಪ್ರಕಟಿತ ಶಾಸನಗಳು


ತುಮಕೂರು ಜಿಲ್ಲೆಯ ಕಸಾಪುರ, ಮಿಡಿಗೇಶಿ ಹಾಗೂ ಆಂಧ್ರಪ್ರದೇಶದ ಮಡಕಶಿರಾ ತಾಲ್ಲೂಕಿನ ಕೆಲವು ಅಪ್ರಕಟಿತ ಶಾಸನಗಳು
ಡಾ. ಎನ್. ನಂದೀಶ್ವರ
ಸಾಪುರ ಗ್ರಾಮ ತಾಲ್ಲೂಕು ಕೇಂದ್ರ ಮಧುಗಿರಿಯಿಂದ ೨೨ ಕಿ.ಮೀ. ಹಾಗೂ ಜಿಲ್ಲಾ ಕೇಂದ್ರವಾದ ತುಮಕೂರಿನಿಂದ ೬೩ ಕಿ.ಮೀ. ದೂರದಲ್ಲಿದೆ. ಈ ಗ್ರಾಮವು ಪ್ರಾಗೈತಿಸಿಹಾಸದ ಕಾಲದಿಂದಲೂ ಬಹಳ ಪ್ರಸಿದ್ಧವಾಗಿದೆ. ಈ ಗ್ರಾಮದ ಛಲವಾದಿ (ಆದಿದ್ರಾವಿಡರ) ಬಸಣ್ಣನ ಹತ್ತಿರ ಕಂಚಿನ ಹರೆ ಇದೆ. ಈ ಹರೆಯನ್ನು ಮಿಡಿಗೇಶಿಯ ಕುಂಚಿಟಿಗರ ಶೆಟ್ಟೇನವರ ಮನೆದೇವರಾದ ಶ್ರೀಲಕ್ಷ್ಮೀದೇವರಿಗೆ ಬಡೆಯುವ ಹರೆಯಾಗಿದ್ದು, ಇದರ ಮೇಲೆ ಅಪ್ರಕಟಿತ ಶಾಸನವಿದೆ. ಶ್ರೀಲಕ್ಷ್ಮೀದೇವತೆಗೆ ಹರೆಯನ್ನು ಮಾತ್ರ ಬಡಿಯುತ್ತಾರೆ. ಹರೆಯನ್ನು ೫ ಕಟ್ಟುಗಳಲ್ಲಿ ರಚಿಸಿ, ೪ ಮನೆಗಳನ್ನು ಮಾಡಲಾಗಿದೆ. ಶಾಸನವನ್ನು ೨ ಭಾಗಗಳಲ್ಲಿ ಬರೆಯಲಾಗಿದೆ.
ಶಾಸನದ ಪ್ರಾರಂಭದಲ್ಲಿ ಚಂದ್ರ ಎಡಭಾಗದಲ್ಲಿ ಬರೆದಿದ್ದರೆ, ಬಲಭಾಗದಲ್ಲಿ ಸೂರ್ಯನನ್ನು ಬರೆಯಲಾಗಿದೆ. ಶಾಸನವು ೬ ಸಾಲುಗಳಲ್ಲಿ ಬರೆಯಲ್ಪಟ್ಟಿದ್ದು, ಕನ್ನಡ ಭಾಷೆಯಲ್ಲಿದೆ. ಶಾಸನದ ಕಾಲ ೧೭೮೭ ಜೂನ್ ೨೯ ಗುರುವಾರವಾಗಿರುತ್ತದೆ. ಮಿಡಿಗೇಶಿಯ ಕುಂಚಿಟಿಗ ಜನಾಂಗದ ಶೆಟ್ಟೇನವರ ಕುಲದ ಮನೆದೇವರಾದ ಮಿಡಿಗೇಶಿಯ ಶ್ರೀಲಕ್ಷ್ಮೀದೇವರಿಗೆ ಬೆಂಗಳೂರಿನ ಶೆಟಿಪನ ಮಗ ಯಿರಚಿಕಂಣನು ಮಾಡಿಸಿ ಕೊಟ್ಟ ಅರೆ. ಮಿಡಿಗೇಶಿಯ ಶಾನುಭೋಗ ಅರುಣಚಲೈನವರು ಬರೆದ ಬರಹವೆಂದು ಇದೆ. ಈ ಹರೆಯನ್ನು ಬಾಳಮಂಡೆ ಬಸಪನ ಮೊಮ್ಮಗನ ಕೊರಳಿಗೆ ಲಕ್ಷ್ಮೀದೇವರಿಗೆ ದೇವರ ಉತ್ಸವ ಹಬ್ಬ ಹರಿದಿನಗಳಲ್ಲಿ ಬಡಿಯಲು ಹಾಕಿಸಿರುವ ಹರೆಯಾಗಿರುತ್ತದೆ.
ಶಾಸನ ಪಾಠ
೧        ಪ್ಲವಂಗ ಸಂವತ್ಸರದ ಅಷಾಡ ಶು ೧೪ಲ್ಲು ಮಿ
೨        ಡಿಗೇಶಿ ಶ್ರೀ ಲಕ್ಷ್ಮೀ ದೇವತಿಗೆ ಬೆಂಗಳೂರು ಶೆಟೆಪ್ಪನ
೩        ಮಗ ಯಿರ ಚಿಕಂಣ ಮಾಡಿಶಿ ಕೊಟ ಅರ್ರೆ ಮಿಡಿಗೇ
೪        ಶಿ ಶಾನುಬಾಗ ಆರುಣಚಲೈನ ಬರಹ ||
೫        ಯಿ ಹರ್ರೆ ಬಾಳಮಂಡೆ ಬಸಪನ ಮೊಮಗ
೬        ನ ಕೊರಳಿಗೆ ಹಾಕಿದ ಹರೆ ||
ಮಿಡಿಗೇಶಿಯ ಹರೆ ಶಾಸನ
ಮಿಡಿಗೇಶಿಯ ಆದಿದ್ರಾವಿಡ ಜನಾಂಗದ ಕಾವೇರಪ್ಪನ ಮಗ ಹನುಮಂತರಾಯಪ್ಪನ ಹತ್ತಿರ ಒಂದು ಹರೆ ಇದೆ. ಇದನ್ನು ಗಡಿಭಾಗದ ಆಂಧ್ರಪ್ರದೇಶದ ಗೊಟ್ಟುಗುರಿಕೆಯಿಂದ ತಂದಿಟ್ಟುಕೊಂಡಿರುತ್ತಾರೆ. ಇದನ್ನು ಇಂದು ಎಲ್ಲಾ ದೇವರಿಗೂ ಬಡಿಯುತ್ತಾರೆ. ಇದರ ಮೇಲೆ ಅಪ್ರಕಟಿತ ಶಾಸನವಿದೆ.
ಹರೆಯನ್ನು ೫ ಕಟ್ಟುಗಳಲ್ಲಿ ರಚಿಸಿ, ೪ ಮನೆಗಳನ್ನು ಮಾಡಲಾಗಿದೆ. ಶಾಸನದ ಪ್ರಾರಂಭದಲ್ಲಿ ಎಡಭಾಗದಲ್ಲಿ ಚಂದ್ರನನ್ನು, ಬಲಭಾಗದಲ್ಲಿ ಸೂರ್ಯನನ್ನು ಬರೆಯಲಾಗಿದೆ. ಶಾಸನವನ್ನು ೨ ಭಾಗಗಳಳ್ಲಿ ಬರೆಯಲಾಗಿದೆ. ಶಾಸನವು ೮ ಸಾಲುಗಳಲ್ಲಿ ಬರೆಯಲ್ಪಟ್ಟಿದೆ. ಶಾಸನವು ಕನ್ನಡ ಭಾಷೆಯಲ್ಲಿ ಬರೆಯಲ್ಪಟ್ಟಿದೆ. ಶಾಸನದ ಕಾಲ ೧೭೭೭ ಏಪ್ರಿಲ್ ೮, ಸೋಮವಾರವಾಗಿರುತ್ತದೆ.
ಗೊಟ್ಟುಗುರಿಕೆ ಏತಂಣನ ಮಗನಾದ ನಲ್ಲನಿಂಗಣ್ಣನು ಶ್ರೀ ಪಾತಪ್ಪದೇವರಿಗೆ ಹರೆ ಬಡಿಯಲು ಭಕ್ತಿಯಿಂದ ಕೊಟ್ಟಿರುವರು. ಇಂದಿಗೂ ಗೊಟ್ಟುಗುರಿಕೆಯಲ್ಲಿ ತೆರೆದ ಅಂಕಣದಲ್ಲಿ ಶ್ರೀಪಾತಪ್ಪ ದೇವಸ್ಥಾನವಿದೆ. ಇಂದು ನಾಯಕ (ತಳವಾರ) ಜನಾಂಗದವರ ಮನೆದೇವರಾಗಿದೆ. ಈ ದೇವರನ್ನು ಹಬ್ಬಹರಿದಿನಗಳಲ್ಲಿ ವಿಶೇಷವಾದ ಪೂಜೆ ಮಾಡು ತ್ತಾರೆ. ನಾಯಕ ಜನಾಂಗದವರೇ ಆರ್ಚಕರಾಗಿರುತ್ತಾರೆ. ಪಕ್ಕ ಕರ್ನಾಟಕದ ಗಡಿಯಲ್ಲಿಯಲ್ಲಿನ ಗ್ರಾಮ ರೆಡ್ಡಿಹಳ್ಳಿ. ಈ ರಡಿಅಳಿ(ರೆಡ್ಡಿಹಳ್ಳಿ)ಯ  ಹಳೆ ಮಗನಾದ ಚೆಲವಾದಿನಾಗನ ಮಗ ನರಸನ ಕೊರಳಿಗೆ ಹಾಕಿಸಿರುವರು. ರತ್ನಗಿರಿಯ ಚಿತ್ರಗಾರ ಪುಟ್ಟಲಿಂಗಪ್ಪ ಶಾಸವನ್ನು ಬರೆದಿರುವನು.
ಶಾಸನ ಪಾಠ
೧        ಶ್ರೀ
೨        ಶ್ರೀ ಹೇವಳಂಬಿ ಸಂಮತ್ಸರದ ಚೈತ್ರ ಶುದ ೧ ಯ
೩        ಲ್ಲು ಶ್ರೀ ಮತು ಗೊಟ್ಟು ಗುರಿಕೆ ಏತಂಣನ ಮಗ
೪        ನಲ್ಲ ನಿಂಗಣ ಶ್ರೀಪಾತಪ್ಪ ದೇವರಿಗೆ ಕೊಡಿಶಿದ
೫        ಆರೆ ಭಕ್ತಿ ಸದರಿ ಆರೆ ಅಳೆ ಮಗನಾದ ರಡಿ
೬        ಅಳಿ ಚೆಲವಾದಿ ನಾಗನ ಮಗ ನರಸನ ಕೊ
೭        ಳಿಗೆ ಆಕಿದ ಅರೆ
೮        || ರತ್ನಗಿರಿ ಚಿತ್ರಗಾರ
೯        ಪುಟ್ಟಲಿಂಗಪ್ಪ
ಹೇಮಾವತಿಯ ಶಾಸನ
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಹೇಮಾವತಿಯು ನೊಳಂಬರ ರಾಜಧಾನಿಯಾಗಿತ್ತು. ಇಲ್ಲಿನ ಪ್ರಸಿದ್ಧವಾದ ಸಿದ್ದೇಶ್ವರ ದೇವಸ್ಥಾನದ ದ್ವಾರಬಂಧದಲ್ಲಿ ಅಪ್ರಕಟಿತ ಶಾಸನವಿದೆ. ಬಾಗಿಲುವಾಡಕ್ಕೆ ಹಾಕಿದ್ದ ಬೆಳ್ಳಿಯ ತಗಡನ್ನು ಜೀರ್ಣೋದ್ಧಾರದ ಸಂದರ್ಭದಲ್ಲಿ ತೆಗೆದಿದ್ದರಿಂದ ಈ ಶಾಸನ ಕಂಡುಬಂದಿತು.
ಶಾಸನವು ೨ ಸಾಲುಗಳಲ್ಲಿ ಬರೆಯಲ್ಪಟ್ಟಿದ್ದು, ಕನ್ನಡ ಭಾಷೆಯಲ್ಲಿದೆ. ಲಿಪಿಯು ೧೨ನೇ ಶತಮಾನದ ಲಿಪಿಯನ್ನು ಹೋಲುತ್ತದೆ. ಗರೆಯ ಪಲೆಯ ಎಂಬುವನು ಹೂವಿನ ಕಲ್ಲುದ್ವಾರಬಂದವನ್ನು ಮಾಡಿಸಿದ ವಿಷಯ ಎಂದು ಊಹಿಸಬಹುದಾಗಿದೆ.
ಶಾಸನ ಪಾಠ
೧        ಶ್ರೀಮತು ಗರೆಯ ಪಲೆಯ ಹುವಿನ ಕಲುದರವಂದ ಮಾ
೨        ಡಿಸಿದ                    
ಪೇಲುಬಂಡೆಯ ಶಾಸನ
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಹೇಮಾವತಿಗೆ ಹತ್ತಿರದ ಗ್ರಾಮ ಪೇಲುಬಂಡೆ. ಇಲ್ಲಿನ ಪ್ರಸಿದ್ಧವಾದ ರಂಗನಾಥಸ್ವಾಮಿ ದೇವಸ್ಥಾನದ ಯಾಗಶಾಲೆಯ ದ್ವಾರಬಂಧದಲ್ಲಿ ಒಂದು ಅಪ್ರಕಟಿತ ಶಾಸನವಿದೆ.
ಶಾಸನವು ೩ ಸಾಲುಗಳಲ್ಲಿ, ಕನ್ನಡ ಭಾಷೆಯಲ್ಲಿ ಬರೆಯಲ್ಪಟ್ಟಿದೆ. ಲಿಪಿಯು ೧೮ನೇ ಶತಮಾನವನ್ನು ಹೋಲುತ್ತದೆ. ಶಾಸನವು ನಿಡಗಲ್ಲು ಮಹಾನಾಯಕಚಾರ‍್ಯರಾದ ನಿಡಗಲ್ಲು ಇಮ್ಮಡಿ ತಿಮ್ಮಣ್ಣ ನಾಯಕನು ಯಾಗಶಾಲೆಯನ್ನು ಕಟ್ಟಿಸಿದ ವಿಷಯವನ್ನು ತಿಳಿಸುತ್ತದೆ. ಆದರೆ ಈ ಯಾಗಶಾಲೆಯ ಕಂಬಗಳನ್ನು ನೋಡಿದರೆ ಇದು ಅವರ ಕಾಲದಲ್ಲಿ ನಿರ್ಮಿತವಾದಂತೆ ಕಂಡುಬರುವುದಿಲ್ಲ. ಆದರೆ ಅದಾಗಲೇ ಅಸ್ವಿತ್ವದಲ್ಲಿದ್ದ ಪೇಲುಬಂಡೆಯ ರಂಗನಾಥ ಸ್ವಾಮಿಯ (ನೊಳಂಬರ ಕಾಲದಲ್ಲಿ ರಚನೆ) ಶಿಥಿಲವಾದ ಪಳೆಯುಳಿಕೆ ಉಪಯೋಗಿಸಿ ಅಥವಾ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಉಪಯೋಗಿಸಿ ಉಳಿದ ಕಂಬಗಳಿಂದ ಈ ಯಾಗಶಾಲೆಯನ್ನು ನಿರ್ಮಿಸಿರಬಹುದು. ನಿಡಗಲ್ಲು ನಾಯಕರ ವಂಶಾವಳಿಯಲ್ಲಿ ಹಲವಾರು ಜನ ತಿಮ್ಮಣ್ಣನಾಯಕರು ಬಂದರೂ ಹರತಿ ವಂಶಾವಳಿಯ ವೀರತಿಮ್ಮಣ್ಣ ನಾಯಕನೇ ಇರಬಹುದು. ಈತನು ೧೭೫೮ ರಿಂದ ೧೭೮೫ರವರೆಗೆ ಆಳ್ವಿಕೆ ನಡೆಸಿರುವನು.
ಶಾಸನ ಪಾಠ
೧        ಶುಭಮಸ್ತು ಪಾರ್ಥಿವ ಸಂವತ್ಸರದ ಮಾಘ ಶುಧ ೫ ಲೂ ಶ್ರೀ ಮನ್ಮಹಾನಾಯಕಾಚಾರ‍್ಯರಾದ ನಿಡುಗಲ ಯಿಮಡಿ ತಿಮಣ್ಣ ನಾಯ
೨  ಕ ಅಯ್ಯನವರ ರಾಯಸದ ರಾಂಯಣನೂ ಕಟ್ಟಿಸಿದ ಪೆಯಲಬಂಡೆ ರಂಗನಾಥನ ಯಾಗಶಾಲೆಯ ಬಾಗಿಲಿ ವಾ
೩        ವಾಡದ (ಅಂಕಣ ಕ) ಮಂಗಳ ಮಹಾ ಶ್ರೀಶ್ರೀ ರಾಮಚಂದ್ರ ಸಹಾಯ
[ಶಾಸನ ಓದಲು ನೆರವಾದ ಸುಂಕಂ ಗೋವರ್ಧನ, ಡಾ. ಪಿ.ವಿ. ಕೃಷ್ಣಮೂರ್ತಿ ಹಾಗೂ ಡಾ. ಬಿ. ರಾಜಶೇಖರಪ್ಪರವರಿಗೆ ಕೃತಜ್ಞತೆಗಳು.]

­               ಪ್ರಾಂಶುಪಾಲರು, ಎಸ್.ಎಂ.ಆರ್.ಪಿ.ಯು. ಕಾಲೇಜು, ಕಳ್ಳಂಬೆಳ್ಳ, ಸಿರಾ ತಾಲ್ಲೂಕು, ತುಮಕೂರು ಜಿಲ್ಲೆ-೫೭೨೧೨೫.







Friday, February 21, 2014

ಕಳಶೇಸ್ವರ ದೇಗುಲದ ನಿರೂಪಗಳು


ಕಳಸೇಶ್ವರ ದೇವಾಲಯದ ನಿರೂಪಗಳು
ಜಿ.ವಿ.ಕಲ್ಲಾಪುರ
‘ಕಳಸ ಗ್ರಾಮವು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಿಂದ ೬೦ ಕಿ.ಮೀ. ದೂರದಲ್ಲಿದೆ. ಭದ್ರಾನದಿಯ ಬಲದಂಡೆಯ ಮೇಲಿನ ಈ ಗ್ರಾಮ ಇತಿಹಾಸಪ್ರಸಿದ್ಧ ಸ್ಥಳವಾಗಿದ್ದು, ಇಲ್ಲಿ ಕಳಸೇಶ್ವರ ಅಥವಾ ಕಳಸನಾಥ ದೇವಾಲಯವಿದೆ. ಈ ಪ್ರದೇಶದಲ್ಲಿ ಕೋಟಿತೀರ್ಥ, ರುದ್ರತೀರ್ಥ, ಅಂಬುತೀರ್ಥ, ನಾಗತೀರ್ಥ ಮತ್ತು ವಸಿಷ್ಠತೀರ್ಥಗಳೆಂಬ ಐದು ತೀರ್ಥಗಳಿವೆ. ಕಳಸವು ಪಂಚ ಶೈವ ಕ್ಷೇತ್ರಗಳಲ್ಲೊಂದೆಂದು ಗುರುತಿಸಲಾಗಿದೆ. ಈ ಪ್ರಾಂತವನ್ನು ಸಾಂತರ ಭೈರರಸವೊಡೆಯನು ಆಳುತ್ತಿದ್ದನೆಂದು ತಿಳಿದು ಬರುತ್ತದೆ.
ಕಳಸದ ಪೂರ್ವದಿಕ್ಕಿನ ಒಂದು ಸಣ್ಣಗುಡ್ಡದ ಮೇಲೆ ಕಳಸೇಶ್ವರ ದೇವಾಲಯವಿದೆ. ಸುತ್ತಲಿನ ಪ್ರಾಕಾರವನ್ನು ಹೊಸದಾಗಿ ನಿರ್ಮಿಸಲಾಗಿದೆ. ಮುಂದಿನ ಮಂಟಪವು ಹಳೆಯದಾಗಿದೆ. ಪ್ರಧಾನ ದೇವಾಲಯವು ವಿಜಯನಗರ ಶೈಲಿಯಲ್ಲಿ ನಿರ್ಮಾಣವಾಗಿದ್ದು, ಇದನ್ನು ಸಾಂತರಸರು ಜೀರ್ಣೋದ್ಧಾರ ಮಾಡಿದ್ದಾಗಿ ತಿಳಿದು ಬರುತ್ತದೆ. ಗರ್ಭಗೃಹ, ನವರಂಗ, ಮುಖಮಂಟಪ, ಸಿಂಹಯಾಳಿಗಳಿಂದ ಕೊಡಿದೆ. ಭುವನೇಶ್ವರಿಯನ್ನು ಕಲಾತ್ಮಕವಾಗಿ ರಚಿಸಲಾಗಿದೆ. ಇಲ್ಲಿ ಗಣಪತಿ ಮತ್ತು ಅಗಸ್ತ್ಯೇಶ್ವರ ದೇವಾಲಯಗಳಿವೆ. ಗಣಪತಿ ದೇವಾಲಯವು ಹೊಯ್ಸಳ ಶೈಲಿಯಲ್ಲಿದೆ. ಶಿಖರವಿದೆ. ಕ್ಷೇತ್ರಪಾಲ ಮತ್ತು ಪಾರ್ವತಿ ದೇವಾಲಯಗಳಿಂದ ಕೂಡಿದೆ.
ಕಳಸದಲ್ಲಿ ವೆಂಕಟರಮಣ, ಆಂಜನೇಯ, ವೀರನಾರಾಯಣ, ಗೋಪಾಲಕೃಷ್ಣ, ಗಂಗಾಧರೇಶ್ವರ, ಗಣಪತಿ, ಚೆನ್ನಕೇಶವ, ಬಿಂದುಮಾಧವ, ದುರ್ಗಾ, ಕಾಲಭೈರವ, ಚಂದ್ರನಾಥ ಜೈನ ಬಸದಿಗಳಿವೆ. ಕಳಸಕ್ಕೆ ಸಮೀಪದಲ್ಲಿಯೇ ಪ್ರಸಿದ್ಧವಾದ ಅನ್ನಪೂರ್ಣೇಶ್ವರಿ ಕ್ಷೇತ್ರವಿದೆ.
ಕಳಸೇಶ್ವರ ದೇವಾಲಯದಲ್ಲಿದ್ದ ಕಡತಗಳನ್ನು ಕೆಳದಿ ವಸ್ತುಸಂಗ್ರಹಾಲಯದಲ್ಲಿ ಸಂಗ್ರಹಿಸಿಡಲಾಗಿದೆ. ಇವು ಅಪರೂಪದ ಐತಿಹಾಸಿಕ ದಾಖಲೆಗಳಾಗಿವೆ. ಈ ಕಡತಗಳಲ್ಲಿ ದೇವಾಲಯಕ್ಕೆ ಸಂಬಂಧಿಸಿದ ದಿನನಿತ್ಯದ ಲೆಕ್ಕ ಪತ್ರಗಳು, ದೇವಾಲಯಕ್ಕೆ ಬಂದ ಧಾನ್ಯಗಳ ವಿವರಗಳು, ವರ್ಷಂಪ್ರತಿ ನಡೆಯುತ್ತಿದ್ದ ವಿವಿಧ ಉತ್ಸವಗಳ ವಿವರಗಳು, ಉಪಾದಿವಂತರು ತಮ್ಮ ಉಪಾದಿಗಳನ್ನು ಬೇರೆಯವರಿಗೆ ವಹಿಸಿಕೊಟ್ಟ ನಿರೂಪಗಳು ಇತ್ಯಾದಿ ಅನೇಕ ವಿಚಾರಗಳು ದಾಖಲಾಗಿವೆ. ಅವುಗಳಲ್ಲಿ ಉಪಾದಿಗೆ ಸಂಬಂಧಿಸಿದ ಮೂರು ನಿರೂಪಗಳನ್ನು ಆಯ್ದು ಇಲ್ಲಿ ಕೊಡಲಾಗಿದೆ.
ನಿರೂಪ ೧
೧.       ಕಲಸೇಶ್ವರಸ್ವಾಮಿಯವರು
೨.       ಬಾಳೆಹೊಂನ್ನೂರು ವೆಂಕಪ್ಪಗೆ ಬರೆಶಿ ಕಳುಹಿಸಿದ ನಿರೂಪಾ ಸ್ವಸ್ತಶ್ರೀಜಯಾಭ್ಯುದಯಾ
೩.       ಶಾಲಿವಾಹನ ಶಕವರುಷ ೧೭೬೧ನೆ ಪರಿವರ್ತ ಮಾನಕೆ ಸಲ್ಲುವ ವಿಕಾರಿನಾಮಸಂವತ್ಸರದ
೪.       ಮಾಘಶು ೨ ಗುರುವಾರ್ರದಲ್ಲು ಭಂಡಾರದ ಲೇಖಕೆ ಬರೆಸಿಯಿರವದ್ದು ಲಕ್ಕವಳ್ಳಿತ್ತಾಲೂಕ್ಕೂ
೫.       ಆರುವಳಿ ಮಾಗಣೆ ಬೈಸಗಾರ್ರು ಗ್ರಾಮದಲ್ಲು ಯಿರ್ರುವ ಗದೆ ಖ೬ಕ್ಕೆ ಸಿಸ್ತು
೬.       ಗ ೩ಲೂ ಮೂರ್ರುವರಹಾಲು ಆರ್ರು ಹಣವಿನ ಭೂಮಿಯಲ್ಲೂ ನಿನೂ ಸಾಗುವಳಿಮಾ
೭.       ಡುವಗದೆ ಖ||ಂ ಹೆ ಸಿಸ್ತು ಗ ೧೬೦ ೮|= ವರಾಹಾಲು ನಾಲ್ಕು ಹಣೌ ವಂದ್ದು
೮.       ಹಾಗ ಉ ಮೂರ್ರು ವಿಸ ಕಂದಾಯ ಬರ್ರು ಹಣಕ್ಕೆ ಸಂನಿದ್ಧಿಯಲ್ಲು ನಿತ್ಯಗಂ
೯.       ಗಾ ಸ್ನಾನದ ಉಪಾದಿಗೆ ಅಡಿಗಳ ಪುಟ್ಟರಾಮಾಜೋಯಿಸಗೆ ಅಪ್ಪಣೆ ಆಗಬೆಕೆಂ
೧೦.     ದಾಗಿ ಬಿಂನ್ನವವಂ ಮಾಡಿಕೊಂಡದಕ್ಕೆ ನಿನ್ನ ಅಪೆಕ್ಷ ಪ್ರಕಾರ ಪುಟ್ಟರಾಮಾಜೋಯಿಸ
೧೧.     ಗೆ ನಿತ್ಯ ಗಂಗಾಸ್ನಾನದ ಉಪಾದಿ ಬಗೆ ಕಟಲೆ ಮಾಡಿಶಿಯಿರ್ರುತ್ತದೆ| ಯೀಗ ಸಾ
೧೨.     ಗವಳಿ ಆಗಿಯಿರ್ರುವ ಗದ್ದೆ ಸಿಸ್ತಿನ ಹಣ ಹೊರತ್ತೂ ಯಿಂನ್ನೂಯಿರ್ರುವ ಗದ್ದೈ
೧೩.     ಯುಂ ಸಾಗುವಳಿಮಾಡ್ಸಿವುದು ಯೀಗ ಬರ್ರುವ ಹಣ ಗ ೧೬೪||= ವಂದ್ದು ವರ
೧೪.     ಹ ರಾ ಹಾಗೂ ಮೂರ್ರುವೀಸ್ವನ್ನೂ ಯೀಪುಟ್ಟರಾಮಾಜೋಯಿಸ
೧೫.     ಸ್ತು ವಂಶಪಾರಂಪರ್ಯಾವಾಗಿ ಕೊಟ್ಟುಕೊಂದು  ಯಿಂನ್ನೂಯಿರ್ರುವಗದೆ ಸಾಗು
೧೬.     ಂದು ಉತ್ಸವಕೆ ಉಪಯುಕ್ತ ಆಗುವಂತೆ ನಡದ್ದು
ಈ ದಾಖಲೆಯು ಕ್ರಿ.ಶ.೧೮೩೯ರ ಡಿಸೆಂಬರ್ ೮ ಭಾನುವಾರ ತಾರೀಖಿಗೆ ಸಮಾನವಾಗುತ್ತದೆ. ಇಲ್ಲಿ ಉಲ್ಲೇಖಿತವಾಗಿರುವ ಬಾಳೆಹೊನ್ನೂರು ವೆಂಕಪ್ಪ ಎಂಬುವ ವ್ಯಕ್ತಿ ರೆವಿನ್ಯೂ ಅಧಿಕಾರಿಯಾಗಿದ್ದಾನೆ. ಇದರಲ್ಲಿ ಗಂಗಾಸ್ನಾನದ ಉಪಾದಿಯನ್ನು ಅಡಿಗಳ ಪುಟರಾಮಾಜೋಯಿಸಗೆ ವಹಿಸಿಕೊಡುವಂತೆ ಆದೇಶಿಸಲಾಗಿದೆ. ಇದರಲ್ಲಿ ಅವನಿಂದ ಪಡೆಯಬೇಕಾದ ತೆರಿಗೆಗಳ ಭೂಮಿಗಳ ವಿವರಗಳನ್ನು ದಾಖಲಿಸಿಲಾಗಿದೆ.
ನಿರೂಪ -೨
೧.       ಶ್ರೀಕಲಸೇಶ್ವರಸ್ವಮಿಯರ್ರು
೨.       ಆಡುವಳಿ ಮಾಗಣಿಸ್ತಳ ಶಾನಭಾಗವಸ್ತಾರ ಕಳಸೈನಮಗ ರಾಮೈ
೩.       ಗೆ ಬರಶಿ ಕಳುಹಿದ ನಿರೂಪ ಸ್ವಸ್ತಿಶ್ರೀಜಯಾಭ್ಯುದಯ ಶಾಲಿವಾಹನಶಕ
೪.       ವರ್ರುಷ ೧೭೬೧ನೆ ವರ್ತಮಾನಕೆ ಸಲುವ ವಿಕಾರ್ರಿ ನಾಮ ಸಂವತ್ಸರದ ಮಾಘ
೫.       ಶು ೩ಯು ಶುಕ್ರವಾರದಲ್ಲು ಭಂಡಾರದ ಲೆಖಕೆ ಬರೆಶಿಯಿರ್ರುವದೂ
೬.       ನಿಂನ ಮಾಗಣಿ ಪೈಕಿ ಬಾಳೆಹೊಂನೂರ್ರು ವೆಂಕಪ್ಪಯ್ಯನ್ನೂ ಸಾಗುಮಾಡುವ ಬೈ
೭.       ಸ ಗಾರ್ರುಗ್ರಾಮದಲ್ಲು ಉತ್ತಾರ ಗದ್ದೆ ೫೬ಕ್ಕೆ ಸಿಸ್ತು ಗ ೩| ಮೂರ್ರುವರಹಾ
೮.       ಉ ಆರ್ರುಹಣವಿನಲ್ಲು ಗದ್ದೆ ಬಿಜವರ್ರಿ ೫ ೨||೦ ಸಿಸ್ತು ಗ೧೬೪|= ವಂದು
೯.       ವರಹಾಲು ನಾಲ್ಕು ಹಣಾ ಹಾಗೂ ಮೂರ್ರು ವಿಸಕ್ಕೆ ನಿತ್ಯದಲ್ಲೂ ಗಂಗಾಸ್ನಾನದ ಬಗ್ಯೆ
೧೦.     ಅಡಿಗಳ ಪುಟರಾಮಾಜೋಯಿಸರಿಗೆ ಅಪ್ಪಣೆ ಆಗಬೆಕೂಯಂಬದಾಗಿ ಬಾಳೆ
೧೧.     ಹೊಂನ್ನೂರು ವೆಂಕಪ್ಪನು ಅಪೇಕ್ಷೆ ಉಳವನಾಗಿ ಬಿಂನಹಂ ಮಾಡಿ ಕೊಂಡವ
೧೨.     ರ್ರಿಂದ ಅವನ ಅಪೆಕ್ಸೆ ಪ್ರಕಾರ ಗಂಗಾಸ್ನಾನದ ಉಪಾದಿ ಬಗ್ಯೆ ಅಡಿಗಳ ಪುಟರಾಂ
೧೩.     ಮಾ ಜೋಯಿಸಗೆ ಕಾಲಂಪ್ರತಿಯಲ್ಲೂ ಕೊಟ್ಟು ನಡೆಶಿಬರ್ರುವಂತೆ ಕಟಳೆ
೧೪.     ಮಾಡಿಸಿಯಿರ್ರುತ್ತೆ ಯಿiಗ ಸಾಗುವಳಿಯಾಗಿರ್ರುವ ಗದ್ದೆ ಶಿಸ್ತಿನ
೧೫.     ಗಣ ಹೊರತ್ತೂಯಿಂನ್ನೂಯಿರ್ರುವಗದ್ದೆ ಸಾಗುವಳಿ ಮಾಡಿಶಿ ಭಂಡಾ
೧೬.     ರಕೆ ಹಣಬಂದು ಉತ್ಸವಕ್ಕೆ ಉಪಯುಕ್ತ ಆಗುವಂತೆ ಸಹಾ ಬಾಳವ
೧೭.     ದಾಗಿಸದಂ ಇಸ್ತಾಳ ಶ್ಯಾ|ಗು|ಲಕ್ಷ್ಮೀನರಸೈನ ಅಕ್ಷರದಲ್ಲು ಬರಕೊಟ್ಟ ಪಟಿನಕಲು
ಈ ದಾಖಲೆ ಕ್ರಿ.ಶ.೧೮೩೯ ಡಿಸೆಂಬರ್ ೯ ಸೋಮವಾರಕ್ಕೆ ಸರಿ ಹೊಂದುತ್ತದೆ. ಈ ಹಿಂದಿನ ದಾಖಲೆಯಲ್ಲಿ ಗಂಗಾಸ್ನಾನದ ಉಪಾದಿ ಬಗ್ಗೆ ಕೇಳಿಕೊಂಡಿದ್ದಕ್ಕೆ ಉತ್ತರವಾಗಿ ಈ ನಿರೂಪ ಹೊರಟಿದೆ. ಅದರಲ್ಲಿನ ಬೇಡಿಕೆಯನ್ನು ಇಲ್ಲಿ ಬದ್ದ ಆಗಿಸಲಾಗಿದೆ. ಅಡಿಗಳ ಪುಟರಾಮಾ ಜೋಯಿಸರಿಗೆ ಗಂಗಾಸ್ನಾನದ ಉಪಾದಿಯನ್ನು ಕೆಲವು ಷರತ್ತುಗಳಿಗೆ ಒಳಪಟ್ಟು ವಹಿಸಿಕೊಡಲಾಗಿದೆ. ಇದಕ್ಕಾಗಿ ನೀಡಿದ ಭೂಮಿಯಿಂದ ಬರುವ ಉತ್ಪತ್ತಿಗೆ ಸಂಬಂಧಪಟ್ಟ ತೆರಿಗೆಯನ್ನು ಶ್ರೀಕಳಸೇಶ್ವರ ದೇವಾಲಯದ ಭಂಡಾರಕ್ಕೆ ಒಪ್ಪಿಸುವುದು ಹಾಗೂ ಆ ಹಣವನ್ನು ಉತ್ಸವಗಳಿಗೆ ಬಳಸುವುದು ಎಂದು ಆದೇಶಿಸಲಾಗಿದೆ.
ನಿರೂಪ - ೩
೧.       ಶ್ರೀಕಲಸೇಶ್ವರಸ್ವಾಮಿಯರ್ರು
೨.       ಶಾರ್ವರಿ ಸಂವತ್ಸರದ ಮಾಘಬ ೪ಯು ಕುಜವಾರದಲು ದೆವಸ್ತಾನ ಮಜ್ಜುರ್ರು
೩.       ಮೇಲಿನ ಅಗ್ರಗಾರದಲು ಯಿರ್ರುವ ಶಿಂಗಾಭಟನ ಮಗ ರಾಂಭಟರಿಗೆ ಬರಶಿಕೊಟ ನಿ
೪.       ರ್ರುಪಾ ಅದಾಗಿ ನಂಮ್ಮ ಉತ್ತಾರದ ಸ್ವಾಸ್ತಿವಳಗಣ ಹೊಸಕೆರ್ರೆ ಗ್ರಾಮದ ಪೈಕಿ ನಿಗ
೫.       ದಿ ಮೈಶಿರ್ರಿ ಬಾಬ್ತು ಯಡದಾಳು ಪುಟ್ಟನ ವಗಣಂಗತದಿಂದಾ ವಿರೋಧಿಸಂವ
೬.       ತ್ಸರಲಾಗ್ಯಾತ್ತು ನಾವಗಾಲು ಬಂಜರ್ರುಯಿರ್ರುವ ವಿರಕ್ತಮಠದ ಪ್ರಭುಮಾನ್ಯ ಪಾ
೭.       ಲು ಗದ್ದೆ ಖ೫ ಅಂಕೆ ಸಿಸ್ತು ಪೆಟೆಯಿಂದಾ ಗ ೨ ||||= ಯರಡುವರಹಾರ ಆರ್ರುಹಣ ಯರಡು
೮.       ಯರಡು ಹಾಗ ಯರಡುವೀಸ ಶಿವ್ಯಾ ಮಾವಿನಕೆರ್ರೆ ಗ್ರಾಮದ ಪೈಕಿಬಳಗೂಡು ಐಭಟನೂ
೯.       ಜನಾಯ ಕೊಟಬಾಬ್ತು ಯಡದಾಳಲು ಯಿರ್ರುವ ಗ** ೮||೦ಕೆ ಸಿಸ್ತು ಗ ೨೬೪ ದಿಪದ
೧೦.     ಹೊಂನಬದಿ ಬಾಬ್ತು ಗ ೧೬೦ ಉಭಯಂ ಗ ೨೬೪ ಅಂತ್ತೂ ಗದೆ ಖಂಡ ೧೩||೦ ಗೆ ಸಿಸ್ತು ಗ೫೦||
೧೧.     ದಿಪಾದ ಹೊಂನ ಬದಿ ಗ ೧೬೦ ಉಭಯಂ ಗ೬೬೦||= ಆರ್ರುವರಾಹಾಉ ಯರಡು ಹಾ
೧೨.     ಗ ಉ ಯರಡು ವಿಸದ ಭೂಮಿಯನ್ನು ನನಗೆ ಸಲತಕ ಉಪಾದಿಸಂಬಳಕೆ ಬಾಳುತ್ತಾ
೧೩.     ರಕೆ ಅಪ್ಪಣೆ ಆಗಬೆಕೆಂಬುದಾಗಿ ವಿಳಂಬಿ ಸಂವತ್ಸರದ ವೌಶಾಖ ಶು ೨ ಯು ಗು
೧೪.     ರ್ರುವಾರದಲು ಕೊಪ್ಪದ ಹೋಬಳಿ ಗಂಜಿದಾರ ಕಸ್ತೂರಿ ರಂಗೈಗೆ ಬರಕೊಡು ಅರ್ಜಿ
೧೫.     ಮೆರ್ರಿಗೆ ಯಿತ್ತಾರಿಕಿನಲು ನಿಂನಕೈಯ್ಯಲು ಕಾಣಿಕೆತ್ತೆಗೆದು ಕೊಂಡದು ಯಿಕೆರ್ರಿ ಗ ೨೬೦
೧೬.     ಯರಡು ವರಹಾತ್ತೆಗೆದು ಕೊಂಡು ಯಿಇಸ್ತಳದ ಭೂಮಿಯನ್ನೂ ನಿನಗೆ ಸಲತಕ
೧೭.     ಉಪಾದಿ ಸಂಬಳದ ಬಗ್ಗೈ ಬಾಳುತ್ತಾರಕೆ ದಯಾಪಾಲಿಶಿಯಿರ್ರುವದರ್ರಿಂದಾ ನಿನ್ನು
೧೮.     ಯೀ ಭೂಮಿಯಂನ್ನು ಚೌ ಮೂಲಗಂಧವಾಗಿ ಸಾಗುವಳಿ ಮಾಡಿಕೊಂದು ನಿಂನ
೧೯.     ಸಂತಾನ ಪಾರಂಪರ್ಯವಾಗಿ ಅನುಭವಿಸಿ ಕೊಂಡು ಬಾಹಾದುಯಮ್ದು ಬ
೨೦.     ರಶಿ ಕೊಟ ನಿರ್ರೂಪ.
          ಈ ದಾಖಲೆಯು ಕ್ರಿ.ಶ.೧೮೪೦ರ ಡಿಸೆಂಬರ್ ೧೨ರ ಶನಿವಾರಕ್ಕೆ ಸರಿಹೊಂದುತ್ತದೆ. ಕಳಸ ಅಗ್ರಹಾರದ ಶಿಂಗಾಭಟರ ಮಗ ರಾಮಭಟರಿಗೆ ಬಾಳುತ್ತಾರವನ್ನು ಕಾಣಿಕೆ ತೆಗೆದುಕೊಂಡು ಬರಕೊಟ್ಟಿರುವ ನಿರೂಪದ ಪ್ರತಿ. ಕ್ರಿ.ಶ.೧೮೩೯ರ ಹೇವಿಳಂಬಿ ಸಂವತ್ಸರದ ಏಪ್ರಿಲ್ ೧೫ ಸೋಮವಾರ ಬರೆದುಕೊಂಡ ಅರ್ಜಿಯನ್ನು ಶಾರ್ವರಿ ಸಂವತ್ರ್ಸರದ ಕ್ರಿ.ಶ.೧೮೪೦ರಲ್ಲಿ ಒಪ್ಪಿಗೆ ನೀಡಿ ಆದೇಶಿಸಲಾಗಿದೆ.

­               ಕೆಳದಿ ವಸ್ತು ಸಂಗ್ರಹಾಲಯ, ಕೆಳದಿ-೫೭೭೪೦೧.








Monday, February 17, 2014

ಪಾರ್ಥಿವೇಶ್ವರ ಪೂಜೆ

  ಕರಸ್ಥಲ ಲಿಂಗಪೂಜೆಯ ವೈದಿಕ ರೂಪ : ಪಾರ್ಥಿವೇಶ್ವರ ಪೂಜೆ
ಡಾ. ಎಸ್.ಎಲ್. ಶ್ರೀನಿವಾಸಮೂರ್ತಿ
ರಸ್ಥಲ ಲಿಂಗಪೂಜೆಯು ವೀರಶೈವ ಮತಕ್ಕೆ ಮಾತ್ರ ಸೀಮಿತವಾದ ಪೂಜಾ ವಿಧಾನವೆನ್ನುವುದು ಸದ್ಯಕ್ಕೆ ರೂಢಿಯಲ್ಲಿರುವ ನಂಬಿಕೆ. ಆದರೆ ಬ್ರಾಹ್ಮಣರಲ್ಲಿಯೂ ಬಹು ಅಪರೂಪವಾಗಿ ಈ ಪದ್ಧತಿಯು ಚಾಲ್ತಿಯಲ್ಲಿದೆ ಎಂಬುದನ್ನು ನಿರೂಪಿಸುವುದು ಪ್ರಸ್ತುತ ಸಂಪ್ರಬಂಧದ ಉದ್ದೇಶ.
ವೀರಶೈವ ಮತದ ಉಗಮದ ಬಗ್ಗೆ ಅನೇಕ ಮಂದಿ ವಿದ್ವಾಂಸರು ಸಾಕಷ್ಟು ಚಿಂತನ-ಮಂಥನಗಳನ್ನು ನಡೆಸಿದ್ದಾರೆ. ಬಹುಮಟ್ಟಿಗೆ ಎಲ್ಲರೂ ಒಪ್ಪಿಕೊಂಡಿರುವ ಅಂಶವೆಂದರೆ “ವೀರಶೈವ ಪಂಥವು ಇತರ ಶೈವ ಪಂಥಗಳಾದ ಕಾಶ್ಮೀರಶೈವ ಮತ, ಕಾಳಾಮುಖ, ಪಾಶುಪತ, ಶೈವಸಿದ್ಧಾಂತ ಮತ್ತು ಶ್ರೀಕಂಠನ ಶಕ್ತಿ ವಿಶಿಷ್ಟಾದ್ವೈತಗಳಿಂದ ಆಚಾರ ವಿಚಾರಗಳಲ್ಲಿ ಪ್ರಭಾವಿತವಾಗಿದೆ.’’ ಇಷ್ಟಲಿಂಗ ಧಾರಣೆ ಮತ್ತು ಕರಸ್ಥಲ ಲಿಂಗಪೂಜೆಯು ವೀರಶೈವದ ಕೇಂದ್ರತತ್ವ. “ಲಿಂಗಧಾರಣ ಪದ್ಧತಿಯು ಲಿಂಗಾರ್ಚನೆಯಷ್ಟು ಪ್ರಾಚೀನವಲ್ಲದಿದ್ದರೂ ಬಸವಣ್ಣನವರಿಗಿಂತ ಹಿಂದೆಯೇ ಇದ್ದಂತೆ ತೋರುತ್ತದೆ. ಇದು ವೀರಶೈವರಿಗೆ ವಿಶಿಷ್ಟವಾದ ಕುರುಹು. ಆದ್ದರಿಂದ ಈ ಪದ್ಧತಿಯ ಆದಿಯು ಗೊತ್ತಾದರೆ ವೀರಶೈವ ಮತೇತಿಹಾಸಕ್ಕೆ ಅನುಕೂಲವಾಗುವುದು’’ ಎಂಬ ಉದ್ದೇಶದಿಂದ ಡಿ.ಎಲ್. ನರಸಿಂಹಾಚಾರ್‌ರವರು ತಮ್ಮ ಒಂದು ಲೇಖನದಲ್ಲಿ ಲಿಂಗಧಾರಣೆಯ ಮೂಲಚೂಲಗಳನ್ನು ವಿಸ್ತೃತವಾಗಿ ಚರ್ಚಿಸಿದ್ದಾರೆ. ವೈದಿಕ ಪರಂಪರೆಯ ಮೂಲದವರಾದ ಪಾಶುಪತರು ಮತ್ತು ಅವರ ಶಾಖೆಗಳಾದ ಮಾಹೇಶ್ವರರು, ಲಕುಲೀಶರು ಮತ್ತು ಕಾಳಾಮುಖರು ಶರೀರದ ಮೇಲೆ ಲಿಂಗಗಳನ್ನು ಧರಿಸುತ್ತಿದ್ದರೆಂಬುದನ್ನು ಶ್ರೀಪತಿ ಪಂಡಿತರ ‘ಶ್ರೀಕರಭಾಷ್ಯ (ಕಾಲ ಸು. ಕ್ರಿ.ಶ. ೧೧೬೦), ಸಾಯಣ ಮಾಧವರ ‘ಸರ್ವದರ್ಶನ ಸಂಗ್ರಹ ಮುಂತಾದವುಗಳ ಮೂಲಕ ಅವರು ಖಚಿತಪಡಿಸಿದ್ದಾರೆ. ಹಾಗಾಗಿ ‘ಶರೀರದ ವಿವಿಧ ಭಾಗಗಳ ಮೇಲೆ ಲಿಂಗವನ್ನು ಧರಿಸುವುದು ವೇದ ಸಮ್ಮತವಾದ ವಿಧಾನವಾಗಿದ್ದು ಅದನ್ನು ಎಲ್ಲ ಶೈವಪಂಥದವರೂ ನಡೆಸಿಕೊಂಡು ಬಂದಿದ್ದರು. ವೀರಶೈವವು ಈ ಪದ್ಧತಿಯನ್ನು ಮುಂದೆ ತನ್ನದಾಗಿಸಿಕೊಂಡಾಗ ಇಷ್ಟಲಿಂಗ ವೆಂಬ ತತ್ವವು ಮೂಡಿರಬೇಕು’’ ಎಂದು ತೀರ್ಮಾನಿಸಬಹುದು.
“ತಮ್ಮ ಗ್ರಾಮಗಳಲ್ಲಿ ಸಾರ್ವಜನಿಕವಾಗಿ ಪೂಜೆಗೊಳ್ಳುತ್ತಿದ್ದ ದೇವಾಲಯಗಳ ಸ್ಥಾವರಲಿಂಗಗಳ ಹೆಸರುಗಳನ್ನೇ ಶಿವಶರಣರು ತಮ್ಮ ದೇಹದ ಮೇಲೆ ಧರಿಸುತ್ತಿದ್ದ ಇಷ್ಟಲಿಂಗಕ್ಕೂ ಹೊಂದಿರುತ್ತಿದ್ದರು. ಅಂತಹ ಸ್ಥಾವರಲಿಂಗದ ಕುರುಹನ್ನು (ಇಷ್ಟಲಿಂಗವನ್ನು) ಮನೆಯ ಜಗುಲಿಯ ಮೇಲೆ ಇಟ್ಟು ಪೂಜಿಸುವ ಸಂಪ್ರದಾಯವೂ ಇತ್ತು. ಶೈವರ ಸ್ಥಾವರಲಿಂಗವು ಶರಣರ ಇಷ್ಟಲಿಂಗವೆನಿಸುವಲ್ಲಿ ಶೈವರು ಪ್ರವಾಸದ ಅನುಕೂಲಕ್ಕಾಗಿ ಮಾಡಿಕೊಂಡ ಉರಸ್ಥಲದ ಧಾರಣಕ್ರಮವೂ, ಪೂಜಾ ಅನುಕೂಲಕ್ಕಾಗಿ ಮಾಡಿಕೊಂಡ ಕರಸ್ಥಲದ ಅರ್ಚನ ಕ್ರಮವೂ ಶರಣರ ಇಷ್ಟಲಿಂಗದ ಸಾಮಾನ್ಯ ಬಾಹ್ಯ ಲಕ್ಷಣಗಳಾದವು ಎಂಬ ಅಭಿಪ್ರಾಯವನ್ನು ಎಂ.ಎಂ. ಕಲಬುರ್ಗಿಯವರು ತಮ್ಮ ಒಂದು ಸಂಪ್ರಬಂಧದಲ್ಲಿ ವ್ಯಕ್ತಪಡಿಸಿದ್ದಾರೆ. “ಇಷ್ಟಲಿಂಗವನ್ನು ಶಿರಸ್ಸು, ಕೊರಳು, ರೆಟ್ಟೆ, ಎದೆ, ಕರಸ್ಥಳ ಇವುಗಳಲ್ಲಿ ಯಾವುದಾದರೂ ಒಂದು ಸ್ಥಳದಲ್ಲಿ ಧರಿಸಬೇಕು’’ ಎನ್ನುವುದು ಶಾಸ್ತ್ರನಿಯಮ. ಲಿಂಗವನ್ನು ದೇಹದ ಯಾವುದೇ ಭಾಗದಲ್ಲಿ ಧರಿಸಿದರೂ ಅದನ್ನು ಅಂಗೈಯಲ್ಲಿಟ್ಟುಕೊಂಡು ಪೂಜಿಸುವುದು ಪದ್ಧತಿ. ಇದೇ ಕರಸ್ಥಲ ಲಿಂಗಪೂಜೆ.
ಬಸವಪೂರ್ವಯುಗದಲ್ಲಿ ಹೀಗೆ ಲಾಕುಲೀಶ ಮತ್ತು ಪಾಶುಪತ ಪಂಥದವರಲ್ಲಿದ್ದ ಕರಸ್ಥಲ ಲಿಂಗಪೂಜೆಯು ಮುಂದೆ ವೈದಿಕ ಪರಂಪರೆಯಲ್ಲಿ ಮುಂದುವರೆದದ್ದು ಕೇವಲ ಆರಾಧ್ಯ ಬ್ರಾಹ್ಮಣರಲ್ಲಿ ಮಾತ್ರ ಎಂದು ಕೆಲವು ವಿದ್ವಾಂಸರ ಅಭಿಪ್ರಾಯ. ಆದರೆ ಲಿಂಗವನ್ನು ದೇಹದ ಮೇಲೆ ಧರಿಸದೇ ಇದ್ದರೂ ಪ್ರತಿನಿತ್ಯವೂ ಮಣ್ಣಿನಿಂದ ಹೊಚ್ಚಹೊಸ ಲಿಂಗವೊಂದನ್ನು ರಚಿಸಿ ಕರಸ್ಥಲದಲ್ಲಿರಿಸಿಕೊಂಡು ಪೂಜಿಸುವ ವಿಧಾನವು ಅತ್ಯಂತ ಅಪರೂಪವಾಗಿಯಾದರೂ ಬ್ರಾಹ್ಮಣರಲ್ಲಿ ಉಳಿದುಬಂದಿರುವುದಕ್ಕೆ ಎರಡು ಪುರಾವೆಗಳು ಇಲ್ಲಿವೆ.
೧. ಡಿ.ವಿ. ಗುಂಡಪ್ಪನವರು ತಮ್ಮ ‘ಜ್ಞಾಪಕ ಚಿತ್ರಶಾಲೆಯ ಎಂಟನೇ ಸಂಪುಟದಲ್ಲಿ ‘ಶಿವಪೂಜೆ ನಾರಣಪ್ಪನವರು ಎಂಬುವರನ್ನು ಕುರಿತು ನೀಡುವ ಚಿತ್ರಣ ಹೀಗಿದೆ:
ಪಾರ್ಥೀವ ಪೂಜೆ
ನಾರಣಪ್ಪನವರು ಬೆಳಗ್ಗೆ ೫ ಗಂಟೆಗೆ ಎದ್ದು ತಣ್ಣೀರು ಸ್ನಾನ ಮಾಡಿ ವಿಭೂತಿ ಧರಿಸಿ ಮೂರು ನಾಲ್ಕು ರುದ್ರಾಕ್ಷಿ ಸರಗಳನ್ನು ಹಾಕಿಕೊಂಡು ಮೊದಲು ಪಾರ್ಥೀವ ಪೂಜೆ ಮಾಡುವರು. ಈ ಪಾರ್ಥೀವ ಲಿಂಗಪೂಜೆಯ ಪದ್ಧತಿ ಈಗ ನನಗೆ ತಿಳಿದಿರುವಂತೆ ಎಲ್ಲೂ ಇಲ್ಲ. ನನಗೆ ತೋರುತ್ತದೆ ಅದು ಸರ್ವೋತ್ಕೃಷ್ಟವಾದ ಏಕಾಂತ ಭಕ್ತಿಯೆಂದು ಭಕ್ತನು ಹುತ್ತದ ಮಣ್ಣನ್ನು ತಂದಿರಿಸಿಕೊಂಡಿರುತ್ತಾನೆ. ಅದು ಒದ್ದೆಯಾಗಿರುತ್ತದೆ. ಮಾರನೆಯ ದಿನ ಬೆಳಗ್ಗೆ ಸ್ನಾನ ಸಂಧ್ಯಾದಿಗಳು ಮುಗಿದ ತರುವಾಯ ಆತನು ತನ್ನ ಎಡಗೈಯಲ್ಲಿ ಆ ಮಣ್ಣಿನಿಂದ ಒಂದು ಶಿವಲಿಂಗದ ಪ್ರತೀಕವನ್ನು ಮಾಡಿ ಇರಿಸಿಕೊಳ್ಳುತ್ತಾನೆ. ಮಾಡಿ ಅದನ್ನು ಬಲಗೈಯಿಂದ ಪೂಜಿಸುತ್ತಾನೆ. ಆಗ ಹೇಳುವ ಮಂತ್ರಗಳೇ ‘ನಿಧನಪತಯೇ ನಮಃ ಇತ್ಯಾದಿಗಳು. ಅದೇ ‘ಅಂಗೈಯ ಲಿಂಗ. ಈ ಅರ‍್ಚನೆಗೆ ಬೇಕಾದ್ದು ತುಂಬೆಹೂವು ಮತ್ತು ಬಿಲ್ವ. ಒಂದೊಂದು ಸಾರಿ ನಮ್ಮ ನಾರಣಪ್ಪನವರು ನೈವೇದ್ಯಕ್ಕೆ ಬೇರೆ ಏನೂ ಗತಿಯಿಲ್ಲದೆ ಕುದುರೆಗಾಗಿ ಇರಿಸಿಕೊಂಡಿದ್ದ ಹುರಿದ ಹುರುಳಿಯನ್ನು ನೈವೇದ್ಯ ಮಾಡಿದ್ದುಂಟಂತೆ. ನಾರಣಪ್ಪನವರನ್ನು ಜನ ಶಿವಪೂಜಾ ಧುರಂಧರ ಎಂದು ಕರೆಯುತ್ತಿದ್ದರು.’’
೨. ಶೃಂಗೇರಿಯ ಶ್ರೀ ಸದ್ವಿದ್ಯಾ ಸಂಜೀವಿನೀ ಪಾಠಶಾಲೆಯಲ್ಲಿ ಅಧ್ಯಾಪಕರಾಗಿದ್ದು ನಂತರ ಅಧ್ಯಕ್ಷರಾಗಿದ್ದ ಆಸ್ಥಾನ ಜ್ಯೋತಿಷ್ಟ ವಿದ್ವಾನ್ ವೇ.ಬ್ರ.ಶ್ರೀ. ಶಂಕರ ನಾರಾಯಣ ಜೋಯಿಸರು (೧೯೦೩-೧೯೯೮) “ನಿಜ ಜೀವನದಲ್ಲಿ ಶಿವಶಕ್ತಿಯ ಉಪಾಸಕರು. ಅವರು ಅನೇಕ ವರ್ಷಗಳ ಕಾಲ ಪ್ರತಿದಿನ ಮೃಣ್ಮಯ ಪಾರ್ಥಿವೇಶ್ವರನ ಪೂಜೆಯನ್ನು ಮಾಡುತ್ತಿದ್ದರು’’ ಶ್ರೀ ಜೋಯಿಸರು ಕರಸ್ಥಲದಲ್ಲಿ ಮಣ್ಣಿನ ಲಿಂಗವನ್ನು ಇರಿಸಿಕೊಂಡು ಪೂಜಿಸುತ್ತಿರುವ, ೧೯೫೮ರಲ್ಲಿ ತೆಗೆಯಲಾದ ಛಾಯಾಚಿತ್ರವನ್ನು ಗಮನಿಸಿ.
ಪ್ರಸ್ತುತದಲ್ಲಿ ಪಾರ್ಥಿವ ಪೂಜೆಯನ್ನು ಆಚರಣೆಯಲ್ಲಿ ಇರಿಸಿಕೊಂಡಿರುವವರು ಯಾರಾದರೂ ಇದ್ದಾರೆಯೇ ಎಂಬ ಮಾಹಿತಿಯನ್ನು ಪಡೆಯುವಲ್ಲಿ ನಡೆಸಿದ ಪ್ರಯತ್ನ ಫಲ ನೀಡಿಲ್ಲ. ಹಾಗಾಗಿ ಈ ಆಚರಣೆಯ ವಿಧಿ ವಿಧಾನಗಳನ್ನು ಅರಿಯಲು ಮೇಲ್ಕಂಡ ಉಲ್ಲೇಖಗಳನ್ನು ಮಾತ್ರವೇ ಆಧರಿಸದೆ ವಿಧಿಯಿಲ್ಲ. ಆದರೆ ಶಿವ (ಮಹಾ) ಪುರಾಣದ ವಿದ್ಯೇಶ್ವರ ಸಂಹಿತೆಯ ೧೯, ೨೦ ಮತ್ತು ೨೧ನೇ ಅಧ್ಯಾಯಗಳು ಸಂಪೂರ್ಣವಾಗಿ ಪಾರ್ಥಿವೇಶ್ವರ ಪೂಜೆಯ ವಿವರಣೆಗೆ ಮೀಸಲಾಗಿದ್ದು ಇದರ ಬಗ್ಗೆ ಹೆಚ್ಚಿನ ಬೆಳಕನ್ನು ಚೆಲ್ಲುತ್ತವೆ. ಸುಮಾರು ೧೩೦ಕ್ಕೂ ಹೆಚ್ಚು ಅನುಷ್ಟುಪ್ ಶ್ಲೋಕಗಳಲ್ಲಿ ಹರಡಿರುವ ಇಲ್ಲಿಯ ವಿವರಗಳನ್ನು ಹೀಗೆ ಸಂಗ್ರಹಿಸಬಹುದು:
“ಇರುವ ಎಲ್ಲ ಬಗೆಯ ಲಿಂಗಗಳಲ್ಲಿಯೂ* ಪಾರ್ಥಿವ ಲಿಂಗವೇ ಅತ್ಯುತ್ತಮ. ಅದನ್ನು ಪೂಜಿಸಿ ಅನೇಕರು ಸಿದ್ಧಿಯನ್ನು ಪಡೆದಿರುವರು.೧೦ ದೇವತೆಗಳಲ್ಲಿ ಮಹೇಶ್ವರ, ನದಿಗಳಲ್ಲಿ ಗಂಗೆ, ಮಂತ್ರಗಳಲ್ಲಿ ಪ್ರಣವ, ಪಟ್ಟಣಗಳಲ್ಲಿ ಕಾಶಿ, ವರ್ಣಗಳಲ್ಲಿ ಬ್ರಾಹ್ಮಣ ಹಾಗೂ ವ್ರತಗಳಲ್ಲಿ ಶಿವರಾತ್ರಿ ಹೇಗೆ ಶ್ರೇಷ್ಠವೋ ಹಾಗೆಯೇ ಲಿಂಗಗಳಲ್ಲೆಲ್ಲಾ ಪಾರ್ಥಿವ ಲಿಂಗವು.೧೧ ಕೈಯಲ್ಲಿ ಇರಿಸಿಕೊಳ್ಳುವ ಚರಲಿಂಗವನ್ನು ಅಖಂಡವಾಗಿ ಮತ್ತು ವೇದಿಕೆಯ ಮೇಲೆ ಇರಿಸಿ ಪೂಜಿಸುವಂತಹುದನ್ನು ಪೀಠ ಮತ್ತು ಲಿಂಗವೆಂದು ಎರಡು ಭಾಗಗಳಾಗಿ ಮಾಡಬೇಕು.೧೨ ವೈದಿಕರಾದ ಬ್ರಾಹ್ಮಣರು ತಮ್ಮ ಗೃಹ್ಯಸೂತ್ರದಲ್ಲಿ ಹೇಳಿರುವ ವಿಧಿಯಂತೆ ಸ್ನಾನ ಮಾಡಿ ಸಂಧ್ಯಾವಂದನೆಯನ್ನು ಆಚರಿಸಿ ಮೊದಲು ಬ್ರಹ್ಮಯಜ್ಞವನ್ನು ಆಚರಿಸಿ ಬಳಿಕ ತರ್ಪಣ ನೀಡಬೇಕು. ನಂತರ ಶುದ್ಧವಾದ ಪ್ರದೇಶದಿಂದ ಮಣ್ಣನ್ನು ಹುಡುಕಿ ತಂದು ಅದನ್ನು ನೀರಿನಲ್ಲಿ ಶೋಧಿಸಿ ವೇದೋಕ್ತ ವಿಧಿಯಂತೆ ನಿಧಾನವಾಗಿ ಉಂಡೆಕಟ್ಟಿ ಲಿಂಗವನ್ನು ರಚಿಸಬೇಕು.೧೩ ಅನಂತರ ‘ನಮಸ್ತೇ ರುದ್ರ, ‘ನಮಃ ಶಂಭವಾಯ ಮುಂತಾದ ತೈತ್ತರೀಯ ಸಂಹಿತೆಯ ಮಂತ್ರಗಳಿಂದ ಮತ್ತು ‘ಯಾತೇ ರುದ್ರ ಮೊದಲಾದ ರುದ್ರಾಧ್ಯಾಯದ ಮಂತ್ರಗಳಿಂದ೧೪ ಅಥವಾ ಗುರುವು ಉಪದೇಶಿಸಿರುವಂತಹ ಶಿವ ಪಂಚಾಕ್ಷರೀ ಮಂತ್ರದಿಂದ೧೫ ಷೋಡಶೋಪಚಾರಗಳನ್ನು ಅರ್ಪಿಸಿ ವಿಧಿವತ್ತಾಗಿ ಪೂಜಿಸಬೇಕು. ಗೃಹಸ್ಥರಾದವರು ಈ ಲಿಂಗವನ್ನು ಪೀಠದ ಮೇಲಿಟ್ಟು೧೬ ವಿರಕ್ತರು (ಸನ್ಯಾಸಿಗಳು) ತಮ್ಮ ಕರತಲದಲ್ಲಿ ಇರಿಸಿಕೊಂಡೂ ಪೂಜಿಸಬೇಕು.’’೧೭
ಶಿವಪೂಜೆ ನಾರಣಪ್ಪನವರು ಹಾಗೂ ಶಂಕರ ನಾರಾಯಣ ಜೋಯಿಸರಿಬ್ಬರ ಪೂಜಾವಿಧಾನವೂ ಶಿವಪುರಾಣದ ಈ ಎಲ್ಲ ವಿಧಿಗಳಿಗೆ ಅನುಗುಣವಾಗಿರುವುದರಿಂದ ನಿಸ್ಸಂದೇಹವಾಗಿ ಇದು ವೈದಿಕ ಸ್ವರೂಪದ ಕರಸ್ಥಲ ಲಿಂಗಪೂಜೆಯೇ ಆಗಿದೆ. ಹಾಗಾಗಿ ಒಂದು ಕಾಲದಲ್ಲಿ ಲಾಕುಲೀಶ, ಪಾಶುಪಾತ ಮುಂತಾದವರಲ್ಲಿ ರೂಢಿಯಲ್ಲಿದ್ದ ಅಪರೂಪದ ಈ ವೈದಿಕ ಪೂಜಾ ವಿಧಾನವು ೨೦ನೆಯ ಶತಮಾನದಲ್ಲಿಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತ್ತೆಂಬುದು ಖಚಿತವಾಗುತ್ತದೆ.
[ಈ ಸಂಪ್ರಬಂಧವನ್ನು ಸಿದ್ಧಪಡಿಸುವಲ್ಲಿ ನೆರವಾದ ಶ್ರೀಮತಿ ಕೆ.ಎಸ್. ಶೈಲಜಾ ಹಾಗೂ ಡಾ. ಎಸ್.ವಿ. ಶ್ರೀಧರಮೂರ್ತಿ ದಂಪತಿಗಳಿಗೆ, ಅಪರೂಪದ ಛಾಯಾಚಿತ್ರವನ್ನು ಒದಗಿಸಿದ ಹೈದರಾಬಾದಿನ ಶ್ರೀ ಸೀತಾರಾಮ್‌ರವರಿಗೆ ಹಾಗೂ ಆರಾಧ್ಯ ಬ್ರಾಹ್ಮಣರನ್ನು ಕುರಿತು ವಿವರಿಸಿದ ತುಮಕೂರಿನ ಡಾ. ಬಿ. ನಂಜುಂಡಸ್ವಾಮಿಯವರಿಗೆ ಧನ್ಯವಾದಗಳು.)

ಆಧಾರಸೂಚಿ ಮತ್ತು ಟಿಪ್ಪಣಿಗಳು
೧.         ರುದ್ರಪ್ಪ ಜೆ., ‘ವೀರಶೈವ ಧರ್ಮ, ಕರ್ಣಾಟಕದ ಪರಂಪರೆ, ಭಾಗ ೧, ಪುಟ ೫೨೯, ೧೯೭೦.
೨.         ನರಸಿಂಹಾಚಾರ್, ಡಿ.ಎಲ್. ‘ಲಿಂಗಾರ್ಚನೆ, ಲಿಂಗಧಾರಣೆ ಪೀಠಿಕೆಗಳು, ಲೇಖನಗಳು, ಪುಟ ೯೮೬, ೧೯೭೧.
೩.         ಪಾರಮೇಶ್ವರಾಗಮದ ಪ್ರಕಾರ ಚತುರ್ವರ್ಣಗಳಲ್ಲಿ ಯಾರೇ ಆದರೂ ಲಿಂಗಧಾರಣ ಮಾತ್ರದಿಂದ ಅವರು ಶಿವರೇ ಆಗುವರು. (ನೋಡಿ: ನಂದಿಕೋಲಮಠ, ಜ.ಐ., ಕರಸ್ಥಲ ಪರಂಪರೆ, ಪುಟ ೩೫, ೨೦೦೯.
೪.         ಕಲಬುರ್ಗಿ ಎಂ.ಎಂ., ‘ಇಷ್ಟಲಿಂಗ, ಮಾರ್ಗ ಸಂ. ೧, ಪುಟ ೧೮೭, ೧೯೮೮.
೫.         ಉತ್ತಮಾಂಗೇ ಗಲೇಕಕ್ಷೇ ತಥಾ ವಕ್ಷಃ ಸ್ಥಲೇಪಿ ವಾ |
            ಕರಸ್ಥಲೇಪಿವಾ ನಿತ್ಯಂ ಸಾವಧಾನೇನ ಧಾರಯ || -ಸೂಕ್ಷ್ಮಾಗಮ.
೬.         “ಲಿಂಗಯಜ್ಞೋಪವೀತಧಾರೀ ಪಾಶುಪತ ಮಹೇಶ್ವರ..ಧರ್ಮವನ್ನು ಬಸವೇಶ್ವರನು ಸಂಸ್ಕರಿಸಲು, ಪಾಶುಪತರು ಪಥವನ್ನರಿಯದೆ, ಕಾಳಾಮುಖರು ಕಂಗೆಟ್ಟು ಸುಧಾರಿತ ಧರ್ಮವನ್ನು ಬಹುಸಂಖ್ಯೆಯಲ್ಲಿ ಅಪ್ಪಿಕೊಂಡರಾದರೂ ಲಿಂಗ ಬ್ರಾಹ್ಮಣ ಧರ್ಮವು ಆರಾಧ್ಯ ಬ್ರಾಹ್ಮಣರಲ್ಲಿ ಮುಂದುವರೆಯಿತು’’ -ಮಲ್ಲಪ್ಪ ಟಿಎನ್., ‘ಬಸವಯುಗದ ಹಿನ್ನೆಲೆ, ಬಸವೇಶ್ವರ ಸಮಕಾಲೀನರು, ಪುಟ ೬೮೦, ೨೦೦೭.
೭.         ಗುಂಡಪ್ಪ. ಡಿ.ವಿ. ‘ಡಿವಿಜಿ ಕೃತಿ ಶ್ರೇಣಿ, ಸಂ. ೮, ಪುಟ ೨೪೯, ೧೯೯೮.
೮.         ‘ಸಾರ್ಥಕಜೀವಿ ಶೃಂಗೇರಿ ಕುಲಪತಿ ಶಂಕರನಾರಾಯಣ ಜೋಯಿಸರು, ಪುಟ ೮, ಶ್ರೀ ಕಲ್ಲೇಶ್ವರ ಮಲ್ಲೇಶ್ವರ ಸ್ವಾಮಿ ಸೇವಾ ಟ್ರಸ್ಟ್, ಶಿವಮೊಗ್ಗ, ೨೦೦೯.
೯.         ವೆಂಕಟರಾವ್ (ಸಂ) ಶಿವಮಹಾಪುರಾಣ, ಭಾಗ ೧, ಜಯಚಾಮರಾಜೇಂದ್ರ ಗ್ರಂಥಮಾಲಾ, ಕ್ರ.ಸಂ. ೨೧, ೧೯೪೫.
*           ದ್ರವ್ಯಗಳ ಭೇದದಿಂದ ಲಿಂಗಗಳಲ್ಲಿ ಶೈಲಜ, ರತ್ನಜ, ಧಾತುಜ, ದಾರುಜ, ಮೃಣ್ಮಯ ಮತ್ತು ಕ್ಷಣಿಕವೆಂಬ ಆರು ಬಗೆಗಳಿವೆ. -ಲಿಂಗ ಮಹಾಪುರಾಣ, ಪೂರ್ವಭಾಗ, ಅಧ್ಯಾಯ ೭೪, ಶ್ಲೋಕ : ೧೭.
೧೦.      ಶಿವಮಹಾಪುರಾಣ, ಅಧ್ಯಾಯ ೧೮, ಶ್ಲೋಕ-೪.
೧೧.      ಅಲ್ಲೇ., ಶ್ಲೋಕಗಳು ೯-೧೫.
೧೨.      ಅಲ್ಲೇ., ಶ್ಲೋಕಗಳು ೩೧-೩೫.
೧೩.      ಅಲ್ಲೇ., ಅಧ್ಯಾಯ ೧೯, ಶ್ಲೋಕಗಳು ೬-೯.
೧೪.      ಅಲ್ಲೇ., ಶ್ಲೋಕಗಳು ೧೧-೪೧.
೧೫.      ಅಲ್ಲೇ., ಶ್ಲೋಕಗಳು ೪೨-೪೪.
೧೬.      ಅಲ್ಲೇ., ಅಧ್ಯಾಯ ೨೦, ಶ್ಲೋಕ ೩೩.
೧೭.      ಅಲ್ಲೇ., ಶ್ಲೋಕ ೩೫.
?   ಮುಖ್ಯಸ್ಥ, ಕನ್ನಡ ವಿಭಾಗ, ವಿಜಯ ಪದವಿ ಪೂರ್ವ ಕಾಲೇಜು, ಆರ್.ವಿ. ರಸ್ತೆ, ಬಸವನಗುಡಿ, ಬೆಂಗಳೂರು-೫೬೦೦೦೪.