Sunday, March 31, 2013

ರಾಯಚೂರು ಹನುಮಾನ ಮಂದಿರದ ಭಿತ್ರಿಚಿತ್ರಗಳು

 ಕಾಲಗರ್ಭದಲ್ಲಿ ಲೀನವಾದ ರಾಯಚೂರು
ಹನುಮಾನ ಮಂದಿರದ ಭಿತ್ರಿಚಿತ್ರಗಳು
ಡಾ. ಮಲ್ಲಿಕಾರ್ಜುನ ಸಿ. ಬಾಗೋಡಿ
 ಅಧ್ಯಾಪಕರು, ದೃಶ್ಯಕಲಾ ಅಧ್ಯಯನ ವಿಭಾಗ,
 ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ-೫೮೫೭೦೬.


ರಾಯಚೂರು; ಹೈದರಾಬಾದ ನಿಜಾಮ್ ರಾಜ್ಯದ ಆಡಳಿತಕ್ಕೂ ಒಳಪಟ್ಟ ಈ ನಗರದಲ್ಲಿ ಅದೆಷ್ಟೋ ಸ್ಮಾರಕಗಳು (ಮಠ-ಮಂದಿರ ಹಾಗೂ ಶ್ರೀಮಂತರ ಮನೆಗಳು) ನಿರ್ಮಿಸಲ್ಪಟ್ಟವು. ಕೆಲವೊಂದು ಸ್ಮಾರಕಗಳಲ್ಲಿ ಚಿತ್ರರಚನೆ ಮಾಡಲಾಗಿದ್ದರಿಂದ ಇವು ಕರ್ನಾಟಕದ ಪ್ರಾಚೀನ ಭಿತ್ತಿಚಿತ್ರಗಳುಳ್ಳ ನೆಲೆಗಳೆಂದೂ ಗುರುತಿಸಿಕೊಂಡಿವೆ. ಕಿಲ್ಲೆ ಬೃಹನ್ಮಠ, ಮಡ್ಡಿಪೇಟೆಯ ಶ್ರೀ ಹನುಮಾನ ಮಂದಿರ ಹಾಗೂ ಶ್ರೀ ಖಾಜನಗೌಡರ ಮನೆಗಳನ್ನು ಇಲ್ಲಿ ಪ್ರಮುಖವಾಗಿ ಹೆಸರಿಸಬಹುದು.  
ರಾಯಚೂರು ನಗರದ ಹೃದಯಭಾಗವಾದ ಸೋಮವಾರಪೇಟೆಯ (ಈ ಸ್ಥಳವನ್ನು ಮಡ್ಡಿಪೇಟೆ ಎಂತಲೂ ಕರೆಯಲಾಗುತ್ತದೆ) ಖಾಜನಗೌಡರ ಮನೆಯ ಹತ್ತಿರದಲ್ಲೇ ಹನುಮಾನ ಮಂದಿರವಿರುವುದು. ಖಾಜನಗೌಡರ ಮನೆ ನಿರ್ಮಾಣದ ನಂತರದಲ್ಲಿ ಕಟ್ಟಲ್ಪಟ್ಟದ್ದೆಂದು ಹೇಳಲಾಗುವ ಈ ದೇವಾಲಯದ ಒಳಮಾಳಿಗೆ, ಭುವನೇಶ್ವರಿ ಹಾಗೂ ಕಲ್ಲಿನ ತೊಲೆಗಳ ಮೇಲೆ ರಾಮಾಯಣ, ಮಹಾಭಾರತ ಸನ್ನಿವೇಶದ ಚಿತ್ರಗಳೊಂದಿಗೆ ಪ್ರಾಣಿ-ಪಕ್ಷಿಗಳು, ಅಲಂಕಾರಿಕ ವಿನ್ಯಾಸಗಳು ಚಿತ್ರಣಗೊಂಡಿವೆ. ಒಂದೊಮ್ಮೆ ದೇವಾಲಯದ ಗೋಡೆಗಳ ಮೇಲೂ ಚಿತ್ರಗಳಿದ್ದವೆಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.
ಎತ್ತರವಾದ ಕಟ್ಟೆಯ ಮೇಲೆ ಕಟ್ಟಲ್ಪಟ್ಟ ಈ ದೇವಾಲಯ ದಕ್ಷಿಣಾಭಿಮುಖವಾಗಿದ್ದು, ಮುಖಮಂಟಪ ಹಾಗೂ ಗರ್ಭಗೃಹ ಹೊಂದಿದೆ. ಮುಖಮಂಟಪದ ನಡುವೆ ನಾಲ್ಕು ಕಂಬಗಳುಳ್ಳ ಅಂಕಣವಿದೆ. ಈ ಅಂಕಣದಲ್ಲಿನ ನಾಲ್ಕು ಕಂಬಗಳು ಹಾಗೂ ಗೋಡೆಗಳಲ್ಲಿನ ಕಂಬಗಳು ಸೇರಿದಂತೆ ಒಟ್ಟು ಹದಿನಾರು ಕಂಬಗಳನ್ನು ಈ ಮುಖಮಂಟಪ ಹೊಂದಿದೆ. ಈ ಕಂಬಗಳಲ್ಲಿ ಯಾವುದೇ ರೀತಿಯ ಕುಸುರಿ ಕೆತ್ತನೆಯು ಕಂಡುಬರುವುದಿಲ್ಲ. ಒಂದು ಕಂಬದಿಂದ ಇನ್ನೊಂದು ಕಂಬಕ್ಕೆ ಆಸರೆಯಾಗಿ ಒಟ್ಟು ಇಪ್ಪತ್ನಾಲ್ಕು ತೊಲೆಗಳನ್ನು ಜೋಡಿಸಿದೆ. ಹಾಗಾಗಿ ಈ ತೊಲೆಗಳು ಮುಖಮಂಟಪವನ್ನು ಒಟ್ಟು ಒಂಭತ್ತು ಅಂಕಣಗಳಂತೆ ವಿಭಾಗಿಸುತ್ತದೆ.
ಪ್ರತಿಯೊಂದು ಅಂಕಣದಲ್ಲಿ ಹಾಗೂ ತೊಲೆಗಳ ಮೂರೂ ಬದಿಯಲ್ಲಿ ವರ್ಣಚಿತ್ರಗಳಿವೆ. ಮಧ್ಯದ ಅಂಕಣ ಹಾಗೂ ನಾಲ್ಕೂ ಮೂಲೆಗಳಲ್ಲಿನ ಅಂಕಣಗಳ ಮಧ್ಯೆ ಸುಂದರವಾದ ಭುವನೇಶ್ವರಿಯ ಕೆತ್ತನೆಯಿದ್ದು, ಈ ಕೆತ್ತನೆಯ ಮೇಲೆ ಹಳದಿ ವರ್ಣದ ಹಿನ್ನೆಲೆಯಲ್ಲಿ ಹಸಿರು, ಕೆಂಪು ಹಾಗೂ ನೀಲಿ ವರ್ಣಗಳಿಂದ ನವಿಲು, ಗಿಳಿ-ಗೊರವಂಕ ಇತ್ಯಾದಿ ಪಕ್ಷಿಗಳ ಚಿತ್ರಗಳೊಂದಿಗೆ ಸುಂದರವಾದ ನಕ್ಷಾಚಿತ್ರಗಳನ್ನು ಬಿಡಿಸಿದೆ. ಇನ್ನುಳಿದ ಅಂಕಣಗಳಲ್ಲಿ ಭುವನೇಶ್ವರಿಯ ಕೆತ್ತನೆ ಕಂಡುಬರುವುದಿಲ್ಲವಾದರೂ, ನೀಲಿ, ಹಳದಿ ಹಾಗೂ ಕೆಂಪು ವರ್ಣಗಳ ನಕ್ಷಾವಿನ್ಯಾಸದ (ಸುರಪುರ ಚಿತ್ರಕಲೆಯ ಭಾವಚಿತ್ರ ರಚನೆಯಲ್ಲಿ ಕಂಡುಬರುವ ನೆಲಹಾಸು ವಿನ್ಯಾಸವನ್ನು ಹೋಲುತ್ತದೆ) ಚಿತ್ರಣವಿದೆ. ಹಾಗೆಯೇ ಕಲ್ಲಿನ ತೊಲೆಗಳ ಮೂರೂ ಬದಿಯಲ್ಲಿ ಸಮುದ್ರ ಮಂಥನ, ಅಶ್ವಮೇಧಯಾಗ ಕುದುರೆಯನ್ನು ಕಟ್ಟಿ ಹಾಕುವುದು, ಸೀತಾ ಸ್ವಯಂವರ, ಲವ-ಕುಶ, ಯುದ್ಧದ ಸನ್ನಿವೇಶ ಮೊದಲಾದ ಚಿತ್ರಗಳಿವೆ. ಪ್ರತಿಯೊಂದು ವಿಷಯದ ಚಿತ್ರಗಳಲ್ಲಿ ದೇವತಾಪುರುಷರನ್ನು ತೆಲುಗು ಅಕ್ಷರಗಳಲ್ಲಿ ಬರೆಯಲಾಗಿದ್ದು ವಿಶೇಷ. 
ಈ ದೇವಾಲಯದ ಗರ್ಭಗೃಹದಲ್ಲಿನ ಆಂಜನೇಯ ಸ್ವಾಮಿ ವಿಗ್ರಹವು (ಶಿಲಾ ಮಾಧ್ಯಮದ) ಐದು ಅಡಿ ಎತ್ತರದಲ್ಲಿದ್ದು, ಸುಂದರವಾಗಿದೆ. ಗರ್ಭಗೃಹ ದ್ವಾರದ ಮೇಲಿನ ಶಿಲಾಪಟ್ಟಿಕೆಯಲ್ಲಿ ಏಳು ಹೆಡೆಗಳುಳ್ಳ ಆದಿಶೇಷನ ಮೇಲೆ ವಿಷ್ಣು ಪವಡಿಸಿದ್ದಾನೆ. ಶ್ರೀದೇವಿ ಹಾಗೂ ಭೂದೇವಿಯರು ವಿಷ್ಣುವಿನ ಪಾದಸೇವೆಯಲ್ಲಿ ನಿರತರಾಗಿದ್ದಾರೆ. ವಿಷ್ಣುವಿನ ನಾಭಿಯಿಂದ ಜನಿಸಿದ ಬ್ರಹ್ಮನು ಕಮಲದಲ್ಲಿ ವಿರಾಜಮಾನನಾಗಿದ್ದಾನೆ. ಶೇಷಶಾಯಿ ವಿಷ್ಣುವಿನ ಎರಡೂ ಕಡೆ ಗರುಡ ಹಾಗೂ ಆಂಜನೇಯರು ಕೈಮುಗಿಯುತ್ತ ನಿಂತಿರುವರು. ಇದೊಂದು ಉಬ್ಬುಮಾದರಿಯ ಕೆತ್ತನೆಯಾಗಿದ್ದು, ಈ ಕೆತ್ತನೆಯ ಮೇಲೆ ವರ್ಣಲೇಪನ ಮಾಡಲಾಗಿದೆ. ಹಾಗೆಯೇ ಈ ಶಿಲಾಪಟ್ಟಿಕೆಯ ಮೇಲ್ಭಾಗದಲ್ಲಿ ಸೂರ್ಯ ಹಾಗೂ ಚಂದ್ರರನ್ನು ವರ್ಣದಿಂದ ಚಿತ್ರಿಸಿದೆ. ಇದಿಷ್ಟು ದೇವಾಲಯದೊಳಗಿನ ವಿನ್ಯಾಸದ ಚಿತ್ರಣ. ಈ ದೇವಾಲಯ ಮುಖಮಂಟಪದ ಹೊರಭಾಗದ ಮೇಲ್ಬದಿಯಲ್ಲಿ, ಎದುರಿಗೆ ಸುಂದರವಾದ ಕಮಾನಿನ ವಿನ್ಯಾಸವಿದ್ದು, ಈ ಕಮಾನಿನೊಳಗೆ ರಾಮ-ಸೀತೆ, ಲಕ್ಷಣ ಹಾಗೂ ಆಂಜನೇಯನ ಗಾರೆಶಿಲ್ಪಗಳಿವೆ. ಈ ಶಿಲ್ಪಗಳ ಮೇಲೂ ವರ್ಣಲೇಪನ ಮಾಡಲಾಗಿದೆ.   
ಶ್ರೀ ಹನುಮಾನ ಮಂದಿರದ ಕಟ್ಟಡ ನಿರ್ಮಾಣ ಹಾಗೂ ಅಲ್ಲಿನ ಚಿತ್ರಗಳ ರಚನೆ ಕುರಿತಂತೆ ಐತಿಹಾಸಿಕ ಹಿನ್ನೆಲೆ ಮತ್ತು ಸ್ಥಳೀಯರ ಅಭಿಪ್ರಾಯಗಳಿವೆ. ಕ್ರಿ.ಶ.೧೮೫೭-೫೮ರ ಸ್ವಾತಂತ್ರ್ಯ ಸಂಗ್ರಾಮದ ಬಳಿಕ ನಾಡಿನ ವಿವಿಧ ಸಂಸ್ಥಾನಿಕರ ಆಶ್ರಯದಲ್ಲಿದ್ದ ಕಲಾವಿದ ಕುಟುಂಬಗಳು ನಿರಾಶ್ರಿತರಾದವು. ಈ ವೇಳೆ ಕೆಲವೊಂದು ಕುಟುಂಬಗಳು ಶ್ರೀಮಂತ ವ್ಯಕ್ತಿಗಳು ಇಲ್ಲವೆ ಮಠಾಧೀಶರ ಆಶ್ರಯ ಪಡೆಯು ವುದರ ಮೂಲಕ ತಮ್ಮ ನೆಲೆಯನ್ನು ಕಂಡು ಕೊಳ್ಳುತ್ತವೆ. ಈ ಹಂತದಲ್ಲೇ ಪ್ರಸ್ತುತ ಹನುಮಾನ ಮಂದಿರದಲ್ಲಿ ಚಿತ್ರಗಳನ್ನು ಬರೆಯಿಸಲಾಗಿದೆ ಎಂದು ಹೇಳಲಾಗುತ್ತದೆ. ಶಿಷ್ಟ ಸಂಪ್ರದಾಯದ ಈ ಚಿತ್ರಗಳನ್ನು ಖಾಜನಗೌಡರೇ ಬರೆಯಿಸಿದ್ದಾರೆಂದು ಇಲ್ಲಿನ ಜನರ ಅಂಬೋಣ. ಅಷ್ಟು ಮಾತ್ರವಲ್ಲ ಹನುಮಾನ ಮಂದಿರ ನಿರ್ಮಾಣಗೊಳ್ಳಲೂ ಖಾಜನಗೌಡರೇ ಕಾರಣ ಎಂದು ಹೇಳಲಾಗುತ್ತದೆ. ಬಹುಶಃ ಖಾಜನಗೌಡರ ಮನೆಯಲ್ಲೂ ಸಾಕಷ್ಟು ಭಿತ್ತಿಚಿತ್ರಗಳಿರುವ ಕಾರಣ ಈ ಮೇಲಿನ ಅಭಿಪ್ರಾಯ ಮೂಡಿರಲು ಸಾಧ್ಯ ಎಂದು ತರ್ಕಿಸಲು ಇಲ್ಲಿ ಅವಕಾಶವಿದೆ. ಖಾಜನಗೌಡರ ಮನೆಯಲ್ಲಿನ ಕರ್ಣಾರ್ಜುನರ ಕಾಳಗ, ರಾಮ-ಸೀತೆಯರ ದರ್ಶನ ಹಾಗೂ ಚಿತ್ರಿತ ಪಟ್ಟಿಕೆಗಳ ಸುತ್ತಲೂ ಬರೆಯಲಾದ ವಿನ್ಯಾಸಗಳ ಹೋಲಿಕೆ ಹನುಮಾನ ಮಂದಿರದಲ್ಲಿನ ಚಿತ್ರಗಳಲ್ಲಿ ಕಾಣಸಿಗುವುದು ಈ ಮೇಲಿನ ಮಾತಿಗೆ ಅನುಮಾನ ಹುಟ್ಟಿಸುತ್ತದೆ. ಖಾಜನಗೌಡರ ಮನೆಯಲ್ಲಿನ ಭಿತ್ತಿಚಿತ್ರಗಳು ಬೇರೆ ಬೇರೆ ಕಲಾವಿದರಿಂದ ರಚನೆಗೊಂಡಿರುವುದು ಮಾತ್ರವಲ್ಲ ಸುರಪುರ ಆಸ್ಥಾನ ಕಲಾವಿದರಾದ ಗರುಡಾದ್ರಿಯವರ ಪಾಲೂ ಇಲ್ಲಿನ ಚಿತ್ರಗಳಲ್ಲಿದೆ ಎಂದು ಬೇರೆ ಬೇರೆ ಸಂದರ್ಭಗಳಲ್ಲಿ ಚರ್ಚಿಸಿಯಾಗಿದೆ.   
ಕ್ರಿ.ಶ.೧೮೫೭-೫೮ರ ಸಂದರ್ಭದಲ್ಲೇ ಸುರಪುರ ಸಂಸ್ಥಾನ ಪತನವಾದ ವಿಷಯ ಎಲ್ಲರಿಗೂ ತಿಳಿದೇ ಇದೆ. ಈ ವೇಳೆ ಅಲ್ಲಿನ ಆಸ್ಥಾನ ಕಲಾವಿದ ವಂಶಸ್ಥರು ರಾಯಚೂರಿಗೆ ಬಂದು ನೆಲೆನಿಂತರೆಂದು ಹೇಳಲಾಗುತ್ತದೆ. ಇವರು ಚಿತ್ರರಚನೆ ಮಾಡುವುದಲ್ಲದೇ, ಅವುಗಳನ್ನು ಮಾರಿತಂದ ಹಣದಲ್ಲಿ ಜೀವನ ನಡೆಸಿದ ಮಾಹಿತಿಯೂ ಗರುಡಾದ್ರಿ ವಂಶಸ್ಥರಿಂದ ತಿಳಿದುಬಂದಿದೆ. ರಾಯಚೂರಿನ ಹಳೆಯ ತಲೆಮಾರಿನ ಮನೆಗಳಲ್ಲದೇ ಕಿಲ್ಲೇ ಮಠದಲ್ಲಿ ಗರುಡಾದ್ರಿಯವರು ಚಿತ್ರಿಸಿದ ವರ್ಣಚಿತ್ರಗಳಿವೆ. ಒಂದೊಮ್ಮೆ ರಾಯಚೂರಿನ ಖಾಜನಗೌಡರ ಆಸರೆಯನ್ನೂ ಈ ಕಲಾವಿದ ವಂಶಸ್ಥರು ಪಡೆದದ್ದಿದೆ. ಈ ಮೇಲಿನ ಎಲ್ಲ ಸಂದರ್ಭಗಳನ್ನು ಅವಲೋಕಿಸಿದರೆ ಬಹುಶಃ ಹನುಮಾನ ಮಂದಿರದಲ್ಲಿನ ಭಿತ್ತಿಚಿತ್ರಗಳಲ್ಲಿ ಗರುಡಾದ್ರಿಯವರ ಪಾತ್ರವಿರುವುದು ಸ್ಪಷ್ಟವಾಗುತ್ತದೆ. ಇದಿಷ್ಟು ದೇವಾಲಯ ನಿರ್ಮಾಣ ಹಾಗೂ ಅಲ್ಲಿನ ಚಿತ್ರರಚನೆ ಕುರಿತಾದ ಹಿನ್ನೆಲೆ.
ಕಳೆದೊಂದು ದಶಕದ ಹಿಂದೆ ಮಡ್ಡಿಪೇಟೆಯ ಆಸಕ್ತರೆಲ್ಲರೂ ಸೇರಿ ಆಂಜನೇಯಸ್ವಾಮಿ ದೇವಾಲಯ ಸಮಿತಿಯನ್ನು ಮಾಡಿಕೊಂಡಿದ್ದು, ಪ್ರತಿವರ್ಷ ಹನುಮಾನ ಜಯಂತಿ ಮತ್ತಿತರ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಮಾಡಿಕೊಂಡು ಬರಲಾಗುತ್ತಿದೆ. ಹಾಗೆ ನೋಡಿದರೆ ಬಹಳ ಹಿಂದಿನಿಂದಲೇ ಇಲ್ಲಿ ಪ್ರತಿನಿತ್ಯ ಶ್ರೀ ಆಂಜನೇಯಸ್ವಾಮಿಯ ಪೂಜಾಕಾರ್ಯಗಳನ್ನು ವಿಧಿವತ್ತಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ಪೂಜಾಕಾರ್ಯಗಳಿಗೆಂದೇ ಅರ್ಚಕರನ್ನು ನೇಮಿಸಿದ್ದು, ಇವರಿಗೆ ಒಂದಿಷ್ಟು ಭೂಮಿಯನ್ನೂ ನೀಡಿದ ಮಾಹಿತಿ ದಾಖಲೆಗಳಲ್ಲಿ ಸಿಗುತ್ತದೆ. ಮಾತ್ರವಲ್ಲ ಆಂಜನೇಯಸ್ವಾಮಿ ದೇವಾಲಯಕ್ಕೆ ಹೊಂದಿಕೊಂಡೇ ಅರ್ಚಕರಿಗೆಂದು ಚಿಕ್ಕದಾದ, ಪ್ರತ್ಯೇಕ ಮನೆಯೊಂದರ ವ್ಯವಸ್ಥೆ ಮಾಡಲಾಗಿದೆ.
ಚಿತ್ರಗಳನ್ನು ಪ್ರಾಚೀನ ಚಿತ್ರರಚನಾ ಪದ್ಧತಿಯಲ್ಲೇ ಚಿತ್ರಿಸಿರುವ ಕಾರಣ, ಚಿತ್ರಿತ ಪ್ರತಿಯೊಂದು ಪಟ್ಟಿಕೆಗಳಲ್ಲಿನ ಆಕೃತಿಗಳು ಮತ್ತು ವರ್ಣಗಳ ಛಾಯೆ ಎಣ್ಣೆ ಕಲೆಗಳಂತೆ ಸುಣ್ಣದ ಪದರಿನ ಮೇಲೂ ಕಾಣಿಸುತ್ತಿದ್ದವು. ಇದರೊಂದಿಗೆ ನೂರಾರು ವರ್ಷ ಇತಿಹಾಸವಿರುವ ಭಿತ್ತಿಚಿತ್ರಗಳ ನೆಲೆಯೊಂದು ನಮ್ಮ ಕಣ್ಮುಂದೇ ವಿನಾಶವಾಗುತ್ತಿದೆ.
ಈ ಚಿತ್ರಿತ ನೆಲೆಗಳು ಒಂದು ನಾಡಿನ ಪರಂಪರೆಯನ್ನು ಪ್ರತಿನಿಧಿಸುತ್ತವೆ ಮಾತ್ರವಲ್ಲ ಸಾಂಸ್ಕೃತಿಕ ಕೊಂಡಿಗಳಾಗಿಯೂ ಚರಿತ್ರೆಯಲ್ಲಿ ಗುರುತಿಸಿಕೊಳ್ಳುತ್ತವೆ. ಕಾಲನ ತುಳಿತಕ್ಕೆ ಸಿಕ್ಕು ಇಲ್ಲವೆ ಮಾನವನ ಅಜ್ಞಾನದಿಂದಾಗಿ ವಿನಾಶ ಹೊಂದುವ ಮುಂಚೆಯೇ ಈ ಚಿತ್ರಿತ ನೆಲೆಗಳ ಕುರಿತಾದ ಅಧ್ಯಯನಗಳು ಆದಷ್ಟು ತೀವ್ರಗತಿಯಲ್ಲಿ ಆಗಬೇಕಾದ ಅವಶ್ಯಕತೆಯೂ ಇದೆ.
ಟಿಪ್ಪಣಿಗಳು
೧.         ರಾಯಚೂರು ನಗರದ ಹೃದಯಭಾಗದಲ್ಲಿರುವ ಕಿಲ್ಲೇ ಬೃಹನ್ಮಠವು ಕರ್ನಾಟಕದ ಅತ್ಯಂತ ಪ್ರಾಚೀನ ಮಠಗಳಲ್ಲೊಂದು. ಮಾತ್ರವಲ್ಲ ರಂಭಾಪುರಿಯ ಶಾಖಾ ಮಠವೂ ಹೌದು. ಕ್ರಿ.ಶ.೧೮೫೭-೫೮ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಳಿಕ ರಾಜಾಶ್ರಯ ಕಳೆದುಕೊಂಡ ಕೆಲ ಕಲಾವಿದ ಕುಟುಂಬಗಳಿಗೆ ಆಶ್ರಯವನ್ನೂ ನೀಡಿತ್ತು. ಇದರಿಂದಾಗಿ ಈ ಮಠದ ಪೂಜ್ಯರ ಸಾಕಷ್ಟು ಭಾವಚಿತ್ರಗಳೂ ಚಿತ್ರಿಸಲ್ಪಟ್ಟವು. ಇಂದಿಗೂ ಈ ಮಠದಲ್ಲಿ ನಾವು ಆ ಕಾಲದ ಚಿತ್ರಗಳನ್ನು ನೋಡಬಹುದು.
೨.         ಗರ್ಭಗೃಹ ದ್ವಾರದ ಮೇಲಿನ ಶಿಲಾಪಟ್ಟಿಕೆಯಲ್ಲಿನ ಕೆತ್ತನೆ ಹಾಗೂ ಹೊರಬದಿಯ ಮೇಲ್ಭಾಗದ ಕಮಾನಿನೊಳಗಿನ ಗಾರೆ ಶಿಲ್ಪಗಳ ಮೇಲೆ ಬಹಳ ಹಿಂದೆಯೇ ನೈಸರ್ಗಿಕ ಮೂಲದ ವರ್ಣಲೇಪನವನ್ನು ಮಾಡಲಾಗಿತ್ತು. ಇದೀಗ ಮಂದಿರದ ನವೀಕರಣ ಸಂದರ್ಭದಲ್ಲಿ ಈ ಶಿಲ್ಪಕೆತ್ತನೆಗಳ ಮೇಲೆ ರಾಸಾಯನಿಕ (ಆಧುನಿಕ) ವರ್ಣಲೇಪನ ಮಾಡಲಾಗಿದೆ.





Saturday, March 30, 2013

ಹಿರಿಯೂರು ತಾಲ್ಲೂಕಿನ ಸ್ಮಾರಕ ಶಿಲ್ಪಗಳು

ಹಿರಿಯೂರು ತಾಲ್ಲೂಕಿನ ಸ್ಮಾರಕ ಶಿಲ್ಪಗಳು
ಡಾ. ಬಿ. ಸುರೇಶ್
ಸಹಾಯಕ ಪ್ರಾಧ್ಯಾಪಕರು,
 ಸ್ನಾತಕೋತ್ತರ ಇತಿಹಾಸ ವಿಭಾಗ,
 ಸರ್ಕಾರಿ ಕಲಾ ಕಾಲೇಜು, ಚಿತ್ರದುರ್ಗ-೫೭೭೫೦೧.


ಚಿತ್ರದುರ್ಗ ಜಿಲ್ಲೆಯಾದ್ಯಾಂತ ಕಾಣಸಿಗುವ ಅನೇಕ ರೂಪದ ಐತಿಹಾಸಿಕ ಕುರುಹುಗಳಲ್ಲಿ ಸ್ಮಾರಕಶಿಲ್ಪಗಳು ಪ್ರಮುಖವು. ಪ್ರಾದೇಶಿಕ ಇತಿಹಾಸವನ್ನು ತಿಳಿಯುವಲ್ಲಿ ಇವುಗಳ ಪಾತ್ರ ತುಂಬಾ ಮುಖ್ಯವಾದುದು. ಸ್ಥಳೀಯ ಜನರ ದೈಹಿಕ ಲಕ್ಷಣಗಳು, ವೇಷ ಭೂಷಣಗಳು, ಸಮಾಜ-ಸಂಸ್ಕೃತಿಯನ್ನು ತಿಳಿಯಲು ಇವುಗಳು ಸಹಕಾರಿಯಾಗುತ್ತವೆ. ಇಂದು ರಸ್ತೆಬದಿಗಳಲ್ಲಿ, ಕೆರೆ ಏರಿಗಳ ಮೇಲೆ, ಗ್ರಾಮದ ಹೊರವಲಯಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಹೀಗೆ ಇನ್ನಿತರ ಅನೇಕ ಕಡೆಗಳಲ್ಲಿ ಸರ್ವೇ ಸಾಮಾನ್ಯವಾಗಿ ಇವುಗಳು ಕಂಡುಬರುತ್ತವೆ. ಶಾಲಾ ಆವರಣ, ಗ್ರಾಮದ ಅರಳಿಕಟ್ಟೆ, ದೇವಾಲಯಗಳ ಆವರಣಗಳಲ್ಲಿರುವಂತವುಗಳನ್ನು ಹೊರತುಪಡಿಸಿದರೆ ಬಹುತೇಕವು ಅನಾಥವಾಗಿ ಬಿದ್ದಿರುವಂತೆಯೂ, ನಿರ್ಲಕ್ಷಕ್ಕೆ ಒಳಗಾಗಿರುವಂತೆಯೂ ಭಾಸವಾಗುತ್ತದೆ. ಸ್ಥಳೀಯರಲ್ಲಿ ಅವುಗಳ ಬಗ್ಗೆಯಿರುವ ತಪ್ಪು ಕಲ್ಪನೆಯೇ ಇದಕ್ಕೆ ಕಾರಣ. ಇವುಗಳನ್ನು ಮುಟ್ಟಿದರೆ, ಅಥವಾ ಸ್ಥಳಾಂತರಿಸಿದರೆ ತಮಗೂ ಹಾಗೂ ತಮ್ಮ ಗ್ರಾಮಕ್ಕೂ ಕೇಡುಂಟಾಗುತ್ತದೆ ಎನ್ನುವ ಅಭಿಪ್ರಾಯ ಈಗಲೂ ಗ್ರಾಮೀಣ ಭಾಗದ ಜನರದ್ದಾಗಿದೆ. ಆದರೆ ಇದಕ್ಕೆ ಅಪವಾದವೆನ್ನುವಂತೆ, ಇವುಗಳನ್ನು ಪೂಜಿಸಿದರೆ ಮಕ್ಕಳಾಗುತ್ತವೆ ಎನ್ನುವ ಭಾವನೆಯಿಂದ ಇವುಗಳಿಗೆ ಗುಡಿಗಳನ್ನು ಕಟ್ಟಿ ಪೂಜಿಸುತ್ತಿರುವುದು ಅಪರೂಪಕ್ಕೆ ಕಂಡುಬರುತ್ತದೆ.
ಆರಂಭದಲ್ಲಿ ಕೃತಜ್ಞತಾಪೂರ್ವಕವಾಗಿ ಹುಟ್ಟಿಕೊಂಡ ಈ ಸ್ಮಾರಕಶಿಲ್ಪಗಳು ಕ್ರಮೇಣ ಅದರ ವ್ಯಾಪ್ತಿ ವಿಸ್ತಾರಗೊಂಡು ಮುಂದೆ ನಾನಾ ಕಾರಣಗಳಿಗಾಗಿ ನಿರ್ಮಾಣಗೊಂಡಿರುವುದನ್ನು ಕಾಣುತ್ತೇವೆ. ದೇವಾಲಯಗಳ ಸಮೀಕ್ಷೆಗೆಂದು ನಾನು ಕ್ಷೇತ್ರಕಾರ್ಯ ಕೈಗೊಂಡ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಅನೇಕ ಸ್ಮಾರಕ ಶಿಲ್ಪಗಳು ಗೋಚರಿಸಿದವು. ಅವುಗಳಲ್ಲಿ ಹಿರಿಯೂರು ತಾಲ್ಲೂಕಿನಲ್ಲಿ ಕಂಡುಬಂದ ಕೆಲ ವಿಶಿಷ್ಟ ಅಂಶಗಳಿಂದ ಕೂಡಿದ ಸ್ಮಾರಕ ಶಿಲ್ಪಗಳನ್ನು ಪ್ರಸ್ತುತ ಲೇಖನದಲ್ಲಿ ಚರ್ಚಿಸಲು ಪ್ರಯತ್ನಿಸಿರುತ್ತೇನೆ.
ಚಿತ್ರದುರ್ಗ ತಾಲ್ಲೂಕಿನ ಐಮಂಗಲ ಹೋಬಳಿ ಕೇಂದ್ರದಿಂದ ಯರಬಳ್ಳಿಗೆ ಹೋಗುವ ಮಾರ್ಗದಲ್ಲಿ ತಾಳವಟ್ಟಿ ಎನ್ನುವ ಗ್ರಾಮವಿದೆ. ಗ್ರಾಮದ ವಾಯವ್ಯ ದಿಕ್ಕಿನ ರಸ್ತೆಯ ಎಡಬದಿಯಲ್ಲೇ ಕಂಡುಬರುವ ಕರಿಯಮ್ಮ ಗುಡಿಯು ಮುಂಭಾಗದಲ್ಲಿ ಸ್ಮಾರಕ ಶಿಲ್ಪವೊಂದಿದೆ. ಇದು ತನ್ನ ವಿಶಿಷ್ಟ ಅಂಶಗಳಿಂದ ಗಮನ ಸೆಳೆಯುತ್ತದೆ.
ಶಿಲ್ಪವು ಮೂರು ಹಂತಗಳಲ್ಲಿ ನಿರೂಪಿತಗೊಂಡಿದೆ. ಕೆಳಗಿನ ಹಂತದ ಶಿಲ್ಪ ಎಡಬದಿಯಲ್ಲಿ ಧಗಧನಗೆ ಉರಿಯುತ್ತಿರುವ ಬೆಂಕಿಯ ಕೆನ್ನಾಲಿಗೆಯಲ್ಲಿ ಸತಿ-ಪತಿಯರಿಬ್ಬರು ಮಲಗಿರುವಂತೆ ತೋರಿಸಲಾಗಿದೆ. ಹೀಗೆ ಉರಿಯುತ್ತಿರುವ ಬೆಂಕಿ ಹಾಗು ಬೆಂಕಿಯಲ್ಲಿ ಬಿದ್ದಿರುವ ದಂಪತಿಯರಿಗೆ ಸ್ತ್ರೀಯೊರ್ವಳು ಕೈಮುಗಿಯುತ್ತಿರುವಳು. ಸ್ತ್ರೀಯ ಹಿಂಭಾಗದಲ್ಲಿ ಮತ್ತೊಬ್ಬ ಸ್ತ್ರೀಯನ್ನು ತೋರಿಸಲಾಗಿದ್ದು, ಸತಿ-ಪತಿಯರು ಬೆಂಕಿಗೆ ಆಹುತಿಯಾಗುತ್ತಿರುವುದನ್ನು ಸ್ತ್ರೀಯರು ಭಕ್ತಿಪೂರ್ವಕವಾಗಿ ವೀಕ್ಷಿಸುತ್ತಿರುವಂತಿದೆ. ಪುರುಷನು ಯಾವುದೋ ಕಾರಣಗಳಿಂದ ತೀರಿಕೊಂಡಿದ್ದು ಆತನನ್ನು ದಹಿಸುತ್ತಿರುವ ಸಂದರ್ಭದಲ್ಲಿ ಮಹಿಳೆಯು ತನ್ನ ವೇದನೆಯನ್ನು ತಾಳಲಾಗದೆ, ಅಥವಾ ತನ್ನ ಪತಿಯಿಲ್ಲದ ಮುಂದಿನ ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗದೆ ಚಿತೆಗೆ ಹಾರುತ್ತಿರುವಂತೆ ನಿರೂಪಿತಗೊಂಡಿದೆ.
ಎರಡನೆ ದೃಶ್ಯದಲ್ಲಿ ಸತಿಯನ್ನು ಇಬ್ಬರು ಹಾಗು ಪತಿಯನ್ನು ಇಬ್ಬರು ಅಪ್ಸರೆಯರು ತಮ್ಮ ಭುಜದ ಮೇಲೆ ಹಾಕಿಕೊಂಡು ಸ್ವರ್ಗಕ್ಕೆ ಕರೆದೊಯ್ಯುತ್ತಿರುವರು. ಮೂರನೇ ದೃಶ್ಯದಲ್ಲಿ ಸತಿಪತಿಯರು ಸ್ವರ್ಗದಲ್ಲಿ ಅರ್ಧಪದ್ಮಾಸನದಲ್ಲಿ ಕುಳಿತಿರುವರು. ಬದಿಗಳಲ್ಲಿ ಚಾಮರಧಾರಿಯರಿರುವರು. ಶಿಲ್ಪದ ಮೇಲ್ಭಾಗದಲ್ಲಿ ಶಿವಲಿಂಗ, ನಂದಿಯ ಉಬ್ಬು ಶಿಲ್ಪಗಳಿವೆ.
ಪ್ರಸ್ತುತ ಶಿಲ್ಪದಲ್ಲಿ ಪುರುಷನು ಯಾವ ಕಾರಣಕ್ಕಾಗಿ ತೀರಿಕೊಂಡಿದ್ದಾನೆ. ಎನ್ನುವುದು ತಿಳಿಯುತ್ತಿಲ್ಲ. ಇಲ್ಲಿ ಸತಿಯು ತನ್ನ ಪತಿಯೊಂದಿಗೇ ಚಿತೆಗೆ ಹಾರಿರುವ ದೃಶ್ಯವನ್ನು ತೋರಿಸಿರುವುದು ತುಂಬಾ ಅಪರೂಪವೆನಿಸುತ್ತದೆ. ದಂಪತಿಯರ ಹಾಗು ಅಪ್ಸರೆಯರ ವೇಷ-ಭೂಷಣವೂ ಸಹ ಗಮನ ಸೆಳೆಯುತ್ತದೆ.
ಬಿದರಕೆರೆ ಗ್ರಾಮದ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಒಟ್ಟು ನಾಲ್ಕು ವೀರಗಲ್ಲುಗಳಿವೆ. ಅವುಗಳಲ್ಲಿ ಒಂದು ಶಿಲ್ಪವು ತುಂಬಾ ಆಕರ್ಷಣೀಯವಾಗಿದೆ ಪ್ರಸ್ತುತ ಶಿಲ್ಪದಲ್ಲಿ ವೀರನೊಬ್ಬನನ್ನೇ ತೋರಿಸಲಾಗಿದೆ. ಈತನು ತನ್ನ ಬಲಗೈಯಲ್ಲಿ ಉದ್ದನೆಯ ಕತ್ತಿ ಹಿಡಿದಿರುವನು. ಎಡಗೈಯಲ್ಲಿ ಒಂದು ರೀತಿಯ ಬಳ್ಳಿಯನ್ನು ಹಿಡಿದಿರುವನು. ತಲೆಯ ಕೂದಲಿಗೆ ಬಟ್ಟೆಯನ್ನು ಕಟ್ಟಿರುವನು. ಕೂದಲಿನಲ್ಲಿ ಆಧುನಿಕವಾಗಿ ಎಣೆದ ರೀತಿಯ ಉದ್ದನೆಯ ಜಡೆಯನ್ನು ತೋರಿಸಲಾಗಿದ್ದು ಜಡೆಯ ತುದಿಯಲ್ಲಿ ಗಂಟನ್ನು (ಆಧುನಿಕ ರಿಬ್ಬನ್?) ಹಾಕಿದಂತಿದೆ. ಈ ರೀತಿ ಜಡೆಯನ್ನು ಹಾಕಿರುವ ವೀರನನ್ನು ತೋರಿಸಿರುವುದೂ ಸಹ ಅಪರೂಪವೇ ಸರಿ. ಆದರೆ ಹಿರಿಯೂರು ತಾಲ್ಲೂಕಿನಲ್ಲಿ ಈ ರೀತಿಯ ಇನ್ನೂ ಹತ್ತಾರು ವೀರಗಲ್ಲುಗಳು ಕಂಡುಬರುತ್ತವೆ. ವೀರನು ತನ್ನ ಸೊಂಟಕ್ಕೆ ವಸ್ತ್ರವನ್ನು ಕಟ್ಟಿರುವನು, ಕಿವಿಯಲ್ಲಿ ಆಭರಣ ಧರಿಸಿರುವನು. ಕೊರಳಲ್ಲಿ ಎರಡು ಹಾರಗಳಿವೆ, ಕೈ ಕಾಲುಗಳಿಗೂ ಆಭರಣ ಧರಿಸಿರುವನು, ಈತನ ವೇಷ-ಭೂಷಣಗಳನ್ನು ಗಮನಿಸಿದರೆ, ಈತನೊಬ್ಬ ಬುಡಕಟ್ಟು ಸಂಪ್ರದಾಯದ ವೀರನಂತಿದೆ. ಪ್ರಸ್ತುತ ಈ ಪರಿಸರದಲ್ಲಿ ಬುಡಕಟ್ಟು ಜನಾಂಗದವರೇ ಹೆಚ್ಚಿಗಿರುವುದೂ ಇದಕ್ಕೆ ಪುಷ್ಠಿ ನೀಡುತ್ತದೆ. ಶಿಲ್ಪದ ಕಾಲಮಾನ ಸುಮಾರು ಕ್ರಿ.ಶ.೧೫-೧೬ನೇ ಶತಮಾನ.
ಇದೇ ಗ್ರಾಮದಲ್ಲಿರುವ ಮತ್ತೊಂದು ಶಿಲ್ಪವು ತನ್ನ ವಿಶಿಷ್ಟ ಅಂಶಗಳಿಂದ ಗಮನ ಸೆಳೆಯುತ್ತದೆ. ಪ್ರಸ್ತುತ ಶಿಲ್ಪದಲ್ಲಿ ವೀರ ಹಾಗು ಸತಿಯನ್ನು ತೋರಿಸಲಾಗಿದೆ. ಶಿಲ್ಪದ ವಿಶೇಷತೆಯೆಂದರೆ ವೀರನನ್ನು ಟಗರಿನ? ಮೇಲೆ ಕುಳಿತಿರುವಂತೆ ತೋರಿಸಿರುವುದು. ಸಾಮಾನ್ಯವಾಗಿ ವೀರನನ್ನು ಶಿಲ್ಪಗಳಲ್ಲಿ ಕುದುರೆ/ಆನೆಗಳ ಮೇಲೆ ತೋರಿಸಲಾಗಿರುತ್ತದೆ. ಆದರೆ ಇಲ್ಲಿ ಟಗರಿನ ಮೇಲೆ ವೀರನನ್ನು ತೋರಿಸಲಾಗಿದೆ. ವೀರನು ತನ್ನ ಎಡಗೈಯಲ್ಲಿ ಟಗರಿನ ಹಗ್ಗವನ್ನು, ಬಲಗೈಯಲ್ಲಿ ಕತ್ತಿಯನ್ನು ಹಿಡಿದಿರುವನು. ವಸ್ತ್ರಾಭರಣ ಭೂಷಿತನಾದ ಈತನು ತನ್ನ ತಲೆಯ ಕೂದಲನ್ನು ತುರುಬಿನಂತೆ ಕಟ್ಟಿ ಅಲಂಕರಿಸಿಕೊಂಡಿರುವನು. ತುರುಬಿನಿಂದ ಕೆಳಗೆ ಜಡೆಯನ್ನು ಹೆಣೆಯಲಾಗಿದ್ದು ತುದಿಯಲ್ಲಿ ರಿಬ್ಬನ್ ಹಾಕಲಾಗಿದೆ. ಟಗರನ್ನು ಅಲಂಕೃತಗೊಳಿಸಲಾಗಿದ್ದು, ಉದ್ದನೆಯ ಎರಡು ಕೊಂಬುಗಳನ್ನು ಇಳಿಬಿದ್ದಿರುವಂತೆ ತೋರಿಸಲಾಗಿದೆ. ಬಾಲವು ಚಿಕ್ಕದಾಗಿದೆ. ವೀರನ ಹಿಂಬದಿಯಲ್ಲಿ ನಿಂತಿರುವ ಸತಿಯು ಬಲಗೈಯಲ್ಲಿ ನಿಂಬೆ ಹಣ್ಣನ್ನು ಮೇಲಕ್ಕೆ ಎತ್ತಿ ನಿಂತಿರುವಳು. ತನ್ನ ಎಡಗೈಯಲ್ಲಿ ದರ್ಪಣವನ್ನಿಡಿದು ಕೆಳಗೆ ಇಳಿಬಿಟ್ಟಿರುವಳು. ಸತಿಯು ಸಹ ವಸ್ತ್ರಾಭರಣ ಭೂಷಿತೆಯಾಗಿರುವಳು. ಕೂದಲನ್ನು ತುರುಬಿನ ರೀತಿಯಲ್ಲಿ ಕಟ್ಟಿಕೊಂಡಿದ್ದು ಕೇದಗೆ ಹೂವಿನಿಂದ ಸಿಂಗರಿಸಿಕೊಂಡಿರುವಳು.
ಕಂದಿಕೆರೆಯಲ್ಲಿ ಒಟ್ಟು ನಾಲ್ಕು ವೀರಗಲ್ಲುಗಳಿದ್ದು, ಅವುಗಳಲ್ಲಿ ಶಾಸನೋಕ್ತ ವೀರಗಲ್ಲೊಂದು ಗಮನ ಸೆಳೆಯುತ್ತದೆ. ಗ್ರಾಮದ ದಕ್ಷಿಣಕ್ಕಿರುವ ವೀರಚನ್ನಪ್ಪ ಗುಡಿಯಲ್ಲಿ ಪ್ರಸ್ತುತ ವೀರಗಲ್ಲಿದೆ. ಈ ಶಿಲ್ಪದ ಪೀಠದಲ್ಲಿ ಹಂಸ ಮತ್ತು ವರಾಹದ ಉಬ್ಬುಶಿಲ್ಪಗಳಿರುವುದು ಆಶ್ಚರ್ಯದ ಸಂಗತಿ. ಹಲವಾರು ಹಂತಗಳಲ್ಲಿ ನಿರೂಪಿತಗೊಂಡಿರುವ ಸ್ಮಾರಕ ಶಿಲ್ಪಗಳಿಗೆ ಸಾಮಾನ್ಯವಾಗಿ ಪೀಠಗಳಿರುವುದಿಲ್ಲ. ಮೂಲ ಪೀಠದ ಮೇಲೆ ಬೇರಿನ್ನಾವುದೋ ಶಿಲ್ಪವಿದ್ದಿರಬೇಕೆನಿಸುತ್ತದೆ. ಆದರೆ ನಂತರದ ದಿನಗಳಲ್ಲಿ ಅದೇ ಪೀಠದ ಮೇಲೆ ಎರಡು ಹಂತಗಳಲ್ಲಿರುವ ಪ್ರಸ್ತುತ ವೀರಗಲ್ಲು ಶಿಲ್ಪವನ್ನು ಪ್ರತಿಷ್ಠಾಪಿಸಲಾಗಿದೆ.
ವೀರನು ಕುದುರೆಯ ಮೇಲೆ ಯುದ್ಧ/ಕಾಳಗಕ್ಕೆ ಹೊರಟಂತೆ ತುಂಬ ಅಮೋಘವಾಗಿ ಚಿತ್ರಿಸಲಾಗಿದೆ. ವೀರನು ತನ್ನ ಎಡಕೈಯಲ್ಲಿ ಕುದುರೆಯ ಜೀನನ್ನು, ಬಲಗೈಯಲ್ಲಿ ಉದ್ದನೆಯ ಕತ್ತಿಯನ್ನು ಮೇಲಕ್ಕೆತ್ತಿ ಹಿಡಿದಿರುವನು. ವೀರನು ಕಂಠಹಾರ, ಕೇಯೂರ, ಕಿಂಕಣಿ, ತೋಳ್ಬಂದಿ, ಕರ್ಣಕುಂಡಲ ಇತ್ಯಾದಿ ಆಭರಣಗಳಿಂದ ಅಲಂಕೃತಗೊಂಡಿದ್ದು, ತಲೆಗೆ ಪೇಟವನ್ನು ಹಾಗು ತನ್ನ ಉದ್ದನೆಯ ಕೂದಲನ್ನು ತುರುಬಿನೋಪಾದಿಯಲ್ಲಿ ಕಟ್ಟಿಕೊಂಡಿರುವನು. ಮೇಲಿನ ದೃಶ್ಯದಲ್ಲಿ ಲಿಂಗ ಹಾಗೂ ಅಭಿಮುಖವಾಗಿ ಕುಳಿತಿರುವ ನಂದಿಯ ಉಬ್ಬುಶಿಲ್ಪಗಳು ಹಾಗೂ ಅವುಗಳ ಮೇಲ್ಬಾಗದಲ್ಲಿ ಸೂರ್ಯ-ಚಂದ್ರರ ಶಿಲ್ಪಗಳನ್ನು ಕಂಡರಿಸಲಾಗಿದೆ.
ಶಿಲ್ಪದ ಮೇಲೆ ಯಥೇಚ್ಛವಾಗಿ ಎಣ್ಣೆ ಹಾಕಿರುವುದರಿಂದ ಪ್ರಭಾವಳಿರೂಪದ ಪಟ್ಟಿಕೆ ಹಾಗೂ ಮಧ್ಯ ಪಟ್ಟಿಕೆಯಲ್ಲಿರುವ ಶಾಸನ ಸೂಕ್ಷ್ಮವಾಗಿ ಗಮನಿಸದ ಹೊರತು ತಕ್ಷಣವೇ ಕಂಡುಬರುವುದಿಲ್ಲ. ಪ್ರಭಾವಳಿಯ ಪಟ್ಟಿಕೆಯಲ್ಲಿ, ಶುಭಮಸ್ತು ನಮಸ್ತುಂಗ ಎನ್ನುವ ಶೈವ ಶ್ಲೋಕದಿಂದ ಶಾಸನವು ಆರಂಭಗೊಂಡು ಎರಡು ಸಾಲುಗಳಲ್ಲಿ ಕೊರೆಯಲ್ಪಟ್ಟಿದೆ. ನಂತರ ಮಧ್ಯದ ಪಟ್ಟಿಕೆಯಲ್ಲಿ ಮುಂದುವರೆದು ಮೂರು ಸಾಲುಗಳಲ್ಲಿ ಕೊರೆಯಲ್ಪಟ್ಟಿದೆ. ಒಟ್ಟು ಐದು ಸಾಲುಗಳಲ್ಲಿರುವ ಈ ಶಾಸನದ ಕಾಲಮಾನ ಕ್ರಿ.ಶ.೧೫೯೮. ಸ್ಥಳೀಯರು ಈ ಶಿಲ್ಪವನ್ನು ವೀರ ಚಿನ್ನಪ್ಪನೆಂದೇ ಪೂಜಿಸುತ್ತಿರುವರು.
ಶಾಸನದಲ್ಲಿ ಉಲ್ಲೇಖಗೊಂಡಿರುವ ಕಂದಿಕೆರೆ ಗ್ರಾಮವು ಹರತಿನಾಯಕರ ಆಡಳಿತದ ವ್ಯಾಪ್ತಿಯಲ್ಲಿದ್ದ ಪ್ರದೇಶವಾಗಿದ್ದಿತು. ಗ್ರಾಮದ ತಳವಾರಿಕೆ ವೃತ್ತಿಯನ್ನು ಮಾಡುತ್ತಿದ್ದ ಚನ್ನಿನಾಯಕನು ತುರಗ ಕಾಳಗದಲ್ಲಿ ಮಡಿದಿದ್ದುದರ ಪರಿಣಾಮವಾಗಿ ಆತನ ಜ್ಞಾಪಕಾರ್ಥವಾಗಿ ಪ್ರಸ್ತುತ ಸ್ಮಾರಕವನ್ನು ಪ್ರತಿಷ್ಠಾಪಿಸಲಾಗಿದೆ. ಶಾಸನದಲ್ಲಿ ಉಲ್ಲೇಖಿಸಿರುವಂತೆ ತಳವಾರಿಕೆ ವೃತ್ತಿಯನ್ನು ನಾಯಕ ಜಾತಿಯವರು ಮಾಡುತ್ತಿದ್ದರು. ಈ ರೀತಿಯ ವಿವರಗಳು ಇದೇ ಪರಿಸರದ ಇನ್ನೂ ಹಲವಾರು ಶಾಸನಗಳಿಂದ ತಿಳಿದುಬರುತ್ತದೆ. ಹಾಗೆಯೇ ತಳವಾರಿಕೆ ವೃತ್ತಿಯು ವಂಶಪಾರಂಪರ್ಯವಾಗಿದ್ದುದೂ ಸಹ ಪ್ರಸ್ತುತ ಶಾಸನದಿಂದ ತಿಳಿದುಬರುತ್ತದೆ. ಇದಕ್ಕೆ ಪೂರಕವಾಗಿ ಇಂದಿಗೂ ಈ ಭಾಗದಲ್ಲಿ ನಾಯಕ ಜಾತಿಯವರು ತಳವಾರಿಕೆ ವೃತ್ತಿಯನ್ನು ಮಾಡುತ್ತಿರುವುದು ಕಂಡುಬರುತ್ತದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ಪ್ರದೇಶವು ಐತಿಹಾಸಿಕವಾಗಿ ಶ್ರೀಮಂತವಾಗಿದೆ. ಮೇಲೆ ಚರ್ಚಿಸಿದ ಅಪರೂಪದ ಸ್ಮಾರಕಶಿಲ್ಪಗಳ ಜೊತೆಗೆ ಇನ್ನು ಸಾಕಷ್ಟು ಸಂಖ್ಯೆಯ ಶಿಲ್ಪಗಳನ್ನು ಇಲ್ಲಿ ನೋಡಬಹುದು. ತಾಲ್ಲೂಕಿನ ಸಿಡ್ಲಯ್ಯನಕೋಟೆ, ಚಿಲ್ಲಹಳ್ಳಿ, ಧರ್ಮಪುರ, ಹರತಿಕೋಟೆ, ಬಬ್ಬೂರು, ದೇವಿಗೆರೆ, ಜವನಗೊಂಡನಹಳ್ಳಿ, ತವಂದಿ, ಉಡುವಳ್ಳಿ, ಹಿರಿಯೂರು, ಐಮಂಗಲ, ಗುಯಿಲಾಳು, ಮೇಟಿಕುರ್ಕೆ, ವದ್ದೀಕೆರೆ ಇತ್ಯಾದಿ ಗ್ರಾಮಗಳಲ್ಲಿ ಸ್ಮಾರಕ ಶಿಲ್ಪಗಳು ಕಂಡುಬರುತ್ತವೆ. ಇವುಗಳಲ್ಲಿ ಕೆಲವೇ ಕೆಲವು ರಕ್ಷಿತ ಶಿಲ್ಪಗಳನ್ನು ಹೊರತುಪಡಿಸಿದರೆ, ಉಳಿದವುಗಳಿಗೆ ಸಂರಕ್ಷಣೆಯ ಅವಶ್ಯಕತೆಯಿದೆ. ಸ್ಥಳೀಯ ಜನರಿಗೆ ಅವುಗಳ ಮಹತ್ವ ತಿಳಿಯದಿರುವುದೇ ಅವುಗಳ ಈ ಸ್ಥಿತಿಗೆ ಕಾರಣ. ಅವುಗಳು ಕೇವಲ ನಿರ್ಜೀವ ವಸ್ತುಗಳಾಗಿರದೆ, ಅವುಗಳಿಗೂ ಜೀವವಿದೆ ಎನ್ನುವುದನ್ನು ತಿಳಿಯಹೇಳಬೇಕಿದೆ. ಅವುಗಳು ಸಮಕಾಲೀನ ಸಮಾಜ, ಸಂಸ್ಕೃತಿ ಮತ್ತು ಜನಾಂಗೀಯ ವಿವರಗಳನ್ನು ನೀಡುವ ಪ್ರಮುಖ ಆಕರಗಳಾಗಿದ್ದು ಅವುಗಳಿರುವುದರಿಂದಲೇ ಈ ಪ್ರದೇಶಕ್ಕೆ ಐತಿಹಾಸಿಕ ಮಹತ್ವವಿದೆ ಎನ್ನುವ ಅರಿವನ್ನು ಮೂಡಿಸುವ ಅಗತ್ಯವಿದೆ.
[ಕ್ಷೇತ್ರಕಾರ್ಯ ಸಂದರ್ಭದಲ್ಲಿ ನನ್ನೊಂದಿಗಿದ್ದು ಸಹಕರಿಸಿದ ಸಹೋದರಿ ಡಾ. ಬಿ. ಜಯಮ್ಮ ಹಾಗು ವಿದ್ಯಾರ್ಥಿ ಮಿತ್ರ ಮಹೇಶ ಎಂ. ಅವರಿಗೆ ಕೃತಜ್ಞತೆಗಳು].
ಆಧಾರಸೂಚಿ
೧.         ಡಾ. ಆರ್. ಶೇಷಶಾಸ್ತ್ರಿ, ಕರ್ನಾಟಕದ ವೀರಗಲ್ಲುಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು-೨೦೦೪.
೨.         ಡಾ. ಬಿ. ಸುರೇಶ, ಚಿತ್ರದುರ್ಗ-ದಾವಣಗೆರೆ ಜಿಲ್ಲೆಗಳ ದೇವಾಲಯಗಳು, ಸಂಶೋಧನಾ ಪ್ರಕಾಶನ, ಬಾಲೇನಹಳ್ಳಿ, ಚಿತ್ರದುರ್ಗ ಜಿಲ್ಲೆ, ೨೦೦೮.
೩.         ಎಸ್.ಕೆ. ರಾಮಚಂದ್ರರಾವ್, ಮೂರ್ತಿ ಶಿಲ್ಪ ನೆಲೆ-ಹಿನ್ನೆಲೆ, ಬೆಂಗಳೂರು, ವಿ.ವಿ. ಬೆಂಗಳೂರು, ೧೯೭೪.
೪.         ಟಿ.ಎ. ಗೋಪಿನಾಥರಾವ್, ದ ಎಲಿಮೆಂಟ್ಸ್ ಆಫ್ ಹಿಂದೂ ಐಕನೋಗ್ರಫಿ, ಸಂ. ೧, ಭಾಗ-೨, ೧೯೯೭.
















Tuesday, March 26, 2013


ಅನಂತಶಯನ ಶಿಲ್ಪಗಳು
ಡಾ. ಕೆ. ವಸಂತಲಕ್ಷ್ಮಿ
೧೬೭೬, ೫ನೇ ‘ಎ ಅಡ್ಡರಸ್ತೆ,
೧೦ನೇ ಮುಖ್ಯರಸ್ತೆ, ಬನಶಂಕರಿ ಮೊದಲನೇ ಹಂತ,
ಬೆಂಗಳೂರು-೫೦.

ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ವೈಷ್ಣವ ಧರ್ಮವು ಪ್ರಚಲಿತದಲ್ಲಿದೆ. ವೈದಿಕ ಪರಂಪರೆಯ ದೇವತೆಗಳ ಅರ್ಚನಾ ಮೂರ್ತಿಗಳಲ್ಲಿ ಶಯನಭಂಗಿಯಲ್ಲಿ ಕಾಣಸಿಗುವುದು ವಿಷ್ಣುವಿನ ಮೂರ್ತಿಗಳು ಮಾತ್ರ. ವಿಷ್ಣುವಿನ ಶಯನಭಂಗಿಯ ಮೂರ್ತಿಯನ್ನು ಜಲಶಾಯಿ, ಶೇಷಶಾಯಿ, ರಂಗನಾಥ, ಅನಂತಪದ್ಮನಾಭ, ಅನಂತಶಯನ ಮೂರ್ತಿ ಮುಂತಾದ ಹೆಸರುಗಳಿಂದ ಪೂಜಿಸುತ್ತಾರೆ. ಪುರಾಣಗಳು ತಿಳಿಸುವಂತೆ ವಿಷ್ಣುವಿನ ಪೂರ್ಣರೂಪದ ಶಕ್ತಿಯು ಅನಂತಶಯನ ರೂಪದಲ್ಲಿ ಶಾಶ್ವತವಾಗಿರುತ್ತದೆ ಎಂದು ತಿಳಿಸಿದೆ. ಪರಮಶ್ರೇಷ್ಠರೂಪವಾದ ಈ ಸ್ವರೂಪದ ಬಿಂಬವನ್ನು ಪೂಜಿಸುವುದರಿಂದ ಪರಮಪದವನ್ನು ಪಡೆಯುವರೆಂಬ ನಂಬಿಕೆ ಇದೆ. ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ದಶಿಯಂದು ‘ಅನಂತಪದ್ಮನಾಭನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಅನಂತ ಪದ್ಮನಾಭ ದೇವರ ಸಾಂಕೇತಿಕವಾಗಿ ‘ಅನಂತಪದ್ಮನಾಭ ವ್ರತಾಚರಣೆಯಲ್ಲೂ ಗಂಗಾಯಮುನೆಯರನ್ನು ‘ಕಲಶ ರೂಪದಲ್ಲಿ ಪೂಜಿಸಲಾಗುತ್ತದೆ. ವಿಷ್ಣುವು ಪವಡಿಸಿದ್ದ ಅನಂತ ಅಥವಾ ಶೇಷನ ಸಂಕೇತವಾಗಿ ದರ್ಬೆಯಲ್ಲಿ ‘ಶೇಷನ ರೂಪವನ್ನು ಹೆಣೆದು ಆ ಕಲಶಗಳೊಂದಿಗೆ ಇಟ್ಟು ಪೂಜಿಸಲಾಗುತ್ತದೆ. ಈ ಹೆಣಿಗೆಯಲ್ಲೂ, ಅನಂತರ ‘ನಿಮಿತ್ತ ಕಟ್ಟಿಕೊಳ್ಳುವ ದಾರದಲ್ಲಿ ಹದಿನಾಲ್ಕು ಗಂಟುಗಳನ್ನು ಹಾಕಿದ್ದು, ಇದು ‘ಚತುರ್ದಶಿಯ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ. ಈ ಅನಂತಪದ್ಮನಾಭ ವ್ರತವನ್ನು, ಪೂಜೆಯನ್ನು ಮಾಡುವುದರಿಂದ ‘ಅನಂತಾನಂತ ಫಲಗಳು ದೊರೆಯುವುದೆಂದು ತಿಳಿಸಲಾಗಿದೆ. ಅನಂತನಾರಾಧನೆಯು ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದಲೂ ನಡೆದುಬಂದಿದ್ದು, ಈ ಪ್ರಬಂಧದಲ್ಲಿ ಕೆಲವು ಅನಂತಶಯನ ಶಿಲ್ಪಗಳನ್ನಾಧರಿಸಿ ವಿಷ್ಣುವಿನ ಈ ಸ್ವರೂಪದ ಆರಾಧನೆಯ ಬಗೆಗೆ ಬೆಳಕು ಚೆಲ್ಲಲು ಯತ್ನಿಸಲಾಗಿದೆ.
ವಿಷ್ಣುವು ಈ ಸ್ವರೂಪದಲ್ಲಿದ್ದಾಗ, ಅದರ ವಿಶೇಷತೆಯನ್ನು ಪುರಾಣಗಳು ಹೀಗೆ ತಿಳಿಸಿದೆ. (ಕಲ್ಪಾಂತ್ಯದಲ್ಲಿ ಜಗತ್ ಪ್ರಳಯವಾಗುವಾಗ ಜಗನ್ನಾಥನಾದ ವಿಷ್ಣುವು ಯೋಗನಿದ್ರೆಗೆ ಒಳಗಾಗುತ್ತಾನೆ) ಮಹಾಪ್ರಳಯದ ಕಾಲದಲ್ಲಿ ಕ್ಷೀರಸಾಗರದ ನಡುವೆ ಭೂಮಿಗೆ ಆಧಾರಭೂತವಾಗಿರುವ ಆದಿಶೇಷನನ್ನು ಪರ್ಯಂಕವಾಗಿಸಿಕೊಂಡು ಅದರ ಮೇಲೆ ಪವಡಿಸುತ್ತಾನೆ. ಆದಿಶೇಷನನ್ನು ‘ಅನಂತನೆಂದೂ ಕರೆಯುವರು. ಅನಂತನ ಮೇಲೆ ಶಯನಿಸಿದ ವಿಷ್ಣುವಿನ ರೂಪವು ‘ಅನಂತಶಯನ, ‘ಶೇಷಶಾಯಿಯೆಂದೂ ಸಾಗರದ ನಡುವೆ ನೆಲೆಸುವನಾದ್ದರಿಂದ ‘ಜಲಶಾಯಿ ಎಂದೂ ಕರೆಯುವರು. ಸಕಲ ಕಾರ‍್ಯಕಾರಣ, ಜಗದೀಶನಾದ ವಿಷ್ಣುವು ಯೋಗನಿದ್ರೆಗೆ ತೊಡಗಿದರೆ, ಇಡೀ ಬ್ರಹ್ಮಾಂಡವೇ ಶೂನ್ಯವಾಗುತ್ತದೆ. ಘೋರವಾದ ತಮಾಂಧಕಾರದಲ್ಲಿ ಮುಳುಗುತ್ತದೆ. ಸೂರ‍್ಯ ಚಂದ್ರರು, ಚೇತೋಹೀನರಾಗಿ, ಪ್ರಕೃತಿ ವಿಕೋಪಕ್ಕೆ ಒಳಗಾಗುತ್ತದೆ. ಸೃಷ್ಟಿಕ್ರಿಯೆ ಸ್ತಬ್ಧವಾಗಲು ಭೂಭಾರವು ಅಧಿಕವಾಗಿ ಭೂದೇವಿಯು ಸಂಕಟಕ್ಕೀಡಾಗುತ್ತಾಳೆ. ರಕ್ಕಸರ ಶಕ್ತಿ ಪ್ರತಾಪ ಹೆಚ್ಚಿ ಮೇರೆ ಮೀರುತ್ತದೆ. ಆಗ ಜಗತ್ತಿನ ರಕ್ಷಣೆಯ ಹೊಣೆ ಹೊತ್ತ ವಿಷ್ಣುವು ತಾನೇ ತಿಳಿಸಿರುವಂತೆ:
ಪರಿತ್ರಾಣಾಯ ಸಾಧೂನಾಂ ವಿನಾಶಯ ಚ ದುಷ್ಕೃತಾಂ
ಧರ್ಮ ಸಂಸ್ಥಾಪನಾರ್ಥಯಾ ಸಂಭವಾಮಿ ಯುಗೇ ಯುಗೇ||
ಎನ್ನುವಂತೆ ಮತ್ತೆ ಜಗತ್‌ಸೃಷ್ಟಿಗೆ ಆರಂಭವಾಗುತ್ತದೆ. ವಿಷ್ಣುವು ‘ಪದ್ಮನಾಭನೆನಿಸುತ್ತಾನೆ. ಅನಂತನ ಮೇಲೆ ಪವಡಿಸಿದ ಪದ್ಮನಾಭನು ‘ಅನಂತಪದ್ಮನಾಭನಾಗಿದ್ದಾನೆ. ಸರ್ವಸೃಷ್ಟಿಗೆ ಕಾರಣ ಲೋಕದ ರಕ್ಷಕನಾದ ವಿಷ್ಣುವನ್ನು ದೇವಾನುದೇವತೆಗಳು, ಮುನಿಗಳು, ಕಿನ್ನರರು, ಕಿಂಪುರುಷರಾದಿಯಾಗಿ ಸ್ತುತಿಸುತ್ತಾರೆ. ಹೀಗಾಗಿ ‘ಅನಂತಪದ್ಮನಾಭನ ಸ್ವರೂಪದಲ್ಲಿ ವಿಷ್ಣುವು ಕ್ಷೀರಸಾಗರದ ಮಧ್ಯದಲ್ಲಿ ಆದಿಶೇಷನ (ಅನಂತನ) ಶರೀರದ ಮೇಲೆ ನಿದ್ರಾವೃತನಾಗಿ ಯೋಗಿಯಂತೆ ಸ್ಥಿರಚಿತ್ತನಾಗಿ ಪವಡಿಸಿರುತ್ತಾನೆ. ತಪೋನಿರತನಂತೆ ಯೋಗನಿದ್ರೆಯಲ್ಲಿ ತಲ್ಲೀನನಾದ ವಿಷ್ಣುವನ್ನು ಸ್ತುತಿಸುತ್ತಿರುವಂತೆ ಶಿಲ್ಪಗಳಲ್ಲಿ ಚಿತ್ರಿಸಬೇಕೆಂದು ಶಾಸ್ತ್ರಗ್ರಂಥಗಳು ತಿಳಿಸಿವೆ.
[ಆಷಾಢದಿಂದ ಕಾರ್ತಿಕದವರೆಗಿನ ಮಾಸಗಳನ್ನು ಒಟ್ಟಾರೆ ಚಾತುರ್ಮಾಸವೆಂದು ಕರೆದಿದ್ದು ಈ ನಾಲ್ಕು ತಿಂಗಳ ಅವಧಿಯು ವೈಷ್ಣವರಿಗೆ ಪವಿತ್ರವೆನ್ನಿಸಿದೆ. ಆಷಾಢ ಶುದ್ಧ ಏಕಾದಶಿಯಿಂದ ವಿಷ್ಣುವು ‘ಯೋಗನಿದ್ರೆಗೆ ಹೋಗುವನಲ್ಲದೇ, ಕಾರ್ತೀಕ ಶುದ್ಧ ದ್ವಾದಶಿಯಂದು ಏಳುವನು. ಕೆಲವು ಗ್ರಂಥಗಳು, ಅವನು ಹುಣ್ಣಿಮೆಯಂದು ಮಲಗುವನೆಂದು ತಿಳಿಸಿವೆ. (೧೪೦ ಆ.ಗಿ.I. ಠಿ. ೧೧೨] ಅವನು ಏಳುವ ದ್ವಾದಶಿಯನ್ನು ಉತ್ಥಾನ ದ್ವಾದಶಿ ಎನ್ನುವರು. ದೇವರು ಮಲಗಿರುವುದರಿಂದ ಯಾವುದೇ ‘ನೈಮಿತ್ತಿಕ ‘ಕಾಮ್ಯಗಳನ್ನು ಈ ದಿನಗಳಲ್ಲಿ ಆಚರಿಸಬಾರದೆಂಬ ನಿಯಮವಿದೆ ಎಂದೂ ಹೇಳಲಾಗಿದೆ. (ಂSIಗಿ, ಠಿ. ೩೯೪) ಈ ೪ ತಿಂಗಳು ಮಳೆಗಾಲವಾಗಿದ್ದು ಯಾಗ ಯಜ್ಞಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಈ ನಂಬಿಕೆ ಮೂಡಿರಬೇಕು].
ವೈಖಾನಸ ಆಗಮ ಗ್ರಂಥವು ವಿಷ್ಣುವಿನ ಶಯನ ರೂಪದ ಮೂರ್ತಿಗಳಲ್ಲಿ ನಾಲ್ಕು ವಿಧದ ಮೂರ್ತಿಗಳನ್ನು ತಿಳಿಸಿದೆ. ಅವೆಂದರೆ: () ಯೋಗಶಯನಮೂರ್ತಿ, ೨) ಭೋಗಶಯನಮೂರ್ತಿ, ೩) ವೀರಶಯನಮೂರ್ತಿ ಮತ್ತು ೪) ಅಭಿಚಾರಿಕ ಶಯನಮೂರ್ತಿಗಳು ಈ ವಿಧದ ಶಿಲ್ಪಗಳನ್ನು ರಚಿಸುವಲ್ಲಿಯೂ ಶಿಲ್ಪ ಲಕ್ಷಣಗಳಿಗನುಗುಣವಾಗಿ ಅವುಗಳಲ್ಲಿ ಉತ್ತಮ ವರ್ಗದಶಿಲ್ಪ ಮಧ್ಯಮ ವರ್ಗದಶಿಲ್ಪ ಮತ್ತು ಅಧಮ ವರ್ಗದಶಿಲ್ಪವೆಂದು ಮೂರು ವಿಧಗಳನ್ನು ಗುರುತಿಸಲಾಗಿದೆ. ಆದರೆ ಎಲ್ಲೆಡೆ ಈ ಶಿಲ್ಪಶಾಸ್ತ್ರದ ಲಕ್ಷಣಗಳಿಗನುಗುಣವಾಗಿಯೇ ನಿರ‍್ಮಿಸಿರದೆ ಕೆಲವೆಡೆ ಅಲ್ಪಸ್ವಲ್ಪ ವ್ಯತ್ಯಾಸಗಳುಳ್ಳ ಶಿಲ್ಪಗಳನ್ನು ಕಾಣುತ್ತೇವೆ.
ಕರ್ನಾಟಕದಲ್ಲಿ ದೊರೆತಿರುವ ಅನಂತಶಯನ ಶಿಲ್ಪಗಳ ಅಧ್ಯಯನಕ್ಕೆ ತೊಡಗಿದಾಗ ಶಿಲ್ಪಶಾಸ್ತ್ರ ಗ್ರಂಥಗಳ ರಚನೆಗೆ ಮೊದಲೇ ಅಂದರೆ ಬಾದಾಮಿ ಚಾಲುಕ್ಯರ ಕಾಲದಿಂದ (ಸು. ೭ನೇ ಶತ) ಈ ರೂಪದ ಶಿಲ್ಪಗಳು ರಚನೆಯಾಗಿವೆ. ಈ ದಿಸೆಯಲ್ಲಿ ಗಮನಿಸಿದಾಗ ಸು. ೬-೭ನೇ ಶತಮಾನದ ಜನರು ವಿಶೇಷವಾಗಿ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಜಗತ್ ಸೃಷ್ಠಿಯ ಕಾಲಚಕ್ರಕ್ಕೆ ಕಾರಣರಾಗಿದ್ದು ಬ್ರಹ್ಮನು ವಿಶ್ವವನ್ನು ಸೃಷ್ಠಿಸುವನು. ವಿಷ್ಣುವು ಅದರ ರಕ್ಷಕನಾದರೆ, ಮಹೇಶ್ವರನು ಸೃಷ್ಠಿಯ ಲಯಕರ್ತನಾಗಿದ್ದು, ಈ ಮೂವರಿಂದ ಜಗತ್ತಿನ ಸರ್ವ ವ್ಯವಹಾರಗಳು ಸಾಗುತ್ತಿವೆ ಎಂದು ಭಾವಿಸಿ ‘ತ್ರೈಪುರುಷರನ್ನು ಆರಾಧಿಸುತ್ತಿದ್ದರೆಂದು ತಿಳಿದುಬರುತ್ತದೆ. ಈ ಹಿನ್ನೆಲೆಯಲ್ಲೇ ಬಾದಾಮಿ ಚಾಲುಕ್ಯರ ಕಾಲ ಜಂಬುಕೇಶ್ವರದೇವ ತ್ರಿಕೂಟಾಚಲವಾಗಿ ಮೊದಲು ತ್ರೈಪುರುಷದ್ದಾಗಿದೆ. ಈ ದೇವಾಲಯದ ವಿತಾನದ ಶೇಷಶಾಯಿ ವಿಷ್ಣುವಿನ ಬಿಂಬವಿರುವುದನ್ನು ಗಮನಿಸಬಹುದು. ಕರ್ನಾಟಕದಾದ್ಯಂತ ಗಮನಿಸಿದರೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ರಂಗನಾಥ ಶಿಲ್ಪಗಳು ದೊರೆಯುತ್ತಿದ್ದು ನಾನಿಲ್ಲಿ ಪ್ರಮುಖವಾದ ಆರು ಶಿಲ್ಪಗಳನ್ನು ಆಧರಿಸಿ ಶಿಲ್ಪದ ವೈಶಿಷ್ಟ್ಯವನ್ನು ಗುರುತಿಸಲು ಯತ್ನಿಸಿದ್ದೇನೆ.
ಕ್ರಿ.ಶ.೮ನೇ ಶತಮಾನದಲ್ಲಿ ನಿರ್ಮಿಸಿರುವ ಐಹೊಳೆಯ ಕೊಂತಿ ಗುಂಡಿ ಸಮೂಹದ ಗುಡಿಯೊಂದರ ವಿತಾನದಲ್ಲಿ ಸುಂದರವಾದ ಅನಂತಶಯನ ಶಿಲ್ಪವಿದೆ. ಈ ಶಿಲ್ಪವನ್ನು ಗಮನಿಸಿದರೆ ಕ್ಷೀರಸಾಗರದ ನಡುವೆ ಆದಿಶೇಷನ ಮೇಲೆ ವಿಷ್ಣುವು ಪವಡಿಸಿದ್ದಾನೆ. ವಿತಾನಶಿಲ್ಪವಾದ ಈ ಶಿಲ್ಪ ವಿಷ್ಣುವಿನ ಶರೀರವು ಪೂರ್ಣವಾಗಿ ನಾಗಶಯನದ ಮೇಲೆ ಅಂಗಾತನಾಗಿ ಮಲಗಿದಂತಿದೆ. ವಿಷ್ಣುವಿನ ಶಿರವು ಅಲ್ಲಿನ ಮಕುಟವನ್ನು ಧರಿಸಿದ್ದು, ಶಿರದ ಹಿಂಭಾಗದಲ್ಲಿ ಸಪ್ತಫಣಿಗಳನ್ನು ಪ್ರಭಾವಳಿಯಂತೆ ಬಿಡಿಸಲಾಗಿದೆ. ಫಣಿ ಪ್ರಭಾವಳಿಯ ಪಕ್ಕದಲ್ಲಿ ಬಲಗಡೆ ಚಕ್ರ, ಎಡಗಡೆ ಶಂಖವನ್ನು ಬಿಡಿಸಿದೆ. ಚತುರ್ಭುಜಧಾರಿ ವಿಷ್ಣುವಿನ ಬಲಗೈಯು ಪಲ್ಲಂಗದ ಮೇಲೆ ವಿರಮಿಸಿದೆ. ಮತ್ತೊಂದಕ್ಕೆ ಲೋಲಹಸ್ತವಾಗಿ ಕೆಳ ಚಾಚಿದೆ. ವಿಷ್ಣುವಿನ ಮೇಲಿನ ಎಡಗೈ ತಲೆ ಆಸರೆಯಾಗಿದೆ. ಕೆಳ ಎಡಗೈ ಕಟೀಹಸ್ತದ ಕೆಳಚಾಚಿದೆ. ಮಲಗಿರುವ ವಿಷ್ಣುವಿನ ಕೊರಳಿನಲ್ಲಿ ಕಂಠಿಕೆ, ಪದಕದ ಹಾರವನ್ನು ಬಿಡಿಸಿದ್ದು, ದಪ್ಪದಾದ ಯಜ್ಞೋಪವೀತವನ್ನು ಬಿಡಿಸಿದೆ. ಕಾಲುಗಳು ಕರ್ತರಿ ಭಂಗಿಯಲ್ಲಿವೆ. ಸಪರಿವಾರವಿರುವ ವಿಷ್ಣುವಿನೊಂದಿಗೆ ಬಲಗಡೆ ಪಾದದ ಬಳಿ ಭೂದೇವಿಯ ಅಂಜಲಿಬದ್ಧಳಾಗಿದ್ದಾಳೆ. ಇವಳ ಮೇಲೆ ಶಿಶುವಿನಂತಿರುವ ಸನತ್ಕುಮಾರನ ಮೇಲೆ ಎಡಗೈಯನ್ನು ಪಲ್ಲಂಕದ ಮೇಲೆ ಇಲ್ಲಿನ ಲಕ್ಷ್ಮಿದೇವಿಯು ಇದ್ದಾರೆ. ಇವಳ ಮೇಲ್ಭಾಗದಲ್ಲಿ ತುಂಬುರರನ್ನು ಬಿಡಿಸಿದೆ. ಇದರಂತೆ ಎಡಭಾಗದಲ್ಲಿ ವಿಷ್ಣುವಿನ ತಲೆಯ ಪಕ್ಕದ ಕೈಮುಗಿದು ನಿಂತಿರುವ ಮಾರ್ಕಾಂಡೇಯ ಮುನಿ. ನಂತರ ಸನಕ, ನಂತರ ಚಾಮರಧಾರಿಣಿಯ ಶಿಲ್ಪ, ಎಡಗಡೆ ವಿಷ್ಣು ಪಾದಗಳ ಪಕ್ಕದಲ್ಲಿ ಮಧುಕೈಟಬರು, ಗದೆ, ಗುರಾಣಿಯನ್ನು ಹಿಡಿದು ಆಲೀಢಭಂಗಿಯಲ್ಲಿ ಉತ್ಸಾಹಭರಿತರಾಗಿರುವಂತೆ ಬಿಡಿಸಿವೆ. ಈ ಶಿಲ್ಪವು ಸುಮಾರು ೮ನೇ ಶತಮಾನದಲ್ಲಿ ನಿರ‍್ಮಿಸಿದ್ದ ಶಿಲ್ಪವಾಗಿದ್ದು ಈ ಸುಮಾರಿಗೆ ಪುರಾಣಗಳು ಪ್ರಚಲಿತವಿದ್ದು, ಅದರ ಪ್ರಭಾವದಿಂದ ನಿರ‍್ಮಿಸಿದ ಶಿಲ್ಪ ಇದಾಗಿದೆ. [ಒಂದು ಕೈಯಲ್ಲಿ ಗದೆ ಇದ್ದು ಆಯುಧ ಪುರುಷನಂತೆ ಬಿಡಿಸಿದೆ ಎಂದು ಎಸ್. ರಾಜಶೇಖರ್ ತಿಳಿಸಿದ್ದಾರೆ. ಆದರೆ ಇದು ಮಧುಕೈಟಭರ ಯುದ್ಧಕ್ಕೆ ತೊಡಗಿರುವಂತೆ ಬಿಡಿಸಿರುವ ಶಿಲ್ಪವಾಗಿದೆ.] ಇಂತಹದೇ ಮತ್ತೊಂದು ಸುಂದರವಾದ ಅನಂತಶಯನ ಶಿಲ್ಪವನ್ನು ಐಹೊಳೆಯ ಚಿಕ್ಕಗುಡಿಯ ವಿತಾನವೊಂದರಲ್ಲಿ ಕಾಣಬಹುದಾಗಿದೆ. ಉತ್ತಮ ವರ್ಗದ ಯೋಗಶಯಮೂರ್ತಿ.
ಬಾದಾಮಿಯ ಭೂತನಾಥ ದೇವಾಲಯದ ದಕ್ಷಿಣಕ್ಕಿರುವ ಬಂಡೆಯ ಮೇಲಿನ ಶಿಲ್ಪವೊಂದು ಗಮನಾರ್ಹವಾಗಿದೆ. ಈ ಶಿಲ್ಪವು ಕಲ್ಯಾಣ ಚಾಲುಕ್ಯರ ಶೈಲಿಯ ಶಿಲ್ಪವಾಗಿದ್ದು ಸುಮಾರು ೧೧ನೇ ಶತಮಾನ. ಈ ಶಿಲ್ಪದಲ್ಲಿ ಶಿಲ್ಪಿಯು ಉತ್ತಮ ವರ್ಗದ ಯೋಗಶಯನಮೂರ್ತಿಯ ಲಕ್ಷಣಗಳೆಲ್ಲವನ್ನೂ ಬಿಡಿಸಿದ್ದು, ಶಿಲ್ಪವು ಗಮನಾರ್ಹವಾಗಿದೆ. ಶಿಲ್ಪವನ್ನು ಸರ್ಪಶಯನದ ಮೇಲೆ ಪವಡಿಸಿರುವ ವಿಷ್ಣುವಿನ ಶಿರದ ಹಿಂದೆ ಸಪ್ತಫಣಾವಳಿಯನ್ನು ಬಿಡಿಸಿದೆ. ಫಣಾವಳಿಯಲ್ಲಿನ ಹಾವಿನ ಹೆಡೆಗಳು ಸ್ವಲ್ಪ ಮೇಲೆತ್ತಿರುವುದನ್ನು ಗಮನಿಸಿ. ಇದರಂತೆ, ವಿಷ್ಣುವಿನ ಶರೀರವು ಪೂರ್ಣವಾಗಿ ಪರ್ಯಂಕದ ಮೇಲೆ ಮಲಗಿರದೆ ಕಟಿವರೆಗೆ ಭಾಗ ಆಧರಿಸಿ ವಕ್ಷಸ್ಥಲದಿಂದ ಮೇಲ್ಭಾಗವು ಸ್ವಲ್ಪ ಮೇಲೆತ್ತಿದೆ. ಶಿರವು ಎತ್ತರವಾದ ಕಿರೀಟ ಮಕುಟ ಧರಿಸಿದ್ದ ಬಲಗೈಯೊಂದು ತಲೆಗೆ ಆಸರೆಯಾಗಿದೆ. ಮತ್ತೊಂದು ಬಲಗೈ ಸಂತಾನ ಮಂಜರಿಯನ್ನು ಹಿಡಿದಿದೆ. ವಿಷ್ಣುವು ಬಲಗಾಲನ್ನು ನೇರವಾಗಿ ಚಾಚಿದ್ದು ಪಾದವು ಲಕ್ಷ್ಮಿದೇವಿಯ ತೊಡೆ ಮೇಲಿದೆ. ಲಕ್ಷ್ಮಿ ಪಾದಸೇವೆಯಲ್ಲಿ ತೊಡಗಿದ್ದಾಳೆ. ಎಡಗಾಲು ವಕ್ರವಾಗಿ ಬಾಗಿದ್ದು ಪಲ್ಲಂಕದ ಮೇಲೆ ಭೂಪಾದವಾಗಿದೆ. ಎಡಗೈಯು ಲೋಲಹಸ್ತವಾಗಿ ತೊಡೆಯ ಮೆಲೆ ವಿರಮಿಸಿದೆ. ಪಾದದ ಬಳಿ ಮಾರ್ಕಂಡೇಯ ಮುನಿ ಅಂಜಲೀಬದ್ಧನಾಗಿದ್ದಾನೆ. ವಿಷ್ಣುವಿನ ನಾಭಿಯಿಂದ ಹೊರಟ ಪದ್ಮದಲ್ಲಿ ಚತುರ್ಮುಖ ಬ್ರಹ್ಮನನ್ನು ಬಿಡಿಸಿದೆಯಲ್ಲದೆ ಬ್ರಹ್ಮನೊಂದಿಗೆ ಈ ವಿಷ್ಣುವಿನ ದಶಾವತಾರದ ಶಿಲ್ಪಗಳನ್ನು ಬಿಡಿಸಲಾಗಿದೆ. ವಿಷ್ಣುವಿನ ಮತ್ತೊಂದು ಎಡಗೈಯಲ್ಲಿ ಕಮಲವನ್ನು ಧರಿಸಿದೆ. ಬಲಭಾಗದಲ್ಲಿ ಶಂಖ ಚಕ್ರಗಳಿದ್ದು ಪರ್ಯಂಕದ ಪದ್ಮ ಉದ್ದವಾಗಿ ಗದೆ ಬಿಡಿಸಿವೆ. ದಶಾವತಾರ ಶಿಲ್ಪಗಳಲ್ಲಿ ಮತ್ಸ, ಕೂರ್ಮಗಳನ್ನು ಪ್ರಾಣಿಗಳ ರೂಪದಲ್ಲಿ ವರಾಹ, ನರಸಿಂಹರನ್ನು ಮಾನವ ಅಥವಾ ಪ್ರಾಣಿ ಮುಖದಂತೆ ಬ್ರಹ್ಮನ ಎಡಭಾಗಕ್ಕಿರುವ ಶಿಲ್ಪಗಳು ಮಾನವಾಕಾರದಲ್ಲಿವೆ. ಬ್ರಹ್ಮನ ಪದ್ಮದ ದಂಟಿನ ಸುರುಳಿಯಲ್ಲಿ ಸನತ್ಕುಮಾರ ಗರುಡರ ಚಿಕಣಿ ಶಿಲ್ಪಗಳಾಗಿ ಬಿಡಿಸಿದೆ. ಇದು ಸುಮಾರು ೧೧ನೇ ಶತಮಾನದ ಶಿಲ್ಪವಾಗಿದೆ.
ಸುಮಾರು ಕ್ರಿ.ಶ.೧೨ನೇ ಶತಮಾನದ ಹೊತ್ತಿಗೆ ಕರ್ನಾಟಕದ ಹೊಯ್ಸಳನಾಡಿನಲ್ಲಿ ಶ್ರೀವೈಷ್ಣವರ ಗುರುಗಳಾದ ಶ್ರೀ ರಾಮಾನುಜಾಚಾರ‍್ಯರು ಪ್ರವೇಶಿಸಿದರು. ಮೊದಲು ಇವರು ‘ಶ್ರೀರಂಗಂನಲ್ಲಿ ನೆಲೆಸಿದ್ದು, ಶ್ರೀರಂಗನಾಥನ ಪರಮಭಕ್ತರಾಗಿದ್ದರು. ಇವರು ರಚಿಸಿದ ‘ಶ್ರೀರಂಗರಾಜಸ್ತವ ಪ್ರಸಿದ್ಧವಾದ ಜನಪ್ರಿಯವಾದ ಸ್ತೋತ್ರವಾಗಿದೆ. ಇವರ ಪ್ರಭಾವದಿಂದ ಹೊಯ್ಸಳನಾಡಿನಲ್ಲಿ ಕಾವೇರಿ ತೀರದಲ್ಲಿರುವ ಶ್ರೀರಂಗಪಟ್ಟಣ ಮತ್ತು ಶಿವನ ಸಮುದ್ರಗಳಲ್ಲಿ ಶ್ರೀರಂಗನಾಥ ದೇವಾಲಯಗಳು ನಿರ್ಮಾಣಗೊಂಡವು. ೧೨ನೇ ಶತಮಾನದಲ್ಲಿ ನಿರ‍್ಮಿಸಲಾದ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿಯ ಶಿಲ್ಪವು ಪುರಾಣ ಶಾಸ್ತ್ರಗ್ರಂಥಗಳು ತಿಳಿಸುವ ಲಕ್ಷಣಗಳಿಗಿಂತ ತೀರ ಭಿನ್ನವಾಗಿದೆ. ಕಾರಣ ಶ್ರೀ ರಾಮಾನುಜರ ವೈಷ್ಣವಪಂಥವು “ಸಕಲ ಜನರನ್ನು (ನಾರಾಯಣನ ಕಿಂಕರರನ್ನಾಗಿ ತಿರು ದಾಸರನ್ನಾಗಿಸಿ) ಶ್ರೀವೈಷ್ಣವ ಪಂಥಕ್ಕೆ ಸೇರದ ಭಕ್ತನು ಕೇವಲ ದೇವ ದರ್ಶನದಿಂದಲೊ, ದೇವಾಲಯ ಕೈಂಕರ‍್ಯಗಳನ್ನು ನಡೆಸುವುದರಿಂದ ಮುಕ್ತಿಗಳಿಸಲು ಸಾಧ್ಯವೆಂದು ಸಾರಿತು. ಶ್ರೀವೈಷ್ಣವರಾದ ಎಲ್ಲರಿಗೂ ಮುಕ್ತ ಪ್ರವೇಶ ನೀಡಿತು. ಈ ಧಾರ್ಮಿಕ ಹಿನ್ನೆಲೆಯ ಪ್ರಭಾವದಿಂದ ಶಿಲ್ಪಿಗಳ ರಚನೆಯಲ್ಲೂ ಬದಲಾವಣೆಗಳಾಗಿದ್ದು ಶ್ರೀರಂಗಪಟ್ಟಣದ ಶಿಲ್ಪವು ಕೇವಲ ರಂಗನಾಥನು ಪಂಚಫಣಾವಳಿಯುಳ್ಳ ಸರ್ಪ ಪರ್ಯಂಕರನು ಮೇಲೆ ಪವಡಿಸಿರುವಂತೆ ಬಿಡಿಸಿದೆ. ವಿಷ್ಣುವಿನ ದೇಹದ ಶಿರೋಭಾಗವು ಮಾತ್ರ ಸ್ವಲ್ಪ ಮೇಲೆತ್ತಿದ್ದು, ಬಲಗೈಯೊಂದು ತಲೆಗೆ ದಿಂಬಿನಂತೆ ಆಸರೆಯಾಗಿದೆ. ಸರ್ವಾಲಂಕಾರ ಭೂಷಿತನಾದ ವಿಷ್ಣುವಿನ ಪಾದದ ಬಳಿ ಲಕ್ಷ್ಮಿಯು ಪಾದಸೇವೆಯಲ್ಲಿ ತೊಡಗಿರುವಂತೆ ಇದೆ. ಸರ್ಪ ಪರ್ಯಂಕವು ೮ ಸುತ್ತಿನದೆಂಬುದು ಇಲ್ಲಿ ಗಮನಾರ್ಹ. ಅದರಂತೆ ವಿಷ್ಣುವಿನ ನಾಭಿಯಿಂದ ಉದ್ಭವಿಸಬೇಕಾದ ಬ್ರಹ್ಮನ ಶಿಲ್ಪವು ಇಲ್ಲಿಲ್ಲ. ಮತ್ತು ಈ ಶಿಲ್ಪದಲ್ಲಿ ವಿಷ್ಣುವಿನ ಪರಿವಾರವನ್ನು ಬಿಡಿಸಿಲ್ಲ.
ರಂಗಸ್ಥಳದ ರಂಗನಾಥ ದೇವಾಲಯದ ಶಿಲ್ಪವನ್ನು ಗಮನಿಸಿದರೆ, ಸಪ್ತಫಣಾವಳಿಯುಳ್ಳ ಆದಿಶೇಷನ ಮೇಲೆ ರಂಗನಾಥನು ಪವಡಿಸಿದ್ದಾನೆ. ಮೂರು ಸುತ್ತಿನ ಆವೃತ್ತಿಯುಳ್ಳ ಪರ್ಯಂಕದ ಮೇಲೆ ಮಲಗಿರುವ ವಿಷ್ಣುವಿನ ನೀಳಕಾಯವು ಕಂಠದವರೆಗೆ ಪವಡಿಸಿದ್ದು ಶಿರವನ್ನು ಮಾತ್ರ ಕೊಂಚ ಮೇಲೆತ್ತಿದೆ. ಕಾಲುಗಳು ಎರಡು ಸಮವಾಗಿವೆ. ಎಡಗೈ ಲಕ್ಷ್ಮಿ ಪಾದಸೇವೆಯಲ್ಲಿ ನಿರತಳಾಗಿರುವಂತೆ ಬಿಡಿಸಿದೆ. ಪಾದದ ಬಳಿ ಶ್ರೀದೇವಿ ಭೂದೇವಿಯರಿಬ್ಬರೂ ಇದ್ದಾರೆ. ದೇವರ ಹಿಂಭಾಗದ ಭಿತ್ತಿಯ ಪಟ್ಟಿಕೆಯಲ್ಲಿ ಸಪ್ತಋಷಿ, ಶಂಖ, ಚಕ್ರ, ಗದಾ, ಅಪ್ಸರೆಯರು, ಅಷ್ಟದಿಕ್ಪಾಲಕರು ಮುಂತಾದವರ ಉಬ್ಬುಶಿಲ್ಪಗಳಿವೆ. ಈ ಶಿಲ್ಪದ ಲಕ್ಷಣಗಳನ್ನು ಗಮನಿಸಿದಾಗ ದೇವಾಲಯದ ನಿರ‍್ಮಾಣದ ಕಾಲ ಖಚಿತವಿರದೆ ಮತ್ತು ಶಿಲ್ಪವನ್ನು ವಿಜಯನಗರ ಕಾಲದ್ದೆಂದು ಹೇಳಬಹುದಾಗಿದೆ. ಸಾಮಾನ್ಯವಾಗಿ ವಿಜಯನಗರ ಕಾಲದ ರಂಗನಾಥ ಶಿಲ್ಪಗಳಿಗಿಂತ ಸ್ವಲ್ಪ ಹಿಂದಿನ ಕಾಲ ಶಿಲ್ಪದಂತಿದೆ.
ಹಳೇಬಿಡಿನ ರಂಗನಾಥ ದೇವಾಲಯದ ಗರ್ಭಗೃಹದ ಶಿಲ್ಪದಲ್ಲಿ ಸಪ್ತಫಣಾವಳಿಯುಳ್ಳ ಪಯಂಕದ ಮೇಲೆ ವಿಷ್ಣುವು ಮಲಗಿದ್ದಾನೆ. ವಿಷ್ಣುವಿನ ಪಾದದ ಬಳಿ ಲಕ್ಷ್ಮಿ ಕುಳಿತಿದ್ದರೆ ಭೂದೇವಿಯು ಶಿರದ ಬಳಿ ಇದ್ದಾಳೆ. ವಿಷ್ಣುವಿನ ಎಡಗೈಯೊಂದು ಕಟಿಹಸ್ತವಾಗಿವೆ. ಬಲಗೈ ತಲೆಗೆ ಆಸರೆಯಾಗಿದೆ. ಇಲ್ಲಿ ಆಯುಧಗಳನ್ನು ಬಿಡಿಸಿಲ್ಲ. ಶಿರದ ಬಳಿ ಮಾರ್ಕಾಂಡೇಯನ ಚಿಕ್ಕ ಬಿಂಬವಿದೆ. ವಿಷ್ಣುವಿಗೆ ಕಮಾನಿನಂಥ ಪ್ರಭಾವಳಿ ರಚಿಸಿ ಇಲ್ಲಿ ದಶಾವತಾರ ಶಿಲ್ಪಗಳಿವೆ. ವಿಷ್ಣುವಿನ ಪಾದದ ಬಳಿ ಗರುಡನು ಅಂಜಲೀ ಬದ್ಧನಾಗಿದ್ದಾನೆ. ಇದು ರೂಪಮಂಡಣದಲ್ಲಿ ತಿಳಿಸಿರುವ ಲಕ್ಷಣಗಳಿಗೆ ಅನ್ವಯಿಸಿ ಕೆತ್ತಿರುವ ಶಿಲ್ಪವಾಗಿದೆ. ಇಂಥ ಸುಂದರವಾದ ಶಿಲ್ಪವೊಂದನ್ನು ಬೆಂಗಳೂರಿನ ರಂಗನಾಥಸ್ವಾಮಿ ಗುಡಿಯಲ್ಲಿ ಕಾಣಬಹುದು.
ವಿಜಯನಗರ ಕಾಲದ ರಂಗನಾಥನ ಶಿಲ್ಪಗಳಿಗೆ ಕಾರ್ಕಳ ಅನಂತಪದ್ಮನಾಭ ದೇವಾಲಯದ ಶಿಲ್ಪವನ್ನು ಗಮನಿಸಬಹುದು. ಇಲ್ಲಿ ಮೂರು ಸುತ್ತಿನ ಸಪ್ತ ಫಣಾವಳಿಯ ಆದಿಶೇಷನ ಮೇಲೆ ವಿಷ್ಣುವು ಪವಡಿಸಿದ್ದಾನೆ. ವಿಷ್ಣುವಿನ ದೇಹವು ಕಟಿಯವರೆಗೆ ಪರ್ಯಂಕಧಾರವಾಗಿ ವಕ್ಷಸ್ಥಲದಿಂದ ಮೇಲಕ್ಕೆ ಎತ್ತಿದಂತಿದೆ. ಶಿರವು ಸಾಕಷ್ಟು ಮೇಲೆತ್ತಿದೆ. ಚತುರ್ಭುಜನಾದ ವಿಷ್ಣುವಿನ ಬಲಗೈ ಶಂಖವನ್ನು, ಎಡಗೈ ಚಕ್ರವನ್ನು ಧರಿಸಿದ್ದು, ಮುಂದಿನ ಬಲಗೈ ತಲೆಗೆ ಆಸರೆಯಾಗಿದೆ. ಮುಂದಿನ ಎಡಗೈ ಜುರುವಿನ ಮೇಲೆ ವಿರಮಿಸಿದೆ. ನಾಭಿಯಿಂದ ಅರಳಿದ ಪದ್ಮದ ಮೇಲೆ ಬ್ರಹ್ಮನು ಅಂಜಲಿಬದ್ಧನಾಗಿ ಕುಳಿತಿದ್ದಾನೆ. ಪಾದದ ಬಳಿ ಶ್ರೀದೇವಿ ಭೂದೇವಿಯರಿಬ್ಬರನ್ನು ಬಿಡಿಸಿ ಲಕ್ಷ್ಮಿಯು ಪಾದವನ್ನೊತ್ತು ತ್ತಿದ್ದಾಳೆ. ಶಿಲ್ಪದ ಅಂಗಸೌಷ್ಠವ ಆಭರಣದ ವಿನ್ಯಾಸಗಳು ಸರ್ಪದ ಪ್ರಭಾವಳಿಯ ವಿನ್ಯಾಸ ಮುಂತಾದವು ಶಿಲ್ಪವನ್ನು ವಿಜಯನಗರ ಕಾಲದ್ದೆಂದು ಸೂಚಿಸುತ್ತಿವೆ. ಇದು ಸುಮಾರು ೧೫ನೇ ಶತಮಾನದ ಶಿಲ್ಪಗಳಾಗಿದ್ದು, ಈ ಶಿಲ್ಪಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಕರ್ನಾಟಕದ್ದಲ್ಲವಾದರೂ ಶ್ರೀರಂಗದ ಶ್ರೀರಂಗನಾಥನ ಶಿಲ್ಪವನ್ನು ಗಮನಿಸಲೇ ಬೇಕಾಗುತ್ತದೆ. ಈ ರಂಗನಾಥನ ಶಿಲ್ಪವು ಪಂಚಫಣಾವಳಿ ಮೂರು ಸುತ್ತಿನ ಪರ್ಯಂಕದ ಮೇಲೆ ವಿಷ್ಣುವು ಪವಡಿಸಿರುವಂತೆ ದ್ವಿಭುಜನಾದ ವಿಷ್ಣುವಿನ ಬಲಗೈ ಅಭಯ ಮುದ್ರೆಯಲ್ಲಿದ್ದು ತಲೆಗೆ ಆಸರೆಯಾದರೆ ಎಡಗೈ ಸಮಾನಾಂತರವಾಗಿ ಚಾಚಿದೆ. ಪದ್ಮಪೀಠದಲ್ಲಿರುವ ಪಾದದ ಬಳಿ ಯಾವ ಶಿಲ್ಪವೂ ಇಲ್ಲ. ಸಪರಿವಾರವಿರದ ಈ ಶಿಲ್ಪವು ಅಭಿಚಾರಿಕಾ ವರ್ಗದ ಶಿಲ್ಪವಾಗಿದ್ದು ಮುಕ್ತರಾಗಿ ಸಕಲ ಜನರಿಂದ ಮುಕ್ತ ರೀತಿಯ ಪೂಜಾರಾಧನೆಗೆ ಒಳಪಟ್ಟ ಶಿಲ್ಪವಾಗಿದೆ.
ಇತ್ತೀಚಿಗೆ ಎಲ್ಲರ ಗಮನ ಸೆಳೆದಿರುವ ೧೮ ಉದ್ದದ ತಿರುವನಂತಪುರದ ಅನಂತಶಯನ ಶಿಲ್ಪವು ಇದರಂತೆ ರಚಿಸಲಾದ ಶಿಲ್ಪವಾಗಿದ್ದು, ಇದರ ನಾಭಿಯಿಂದರಳಿದ ಪದ್ಮದಲ್ಲಿ ಆಸೀನ ಬ್ರಹ್ಮನನ್ನು ಬಿಡಿಸಲಾಗಿದೆ. ಪರಿವಾರ ರಹಿತವಾದ ಈ ಶಿಲ್ಪವು ಶ್ರೀರಂಗದ ಶಿಲ್ಪದಂತೆ ರಚಿತವಾಗಿರುವ ೧೮ನೇ ಶತಮಾನದ ಶಿಲ್ಪವಾಗಿವೆ.
ಶಿಲ್ಪಶಾಸ್ತ್ರ ಗ್ರಂಥಗಳಿಗೆ ಅನುಗುಣವಾಗಿ ಚಿತ್ರಿಸಲಾಗಿರುವ ವರ್ಣಚಿತ್ರವೊಂದರ ಛಾಯಾಚಿತ್ರ ರಂಗನಾಥ ಶಿಲ್ಪದ ವೈಶಿಷ್ಟ್ಯವನ್ನು ಸ್ಪಷ್ಟಪಡಿಸಿದೆ. ಒಟ್ಟಿನಲ್ಲಿ ಈ ಅಧ್ಯಯನದಿಂದ ತಿಳಿದು ಬರುವ ಅಂಶಗಳೆಂದರೆ :
೧.       ಈ ಸ್ವರೂಪವೊಂದು ‘ಸಮನ್ವಯ ಶಿಲ್ಪವಾಗಿದ್ದು, ತ್ರಿಮೂರ್ತಿಗಳೆಲ್ಲರನ್ನೂ ಒಟ್ಟಾಗಿ ಪೂಜಿಸುವುದರಿಂದ ಮೋಕ್ಷಕಾರಕವಾದ ಈ ಶಿಲ್ಪದ ಆರಾಧನೆ ಅತ್ಯಂತ ಶ್ರೇಷ್ಠವೆನ್ನಿಸಿದೆ.
೨.       ಶ್ರೀವೈಷ್ಣವ ಧರ್ಮದ ಪ್ರಭಾವದಿಂದ ಈ ಆರಾಧನೆ ಹೆಚ್ಚು ಪ್ರಚಲಿತವಾಗಿರುವುದನ್ನು ಗಮನಿಸಬಹುದು.
೩.       ಇಂದಿಗೂ ವೆಂಕಟೇಶ್ವರ ದೇವಾಲಯದ ಆವರಣದಲ್ಲಿ ‘ಗೋವಿಂದರಾಜನೆಂಬ ಹೆಸರಿನಲ್ಲಿ ಸುಂದರವಾದ ರಂಗನಾಥಶಿಲ್ಪಗಳು ಮೂಡಿಬರುತ್ತವೆ. ಬೆಂಗಳೂರಿನ ರಾಜಾಜಿನಗರದ ವೆಂಕಟೇಶ್ವರ ದೇವಾಲಯದ ಆವರಣದಲ್ಲಿ ೧೪ ಉದ್ದದ ಭವ್ಯವಾದ ರಂಗನಾಥನ ಶಿಲ್ಪ ಗಮನಾರ್ಹವಾದುದಾಗಿದೆ.




Sunday, March 24, 2013

ಕ್ಯೂನಿಫಾರಂ ಲಿಪಿ

ಶೇಷಗಿರಿರಾವ್. ಎಚ್



 ಕ್ಯೂನಿಫಾರಂ ಲಿಪಿ
ಲಿಪಿಯು ನಾಗರೀಕತೆಯ ಹೆಗ್ಗುರುತು .ಯುಫ್ರಟಿಸ್ಟ್‌ ಮತ್ತು ಟೈಗ್ರಿಸ್‌ ನದಿಗಳ ನಡುವಿನ ಮೆಸಪಟೋಮಿಯಾ ಪ್ರದೇಶದಲ್ಲಿ ನಾಲ್ಕನೆ ಸಹಸ್ರಮಾನದ ಕೊನೆಯಲ್ಲಿ ಕ್ಯೂನಿಫಾರಂ ಲಿಪಿಯ ವಿಕಾಸವಾಯಿತು. ಅದಕ್ಕೆ ಮುಖ್ಯ ಕಾರಣ ಹಣಕಾಸು, ಬಹುತೇಕ ಎಲ್ಲ ಕ್ಯೂನಿಫಾರಂ ಬರಹಗಳು ಎರಡನೆ ಸಹಸ್ರಮಾನದ ವರೆಗೆ  ಹಣ ಮತ್ತು ವ್ಯಾಪಾರ ಕುರಿತಿರುವವೇ ಆಗಿವೆ.
ಮೂಲ  ಸುಮೇರಿಯನ್‌ ಬರಹವನ್ನು ಅಕ್ಕಾಡೈನ್‌, ಎಬಲೈಟ್, ಹಿಟೈಟ,ಲುವೇಯನ್‌,ಹ್ಯುರಾಟಿನ್‌ಭಾಷೆಗಳು ಅಳವಡಿಸಿಕೊಂಡವು.ಅವು ಉಗಾರ್ಟಿಕ್‌ ಮತ್ತು . ಪ್ರಾಚೀನ ಪರ್ಶಿಯನ್‌ ಭಾಷೆಗಳ ಮೇಲೂ ಪ್ರಭಾವ ಬೀರಿದವು  ಕ್ಯೂನಿಫಾರಂ ಲಿಪಿಯು ಕ್ರಮೇಣ ಫೋನಿಷಿಯನ್‌ ಲಿಪಿಗಳಿಗೆ ದಾರಿ ಮಾಡಿದವು.ಅದು ನವಅಸ್ಸೀರಿಯನ್‌ ಅವಧಿಯಲ್ಲಿ ಆಯಿತು. ಕ್ರಿ.ಶ ೨ನೇ ಶತಮಾನದ ಹೊತ್ತಿಗೆ ಅದು ಮಾಯವಾಯಿತು.
.ಬರಹ ಮೊದಲಾದ್ದು ಹಣಕಾಸಿನ ವ್ಯವಹಾರ ದಾಖಲಿಸಲು. ಕೃಷಿಉತ್ಪನ್ನ ಮತ್ತು ಪಶುಸಂಪತ್ತು ಹಾಗೂ ಎಣ್ಣ ಜಾಡಿಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಕಳುಹಿಸಲು ಅವುಗಳನ್ನ ಎಷ್ಟಿವೆ ಎಂಬುದನ್ನು ದಾಖಲೆಮಾಡಿಕಳುಹಿಸಲು ಲಿಪಿಯ ಬಳಕೆ ಮೊದಲಾಯಿತು
ಅದಕ್ಕಾಗಿ ಮೂರು ಆಯಾಮದ ಮಣ್ಣಿನ ಟೋಕನ್‌ಗಳು ಬಳಸಿದರು.ವಿವಿಧ ವಸ್ತುಗಳನ್ನುನ್ನು ಪ್ರತಿನಿಧಿಸಲು ಬೇರೆ ಬೇರೆ ಆಕಾರದ ಮತ್ತು ಗಾತ್ರದಮಣ್ಣಿನ ಗುರುತಿನಬಿಲ್ಲೆ(ಟೋಕನ್‌)) ಇರುತಿದ್ದವು. ಅದು ಧಾನ್ಯ,  ದನ,ಕುರಿ ಬುಟ್ಟಿ,ಬೆಳ್ಳಿಯ ಗಟ್ಟಿಯಾಗಿರಬಹುದು.ಅವನ್ನು ಟೋಕನ್‌ಗಳು ಪ್ರತಿನಿಧಿಸುತಿದ್ದವು.ಅವುಗಳಿಗೆ ಭಾಷೆಯ ತೊಡುಕು ಇರಲಿಲ್ಲ.ಅವಕ್ಕೆ ಯಾವುದೇ ಭಾಷೆಯಲ್ಲೂ ಒಂದೆ ಅರ್ಥ.ಅವನ್ನು ಸರಳಗೊಳಿಸಿ ಗೆರೆ ಅಥವ ಗುರುತು ಮಾಡತೊಡಗಿದರು. ನಮ್ಮ ಹಳ್ಳಿಕಡೆ ಸುಮಾರು 60 ವರ್ಷಧ ಹಿಂದೆ ಮೊಸರು ಮಾರುವ ಹೆಂಗಸರು ಇದೇ ರೀತಿ ಬಿಳಿಗೋಡೆಯ ಮೇಲೆ  ಕರಿ ಚುಕ್ಕೆ ಇಟ್ಟು ಲೆಕ್ಕ ಮಾಡುತಿದ್ದರು.ಇಲ್ಲವೆ ಇದ್ದಲಿನಿಂದ ಚಿಕ್ಕಗೆರೆ ಹಾಕಿ ಗುರುತಿಸುತಿದ್ದರು.ಅವರೂ ಅನಕ್ಷರಸ್ಥರು. ಆದರೆ ಸಂಕೇತಳ ಬಳಕೆ ಮಾಡುತಿದ್ದರು ಎಂಬುದು ಪುರಾತನ ಸಂಸ್ಕೃತಿಯ ಮುಂದುವರಿಕೆಯಭಾಗ ಎಂಬುದ ಗಮನಾರ್ಹ.
ನಾಲ್ಕನೆ ಸಹಸ್ರಮಾನದ ಮಧ್ಯ ಭಾಗದಲ್ಲಿ ಮಣ್ಣಿನ ಗೂಡೆಗಳನ್ನು ಗುರತಿನ ಬಿಲ್ಲೆಗಳನ್ನು ಮಣ್ಣಿನ ಗೂಡೆಗಳಲ್ಲಿ ಹಾಕಿ ಬಳಸಲುಶುರು ಮಾಡಿದರು.
  
                                        ಚಿತ್ರ- ಗುರುತು ಬಿಲ್ಲೆಗಳನ್ನು ಹಾಕುತಿದ್ದ ಮಣ್ಣಿನ ಗೂಡೆ. ಅದರಮೇಲೆ ಬರಹವಿದೆ
ಅದರಲ್ಲಿ ಹಾಕಿದ ಗುರುತಿನ ಬಿಲ್ಲೆಗಳ ಮೇಲೆ ಚಿತ್ರವನ್ನು ಮೇಲೆ ಬರೆಯುತಿದ್ದರು.ಅವು ವ್ಯವಹಾರದ ಸಾಧನ ವಾಗಿದ್ದವು. ಅದರಲ್ಲಿರುವ ವಸ್ತುಗಳನ್ನು ಪ್ರಮಾಣೀಕರಿಸಲು ಮುದ್ರೆ ಬಳಸಿದರು
     
  ಲೇಖನಿಯನ್ನು ನೇರವಾಗಿ ಹಿಡಿದು.ಹಸಿಮಣ್ಣಿನ ಗೂಡೆಯಮೇಲೆ ಬರೆದರೆ  
          ಮೇಲಿನ   ಗುರುತು ಮೂಡುತಿತ್ತು
                     ಓರೆಯಾಗಿ ಹಿಡಿದು ಬರೆದರೆ ಕೇಳಗಿನ ಗುರುತು ಆಗುತಿತ್ತು

.ದೊಡ್ಡ ವಸ್ತುಗಳಾದರೆ ಎರಡನ್ನೂ ಸೇರಿಸಿ     ಗುರುತು ಮಾಡುತಿದ್ದರು
ಅದು ಮುಂದಿನಂತೆ ಗುರುತು ಆಗುವುದು.
ಈ ಗುರುತಗಳ ಅರ್ಥ ಒಳಗಿರುವ ವಸ್ತುಗಳ ಸಂಖ್ಯೆಯನ್ನು ತಿಳಿಸುತಿತ್ತು
 ಪುರಾತನ ನಗರ ಉರ್ರ್ ನಲ್ಲಿ 100 ನ್ನು ಪ್ರತಿನಿಧಿಸುವ ಇಂಥಹ  ಸಂಕೇತಗಳು ಸಿಕ್ಕಿವೆ. .
ಒಳಗಿರುವ ಟೋಕನ್‌ಗಳ ಮೇಲಿನ ಗುರುತನ್ನು ಅದೇರೀತಿ ನಕಲುಮಾಡಿರಲಿಕ್ಕಿಲ್ಲ ಅವು ಎರಡು ಆಯಾಮದ ಸಂಕೇತಗಳು
                            ಕುರಿಯನ್ನು   ಕೆಳಗಿನ ಗುರುತು  ಗುರುತು ಪ್ರತಿನಿಧಿಸಿದರೆ, 

, ಅದರಲ್ಲಿ ತುಸು ಭಾಗ   ತೆಗೆದರೆ ಅದು ಹೆಣ್ಣು ಕುರಿಗಳ  ಸಂಕೇತ. 
ಎರಡು ಭಾಗ ತೆಗೆದರೆ ಗರ್ಭಿಣಿ ಕುರಿ. ಅವರು  ತಮ್ಮಲ್ಲಿರುವ ಪ್ರಾಣಿಗಳ ನ್ನು ‌ಎಣಿಕೆ ಮಾಡಲು ಸಾಧ್ಯವಾಗುತಿತ್ತು.
 ಚಿತ್ರ ಲಿಪಿಗಳು
ನಾಲಕ್ಕನೆ ಸಹಸ್ರಮಾನದ ಕೊನೆಯಲ್ಲಿ ಹೊಸ ಸಂಕೇತಗಳ ಉಗಮವಾಯಿತು. ಇದು ನಗರೀಕರಣದ ಜೊತೆ ಜೊತೆ ಆಯಿತು.ಅದೇ ಚಿತ್ರ ಲಪಿಯ ಆರಂಭದ ಕಾಲ ಎನ್ನಬಹುದು. ಒಂದೊಂದು ಚಿತ್ರವು ಒಂದು ವಸ್ತುವಿನ ಸಂಕೇತವಾಗಿರುತಿತ್ತು.
ಬರಹವು ಮೂಲತಃ ಚಿತ್ರಲಿಪಿಯಾಗಿ ಉಗಮವಾಗಿತ್ತು. ಕಣ್ಣಿಗೆ ಕಾಣುವ ವಸ್ತುಗಳು ಸಂಕೇತವಾದವು: 

ನಿರ್ಧಿಷ್ಟವಾಗಿ ಸೂಚಿಸಲು  ಸಂಕೇತಕ್ಕೆ ಇನ್ನೂ ಹೆಚ್ಚಿನ ರೇಖೆಗಳನ್ನು ಸೇರಿಸುತಿದ್ದರು.ಸೂರ್ಯ ಎಂದು ಖಚಿತವಾಗಿ ಸೂಚಿಸಲು ಕೈಕೊಂಡ ಕ್ರಮ ವನ್ನು   ಅರಿಯಲು ಪಕ್ಕದಲ್ಲಿನ ಚಿತ್ರವನ್ನು ಗಮನಿಸಬಹುದು 
ಮಣ್ಣಿನಲ್ಲಿ ಬರೆಯುವುದು ಕಠಿನ. ಅದಕ್ಕೆ ಅವುಗಳ ಮುದ್ರೆ ಒತ್ತುತಿದ್ದರು. ವಕ್ರ ರೇಖೆಗಳು ಕ್ರಮೇಣ ಸರಳ ರೇಖೆಗಳಾದವು. ಮತ್ತು ನಿರ್ಧಿಷ್ಟವಾಗಿ ಗುರುತಿಸಲುವಿಶೇಷ ಗುರುತುಗಳನ್ನು ಮಾಡಲಾಯಿತು.
ಹೀಗೆ ಕ್ಯೂನಿಫಾರಂ ಬರಹ ಮೊನಚು ಬರಹ ಪ್ರಾರಂಭವಾಯಿತು. ಒಂ ದುಸಹಸ್ರಮಾನದ ತರುವಾಯದ ಅಕ್ಕಾಡಿಯನ್‌ ಲಿಪಿಯಲ್ಲೂ ಇದರ ಛಾಯೆ ಕಾಣಬಹುದು. ಅಕ್ಕಾಡಿಯನ್‌ಲಿಪಿಯಲ್ಲಿ ಮಹಿಳೆಯ ಸಂಕೇತ ವರ್ಣಲಿಪಿಯ   (munus) ಕ್ಯೂನಿಫಾರಂ ಸಂಕೇತ      90 ಡಿಗ್ರಿ ತಿರುಗಿಸಿದರೆ ಸಿಗುವುದು.

ಬೆಟ್ಟದಸಂಕೇತವಾದ  ವರ್ಣಲಿಪಿ'-   kur ಇದ್ದರೂ ಮೆಸಪಟೋಮಿಯಾವು ಮೈದಾನವಾಗಿದ್ದು ಅಲ್ಲಿ ಬೆಟ್ಟಗಳೆ ಇಲ್ಲ. ಅದರಿಂದ ಅದುವಿದೇಶದ ಸಂಕೇತ. ದಾಸಿಯ ಯನ್ನು ಒಂದು ಸಂಯುಕ್ತ ಗುರತಿನಿಂದ 

   munus.kur  ಪ್ರತಿನಿಧಿಸಲಾಗಿದೆ.ಹೆಂಗುಸು ಮತ್ತು ವಿದೇಶಕ್ಕೆ  ಸೇರಿದ ಹೆಣ್ಣು ಗುಲಾಮಳು ಶಬ್ದ ಮೂಡಿದೆ. ( (ಇಂಗ್ಲಿಷನಲ್ಲೂ Slave ಎಂಬ ಪದ ಸಾಲ್ವಿಕ್‌ದೇಶದಿಂಧ ತಂದವರು ಎಂಬ ಅರ್ಥ ಕೊಡುವುದು)
ಚಿತ್ರಲಿಪಿಯು ಯಾವುದೇ ಭಾಷೆಯಲ್ಲೂ ಅರ್ಥ ಪೂರ್ಣವಾಗಿರುವುದು. ಆದರೆ ಅದರ ವಿಕಾಸ ಮಾತ್ರ ಸುಮೇರಿಯಾದಲ್ಲಿ ಆಗಿದೆ. ಅದರಿಂದ ಬೇರೆ ಯಾವುದೇ ಹೊರಗಿನಪ್ರಭಾವಕ್ಕೆ ಒಳಗಾಗಿಲ್ಲ.
ಕ್ಯೂನಿಫಾರಂ ಲಿಪಿಯು ಎರಡು ಸಹಸ್ರಮಾನದಲ್ಲಿ ತುಂಬಾ ಬದಲಾವಣೆ ಹೊಂದಿದೆ.ಆ ಲಿಪಿಯಲ್ಲಿ ತಲೆಯನ್ನು ಪ್ರತಿನಿಧಿಸುವ ಸಂಕೇತದ ಬದಲಾವಣೆ  ಗುರುತಿಸಲು  ಕೆಳಗಿನ ಚಿತ್ರದಲ್ಲಿ ನೀಡಿದೆ.).

1.     ಚಿತ್ರಲಿಪಿಯ ಕಾಲ  ಕ್ರಿ. ಪೂ 3000
2.     ಲಿಪಿಯು  ಕ್ರಿ. ಪೂ. 2800 ಹೊತ್ತಿಗೆ ತಿರುವು ಪಡೆದಿದೆ.
3.     ಅಮೂರ್ತ ಕೊರೆತವು ಸ್ಮಾರಕಗಳ ಬರಹಗಳಲ್ಲಿ ಕ್ರಿ.ಫೂ. 2600 ಹೊತ್ತಿಗೆ ಗೋಚರವಾಗಿದೆ.
4.     ಮಣ್ಣಿನ ಫಲಕದ ಮೇಲೆ ಬರೆದ ಸಂಕೇತವಾಗಿದೆ.3 ನೇ ಹಂತದ ಸಮಕಾಲೀನವಾದುದು
5.       3ನೇ ಸಹಸ್ರ ಮಾನದ ಅಂತಿಮ ಅವಧಿಯ ಪ್ರಾತಿನಿಧಿಕವಾಗಿದೆ.
6.     ಪುರಾತನ ಅಸ್ಸೀರಿಯನ್‌ ಸಂಕೇತಗಳನ್ನು  2ನೇ ಸಹಸ್ರಮಾನದ ಮೊದಲ ಭಾಗದಲ್ಲಿ ಹಿಟೈಟಿಯರು ಅಳವಡಿಸಿ ಕೊಂಡರು
ಅಸ್ಸೀರಿಯನ್‌ರ ಬರಹದ ಸರಳ ರೂಪ  1ನೇ ಸಹಸ್ರಮಾನದ ಮೊದಲಲ್ಲಿನಂತೆ  ಅದು ಇಲ್ಲದಾಗುವವರೆಗೆ



ಕ್ಯೂನಿಫಾರಂ ಗಳ ಭೌತಿಕರೂಪ
ಕ್ಯೂನಿಫಾರಂ (ಲ್ಯಾಟಿನ್‌ನಲ್ಲಿ ಮೊನಚು ಆಕಾರದನಲ್ಲಿ ಚಿಕ್ಕ ಮೊನಚಾದಗೆರೆಗಳ ಸರಣಿ ಇರುವುದು.ಅವನ್ನು 
ಮೃದುವಾದ ಮಣ್ಣಿನಹಲಗೆಯ ಮೇಲೆ ಚೂಪಾದ ಲೇಖನಿ ತರಹದ ಸಾಧನದಿಂದ ಮೊನಚಾಕಾರದ  ಗುರುತು ಮಾಡುವರು.. ಗೆರೆಗಳು ಮೇಲುಭಾಗದಲ್ಲಿ ದಪ್ಪನಾಗಿರುವವು.  




 ಕಠಿನವಾದ ವಸ್ತುವಿನ ಮೇಲೆ ಬರೆದಾಗ ಅದು  ಆಕಾರದಲ್ಲಿ ಇರವುದುಈ ಸಂಕೇತಗಳನ್ನು ಮೇಲಿನಿಂದ ಕೆಳಕ್ಕೆ ಬರೆಯುವರು.;ನಂತರವಗಳನ್ನು ಪಕ್ಕಕ್ಕೆ ತಿರುಗಿಸಲಾಯಿತು. ಅವನ್ನು ಎಡದಿಂದ ಬಲಕ್ಕೆ ಬರೆಯಲಾಗುವುದು..ಮೊದಲುಬರಹಕ್ಕೆ  ಮೃದು  ವಸ್ತುವನ್ನು ಬಳಸಿದರೂ ನಂತರ ಕಠಿನ ಮೇಲ್‌ಮೈ ಇರುವ ವಸ್ತುಗಳನ್ನೂ ಬಳಕೆಮಾಡಿದರು.ಕ್ಯೂನಿಫಾರಂ ಸಂಕೇತಗಳು ಮೂಲತಃ ಐದು ರೀತಿಯಲ್ಲಿಇವೆ..ಅಡ್ಡ, ಎರಡುದಿಕ್ಕಿನಲ್ಲಿ ಓರೆಯಾಗಿ,ಕೊಕ್ಕೆ ಮತ್ತು ನೇರ ಗೆರೆಗಳು:

        

 ಮೇಲುಮುಖದ ಓರೆಗೆರೆಯ ಬಳಕೆ ವಿರಳ.ಈ ಐದು ಗುರುತುಗಳು ಎರಡು ಆಕಾರದಲ್ಲಿ ದ್ದವು. ಚಿಕ್ಕವು ಮತ್ತು ದೊಡ್ಡವು. ಚಿಕ್ಕ ಕೊಕ್ಕೆಗೆರೆ,  ಓರೆಗೆರೆ ವ್ಯತ್ಯಾಸ ಗುರುತಿಸುವುದು ಕಷ್ಟ.ಎರಡುಓರೆಗೆರೆಗಳನ್ನುಪ್ರತ್ಯೇಕ ಸಂಕೇತವಾಗಿ ಬಳಸುವುದಿಲ್ಲ.ನೇರ ಸಂಕೇತವನ್ನು ತಿರುಗು ಮುರುಗಾಗಿ ಪುರಾತನ ಫಲಕಗಳಲ್ಲಿ ವಿರಳವಾಗಿ ಬಳಸಿರುವರು.

  ತಿರುಗು ಮುರುಗಾಗಿ ಪುರಾತನ ಫಲಕಗಳಲ್ಲಿ ವಿರಳವಾಗಿ ಬಳಸಿರುವರು. ಇದನ್ನು ಕೆಲವು ಸಲ ಕೈ ಸಂಕೇತವಾಗಿ ಸಾಧಾರಣವಾದ    ಸಂಕೇತದ ಬದಲಾಗಿ ಬಳಕೆಯಾಗಿದೆ. ಇತ್ತೀಚೆಗೆ ಅದೂ ಇಲ್ಲ.. ಎಡದಿಂದ ಬಲಕ್ಕಿರುವ   ಗೆರೆ ಬಳಕೆ ಇಲ್ಲ . 

ಮೂಲಬರಹ ಅಥವ ನಕಲು ಎಂಬುದನ್ನು ಈ ಲಕ್ಷಣಗಳಿಂದಲೆ  ಗುರುತಿಸಬಹುದು.ಸಂಕೇತಗಳು ಬಹಳ ಮಾರ್ಪಾಟಿಗೆ ಒಳಗಾದವು (e.g.ಪುರಾತನ ಬ್ಯಬಿಲೊನಿಯನ್‌ ಅವಧಿ ಕ್ರಿ ಪೂ.18ನೆಯ ಶತಮಾನದಿಂದ, ನವ ಬ್ಯಬಿಲೊನಿಯನ್‌ಅವಧಿ ಒಂದು ಸಹಸ್ರವರ್ಷದ ತರುವಾಯ)ವಿವಿಧ ಆಡುಭಾಷೆಗಳಲ್ಲಿ ಸ್ವಲ್ಪ ಬದಲಾವಣೆ ಕಂಡುಬರುವುದು. ಈಗಿನ ಸಂಕೇತಗಳು ನವಸ್ಸಿರಯನ್‌ ಅವಧಿಯವಾಗಿವೆ, ಇವುಗಳ ಅಧ್ಯಯನವನ್ನು ಅಸಿರಿಯಾಲಜಿ ಎನ್ನುವರು.ಮತ್ತು ಅಸಿರುಯಾಲಜಿ ಕಳೆದ ಶತಮಾನದ “ನಿನೆವೆ “ಯಲ್ಲಿ ಅಸ್ಸಿರಿಯನ್‌ಗ್ರಂಥಾಲಯದ ಪರಿಶೋಧನೆಯಿಂದ ಪ್ರಾರಂಭವಾಯಿತು. ಹೊಸ ಅಸ್ಸೀರಿಯನ್‌ ಆಕೃತಿಗಳು ಹೆಚ್ಚು ಚೌಕಾಕಾರದಲ್ಲಿವೆ.  ಪುರಾತನ    ಮತ್ತು ನವೀನ  ಲಿಪಿಗಳ ವ್ಯತ್ಯಾಸವನ್ನು ಈ ಕೆಳಗಿನ ಚಿತ್ರದಲ್ಲಿ ಗುರುತಿಸಬಹುದು.. 




ಈಗಿನ ಕ್ಯೂನಿಫಾರಂ ಸಂಕೇತಗಳ ಕೆಳಗಿನ ಕ್ರಮನುಸರಿಸುವರು.( ಏಕಪಕ್ಷೀಯ) ಸರಣಿ: 

                         
ಸರಣಿಯಲ್ಲಿ ಮೊದಲಯ ಅಡ್ಡಗೆರೆಯಿಂದ ಪ್ರಾರಂಭವಾಗುವುದು.ಇದೇರೀತಿ ಇತರೆ ಗೆರೆಗಳೂ ಇರುವವು.. ಅದರಲ್ಲಿಮೊದಲು    ಸಂಕೇತ    ನಂತರ ಹಾಗೆಯೇ     ಮುಂದುವರಿಯುವುದು.. . 



ಕ್ಯೂನಿಫಾರಂಗಳನ್ನು ಅವುಗಳ ಕಾರ್ಯಕ್ಕೆ ಅನುಗುಣವಾಗಿ ೪ ಭಾಗ ಮಾಡ ಲಾಗಿದೆ. phonogram,ಫೋನೊಗ್ರಾಮ್
ಪೂರ್ಣ ವರ್ಣವನ್ನು ಪ್ರತಿನಿಧಿಸಿದರೆ  syllabogram  logogram,ಪೂರ್ಣ ಶಬ್ದ ಅಥವ ಪರಿಕಲ್ಪನೆಯನ್ನು ಪ್ರತಿನಿಧಿಸಿದ ಐಡಿಯೋಗ್ರಾಂ Ideogramಅಕ್ಕಾಡಿಯನ್ ಲೋಗೋ ಗ್ರಾಮ್‌ಗಳನ್ನು ಸುಮೆರೊಗ್ರಾಂಗಳೆಂದು ಕರೆಯುವರುಕಾರಣ ಅವುಗಳ ಮೂಲ ಸುಮೇರಿಯಾ.ಅಥವ ಅರೆ ಸುಮೇರಿಯಾ.
ದ್ವನಿ ಪೂರಕಗಳು  phonetic complementನಿರ್ಧಿಷ್ಟ ಲೊಗೊಗ್ರಾಮ್‌ಗಳನ್ನು ಆಯ್ದು ವ್ಯಾಕರಣ ರೂಪ ಸೂಚಿಸುವುದು.

ನಿರ್ಣಾಯಕಗಳು

ಹಿಂದಿನ ಅಥವ ಮುಂದಿನ ಪದದ ಲಾಕ್ಷಣಿಕ ಸ್ವರೂಪ ತಿಳಿಸುವವು. ( ಪೂರ್ವಪ್ರತ್ಯಯ ಅಥವ ಉತ್ತರಪ್ರತ್ಯಯ)ಅದು ಲೊಗೊಗ್ರಾಮ್‌ಅಥವ ಸೊಮೊಗ್ರಾಮ್‌ಗಳ ಸರಣೀ ಆಗಿರಬಹುದು. ಪದವು ದೇವರ ಹೆಸರು, ಮನುಷ್ಯನ, ವಸ್ತುವಿನ, ಪಟ್ಟಣದ ಮತ್ತು ಜಡವಸ್ತು.. ಅವುಗಳ ಉಚ್ಚಾರಣೆ ಇಲ್ಲ.. ಕೆಲವು ಸಲ ಪೂರ್ವ ಮತ್ತು ಉತ್ತರ ನಿರ್ಣಾಯಕಗಳನ್ನು ಬಳಸಲಾಗುವುದು
ಚಿತ್ರಿಪಿಯಿಂದ ಕ್ರಮೇಣ ಕ್ಯೂನಿಫಾರಂ ರೂಪಕ್ಕೆ  ಬದಲಾದುದರ ಚಿತ್ರಣ ಇಲ್ಲಿದೆ

 ಪದಗಳನ್ನು ಕೂಡಿಸಿ ವಾಕ್ಯಗಳನ್ನು ರಚಿಸಬಹುದು. ಅದೇರೀತಿ ವಾಕ್ಯಗಳ ಸಮೂಹದಿಂದ ಮಣ್ಣಿನ ಫಲಕದ ಮೇಲೆ  ಅಥವ ಬಂಡೆಯ ಮೇಲೆ ಕೊರೆಯಬಹುದಾಗಿತ್ತು. ಅದೂ ಅಲ್ಲದೆ ಹೆಚ್ಚಿ ಪ್ರಮಾಣದಲ್ಲಿ ಪೆಪ್ರಸ್‌ ಮೇಲೆ ಚಿತ್ರಿಸಬಹುದಿತ್ತು

ಕ್ರಿ. ಪೂ. ಮೂರನೆ ಸಹಸ್ರಮಾನದ  ಫಲಕ

ಹಲವು ದಶಕಗಳ ಸಂಶೋಧನೆಯಿಂದ ಆಧುನಿಕವಿಜ್ಞಾನದ ಅದರಲ್ಲೂ ಗಣಕಯಂತ್ರದ ನೆರವಿನಿಂದ ಕ್ಯೂನಿಫಾರಂ  ಲಿಪಿಗಳ ಅಧ್ಯಯನ ಯಶಸ್ವಿಯಾಗಿದೆ.ಈಗ ಇಂಗ್ಲಿಷ್ ಅಕ್ಷರಗಳಿಗೆ ಸಂವಾದಿಯಾದ ಕ್ಯುನಿಫಾರಂ ಲಿಪಿಗಳಪಟ್ಟಿಯೇ ಲಭ್ಯವಿದೆ. ಅದನ್ನುಬಳಸಿ ಯಾರು ಬೇಕಾದರೂ ತಕ್ಕ ಮಟ್ಟಿಗೆ ಆ ಲಿಪಿಯಲ್ಲಿ ಬರೆಯಬಹುದು