Wednesday, January 30, 2013

ಇತಿಹಾಸಕಾರರು ಸರಣಿ


appaaji@gmail.com


                                                                                                                    
ಸ್ವ ಅಧ್ಯಯನದಿಂದ ಶಾಸನ ತಜ್ಞರಾದ ಡಾ. ಪಿ..ಬಿ ದೇಸಾಯಿ


ಡಾ. ಪಿ.ಬಿ ದೇಸಾಯಿ ಹಿಂದಿನ ನೈಜಾಮ   ಕರ್ನಾನಾಟದ ಹೆಸರಾಂತ ಪುರಾತತ್ತ್ವ ತಜ್ಞರು. ಅವರು ಶಾಸನ ಜಗತ್ತಿನಲ್ಲಿ ಒಂದುರೀತಿಯಲ್ಲಿ ಸ್ವಯಂಭೂಲಿಂಗ. ಸ್ವ ಅಧ್ಯಯನ ಮತ್ತು  ಅವಿರತ ಪರಿಶ್ರಮದಿಂದ ಮೇಲೆ ಬಂದವರು  ಅವರು  ಜನಿಸಿದ್ದು ನೈಜಾಮಪ್ರಾಂತ್ಯದ ಕೊಪ್ಪಳ ಜಿಲ್ಲೆಯ ಕುಕುನೂರಿನಲ್ಲಿ . ಅವರದುಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬ. ದೇಸಾಯಿ ಎಂದೊಡನೆ ಅವರು ದೊಡ್ಡ ಜಮೀನುದಾರರೇನೂ ಆಗಿರಲಿಲ್ಲ. ಅನೇಕ ಕಡೆ ದೇಸಾಯಿ ಎಂಬ ಹೆಸರು ಶ್ರೀಮಂತಿಕೆ ಮತ್ತು ಅಧಿಕಾರದ ಸೂಚಕವಾಗಿದೆ. ದೇಶಗತಿ ಇದ್ದವರೇ ದೇಸಾಯರು ಎಂಬುದು ವಾಡಿಕೆ. ಕೆಲವು ಕಡೆ ಮನೆತನದ ಹೆಸರು ಆಗಿದೆ.ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಗುಜರಾತ್‌ಗಳಲ್ಲಿ ಈ ಹೆಸರು ಸಾಮಾನ್ಯ. ಅದು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ವೃತ್ತಿ ಸೂಚಕವಾಗಿದೆ. ಅದು ಉನ್ನತ ಕಂದಾಯ ಅಧಿಕಾರಿಯ ಹುದ್ದೆಯ ಸಂಕೇತವಾಗಿತ್ತು.  ಡಾ. ದೇಸಾಯಿ  ಅವರ ತಂದೆ ಭೀಮರಾವ್‌,  ತಾಯಿ ಭಾಗೀರತಿ ಬಾಯಿ. ಅವರು 24ನೆಯ ಡಿಸೆಂಬರ್‌1910 ರಂದು .ಕೊಪ್ಪಳ ಜಿಲ್ಲೆಯ ಕುಕುನೂರಿನಲ್ಲಿ ಜನಿಸಿದರು  ಅವರ ತಂದೆ ಭೀಮರಾವ್‌ನಿಜಾಮರ ಸರ್ಕಾರದಲ್ಲಿಕಂದಾಯ ಅಧಿಕಾರಿಯಾಗಿದ್ದರು. ಆರು ಜನ ಸೋದರರಲ್ಲಿ ಪಾಂಡುರಂಗ ಅತ್ಯಂತ ಕಿರಿಯರು. ಇವರು ಆರು ವರ್ಷದವರಿದ್ದಾಗಲೇ ತಂದೆ ಕಾಲವಾದರು
ಪಾಡುರಂಗರಾವ್‌ ಭೀಮರಾವ್‌ ದೇಸಾಯಿ (1910-1974)
ಆಗಿನ ಅವಿಭಕ್ತ ಕುಟುಂಬದ ಸಂಪ್ರದಾಯದ ಪ್ರಕಾರ  ಸಹಜವಾಗಿ ಮನೆತನ ನಡೆಸುವ ಹೊಣೆ ಅವರ ಅಣ್ಣಂದಿರಿಗೆ ಬಂದಿತು ಅವರೇ ಪಾಂಡುರಂಗನ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತರು ಅವರ ಪ್ರಾಥಮಿಕ ಶಿಕ್ಷಣ ಗುಲ್ಬರ್ಗ ಜಿಲ್ಲೆಯ ಸೇಡಂನಲ್ಲಿ ಆಯಿತು.ಮಾಧ್ಯಮಿಕ ಶಿಕ್ಷಣವು ಗುಲ್ಬರ್ಗದಲ್ಲಿ ದೊರೆಯಿತು

 ಆಗಿನ ರಾಜ್ಯ ಭಾಷೆ ಉರ್ದು.ನಿಜಾಮರ ರಾಜ್ಯದಲ್ಲಿ ಆ ಭಾಗದಲ್ಲಿ ಕನ್ನಡ ಮಕ್ಕಳು ಮರಾಠಿ ಮಾದ್ಯಮದಲ್ಲೇ ಕಲಿಯ ಬೇಕಿತ್ತು.  ಅದೇ ಒಂದು ವರದಾನವಾಯಿತು. ಆ ಸಮಯದಲ್ಲಿ ಶಿಕ್ಷಣ ಪಡೆದವರೆಲ್ಲ ಬಹು ಭಾಷೆ ಬಲ್ಲವರಾಗಿದ್ದರು.ಜೊತೆಗೆ ಹೈಸ್ಕೂಲಿನಲ್ಲಿ ಇಂಗ್ಲಿಷ್‌ಮಾದ್ಯಮದಲ್ಲಿ ಶಿಕ್ಷಣ ನೀಡುತಿದ್ದರು ಪರಿಣಾಮವಾಗಿ ಅವರಿಗೆ ಕನ್ನಡ, ಮರಾಠಿ, ಉರ್ದು ಮತ್ತು ಇಂಗ್ಲಿಷ್ಲ್ಕು ಭಾಷೆಗಳು ನೀರು ಕುಡಿದಷ್ಟು ಸರಾಗವಾಗಿ ಬರುತ್ತಿದ್ದುವು. ಅವರಿಗೆ  ಪುರಾತನ ಇತಿಹಾಸ, ಶಾಸನ ಶಾಸ್ತ್ರ ಮತ್ತು ಹಸ್ತಪ್ರತಿ ಶಾಸ್ತ್ರಗಳಲ್ಲಿ ಆಸಕ್ತಿ  ಆದರೆ ಇದೆಲ್ಲವನ್ನೂ ಬಹಳ ಕಷ್ಟದಿಂದ ಕಲಿತರು.  ಮುಂಬಯಿ ವಿಶ್ವ ವಿದ್ಯಾಲಯದ  ಇಂಟರ್‌  ಪರೀಕ್ಷೆಗೆ ಕುಳಿತವರು ಅನಾರೋಗ್ಯದ ನಿಮಿತ್ತ  ತಮ್ಮ ಶಿಕ್ಷಣವನ್ನು ಪದವಿ ಪಡೆಯುವ ಮುನ್ನವೇ ಬಿಡಬೇಕಾಯಿತು. ಜೊತೆಗೆ ಅವರ ಆರೋಗ್ಯವೂ ನಾಜೂಕಾಗಿತ್ತು. ಕಾಲೇಜು ಬಿಟ್ಟು ಹಳ್ಳಿಗೆ ಹಿಂತಿರುಗಿದರು.ಅವರ ಅಣ್ಣ ರಾಘವೇಂದ್ರರಾವ್‌ ರಾಷ್ಟ್ರಪ್ರೇಮಿ   ಮಕ್ಕಳಿಗೆ ಸ್ವದೇಶಾಭಿಮಾನ ಹುಟ್ಟಿಸು ಶಿಕ್ಷಣ ಕೊಡಬೇಕೆನ್ನುವದು ಅವರ ಧ್ಯೇಯ. ಅದಕ್ಕಾಗಿ ಕುಕನೂರಿನಲ್ಲಿ ರಾಷ್ಟ್ರೀಯ ವಸತಿಶಾಲೆಯಲ್ಲಿ ತರೆದಿದ್ದರು. ಅಲ್ಲಿ ಕಾಲೇಜು ಕಲಿತ ತಮ್ಮ ಸಹಾಯಕ್ಕೆ ನಿಲ್ಲಬೇಕಾಯಿತು  ಅಲ್ಲಿ ಬೋಧನೆಯ ಜೊತೆ ಇತರೆ ಕಾರ್ಯಕ್ಕೂ ಸಹಕಾರ ನೀಡುತಿದ್ದರು. ಇಬ್ಬರೂ ಸೊದರರೂ ಗಾಂಧೀಜಿಯವರ ತತ್ವದಿಂದ ಪ್ರಭಾವಿತರಾಗಿದ್ದರು. ಜಾತಿ ಬೇಧವಿಲ್ಲದೆ ಎಲ್ಲರನ್ನೂ ಶಾಲೆಗೆ ಸೇರಿಸಿಕೊಂಡು ಆ ಭಾಗದಲ್ಲಿ ಆ ಕಾಲದಲ್ಲಿ ಯಾರೂ ಊಹಿಸದ ಕೆಲಸ ಮಾಡಿದರು. ಅದರಿಂದ ಸಂಪ್ರದಾಯಸ್ಥರ ಕೆಂಗಣ್ಣಿಗೆ ಗುರಿಯಾದರೂ ಹೆದರದೆ ಕೆಲಸ ಮುಂದುವರಿಸಿದರು. ಅದು ಯವಕನ ಹೃದಯದಲ್ಲಿ ದೇಶಭಕ್ತಿಯ ಕಿಡಿ ಹೊತ್ತಿಸಿತು
ಕುಕುನೂರಿನಲ್ಲಿನಶಿಲಾಶಾಸನ

ಕುಕುನೂರು ಗ್ರಾಮದಲ್ಲಿ ಪುರಾತನ ದೇಗುಲಗಳು ಸಮೂಹವೇ ಇದೆ. mಅಲ್ಲಿನಮಹಾಮಾಯಿ ದೇವಾಲಯ ಬಹುಪ್ರಖ್ಯಾತ.ಅಲ್ಲಿರುವ  ಶಾಸನಗಳ ಸಂಖ್ಯೆ ಬಹಳ.ಮೊದಮೊದಲು ಕುತೂಹಲದಿಂದ ನೋಡುತಿದ್ದ ದೇಸಾಯರು ನಂತರ ಓದುವುದನ್ನು ರೂಢಿಸಿಕೊಂಡರು  ಕ್ರಮೇಣ ಅವಗಳ ಬರಹಗಳನ್ನು ಓದಿದರೆ  ಅರ್ಥ ಮಾಡಿಕೊಳ್ಳುವ ಹಂತ ತಲುಪಿದರು ಇದರಿಂದ ಶಾಸನ ಶಾಸ್ತ್ರದ ಪ್ರಾಯೋಗಿಕ ಪಾಠ ಎಳವೆಯಲ್ಲೇ ಆಯಿತು. ಅವರ ಇತಿಹಾಸ ಆಸಕ್ತಿ ಇನ್ನೂ ತೀವ್ರವಾಯಿತು.. ಕ್ರಮೇಣ ಪಾಂಡುರಂಗನು ಅ ಶಿಲಾಶಾಸನಗಳನ್ನು ಸರಾಗವಾಗಿ ಓದುವಂತಾದನು.
ಕುಕುನೂರು ಮಧ್ಯಯುಗದಲ್ಲಿ ಹೆಸರಾಂತ ಶಿಕ್ಷಣಕೇಂದ್ರವಾಗಿತ್ತು  ಅಲ್ಲಿ ಒಂದು ಹೆಸರಾಂತ ಘಟಿಕಾ ಇದ್ದಿತು ಹಿಂದಿನ ಕಾಲದಲ್ಲಿ  ಉನ್ನತಶಿಕ್ಷಣ ಕೇಂದ್ರಕ್ಕೆ ಘಟಿಕಾ ಎನ್ನುತಿದ್ದರು.. ಐದೇ ವರ್ಷದಲ್ಲಿ ಸ್ವಯಂಆದ್ಯಯನ ಮಾಡಿದ ಶಾಸನ ತಜ್ಞನಾಗಿ ಹೊರ ಹೊಮ್ಮಿದರು. ಯಾವುದೇ ಗುರು ಮುಖೇನ ಶಿಕ್ಷಣವಿಲ್ಲದಿದ್ದರೂ ಅಭ್ಯಾಸ ಬಲದಿಂದ ಶಾಸನಗಳನ್ನು ತಡವರಿಸದೆ ಓದಿ ಅರ್ಥ ಮಾಡಿಕೊಳ್ಳುವ ಶಕ್ತಿ ಸತತ ಅಧ್ಯಯನದಿಂದ ಬಂದಿತ್ತು.. ತನ್ನದೇ ಆದ ವಿಧಾನದಿಂದ ಶಾಸನ ಓದುವಂತಾಗಿದ್ದನು . ಅವರ ಆಸಕ್ತಿ ಹೆಚ್ಚಿದಂತೆ ಶಾಸನ ಸಂಗ್ರಹದ ಹವ್ಯಾಸವೂ ಬೆಳೆಯಿತು. ಕುಕುನೂರ ಮತ್ತು ಸುತ್ತಮುತ್ತಲ ಗ್ರಾಮಗಳ ಸುಮಾರು ೨೦೦ ಶಾಸನಗಳ ನ್ನು ಸಂಗ್ರಹಿಸಿ  ವಿಶ್ಲೇಷಣೆ ಮಾಡ ಬಲ್ಲ ಶಕ್ತಿ ಬಂದಿತ್ತು. ಹಾಗೆ ಓದುವಾಗ ಒಂದು ಕಾಲಘಟ್ಟದಿಂದ ಇನ್ನೊಂದು ಕಾಲಘಟ್ಟಕ್ಕೆ ಬದಲಾದ ಲಿಪಿ ಮತ್ತು ಭಾಷೆಯನ್ನು ಗುರುತಿಸುವ ಸಾಮರ್ಥ್ಯ ಬಂದಿತ್ತು.ಎಲ್ಲವೂ ಅನುಭವ ಜನ್ಯ.ಶತಮಾನಗಳಲ್ಲಿ ಆಗುವ ಲಿಪಿ  ವಿಕಾಸವನ್ನು ಸುಲಭವಾಗಿ ಗುರುತಿಸಸುವ ಶಕ್ತಿಬಂದಿತು..ಅವರ ಕುತೂಹಲವು ಈಗ ಅಭಿಲಾಷೆಯಾಯಿತು. ಬರಿ ಶಾಸನ ಓದುವುದರಲ್ಲಿಯೇ ತೃಪ್ತರಾಗದೇ ಅದರಜೊತೆಗೆ ದೇವಸ್ಥಾನಗಳ ವಾಸ್ತು, ಶಿಲ್ಪ, ಮತ್ತು ವೀರಗಲ್ಲುಗಳ ಅಧ್ಯಯನವನ್ನೂ ಮಾಡಿದರು.ಐದುವರ್ಷದಲ್ಲಿ ಹಣಕಾಸಿ ಪರಿಸ್ಥಿತಿ ತುಸು ಸುಧಾರಿಸಿತು ಅವರು ಮತ್ತೆ  ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ತರಗತಿಗೆ ಸೇರಿದರು.ಯಥಾರೀತಿ ಇತಿಹಾಸ ಮತ್ತು ಸಂಸ್ಕೃತ ವಿಷಯಗಳನ್ನು ಆಯ್ದುಕೊಂಡರು.. ಬಿ ಎ ಪದವಿ  1935 ರಲ್ಲಿ ಪಡೆದರು. ಸಂಸ್ಕೃತದಲ್ಲಿ ಅತ್ಯತ್ತಮ ಸ್ಥಾನ ಗಳಿಸಿದ್ದರು ಎಂ ಎ ನಲ್ಲಿ ಲಿಪಿಶಾಸ್ತ್ರವೂ ಒಂದುದು ವಿಷಯವಾಗಿತ್ತು
ವಿಜಯನಗರದ ಆರನೇ ಶತಮಾನೋತ್ಸವವನ್ನು  ೧೯೩೬ ರಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು ಆಸಂದರ್ಭದಲ್ಲಿ ಅವರು ಬರೆದ ಕೃತಿ “ ’ವಿಜಯ ನಗರ ಸಾಮ್ರಾಜ್ಯದ ಇತಿಹಾಸ” “( History of Vijayanagar empire )  ಅಪಾರ ಮನ್ನಣೆ ಗಳಿಸಿತು ಕನ್ನಡದ ಈ ಕೃತಿಯುಅವರನ್ನು ಚಕ್ಕವಯಸ್ಸಿನಲ್ಲಿಯೇ ಲೇಖಕನೆಂಬ ಖ್ಯಾತಿ ತಂದಿತು.ಅವರ ಎರಡನೆಯ ಪುಸ್ತಕ ಮಹಾರಾಷ್ಟ್ರದ ಪ್ರಸಿದ್ಧಪುರುಷ ಶಿವಾಜಿಯನ್ನು ಕುರಿತದ್ದು ಅವರು ಶಿವಾಜಿಯ ಜೀವನವನ್ನು ಪ್ರಮುಖವಾಗಿ ಕನ್ನಡದ ಮೂಲಗಳಿಂದಲೇ ಪಡೆದಿದ್ದರು ಎರಡೂ ಪುಸ್ತಕಗಳೂ ಬಹಳ ವರ್ಷಗಳಕಾಲ ಪಠ್ಯ ಪುಸ್ತಕಗಳಾಗಿದ್ದವು 


ಭಾರತ ಸರ್ಕಾರದ ಪುರಾತತ್ವ ಇಲಾಖೆಯ ಶಾಸನಶಾಸ್ತ್ರ ವಿಭಾಗವನ್ನು ೧೯೩೯ರಲ್ಲಿ ಸಹಯಕ ಲಿಪಿಶಾಸ್ತ್ರಜ್ಞನಾಗಿ ಕೆಲಸಕ್ಕೆ ಸೇರಿದರು. ಅವರ ವೇತನ ಹೆಚ್ಚಾಗಿರಲಿಲ್ಲ.ಆದರೆ ಈ  ಉದ್ಯೋಗ ಅವರಿಗೆ ಪ್ರಿಯವಾಗಿತ್ತು. ಅವರು ತಮ್ಮ  ಕಚೇರಿಯಿದ್ದ ಊಟಿಯಲ್ಲಿಯೇ ಮನೆಮಾಡಿ ನೆಲಸಿದರು. ಹವ್ಯಾಸವಾದ ಶಾಸನ ಸಂಗ್ರಹ ಈಗ ಉದ್ಯೋಗವಾಯಿತುಉತ್ಸಾಹದಿಂದ ಕೆಲಸ ಮಾಡಿದರು . ಅವರು ೧೭ ವರ್ಷ ಆಳವಾಗಿ ಶಾಸನಗಳ ಅಧ್ಯಯನ ಮಾಡಿದರು ಅವರು ಸಂಗ್ರಹಿಸಿದ, ಅಧ್ಯಯನ ಮಾಡಿದ ಶಾಸನಗಳ ಸಂಖ್ಯೆ ೧೦೦೦ ಕ್ಕೂ ಮಿಗಿಲು. ಅವರುವಿಶೇಷವಾಗಿ . ಅವರು ಮುಂಬಯಿ ಕರ್ನಾಟಕದ ನಾಲಕ್ಕೂ ಜಿಲ್ಲೆಗಳ ಶಾಸನ ಅಧ್ಯಯನ ಮಾಡಿದರು ಅದರಲ್ಲಿ ತಮಿಳು ಮತ್ತು ತೆಲುಗು ಶಾಸನಗಳೂ ಸೇರಿದ್ದವು. ಜಾನ್‌ಎಫ್ ಫ್ಲೀಟ್‌ ಮಾಡಿದ್ದ ಶಾಸನ ಸಂಗ್ರಹ ಕೆಲಸ ಇವರುಯಶಸ್ವಿಯಾಗಿ ಮುಂದುವರಿಸಿದರು
ಇಲಾಖೆಯ ಜರ್ನಲ್ ಆದ ಅಂತರಾಷ್ಟ್ರೀಯ ಖ್ಯಾತಿವೆತ್ತ  ಎಪಿಗ್ರಾಫಿ ಇಂಡಿಕಾಗೆ ಅವರು ನಿರಂತರ ಲೇಖನ ನೀಡುತಿದ್ದರು. ಅವರ ಆಳವಾದ ಸಂಸ್ಕೃತ ಜ್ಞಾನ ಮತ್ತು ದಕ್ಷಿಣ ಭಾರತದ ಭಾಷೆಗಳ ಮೇಲಿನ ಪ್ರಭುತ್ವದಿಂದ ಪುರಾತನ ಶಿಲಾಲಿಖಿತ ಬರಹಗಳ ಅವರ ವಿಶ್ಲೇಣೆಯು ಪ್ರಶ್ನಾತೀತವಾಗಿರುತಿತ್ತು.
ಅವರು 1957 ರಲ್ಲಿ ಕರ್ನಾಟಕ ವಿಶ್ವ ವಿದ್ಯಾನಿಲಯದ ಬೋಧನಾ ಹೊಣೆಯನ್ನು ವಹಿಸಿಕೊಂಡರು. ಇಲ್ಲಿ ಅವರಿಗೆ ತಾವು ಸಂಗ್ರಹಿಸಿದ ಅಪಾರ ಶಾಸನಗಳ ಬರಹಗಳ ಅಧ್ಯಯನಕ್ಕೆ ಸಾಕಷ್ಟು ಸಮಯ ದೊರೆಯಿತು ಅದರಿಂದ ಹೈದ್ರಾಬಾದಿನ ಕನ್ನಡ ಶಾಸನ ಸಂಗ್ರಹ “. "A corpus of Kannada inscriptions from Hyderabad", "Jainism in South India and some Jaina Inscriptions" ಎಂಬಗ್ರಂಥಕ್ಕೆ ಡಿಲಿಟ್‌ ಪದವಿ ದೊರೆಯಿತು.ಮತ್ತು "Basaveshvara and his times" ಮೊದಲಾದ ವಿದ್ವತ್‌ಪೂರ್ಣ ಗ್ರಂಥಗಳನ್ನು ರಚಿಸಲು ಅನುವಾಯಿತು ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ  ತುಂಬ ಉಪಯುಕ್ತವಾದ “ಶಾಸನ ಪರಿಚಯ” ಮಾಲಿಕೆಯಲ್ಲಿ  ಸುಮಾರು ಹತ್ತು ಕಿರುಪುಸ್ತಕ ಪರಿಚಯಿಸಿದರು. ಪ್ರೊಫೆಸರ್‌ ಆದ ಮೇಲೆ ಸ್ನಾತಕೋತ್ತರ ಮಟ್ಟದಲ್ಲಿ  ಶಾಸನ ಶಾಸ್ತ್ರವನ್ನು ಒಂದುವಿಷಯವಾಗಿ ಪುರಾತನ ಇತಿಹಾಸದ ಪಠ್ಯಕ್ರಮದಲ್ಲಿ ಸೇರಿಸಿದರು.ಅದರಿಂದ ಅನೇಕ ಕಿರಿಯರು ಶಾಸನತಜ್ಞರಾಗಿ ಹೊರಹೊಮ್ಮಿ ಆಕ್ಷೇತ್ರದಲ್ಲಿ ಹೆಸರು ಮಾಡಲು ಅವಕಾಶವಾಯಿತು. ಅವರು ಪ್ರಾಚೀನ ಭಾರತದ ಇತಿಹಾಸ , ಎಂಬ ಪುಸ್ತಕವನ್ನು, ಡಾ. ಶ್ರೀನಿವಾಸ ರಿತ್ತಿ ಮತ್ತು ಡಾ. ಬರಾ ಗೋಪಾಲ್‌ ಅವರ ಸಹಯೋಗದಲ್ಲಿ  ರಚಿಸಿದರು. ಅದರಿಂದ ದಶಕಗಳವರೆಗಿನ ಅಧಿಕೃತ ಕನ್ನಡ ಪಠ್ಯ ಪುಸ್ತಗಳ ಕೊರತೆಯು ನೀಗಿತು..ದೇಸಾಯಿಯವರು ಕನ್ನಡ ಸಂಶೋಧನ ಸಂಸ್ಥೆಯ ನಿರ್ದೇಶಕಾಗಿದ್ದಾಗಪುರಾತತ್ತ್ವ ವಸ್ತುಸಂಗ್ರಹಾಲಯರೂಪಿಸಿದರು.ಬಳ್ಳಾರಿ ಜಿಲ್ಲೆಯ ಸಂಗನ ಕಲ್ಲು ಮತ್ತು ಹಾವೇರಿಯ ಹಳ್ಳೂರುಗಳಲ್ಲಿ ಉತ್ಖನನ ಕಾರ್ಯ ಮಾಡಿಪ್ರಾಗ್ಯೇತಿಹಾಸ ವಸ್ತುಗಳ ಪತ್ತೆ ಮಾಡಿ. ಆಂಧ್ರ ಪ್ರಧೇಶ ಸರ್ಕಾರದ ಮನವಿಯ ಮೇರೆಗೆ “  ಕನ್ನಡ ಇನ್‌ಸ್ಕ್ರಿಪ್ಚನ್ಸ್‌  ಅಫ್ ಆಂಧ್ರ ಪ್ರದೇಶ್’  ಮತ್ತು “ಸೆಲೆಕ್ಟ್ ಇನ್‌ಸ್ಕ್ರಿಪ್ಷನ್ಸ ಅಫ್ ಆಂಧ್ರ ಪ್ರದೇಶ” ಎಂಬ ಗ್ರಂಥಗಳನ್ನು ಸಂಪಾದಿಸಿ ಕೊಟ್ಟರು

ಡಾ. ದೇಸಾಯಿಯವರ ಶಾಸನಗಳ ಸಂಪಾದನೆಯ ಕಾರ್ಯದ ಜೊತೆಗೆ  ಅವರ ಮಹತ್ವದ ಕಾಣಿಕೆ ಎಂದರೆ ಕರ್ನಾಟಕದಲ್ಲಿನ ಬೌದ್ಧಕೆಂದ್ರಗಳ ಅನ್ವೇಷನೆ., ಶಾಕ್ತ ಪಂಥದ ಮೇಲಿನ ಕೃತಿಗಳು, ಪಂಡರಾಪುರದ ಪಾಂಡುರಂಗನಮೇಲಿನ ಮತ್ತು ಸ್ಥಳ ನಾಮಗಳ ಕುರಿತಾದ ಕೃತಿಗಳು ಪ್ರಮುಖವಾಗಿವೆ. ತಮ್ಮ ಅವಿರತ ಬರವಣಿಗೆಯಿಂದ  ಕನ್ನಡ ನಾಡಿನ ಕಂಪನ್ನು ಹರಡುವಲ್ಲಿ ಅವರು ಯಶಸ್ವಿಯಾದರು..
ಅವರ ೬೦ ನೇ ವಯಸ್ಸಿನಲ್ಲಿ ಆರುನೂರು ಪುಟದ ಅಭಿನಂದನ ಗ್ರಂಥವನ್ನು ಅರ್ಪಿಸಲಾಯಿತುStudies in Indian history and culture “  ಅದರಲ್ಲಿ ವಿದ್ಯಾರ್ಥಿಗಳ ,ಸ್ನೇಹಿತರ , ವಿದ್ವಾಂಸರ ಬರಹಗಳು ಇವೆ. ೩೦ ಕನ್ನಡ , ೧೦ ಇಂಗ್ಲಿಷ್‌ ೧ ಮರಾಠಿ ಪುಸ್ತಕ ಬರೆದುದಲ್ಲದೆ  ಜೊತೆಗೆ ಮಕ್ಕಳ ಸಾಹಿತ್ಯ ರಚಿಸಿರುವರು ಅನೇಕ ಐತಿಹಾಸಿಕ ಕಾದಂಬರಿಗಳನ್ನೂ ಬರೆದಿರುವರು. ಕುಂತಳೇಶ್ವರ, ಮದಗಜ ಮಲ್ಲ. ನಾಗರ ಮರಿ, ಜಯ ಗೋದಾವರಿ ಮೊದಲಾದ ಐತಿಹಾಸಿಕಾದಂಬರಿಗಳು ಬಹಳ ನಿರ್ಧುಷ್ಟವಾಗಿ  ಓದುಗರ ಮನ ಸೆರೆ ಹಿಡಿಯುತ್ತವೆ. ಅವರ ಸಂಶೋಧನಾ ಲೇಖನಗಳನ್ನು  ನಿರಂತರ ಬರೆಯುತ್ತಲೇ ಇದ್ದರು ಕರ್ನಾಟಕದ ಕಳಚುರಿಗಳು,ಮಿಂಚಿದ ಮಹಿಳೆಯರು ಹಬ್ಬ ಹುಣ್ಣಿಮೆಗಳುಶಾಸನ ಪರಿಚಯ ಮೊದಲಾದ ಗ್ರಂಥಗಳನ್ನು ಬರೆದರು ಅಲ್ಲದೆ “ಶಿವಚರಿತ್ರ ವೃತ್ತಸಂಗ್ರಹ “ ಎಂಬ ಮರಾಠಿ ಕೃತಿಯನ್ನೂ ರಚಿಸಿದರು . ಅವರುಅವುಗಳಲ್ಲಿ  ಇಂಗ್ಲಿಷ್‌ಲೇಖನಗಳು ೧೦೫, ಕನ್ನಡದಲ್ಲಿ ೨೩೦ ಮರಾಠಿಯಲ್ಲಿ೪೦ ಲೇಖನಗಳಿವೆ ಒಟ್ಟು  ಸುಮಾರು ೪೦೦ ಲೇಖನಗಳನ್ನು ಬರೆದಿರುವರು. ಅವರ ನಾಜೂಕಾದ ದೇಹಸ್ಥಿತಿ ಮತ್ತು  ಶಿಕ್ಷಣ ಪಡೆಯುವಲ್ಲಿ ಅವರು ಪಟ್ಟಕಷ್ಟ ಪರಿಗಣಿಸಿದರೆ ದೇಶದ ಯಾವುದೇ ರಾಜ್ಯವೂ ಅವರ ಸಾಧನೆಯಿಂದ ಹೆಮ್ಮೆಯಿಂದ ಬೀಗಬಹುದು. ಅವರ ದೇಶಭಕ್ತಿ ಮತ್ತು ರಾಷ್ಟ್ರೀಯತೆ ಅವರೆಲ್ಲ ಕೃತಿಗಳನ್ನೂ ಜೀವಂತವಾಗಿಸುತ್ತವೆ..ನಿವೃತ್ತರಾದ ಮೇಲೂ ವಿಶ್ವ ವಿದ್ಯಾಲಯಧನಸಹಾಯ ಆಯೋಗದ ಪ್ರಾಧ್ಯಾಪಕರಾಗಿದ್ದರು೧೯೭೩ರಲ್ಲಿ ಅಖಿಲಭಾರತ ಇತಿಹಾಸ ಸಮ್ಮೇಳನದಲ್ಲಿ ಶಾಸನ ಶಾಸ್ತ್ರವಿಭಾಗದ ಅದ್ಯಕ್ಷರಾಗಿದ್ದರು  ಬಹುಭಾಷಾ ಶಾಸನ ತಜ್ಞರು ಅವರು ೧೯೭೪ ಮಾರ್ಚ ೫ರಂದು ಕಾಲವಶರಾದರು..

Tuesday, January 29, 2013

ಅಭಿನಂದನೆಗಳು


ಶಾಸನ  ಮತ್ತು ಸಂಸ್ಕೃತಿ ಲೋಕಕ್ಕೆ ಹೊಸ ಕಾಣಿಕೆ ನೀಡಿರುವ ಡಾ. ಸಿ.ಯು .ಮಂಜುನಾಥರವರಿಗೆ

ಅಭಿನಂದನೆ
                                                                                  













ಹೂವಿನಹೊಳೆಯ ಪ್ರಾಚೀನ ಸ್ಮಾರಕಗಳು ಮತ್ತು ಅಪ್ರಕಟಿತ ಶಾಸನ



ಡಾ. ಮುತ್ತುರಾಜು
ಕನ್ನಡ ಅಧ್ಯಾಪಕರು,
ಜವಾಹರ್ ನವೋದಯ ವಿದ್ಯಾಲಯ
ಉಡುವಳ್ಳಿಹಿರಿಯೂರು ತಾಲ್ಲೂಕು,
ಚಿತ್ರದುರ್ಗ ಜಿಲ್ಲೆ-೫೭೭೫೯೮.



ಹೂವಿನಹೊಳೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಒಂದು ಗ್ರಾಮ. ಇದನ್ನು ಹೂವಿನಹಳ್ಳಿ, ಹೂನಳ್ಳಿ ಎಂತಲೂ ಕರೆಯಲಾಗುತ್ತಿದೆ. ಸುವರ್ಣಮುಖಿ ನದಿ ಇಲ್ಲಿ ಹರಿಯುತ್ತಿದ್ದು, ಹೊಳೆ ಎಂಬ ಜಲಸಂಬಂಧಿ ಉತ್ತರಪದ ಬಂದಿದ್ದು ಸಸ್ಯವಾಚಕವಾದ ‘ಹೂವು ಪದ ಪೂರ್ವಪದವಾಗಿದೆ. ಈ ನದಿಯ ದಡದಲ್ಲಿ ವಿಸ್ತಾರವಾಗಿ ಗ್ರಾಮ ಬೆಳೆದು ಬಂದಿದೆ. ಈಶ್ವರಗೆರೆಯಿಂದ ಈ ಊರಿಗೆ ಪ್ರವೇಶ ಮಾಡುವ ಮುನ್ನ ಸಿಗುವ ಬ್ರಿಡ್ಜ್ ಒಂದರ ಮಗ್ಗುಲಲ್ಲಿ ‘ಮಸಿಯಮ್ಮ ಎಂದು ಕರೆಯುವ ಮೂರ್ತಿಯೊಂದು ಇದೆ. ಪ್ರಸ್ತುತ ಇದನ್ನು ಕಟ್ಟೆಯೊಂದರ ಮೇಲೆ ನಿಲ್ಲಿಸಲಾಗಿದ್ದು ಗುಡಿ ಇಲ್ಲದೇ ಪೂಜಿಸಲಾಗುತ್ತಿದೆ. ನಂಬಿಕೆಯಂತೆ ಈ ಮೂರ್ತಿಗೆ ಕೆಂಪು ಸೀರೆ ಹಸಿರು ಬಳೆಗಳನ್ನು ತೊಡಿಸಿ ಸಾಂಪ್ರದಾಯಕವಾಗಿ ಜನತೆ ಪೂಜೆ ಸಲ್ಲಿಸುತ್ತಿದ್ದಾರೆ.
ವಾಸ್ತವವಾಗಿ ಇದೊಂದು ಮಹಾಸತಿ ಸ್ಮಾರಕವಾಗಿದ್ದು, ಪತಿಯ ಮರಣದ ಕಾರಣವನ್ನು ತನ್ನ ಚಿತ್ರಣದಲ್ಲಿಯೇ ಹೇಳುವಂತಹದ್ದಾಗಿದೆ. ಇದು ನಾಲ್ಕು ಅಡಿ ಎತ್ತರ ಮತ್ತು ಎರಡು ಅಡಿ ಅಗಲದ ಸಿಸ್ಟ್ ಶಿಲೆಯಿಂದ ಮಾಡಿರುವಂತಹದ್ದಾಗಿದೆ. ಹತ್ತು ಅಡಿಗಳ ದುಂಡುಕಟ್ಟೆಯ ಮಧ್ಯದಲ್ಲಿ ನಿಂತಿರುವ ಈ ಸ್ಮಾರಕದ ಪಾದಗಳು ಮಾತ್ರ ತುಂಡಾಗಿ ಬಳಿಯಲ್ಲಿಯೆ ಮಣ್ಣಿನಲ್ಲಿ ಬೆರೆತುಹೋಗಿವೆ. ಇತರ ಮಹಾಸತಿಯ ಮೂರ್ತಿಗಳಂತೆ ಎತ್ತಿದ ಬಲಗೈ ಇದ್ದು ಇದರಲ್ಲಿ ನಿಂಬೆಹಣ್ಣನ್ನು ಹಿಡಿಯಲಾಗಿದೆ. ಇಳಿಬಿಟ್ಟ ಎಡದ ಕೈನಲ್ಲಿ ಕನ್ನಡಿಯನ್ನು ಹಿಡಿಯಲಾಗಿದೆ. ಶಿರದ ಹಿಂದೆ ಪ್ರಭಾವಳಿ ಇದ್ದು ಎತ್ತಿ ಕಟ್ಟಿದ ತುರುಬು ಶಿರದ ಬಲಭಾಗದಲ್ಲಿ ಬಂದಿದೆ. ಕರ್ಣಗಳಲ್ಲಿ ಹಿರಿದಾದ ಆಭರಣಗಳಿದ್ದು ಮುಂಗೈ, ತೋಳು ಮತ್ತು ಎದೆಯ ಮೇಲೆ ಮತ್ತು ನಡುವಿನಲ್ಲೂ ಆಭರಣಗಳಿವೆ. ನಡುವಿನ ಆಭರಣಕ್ಕೆ ಹೊಂದಿಕೊಂಡಂತೆ ಅಲಂಕಾರಯುಕ್ತವಾದ ವಸ್ತ್ರದ ಉಡುಗೆ ಇದೆ. ಈ ವಸ್ತ್ರದ ಅಲಂಕಾರಿಕ ನೆರಿಗೆಗಳು ಗಮನಾರ್ಹವಾಗಿವೆ. ಈ ಸ್ಮಾರಕದ ಮುಖದ ಭಾವ ಸವೆದುಹೋಗಿದೆ. ಸಮಭಂಗಿಯಲ್ಲಿ ನಿಂತಿರದೆ ಎಡಗಾಲನ್ನು ತುಸು ಭಾಗಿಸಿ ನಿಂತ ಮೂರ್ತಿ ಇದಾಗಿದೆ.
ಈ ಮೂರ್ತಿಯ ಬಲಭಾಗದ ಕೆಳಗಡೆ ಮಡಿದ ಮಹಾಸತಿಯ ಪತಿಯ ಪುಟ್ಟ ಪ್ರಮಾಣದ ಚಿತ್ರಣವಿದ್ದು ಈತ ತನ್ನ ಬಿಚ್ಚುಗತ್ತಿಯಿಂದ ತನ್ನ ಮೇಲೆ ಆಕ್ರಮಣ ಮಾಡುತ್ತಿರುವ ಹುಲಿಯೊಂದನ್ನು ಇರಿಯುತ್ತಿದ್ದಾನೆ. ಹುಲಿಯು ತನ್ನ ಬಾಯಿಯನ್ನು ತೆರೆದು ಇವನ ಮೇಲೆ ಎರಗಿ ಬಂದಿದೆ. ವೀರನ ಶಿರದ ಹಿಂದೆ ಖಡ್ಗವೊಂದರ ಚಿತ್ರಣವಿದೆ. ಈ ವೀರನು ಹುಲಿಯಿಂದ ತನ್ನನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲನಾಗಿ ಹತನಾಗಿದ್ದಾನೆ. ಪತಿಯನ್ನು ಸಾವಿನಲ್ಲೂ ಹಿಂಬಾಲಿಸುವ ನಂಬಿಕೆಯ ಪದ್ಧತಿಯಿಂದ ಈತನ ಪತ್ನಿ ಚಿತೆ ಏರಿ ಸಹಗಮನ ಮಾಡಿದ್ದಾಳೆ. ಮಾಸ್ತಿಕಲ್ಲು ಸ್ಮಾರಕಗಳಲ್ಲಿ ಕಲ್ಲಿಗೆ ಹೊಂದಿಕೊಂಡಂತೆಯೇ ಶಿಲ್ಪಗಳನ್ನು ಬಿಡಿಸಿರುವುದು ಈವರೆಗೆ ಕರ್ನಾಟಕದಲ್ಲಿ ದೊರೆತಿರುವ ಸ್ಮಾರಕಗಳಲ್ಲಿ ಸಿಂಹಪಾಲಿನವುಗಳಾಗಿವೆ. ವಿರಳವಾಗಿ ಸ್ಮಾರಕಗಳನ್ನು ಮೂರ್ತಿಗಳನ್ನಾಗಿ ಕೆತ್ತಿರುವ ಕೆಲವು ಸ್ಮಾರಕಗಳಲ್ಲಿ ಇದೂ ಒಂದು ಆಗಿರುವುದು. ವಿಶೇಷವಾಗಿದೆ. ಅಮರಳಾದ ಈ ಮಹಾಸತಿಯನ್ನು ಅಂದಿನಿಂದ ಪೂಜಭಾವದಿಂದ ದೈವತ್ವಕ್ಕೇರಿಸಿ ಪೂಜಿಸಿಕೊಂಡು ಬರಲಾಗುತ್ತಿದೆ. ಮಾಸ್ತಿ ಸ್ಮಾರಕಗಳ ಆಧಾರದ ಮೇಲೆ ಈ ಸ್ಮಾರಕದ ಕಾಲಮಾನವನ್ನು ಕ್ರಿ.ಶ. ಸುಮಾರು ಹದಿಮೂರನೇ ಶತಮಾನವೆಂದು ನಿರ್ಧರಿಸಬಹುದಾಗಿದೆ.
ಇಲ್ಲಿಯ ಗೊಲ್ಲರಹಟ್ಟಿ ಬಳಿಯ ಗೌಡಜ್ಜ ಎಂಬುವರ ಹೊಲದಲ್ಲಿ ಮಣ್ಣಿನಲ್ಲಿ ಹೂತು ಹೋಗಿದ್ದ ತುರುಕಾಗಳಗದ ವೀರಗಲ್ಲುವೊಂದನ್ನು ಇತ್ತೀಚೆಗೆ ಹೊರತೆಗೆದು ಇಲ್ಲಿಯೇ ನಿಲ್ಲಿಸಲಾಗಿದೆ. ಇದನ್ನು ಪಶ್ಚಿಮಾಭಿಮುಖವಾಗಿ ನಿಲ್ಲಿಸಲಾಗಿದೆ. ಎಂಟು ಅಡಿ ಎತ್ತರ ಮತ್ತು ಐದುಕಾಲು ಅಡಿ ಅಗಲವನ್ನು ಹೊಂದಿದೆ. ಈ ವೀರಗಲ್ಲು ಸ್ಮಾರಕವು ಮೂರ ಹಂತಗಳ ಚಿತ್ರಣವನ್ನು ಹೊಂದಿದೆ. ಕೆಳಹಂತದ ಬಲಭಾಗದಲ್ಲಿ ನಾಲ್ಕು ಗೋವುಗಳು ಬಲಮುಖವಾಗಿ ಚಲಿಸುತ್ತಿರುವ ಚಿತ್ರಣವಿದೆ. ಈ ಗೋವುಗಳ ಹಿಂದೆ ಖಡ್ಗವಿಡಿದು ಎದುರಾಳಿಗಳಾದ ಇಬ್ಬರು ಗೋವು ಅಪಹರಣಕಾರರ ಜೊತೆ ಹೋರಾಡು ತ್ತಿರುವ ಚಿತ್ರಣವಿದೆ. ವೀರನು ತನ್ನ ಬಲಗೈನಲ್ಲಿ ಹಿಡಿದ ಖಡ್ಗವನ್ನು ಶತ್ರುಗಳ ಮೇಲೆ ಪ್ರಯೋಗಿಸಲು ಬಲವಾಗಿ ಬೀಸುತ್ತಿದ್ದಾನೆ. ಎದುರಾಳಿ ಗಳಾದ ಶತ್ರುಗಳು ತಮ್ಮ ಧನಸ್ಸಿನಿಂದ ಈತನ ಮೇಲೆ ಬಾಣಪ್ರಯೋಗ ಮಾಡಿದ್ದಾರೆ. ಈ ಬಾಣಗಳು ವೀರನ ಉದರಕ್ಕೆ ತಾಗಿಕೊಂಡಿವೆ. ವೀರನು ಹತನಾಗಿ ವೀರಮರಣ ವನ್ನು ಹೊಂದಿದ್ದಾನೆ. ಆದರೆ ಶತ್ರುಗಳ ಸೆರೆಯಿಂದ ಗೋವುಗಳನ್ನು ರಕ್ಷಿಸಿದ್ದಾನೆ.
ಎರಡನೆಯ ಹಂತದಲ್ಲಿ ನಾಲ್ವರು ಅಪ್ಸರೆಯರು ವೀರನನ್ನು ಪಲ್ಲಕ್ಕಿಯೊಂದರಲ್ಲಿ ಕುಳ್ಳಿರಿಸಿಕೊಂಡು ಚಾಮರಸೇವೆ ಸಹಿತ ಸಂಗೀತ ವಾದ್ಯಗಳನ್ನು ನುಡಿಸುತ್ತ ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ.
ಮೂರನೆಯ ಹಂತದಲ್ಲಿ ಈ ನಾಲ್ವರು ಅಪ್ಸರೆಯರು ವೀರನನ್ನು ಸ್ವರ್ಗಕ್ಕೆ ಕರೆದುತಂದಿದ್ದು ಶಿಲ್ಪದ ಇಕ್ಕೆಲಗಳಲ್ಲೂ ಇಬ್ಬರು ಅಪ್ಸರೆಯರು ಪಲ್ಲಕ್ಕಿಯನ್ನು ಮಂಡಿಯೂರಿ ಹಿಂದಕ್ಕೆ ಬಲಗಾಲುಗಳನ್ನು ಚಾಚಿ ಕೈಗಳಿಂದ ಹಿಡಿದುಕೊಂಡು ಇಳಿಸುತ್ತಿದ್ದು ಇನ್ನಿಬ್ಬರು ಚಾಮರಸೇವೆಯಲ್ಲಿ ನಿರತರಾಗಿದ್ದಾರೆ. ವೀರನು ಮಧ್ಯದ ಪೀಠದ ಮೇಲೆ ಪಾರ್ಶ್ವಮುಖಿಯಾಗಿ ಕುಳಿತಿದ್ದಾನೆ.
ಎರಡನೆ ಹಂತದ ಬಲಭಾಗದಲ್ಲಿ ೧೩ ಅಕ್ಷರಗಳ ಪುಟ್ಟ ಶಾಸನವು ಲಿಪಿಸ್ವರೂಪದಲ್ಲಿ ನೊಳಂಬರ ಕಾಲದ ಆರಂಭದ ಲಿಪಿಗಳಾಗಿವೆ. ನಾಲ್ಕು ಸಾಲುಗಳ ಈ ಪುಟ್ಟ ಶಾಸನದ ಬರಹ ಇಂತಿದೆ.
ಸ್ವತ್ತಶ್ರೀ
ಣೊೞಣ್ಬ
ನೇ ಅಟ್ಕ
ಕಲೀರಯ
ಲಿಪಿಯ ಆರಂಭದಲ್ಲಿ ಸ್ವಸ್ತಿಶ್ರೀ ಬದಲು ಸ್ವತ್ತಶ್ರೀ ಎಂದು ಬರೆಯಲಾಗಿದೆ. ನೊಳಂಬರ ಕಾಲದಲ್ಲಿ ಕಲೀರಯ ಎಂಬ ವೀರನು ಮಡಿದ ವಿಷಯವನ್ನು ಶಾಸನವು ತಿಳಿಸುತ್ತಿದ್ದು ಇದರ ಕಾಲ ಕ್ರಿ.ಶ. ಸುಮಾರು ೮೫೦ ಆಗಿದೆ. ಲಿಪಿಯನ್ನು ಹೊಂದಿದ ಹಿರಿಯೂರಿನ ತಾಲ್ಲೂಕಿನ ಪ್ರಾಚೀನ ಸ್ಮಾರಕ ಇದಾಗಿದೆ.
ಈ ಗ್ರಾಮದಲ್ಲಿ ದೊರೆತ ಪ್ರಾಚೀನ ವೀರ ಮತ್ತು ಮಾಸ್ತಿಕಲ್ಲುಗಳ ಕುರುಹುಗಳಿಂದಾಗಿ ಈ ಗ್ರಾಮದಲ್ಲಿ ಕ್ರಿ.ಶ. ಸುಮಾರು ೮೫೦ಕ್ಕೆ ಮುನ್ನವೇ ಜನಜೀವನವಿದ್ದು ಅಂದಿನಿಂದ ನಿರಂತರವಾಗಿ ಸಾಮಾಜಿಕ ಧಾರ್ಮಿಕ ಮತ್ತು ರಾಜಕೀಯವಾಗಿ ಮುಂದುವರೆದುಕೊಂಡು ಬಂದಿದೆ.












Friday, January 25, 2013

ದಕ್ಷಿಣ ಕನ್ನಡಜಿಲ್ಲೆ, ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಪ್ರಾಚ್ಯಾವಶೇಷಗಳು


 ದಕ್ಷಿಣ ಕನ್ನಡಜಿಲ್ಲೆ, ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಪ್ರಾಚ್ಯಾವಶೇಷಗಳು
ಡಾ. ಲಕ್ಷ್ಮಿ ಜಿ. ಪ್ರಸಾದ್
ಕನ್ನಡ ಭಾಷಾ ಉಪನ್ಯಾಸಕರು,
ಸರ್ಕಾರಿ ಪದವಿ ಪೂರ್ವ ಕಾಲೇಜು,
ಬೆಳ್ಳಾರೆ, ಸುಳ್ಯ (ತಾ), ದಕ್ಷಿಣ ಕನ್ನಡ ಜಿಲ್ಲೆ-೫೭೪೨೧೨.
ಬೆಳ್ಳಾರೆ ಸುಳ್ಯ ತಾಲೂಕಿನ ವ್ಯಾಪ್ತಿಗೆ ಸೇರಿದ ಗ್ರಾಮ. ಅದು  ಹಿಂದೆ ಬೆಳ್ಳಾರೆ ಮಾಗಣೆಯಾಗಿದ್ದ ಬಗ್ಗೆ ಇತಿಹಾಸಜ್ಞರು ತಿಳಿಸಿದ್ದಾರೆ. ಬೆಳ್ಳಾರೆಯನ್ನು ಸಾಮಂತ ಬಲ್ಲಾಳ ಅರಸರು ಆಳುತ್ತಿದ್ದರು. ಇವರು ಬೆಳ್ಳಾರೆ, ಮುಂಡೂರು, ಸರ್ವೆ, ಕೆದಂಬಾಡಿ, ಕೆಯ್ಯೂರು, ಕಾಣಿಯೂರು, ಐವರ್ನಾಡು, ಪಾಲ್ತಾಡಿ, ಪುಣ್ಚಪಾಡಿ, ಸವಣೂರು, ಚಾರ್ವಕ, ಪೆರುವಾಜೆ, ಕೆದಿಲ, ಬಾಳಿಲ, ಕಳಂಜ, ಮುಪ್ಪೇರ್ಯ, ಮುರುಳ್ಯ, ಕ್ಯಾಮಣ, ಕುದ್ಮಾರು ಮತ್ತು ಕೊಳ್ತಿಗೆ ಎಂಬ ಇಪ್ಪತ್ತೊಂದು ಗ್ರಾಮಗಳನ್ನು ಆಳುತ್ತಿದ್ದರು. ಬೆಳ್ಳಾರೆಯನ್ನು ಆಳಿದ ಸಾಮಂತರು ಯಾರ ಸಾಮಂತರಾಗಿದ್ದರು ಎಂಬ ಬಗ್ಗೆ ಇದಮಿತ್ಥಂ ಎಂಬ ಮಾಹಿತಿ ಸಿಗುವುದಿಲ್ಲ.
೧೭೬೩ರಲ್ಲಿ ಹೈದರಾಲಿಯ ಬಿದನೂರನ್ನು ವಶಪಡಿಸಿಕೊಂಡಾಗ ತುಳುನಾಡು ಅವನ ವಶವಾಯಿತಾದರೂ, ಕೊಡಗಿನ ಅರಸನೊಂದಿಗೆ ಒಪ್ಪಂದ ಮಾಡಿಕೊಂಡು ಪಂಜ ಮತ್ತು ಕೊಡಗಿನ ಮಾಗಣೆಗಳನ್ನು ಕೊಡಗಿಗೆ ಬಿಟ್ಟುಕೊಟ್ಟನು. ಕ್ರಿ.ಶ.ಆದಿ ಭಾಗದಲ್ಲಿ ಬನವಾಸಿಯ ಕದಂಬ ಚಂದ್ರವರ್ಮನು ಕೊಡಗನ್ನು ಆಳಿಕೊಂಡಿದ್ದನು. ನಂತರ ಕೊಡಗು ಅನೇಕ ವಂಶದವರ ಆಳ್ವಿಕೆಗೆ ಒಳಗಾಯಿತು. ಸುಮಾರು ಕ್ರಿ.ಶ.೧೬೦೦ರಲ್ಲಿ ಇಕ್ಕೇರಿ ನಾಯಕರ ವಂಶದ ಹಾಲೇರಿ ಕುಟುಂಬದ ವೀರರಾಜನು ಕೊಡಗನ್ನು ಆಳ್ವಿಕೆ ಮಾಡಿದ ಬಗ್ಗೆ ರಾಜೇಂದ್ರನಾಮೆಯಲ್ಲಿ ಉಲ್ಲೇಖವಿದೆ. ಕ್ರಿ.ಶ.೧೭೭೫ರಲ್ಲಿ ಅಮರ ಸುಳ್ಯ ಮತ್ತು ಬೆಳ್ಳಾರೆಗಳನ್ನು ಹೈದರಾಲಿ ಪುನಃ ವಶಪಡಿಸಿಕೊಂಡನು. ೧೭೯೧ರಲ್ಲಿ ದೊಡ್ಡ ವೀರರಾಜೇಂದ್ರನು ವಶಪಡಿಸಿಕೊಂಡನು. ೧೭೯೨ರಲ್ಲಿ ಟಿಪ್ಪುಸುಲ್ತಾನನ ಮನವಿಯ ಮೇರೆಗೆ ಬೆಳ್ಳಾರೆ ಮತ್ತು ಪಂಜ ಮಾಗಣೆಗಳನ್ನು ದೊಡ್ಡ ವೀರರಾಜೇಂದ್ರನು ಟಿಪ್ಪು ಸುಲ್ತಾನನಿಗೆ ಬಿಟ್ಟುಕೊಟ್ಟನು.
೧. ಬೆಳ್ಳಾರೆಯ ಕೋಟೆ ಮತ್ತು ಬ್ರಿಟಿಷರ ಖಜಾನೆ: ಟಿಪ್ಪುವಿನ ಮರಣಾನಂತರ ಬೆಳ್ಳಾರೆ ಮಾಗಣೆಯ ೩೭ ಗ್ರಾಮಗಳನ್ನು ದೊಡ್ಡ ವೀರರಾಜೇಂದ್ರನ ವಶಕ್ಕೆ ಬ್ರಿಟಿಷರು ನೀಡಿದ್ದಾರೆ. ಕೊಡಗಿನ ಕೊನೆಯ ಅರಸ ಚಿಕ್ಕವೀರರಾಜೇಂದ್ರನನ್ನು ೧೮೩೪ರಲ್ಲಿ ಬ್ರಿಟಿಷರು ಪದಚ್ಯುತಗೊಳಿಸಿ ಬೆಳ್ಳಾರೆ ಸೇರಿದಂತೆ, ಸುಳ್ಯ, ಪಂಜ ಸೀಮೆಯ ೧೧೦ ಗ್ರಾಮಗಳನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸಿದರು. ಕೊಡಗರಸರ ಕಾಲದಲ್ಲಿ ವಸ್ತುರೂಪದಲ್ಲಿ ಭೂಕಂದಾಯವನ್ನು ನಗದು ರೂಪಕ್ಕೆ ಬದಲಾಯಿಸಿದರು. ಇದರ ಪ್ರತಿಫಲವಾಗಿ ಒಂದು ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಅದನ್ನು ಬ್ರಿಟಿಷರು ಕಲ್ಯಾಣಪ್ಪನ ಕಾಟುಕಾಯಿ ಎಂದು ಕರೆದರು. ಸುಳ್ಯದ ರೈತಾಪಿ ಜನರು ಕೆದಂಬಾಡಿ ರಾಮೇಗೌಡ, ಕೂಜುಕೋಡು ಮಲ್ಲಪ್ಪಗೌಡ ಮೊದಲಾದವರ ನೇತೃತ್ವದಲ್ಲಿ ಬ್ರಿಟಿಷರನ್ನು ಹೊಡೆದೋಡಿಸಲು ತೀರ್ಮಾನಿಸಿದರು. ಪುಟ್ಟ ಬಸಪ್ಪನೆಂಬ ಜಂಗಮನನ್ನು ಕಲ್ಯಾಣಸ್ವಾಮಿ ಎಂದು ಕರೆದು ಈತ ಕೊಡಗಿನ ಅರಸರ  ವಂಶದವನು ಎಂದು ಜನರನ್ನು ನಂಬಿಸಿದರು. ಮೊದಲಿಗೆ ಬೆಳ್ಳಾರೆಯ ಕೋಟೆಯ ಒಳಗಿದ್ದ ಬ್ರಿಟಿಷ್ ಖಜಾನೆಯನ್ನು ವಶಪಡಿಸಿಕೊಂಡರು. ಬೆಳ್ಳಾರೆ ಕೋಟೆಯಲ್ಲಿ ಕಲ್ಯಾಣಸ್ವಾಮಿಗೆ ಪಟ್ಟ ಕಟ್ಟಿದರು. ಬ್ರಿಟಿಷರಿಂದ ವಶಪಡಿಸಿಕೊಂಡ ಬೆಳ್ಳಾರೆಯ ಖಜಾನೆ ಮತ್ತು ಕೋಟೆ ಇಂದಿಗೂ ಇದೆ. ಈಗ ಬಂಗ್ಲೆ ಗುಡ್ಡೆ ಎಂದು ಕರೆಯಲ್ಪಡುವ ಕೋಟೆಯ ಮೇಲೆ ಇರುವ ಒಂದು ಕಟ್ಟಡವೇ ಆ ಖಜಾನೆ ಈ ಕಟ್ಟಡದಲ್ಲಿ ಈಗ ವಿಲೇಜ್ ಆಫೀಸ್ ಇದೆ. ಕೋಟೆಯ ಸುತ್ತ ತೋಡಿದ ಕಂದಕದ ಕುರುಹು ಇದೆ. ಈ ಕೋಟೆಯನ್ನು ಕ್ರಿ.ಶ.೧೬೦೧ರಲ್ಲಿ ಇಕ್ಕೇರಿಯ ಅರಸರು ಕಟ್ಟಿಸಿದ್ದಾರೆ.
೨. ಬೆಳ್ಳಾರೆಯ ಮಾಸ್ತಿ ಕಟ್ಟೆ: ಬೆಳ್ಳಾರೆಯ ಮೇಲಿನ ಪೇಟೆಯಲ್ಲಿ ಮಾಸ್ತಿಕಟ್ಟೆ ಎಂಬ ಪ್ರದೇಶ ಇದೆ. ಇಲ್ಲಿ ನಾಲ್ಕು ಶಿಲಾಸ್ತಂಭಗಳನ್ನು ನಾಲ್ಕು ದಿಕ್ಕಿಗೆ ನೆಡಲಾಗಿದ್ದು, ಕೆಳಗೆ ಶಿಲೆಯನ್ನು ಹಾಸಲಾಗಿತ್ತು. ಇಲ್ಲಿ ಒಂದು ಸ್ತ್ರೀಯ ಚಿತ್ರ, ಅವಳ ಎತ್ತಿದ ಕೈಯ ಚಿತ್ರ ಹಾಗೂ ಅರ್ಧಚಂದ್ರನ ಚಿತ್ರವನ್ನು ಕೆತ್ತಿರುವ ಶಿಲೆ ಇತ್ತು. ಎಂದು ಇದನ್ನು ನೋಡಿರುವ ಪುಷ್ಪರಾಜರು ಹೇಳುತ್ತಾರೆ. ಇಲ್ಲಿ ಮಹಾಸತಿಕಲ್ಲು ಇತ್ತೆಂದು ತಿಳಿಯುತ್ತದೆ. ಕಟ್ಟೆ ಕೂಡಾ ಇರುವುದರಿಂದ ಇದನ್ನು ಮಹಾಸತಿಕಟ್ಟೆ ಎಂದಾಗಿದೆ, ಈಗ ಈ ಪ್ರದೇಶವನ್ನು ಸಮತಟ್ಟಾಗಿಸಿದ್ದು, ಮಹಾಸತಿ ಕಟ್ಟೆ ಇದ್ದ ಕುರುಹುಗಳು ಅಳಿಸಿಹೋಗಿದೆ. ೩-೪ ವರ್ಷಗಳ ಹಿಂದಿನ ತನಕ ಮಹಾಸತಿ ಕಟ್ಟೆ ಇತ್ತು, ಸುಮಾರು ೨೦-೨೫ ವರ್ಷಗಳ ಮೊದಲು ಇಲ್ಲಿ ಮಹಾಸತಿ ಕಲ್ಲು ಇದ್ದುದನ್ನು ನೋಡಿದವರಿದ್ದಾರೆ, ತುಳುನಾಡಿನಲ್ಲಿ ಸತಿ ಸಹಗಮನ ಪದ್ಧತಿ ಅಷ್ಟಾಗಿ ಪ್ರಚಲಿತವಿರಲಿಲ್ಲ, ಆದ್ದರಿಂದ ಸಹಗಮನ ಮಾಡಿದವರ ಸಂಖ್ಯೆ ತೀರಾ ಕಡಿಮೆ ಇದೆ. ಉಡುಪಿ, ಕಾಸರಗೋಡು ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೬-೭ ಮಹಾಸತಿ ಕಲ್ಲು/ಕಟ್ಟೆಗಳು ಇವೆ. ಬೆಳ್ಳಾರೆಯಲ್ಲಿ ಮಹಾಸತಿ ಕಲ್ಲು ಹಾಗೂ ಕಟ್ಟೆ ಇದ್ದಿದ್ದರೂ ಕೂಡಾ ಇಲ್ಲಿ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.
೩. ಬೆಳ್ಳಾರೆಯ ಬೀಡು ಮತ್ತು ಪಟ್ಟದ ಚಾವಡಿ: ಬೆಳ್ಳಾರೆಯನ್ನು ಜೈನ ಪಾಳೆಯಗಾರರು ಆಳಿದ್ದಕ್ಕೆ ಕುರುಹಾಗಿ  ಬೆಳ್ಳಾರೆಯ ಕೋಟೆಯ ಹಿಂಭಾಗದಲ್ಲಿ ಬೀಡಿನ ಅವಶೇಷ ಈಗಲೂ ಇದೆ. ಬಲ್ಲಾಳರ ಬೀಡಿನ ಅವಶೇಷದ ವಾಯುವ್ಯ ಭಾಗದಲ್ಲಿ ಬೆಳ್ಳಾರೆಯ ಪ್ರಧಾನದೈವ ಅಡ್ಯಂತಾಯ ಭೂತದ ಚಾವಡಿ ಇದೆ. ಭೂತದ ನೇಮದ ಸಂದರ್ಭದಲ್ಲಿ ಇದು ಪಟ್ಟದ ಚಾವಡಿ ಎಂದು ಕರೆಸಿಕೊಂಡು ಭೂತದ ನುಡಿಯಾಗುತ್ತದೆ. ಇದರಿಂದಾಗಿ ಜೈನ ಪಾಳೆಯಗಾರರಾದ ಬಲ್ಲಾಳರಸರ ಪಟ್ಟಾಭಿಷೇಕ ಇಲ್ಲಿಯೇ ಆಗುತ್ತಿತ್ತೆಂದು ತಿಳಿದು ಬರುತ್ತದೆ. ಅಡ್ಯಂತಾಯ ಭೂತದ ಚಾವಡಿಯ ಗುಡಿಯಲ್ಲಿ ಕಂಚಿನಿಂದ ನಿರ್ಮಿಸಲ್ಪಟ್ಟ ಒಂದು ಸ್ತ್ರೀ ರೂಪದ ಮೂರ್ತಿ, ಒಂದು ಪುರುಷನ ರೂಪದ ಮೂರ್ತಿ. ಹಾಗೂ ಆಯುಧಗಳು ಇವೆ. ಇಲ್ಲಿ ಆರಾಧಿಸಲ್ಪಡುವ ದೈವ ಅಡ್ಯಂತಾಯ ಬೀಡಿನ ಹಿರಿಯ (ಮೂಲ?) ಅರಸನಾಗಿದ್ದು ಪುರುಷಾಕೃತಿಯ ಮೂರ್ತಿ ಆತನದೇ ಇರಬಹುದು, ಈ ಬಗ್ಗೆ ಅಧ್ಯಯನವಾಗಬೇಕಾಗಿದೆ.
೪. ಆನೆ ಕಟ್ಟುವ ಕಲ್ಲು: ಪಟ್ಟದ ಚಾವಡಿಯ ತೆಂಕು ಭಾಗದಲ್ಲಿ ಬೀಡಿನರಮನೆ ಇತ್ತು, ಇದರ ಬಳಿಯೂ ಜೈನ ಬಸದಿ ಕೂಡ ಇತ್ತು. ಕೆಲವರ್ಷಗಳ ಹಿಂದಿನತನಕ ಈ ಬಸದಿಯ ಅವಶೇಷ ಕಾಣಿಸುತ್ತಿತ್ತು. ಈಗ ನೆಲಸಮವಾಗಿ ಕುರುಹುಗಳು ಅಳಿಸಿ ಹೋಗಿವೆ, ಸಮೀಪದಲ್ಲಿ ಆನೆಗಳನ್ನು ಕಟ್ಟಿ ಹಾಕುವ ಕಲ್ಲುಗಳು ಇದ್ದವು. ಅಂಥಹ ಒಂದು ಆನೆ ಕಟ್ಟುವ ಕಲ್ಲನ್ನು ಈಗ ಕೂಡ ಕಾಣಬಹುದು.
೫. ಬಂಡಿ ಮಜಲು:  ಹಿಂದೆ ಬೆಳ್ಳಾರೆ ಪಟ್ಟಣವಾಗಿತ್ತು. ಸರಕು ಸಾಗಾಟ ಎತ್ತಿನ ಬಂಡಿಗಳ ತಂಗುದಾಣ ಆಗಿದ್ದ ಪ್ರದೇಶವನ್ನು ಬಂಡಿ ಮಜಲು ಎಂದು ಕರೆಯುತ್ತಿದ್ದರು, ಬಂಡಿ ಮಜಲು ಎಂಬ ಈ ವಿಶಾಲವಾದ ಬಯಲು ಪ್ರದೇಶ ಬೆಳ್ಳಾರೆ ಪೇಟೆಯಿಂದ ತುಸು ದೂರದಲ್ಲಿ ಈಗ ಕೂಡ ಇದೆ.
೬. ದೈವತ್ವವನ್ನು ಪಡೆದ ಬೆಳ್ಳಾರೆಯ ರಾಜಕುಮಾರ-ನೈದಾಲಪಾಂಡಿ ಭೂತ: ಸಂಪಾಜೆಯಿಂದ ಏಳೆಂಟು ಕಿಲೋಮೀಟರ್ ಒಳಭಾಗದ ಕಾಡಿನಲ್ಲಿ ಅರೆಕಲ್ಲು ಎನ್ನುವ ಸ್ಥಳವಿದೆ. ಇಲ್ಲಿ ಒಂದು ಅಯ್ಯಪ್ಪ ಮತ್ತು ಶಿವನ ಗುಡಿಗಳು ಇವೆ. ಇಲ್ಲಿ ಪೂಜಾ ಕಾರ್ಯಗಳನ್ನು ಕೊಡಗಿನ ಗಾಳಿಬೀಡಿನ ಪಾಂಡೀರ ರಾಜ ವಂಶದವರು ಬಂದು ನಡೆಸುತ್ತಾರೆ. ಇಲ್ಲಿ ಏಳು ವರ್ಷಗಳಿಗೊಮ್ಮೆ ನೈದಾಲ ಪಾಂಡಿ ಎಂಬ ಭೂತಕ್ಕೆ ನೇಮ ನೀಡಿ ಆರಾಧನೆ ಸಲ್ಲಿಸುತ್ತಾರೆ.
ಇದರಲ್ಲಿ ಮೊದಲನೆಯ ಪಾತ್ರಿಯಾಗಿ ಪೂಮಲೆ ಕುಡಿಯರು ಎರಡನೆಯ ಪಾತ್ರಿಗಳಾಗಿ ಪಾಂಡಿ ಮನೆಯವರು  ಭಾಗವಹಿಸುತ್ತಾರೆ. ನೈದಾಲಪಾಂಡಿ ಭೂತವನ್ನು ಪೂಮಲೆ ಕುಡಿಯ ಜನಾಂಗದ ಭೂತ ಪಾತ್ರಿಗಳಲ್ಲಿ ಹಿರಿಯರೊಬ್ಬರಿಗೆ ಹೇಳಿ ಕಟ್ಟಿಸುತ್ತಾರೆ. ನೈದಾಲಪಾಂಡಿ ಭೂತ ಕಟ್ಟಿದವರು ತುಸುಕಾಲದಲ್ಲಿಯೇ ಮರಣವನ್ನಪ್ಪುತ್ತಾರೆ ಎಂಬ ನಂಬಿಕೆ ಪ್ರಚಲಿತವಿರುವುದರಿಂದ ವಯಸ್ಸಾದ ವೃದ್ಧರೇ ನೈದಾಲ ಪಾಂಡಿ ಭೂತವನ್ನು ಕಟ್ಟುತ್ತಾರೆ.
ನೈದಾಲಪಾಂಡಿ ಭೂತಕ್ಕೂ ಬೆಳ್ಳಾರೆಗೂ ಅವಿನಾಭಾವ ಸಂಬಂಧವಿದೆ. ಪಾಂಡಿ ಮನೆಯ ಹಿರಿಯರು ಈ ಬಗ್ಗೆ ಮಾಹಿತಿ ನೀಡಿರುತ್ತಾರೆ.  ಬೆಳ್ಳಾರೆಯನ್ನು ಓರ್ವ ತುಂಡರಸ ಆಳಿಕೊಂಡಿದ್ದನು. ಅವನು ಪಾಂಡು ರೋಗಿಯಾಗಿದ್ದನು.  ಅವನ ನಂತರ ಅವನ ಮಗ ಬೆಳ್ಳಾರೆಯನ್ನು ಆಳಿಕೊಂಡಿದ್ದನು. ಇವನನ್ನು ಶತ್ರುಗಳು ಆಕ್ರಮಿಸಿದಾಗ ಬೆಳ್ಳಾರೆಯಿಂದ ತಪ್ಪಿಸಿಕೊಂಡು ಹೋಗಿ, ಪೂಮಲೆ ಕಾಡಿಗೆ ಹೋಗಿ ಪೂಮಲೆ ಕುಡಿಯರ ಮನೆಯೊಂದರಲ್ಲಿ ಆಶ್ರಯ ಪಡೆಯುತ್ತಾನೆ.  ಅಲ್ಲಿಗೆ ಕೊಡಗರಸರ ತಂಗಿ ಬಂದಾಗ ಬೆಳ್ಳಾರೆಯ ರಾಜಕುಮಾರ ಮತ್ತು ಅವಳ ಪರಿಚಯವಾಗಿ ಅದು ಪ್ರೇಮಕ್ಕೆ  ತಿರುಗುತ್ತದೆ. ನಂತರ ಅವರು ಮದುವೆಯಾಗಿ ಕೊಡಗಿನಲ್ಲಿ ಇರುತ್ತಾರೆ. ಇದು ಬೆಳ್ಳಾರೆಯ ರಾಜನ ಶತ್ರುಗಳಿಗೆ ತಿಳಿದು ಕೊಡಗಿಗೆ ಹೋಗಿ ಅವನ ಮೇಲೆ ಆಕ್ರಮಣ ಮಾಡುತ್ತಾರೆ. ಆಗ ಶತ್ರುಗಳ ಎದುರಿನಿಂದಲೇ ತಪ್ಪಿಸಿಕೊಂಡು ಹೋಗಿ ಅರೆಕಲ್ಲಿಗೆ ಬಂದು ಶಿವನಲ್ಲಿ ಐಕ್ಯನಾಗುತ್ತಾನೆ. ನಂತರ ದೈವತ್ವಕ್ಕೇರಿ ನೈದಾಲಪಾಂಡಿ ಎಂಬ ಹೆಸರಿನ ಭೂತವಾಗಿ ಆರಾಧನೆ ಪಡೆಯುತ್ತಾನೆ.
          ನೈದಾಲಪಾಂಡಿ ಭೂತಕ್ಕೆ ಅರಸು ದೈವಕ್ಕೆ ಕಟ್ಟುವಂತೆ ದೊಡ್ಡದಾದ ಮೀಸೆ, ತಲೆಗೆ ಪಗಡಿ ರೂಪದ ಕಿರೀಟದಂತೆ ಇರುವ ಮುಡಿ ಕಟ್ಟುತ್ತಾರೆ. ಬೆಳ್ಳಾರೆಯ ತುಂಡರಸ ಪಾಂಡುರೋಗಿಯಾಗಿದ್ದರಿಂದ ಅವನ ಮಗನನ್ನು ಪಾಂಡಿ ಎಂದು ಕರೆಯುತ್ತಿದ್ದರು. ಈತ ಪೂಮಲೆಯಲ್ಲಿ ಉಳಿದುಕೊಂಡ ಪ್ರದೇಶದ ಹೆಸರು ನೈದಾಲ್ ಎಂದು. ಎರಡು ವಂಶಗಳನ್ನು ನೆಯ್ದ ಅಂದರೆ ಬೆಸೆದ ಕಾರಣ ಆತನನ್ನು ನೈದಾಲಪಾಂಡಿ ಎಂದು ಕರೆಯುತ್ತಾರೆ ಎಂಬ ಐತಿಹ್ಯವೂ ಇದೆ. ನೈದಾಲಿನ ಪಾಂಡಿ ಎಂಬರ್ಥದಲ್ಲಿ ನೈದಾಲಪಾಂಡಿ ಎಂಬ ಹೆಸರು ಬಂದಿದೆ ಎಂದು ನೈದಾಲಪಾಂಡಿಯ ವಂಶದ ಹಿರಿಯರು ಹೇಳುತ್ತಾರೆ. ನೈದಾಲ ಪಾಂಡಿ ಭೂತದ ನೇಮದ ಸಂದರ್ಭದಲ್ಲಿ ಒಂದು ಹಾಡನ್ನು ಹಾಡುತ್ತಾರೆ. ಅದರಲ್ಲಿ ನೈದಾಲಪಾಂಡಿಯನ್ನು ಅಜ್ಜಯ್ಯ ಎಂದೂ, ಕಾಸರಗೋಡು ಕಾಳೆಯ್ಯ ಎಂದೂ ಕರೆದಿದ್ದಾರೆ. ಗಾಳಿಬೀಡಿನಲ್ಲಿರುವ ನೈದಾಲಪಾಂಡಿಯ ವಂಶದ ಹಿರಿಯರು ನೈದಾಲಪಾಂಡಿಯ ಮೊದಲ ಹೆಸರು ಕಾಳೆಯ್ಯ ಎಂದೂ, ಮದುವೆಯಾದ ಮೇಲೆ ಆತ ಲಿಂಗಾಯತ ಧರ್ಮಕ್ಕೆ ಮತಾಂತರ ಮಾಡಿದನೆಂದೂ ಹೇಳಿದ್ದಾರೆ. ನೈದಾಲಪಾಂಡಿಯ ಕಥಾನಕ ಸುಮಾರು ೧೩೦ ರಿಂದ ೧೮೦ ವರ್ಷಗಳ ಹಿಂದೆ ನಡೆದ ಘಟನೆಯಾಗಿದೆ.

ಆಧಾರಸೂಚಿ
೧.         ಕಾನಕುಡೇಲು, ಗಣಪತಿ ಭಟ್ಟ, ಪಂಜ ಸೀಮಾ ದರ್ಶನ.
೨.         ಎನ್.ಎಸ್. ದೇವಿಪ್ರಸಾದ, ಅಮರಸುಳ್ಯದ ಸ್ವಾತಂತ್ರ್ಯ ಹೋರಾಟ.
೩.         ಡಾ|| ಲಕ್ಷ್ಮೀ ಜಿ. ಪ್ರಸಾದ, ತುಳುನಾಡಿನ ಅಪೂರ್ವ ಭೂತಗಳು.





Thursday, January 24, 2013

ಇತಿಹಾಸಕಾರರು -೫







ಪುರಾತತ್ವ ಇಲಾಖೆಯ ಪ್ರಥಮ ಕನ್ನಡಿಗವಿದ್ವಾಂಸ-ಹೊಸಕೋಟೆ ಕೃಷ್ಣ ಶಾಸ್ತ್ರಿ-
( 1870-1928)

ಕನ್ನಡ ಶಾಸನ ಲೋಕದ ಮೊಟ್ಟ ಮೊದಲು ಬಾಗಿಲು ತೆರೆದವರು ವಿದೇಶಿಯರು. ಅವರ ಉದ್ದೇಶ ಏನೇ ಇದ್ದರೂ ಮಣ್ಣಿನಲ್ಲಿ ಮರೆಯಾಗಿ ಹೋಗುತಿದ್ದ ಇತಿಹಾಸಕ್ಕೆ ಮರು ಜೀವ ನೀಡಿರುವುದು ಸತ್ಯ. ಇಂಗ್ಲಿಷ್‌ ಶಿಕ್ಷಣ ಎಂದರೆ ರಕ್ತ ಮಾಂಸದಲ್ಲಿ ಭಾರತೀಯರು ಆಚಾರ ವಿಚಾರದಲ್ಲಿ ಆಂಗ್ಲರನ್ನಾಗಿಸುವ ಗುರಿಇಟ್ಟು ಕೊಂಡ ಮೆಕಾಲೆ ಮಹನೀಯನ ವರದಿಯಂತೆ ಆಕಾಲದ ಶಾಲಾ ಕಾಲೇಜುಗಳು ಗುಮಾಸ್ತರನ್ನು ತಯಾರಿಸುವ ಕಾರ್ಖಾನೆಗಳು ಎಂದು ದೇಶಪ್ರೇಮಿಗಳು ಹೀಗಳೆಯುತಿದ್ದಾಗ,  ಇಂಗ್ಲಿಷ್‌ಶಿಕ್ಷಣ ಪಡೆಯುವುದು ಸರ್ಕಾರದಲ್ಲಿ ನೌಕರಿ ಗಿಟ್ಟಿಸಿಕೊಂಡು ಆಂಗ್ಲರ ಆಡಳಿತ ಯಂತ್ರದ ಒಂದುಭಾಗವಾಗುವುದೇ ಜೀವನದ ಮಹತ್ಸಾಧನೆ ಎಂಬ ಭಾವನೆ ಸಾರ್ವತ್ರಿಕವಾಗಿತ್ತು. ಇಂಗ್ಲಿಷ್‌ವಿದ್ಯೆ ಕಲಿತು ಕೈತುಂಬ ಸಂಬಳ ತರುವ ಸರ್ಕಾರಿ ಕೆಲಸ ಬಿಟ್ಟು ದೂರದ ಉದಕಮಂಡಲದಲ್ಲಿ ಶಿಲಾ ಶಾಸನ ಮತ್ತು ತಾಮ್ರದ ಫಲಕಗಳ ಜೊತೆ ಒಡನಾಡುತ್ತಾ ಅದೇ ತಾನೆ ಪ್ರಾರಂಭವಾದ ಪುರಾತ್ತ್ವ ಇಲಾಖೆಗೆ ಸೇರಿ  ಕರ್ನಾಟಕದ ಇತಿಹಾಸದ ಪುಟಗಳನ್ನು ಬೆಳಕಿಗೆ ತರಲು ಮನ ಮಾಡಿದವರುಕೃಷ್ಣ ಶಾಸ್ತ್ರಿಗಳು.ಅದೇತಾನೆ ಪ್ರಾರಂಬವಾದ ಭಾರತದ ಪುರಾತತ್ತ್ವ ಇಲಾಖೆಗೆ ಜರ್ಮನ್‌ ವಿದ್ವಂಆಸ ಡಾ. ಇ. ಹುಲ್ಷ್‌ರಿಗೆ ಸಹಾಯಕರಾಗಿ ಎಲೆಯ ಮರೆಯ ಕಾಯಂತೆ  ದುಡಿದ ದೇಶೀಯ ವಿದ್ವಾಂಸರಲ್ಲಿ   ಹೊಸಕೋಟೆ ಕೃಷ್ಣ ಶಾಸ್ತ್ರಿಗಳು ಪ್ರಮುಖರು.
ಶಿಲಾಶಾಸನ
 ಕೃಷ್ಣ ಶಾಸ್ತ್ರಿಗಳು  ಶ್ರೋತ್ರಿಯ ಮನೆತನದಲ್ಲಿ  ಜನಿಸಿದರು.ಅವರು  ಈಗ ಬೆಂಗಳೂರು ಗ್ರಾಮಾಂತರದ ಜಿಲ್ಲೆಯಲ್ಲಿರುವ  ಚಿಕ್ಕ ಪಟ್ಟಣವಾಗಿದ್ದ  ಹೊಸಕೋಟೆಯಲ್ಲಿ  ೧೮೬೯ ರಲ್ಲಿ  ಜನಿಸಿದರು.
 ಅವರ ತಾತ ಪುರೋಹಿತರು ಮತ್ತು ಅಲ್ಲಿನ ದೇವಾಲಯದ ಅರ್ಚಕರು . ಆ ಕಾಲದಲ್ಲಿ ಹೊಸಕೋಟೆ ಒಂದು ಚಿಕ್ಕಗ್ರಾಮ. ಅಲ್ಲಿ ತಮಿಳರ ಸಂಖ್ಯೆಯೂ ಗಣನೀಯವಾಗಿತ್ತು. ಅವರನ್ನು ತಿಗಳರು ಎಂದು ಸ್ಥಳೀಯವಾಗಿ ಕರೆಯಲಾಗುತಿತ್ತು . ಆ ಸಮುದಾಯದ ಜನಕ್ಕೆ ಇವರ ತಾತನೇ ಗುರುಗಳು. ಅವರು ಆಗಮ, ಶಾಸ್ತ್ರ, ವೇದಾಂತ, ಜ್ಯೋತಿಷ್ಯ,  ಸಂಸ್ಕೃತ, ಮತ್ತು ಸಾಹಿತ್ಯಗಳಲ್ಲಿ ಪಾರಂಗತರು. ತಂದೆಯ ಗರಡಿಯಲ್ಲಿ ಪಳಗಿದ ರಾಮಾಶಾಸ್ತ್ರಿಗಳು ಕೂಡಾ   ವಿದ್ವಾಂಸರು. ಅವರಿಗೆ  ಸಾಹಿತ್ಯ ಮತ್ತು ಸಂಸ್ಕೃತ ಅಪಾರ ಆಸಕ್ತಿ. ಸಂಪ್ರದಾಯಸ್ಥರಾದರೂ ನೌಕರಿ ಮಾಡುವಷ್ಟು ಉದಾರ ಮನೋಭಾವ ಹೊಂದಿದವರು. ಅವರ ಆಳವಾದ ಸಂಸ್ಕೃತ ಜ್ಞಾನ ಮತ್ತು ಸಾಹಿತ್ಯ ಪರಿಣತೆಯನ್ನು ಗಮನಿಸಿ ಅದರ ಸದ್ಬಳಕೆ ಮಾಡಲು ವೆಸ್ಲಿಯನ್‌ಮಿಶನ್‌  ಶಾಲೆಯಲ್ಲಿ ಸಂಸ್ಕೃತ ಶಿಕ್ಷಕರ ಹುದ್ದೆ ನೀಡಲಾಯಿತು. .ಹೀಗಾಗಿ ಅವರಿಗೆ ಸಾಂಪ್ರದಾಯಿಕ ಸಂಸ್ಕೃತ ಜ್ಞಾನದ ಜೊತೆಗೆ ಆಧುನಿಕ ವಿದ್ಯೆಯ ಪ್ರವೇಶದ ಅವಕಾಶವೂ ದೊರೆಯಿತು.ಅಂಥಹ ವಾತಾವರಣದಲ್ಲಿ ಕೃಷ್ಣಶಾಸ್ತ್ರಿಗಳ ಜನನವಾಯಿತು. ಮನೆಯೆ ಅವರ ಮೊದಲ ಪಾಠಶಾಲೆ. ತಂದೆ ತಾತನಿಂದ ಸಂಪ್ರದಾಯಿಕ ವಿದ್ಯೆಯ ಕಲಿಕೆ.ಔಪಚಾರಿಕವಾಗಿ ಪ್ರಾಥಮಿಕ ಶಿಕ್ಷಣವು ಹೊಸಕೋಟೆಯಲ್ಲಿಯೇ ಆಯಿತು. ಅವರ ವಿದ್ಯೆಯು ಸಂಸ್ಕೃತ ಮತ್ತು ಶಾಸ್ತ್ರ ಅಧ್ಯಯನಕ್ಕೆ ಸೀಮಿತವಾಗಲಿಲ್ಲ. ತಂದೆ ಕೆಲಸ ಮಾಡುತಿದ್ದ ಮಿಶನ್‌ ಹೈಸ್ಕೂಲಿನಲ್ಲಿ ಇಂಗ್ಲಿಷ್‌  ಶಿಕ್ಷಣ ಮುಂದುವರಿಸಿದರು. ಹೈಸ್ಕೂಲು ಶಿಕ್ಷಣ ಯಶಸ್ವಿಯಾಗಿ ಮುಗಿಸಿದ ನಂತರ ಪದವಿ ಶಿಕ್ಷಣಕ್ಕಾಗಿ ಸೆಂಟ್ರಲ್‌ಕಾಲೇಜು ಸೇರಿದರು. ಆ ಕಾಲದಲ್ಲಿ ಸೆಂಟ್ರಲ್‌ ಕಾಲೇಜು  ಮದ್ರಾಸ್‌ ವಿಶ್ವ ವಿದ್ಯಾನಿಲಯಕ್ಕೆ ಸೇರಿತ್ತು. ಅಲ್ಲಿ ಬಿಎ. ಪದವಿಗೆ ಅಧ್ಯಯನ ಮಾಡಲು ದಾಖಲಾದರು. ಹೇಗಿದ್ದರೂ ಅವರಿಗೆ ಸಂಸ್ಕೃತ ಕರಗತವಾಗಿತ್ತು ಜೊತೆಗೆ ಸಾಹಿತ್ಯಾಸಕ್ತಿಯಿಂದ ಕನ್ನಡವನ್ನೂ ಆಯ್ದುಕೊಂಡರು. ತೀಕ್ಷ್ಣ ಮತಿಯಾದ್ದರಿಂದ ಗಣಿತವನ್ನೂ ಒಂದುವಿಷಯವಾಗಿ ಆಯ್ದುಕೊಂಡರು.ಅವರು ಬಿಎ ಪದವಿಯನ್ನು ಸಲೀಸಾಗಿ ಮುಗಿಸಿದರು. ಆ ಕಾಲದಲ್ಲಿ ಬಿಎ, ಬಿಎಸ್ಸಿ , ಬಿ.ಕಾಮ್‌  ಗಳೆಂಬ ವಿವಿಧ ಪದವಿಗಳಿರಲಿಲ್ಲ. ಕಲೆ ವಿಜ್ಞಾನ, ಗಣಿತ ಯಾವುದೇ ವಿಷಯವಾದರೂ ಎಲ್ಲರಿಗೂ ನೀಡುತಿದ್ದ ಪದವಿ ಎಂದರೆ ಬಿ .ಎ ಮಾತ್ರ.


ಊಟಿಯಲ್ಲಿದ್ದ ಪುರಾತತ್ವ ಕಚೇರಿ

ಪದವಿ ಮುಗಿದ ತಕ್ಷಣ ಅವರಿಗೆ ಸರ್ಕಾರಿ ಹುದ್ದೆ ಕಾದಿತ್ತು. ಮೈಸೂರು ಸಂಸ್ಥಾನದ ಉಪನೋಂದಣಿ ಅಧಿಕಾರಿಯಾಗಿ ನೇಮಕವಾದರು.  ಒಂದು ವರ್ಷ ಪ್ರೊಬೆಷನರಿ ಅಧಿಕಾರಿಯಾಗಿ ಕೆಲಸ ಮಾಡಿದರೆ ನಂತರ ಖಾಯಂ ಕೆಲಸ. ಕೈತುಂಬ ಸಂಬಳ. ಗೌರವಾನ್ವಿತ ಹುದ್ದೆ. ಅವರ ಕುಟುಂಬದವರಿಗೆ ಅತೀವ ಆನಂದ.ಆದರೆ ಕೃಷ್ಣಶಾಸ್ತ್ರಿಗಳಿಗೆ ಕೆಲಸಕ್ಕೆ ಸೇರಿದ ಕೆಲವೇ ದಿವಸಗಳಲ್ಲಿ ಭ್ರಮನಿರಸನವಾಯಿತು. ಆವರ ಹೃದಯಕ್ಕೆ ಹತ್ತಿರವಾದ ವಿಷಯಗಳ ಅವಲೋಕನಕ್ಕೆ ಅವಕಾಶವೇ ಇರಲಿಲ್ಲ.  ವೃತ್ತಿ ಮತ್ತು ಪ್ರವೃತ್ತಿಗಳ ನಡುವೆ ತಾಕಲಾಟ ಶುರುವಾಯಿತು.ತಮ್ಮ ವ್ಯಕ್ತಿತ್ವ ವಿಕಸನಕ್ಕೆ ಸರ್ಕಾರಿ ಕೆಲಸದಲ್ಲಿ  ಅವಕಾಶವೇ ಇಲ್ಲವೆಂಬ ಸತ್ಯದ ಅರಿವಾಗಲು ಬಹಳ ಸಮಯ ಹಿಡಿಯಲಿಲ್ಲ.ತಮ್ಮ ಜೀವನವೆಲ್ಲ ಕಾಗದ, ಪತ್ರ ದಸ್ತಾವೇಜುಗಳ ನಡುವೆಯೇ ಮುಗಿದು ಹೋಗುವುದೆಂಬ ಅಳುಕು ಹೆಚ್ಚಾಯಿತು. ಆದಾಯ ಎಷ್ಟೇ ಇದ್ದರೂ ಆಸಕ್ತಿ ಕುದುರಲಿಲ್ಲ.ಅವರ ವಿದ್ವತ್‌ ವ್ಯರ್ಥವಾಗುವುದೆಂಬ ಭಯ ಆವರಿಸಿತು.ಹಿಂದು ಮುಂದು ನೋಡದೆ ಕೆಲಸಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದರು. ಅವರ ಬಂಧುಮಿತ್ರರು  ಅವರ ಈ ದುಡುಕಿನ ನಡೆಯನ್ನು ವಿರೋಧಿಸಿದರು, ಬದುಕಿಗೆ ಭದ್ರತೆ ನೀಡುವ ಹುದ್ದೆ ಮತ್ತು ಕೈತುಂಬ ಆದಾಯ , ಸಾಮಾಜಿಕ ಗೌರವ ಅವರ ಗಮನ ಸೆಳೆಯುವಲ್ಲಿ ವಿಫಲವಾದವು. ಅದೇ ತಾನೇ ಚಿಗುರೊಡೆಯುತಿದ್ದಪುರಾತತ್ತ್ವಇಲಾಖೆಯು ಅವರ ಮನಸೆಳೆಯಿತು.
ಲೋಹದ ವಿಗ್ರಹದ ಪೀಠದ ಮೇಲಿನ ಲಿಪಿ

ಭಾರತ ಸರ್ಕಾರದ ಇತಿಹಾಸ  ಮತ್ತುಪುರಾತತ್ತ್ವಇಲಾಖೆಯು ಅದೇತಾನೇ ಹೊಸದಾಗಿ ಪ್ರಾರಂಭಿಸಲಾಗಿತ್ತು ಅದರ ಮುಖ್ಯಾಧಿಕಾರಿಯಾಗಿ ಜರ್ಮನ್‌ವಿದ್ವಾಂಸ  ಡಾ.. ಇ. ಹುಲ್ಷ ನೇಮಕವಾಗಿದ್ದರು.ಅವರಿಗೆ ಶಾಸನ ಸಂಶೋಧನೆ ಮತ್ತುಪುರಾತತ್ತ್ವಅಧ್ಯಯನಕ್ಕೆ ದೇಶೀಯ ವಿದ್ವಾಂಸರ ಅಗತ್ಯವಿತ್ತು. ಅವರ ಗಮನಕ್ಕೆ ಯುವ ಕೃಷ್ಣಶಾಸ್ತ್ರಿಗಳು ಬಿದ್ದರು. ತಕ್ಷಣವೇ ಅವರಿಗೆ ಸಹಾಯಕ ಸಂಶೋಧಕನ ಹುದ್ದೆಗೆ ಸೇರಲು ಕರೆ ನೀಡಿದರು.ತಮ್ಮ ಅಧ್ಯಯನ ಶೀಲತೆಗೆ ಅಪಾರ ಅವಕಾಶವಿರುವ ಹುದ್ದೆಯನ್ನು ಕೃಷ್ಣಶಾಸ್ತ್ರಿಗಳು ಸಂಬಳ ಕಡಿಮೆಯಾದರೂ ಎರಡು ಮಾತಿಲ್ಲದೆ ಒಪ್ಪಿಕೊಂಡರು. ಅವರ ಜೊತೆಯಲ್ಲಿಯೇ ಇನ್ನೊಬ್ಬ ವಿದ್ವಾಂಸ ವೆಂಕಯ್ಯನವರ ನೇಮಕವೂ ಆಯಿತು. ಹೀಗೆ ಮೂರು ಜನರಿಂದ ಕೂಡಿದ ಮೊದಲ ತಂಡದಿಂದ ಭಾರತದಲ್ಲಿ ಪ್ರಥಮಪುರಾತತ್ತ್ವಇಲಾಖೆಯ ಉದಯವಾಯಿತು. ಅದರ ಮೊದಲ ಕಚೇರಿ ಬೆಂಗಳೂರಿಗೆ ಹತ್ತಿರವಿರುವ ನಂದಿಬೆಟ್ಟದಲ್ಲಿ  ಸ್ಥಾಪಿಸಲಾಯಿತು. ಕೆಲವೇ ಸಮಯದ ನಂತರ  ಕಚೇರಿಯನ್ನು ನೀಲಗಿರಿ ಬೆಟ್ಟಗಳ ನಡುವೆ ಇರುವ ಉದಕಮಂಡಲಕ್ಕೆ ವರ್ಗಾಯಿಸಲಾಯಿತು. ಅಂದಿನಿಂದ ದಕ್ಷಿಣ ಭಾರತದ ಶಾಸನ ಸಂಬಂಧಿತ ಪುರಾತತ್ತ್ವಚಟುವಟಿಕೆಗಳಿಗೆ ಉದಕಮಂಡಲವೇ ಕೇಂದ್ರವಾಯಿತು.i ಇತ್ತೀಚೆಗೆ ಮೈಸೂರಿಗೆ ಬಂದಿದೆ
ಪುರಾತ್ವ ಇಲಾಖೆಯು  ಆಗಿನ್ನೂ ಶೈಶವಾವಸ್ಥೆಯಲ್ಲಿದ್ದಿತು.. ವೈಯಕ್ತಿಕ ನೆಲೆಯಲ್ಲಿ ಶಾಸನ ಸಂಗ್ರಹದ ಕೆಲಸ ಅಲ್ಲಿ ಇಲ್ಲಿ ನಡೆದಿದ್ದರೂ ಅದಕ್ಕೊಂದು ಸಾಂಸ್ಥಿಕ ಸ್ವರೂಪ ಇರಲಿಲ್ಲ.ಪುರಾತತ್ವ ವಿಜ್ಞಾನ ಮತ್ತು ಲಿಪಿಶಾಸ್ತ್ರಗಳು ಇನ್ನೂ ಪ್ರಾರಂಭದ ಹಂತದಲ್ಲಿಯೇ ಇದ್ದವು .
.
 ಆ ಶತಮಾನದ ಮೊದಲ ಅವಧಿಯಲ್ಲಿಪುರಾತತ್ತ್ವವಿಜ್ಞಾನ ಮತ್ತು ಲಿಪಿಶಾಸ್ತ್ರಗಳು ಇನ್ನೂ ಶೈಶವವಸ್ಥೆಯ್ಲೇ ಇದ್ದವು ಎಂಬುದು ಗಣನೀಯ.  ಡಾ. ಹುಲ್ಷ್‌ ಅವರು ಭಾರತ ಸರ್ಕಾರದಪುರಾತತ್ತ್ವಇಲಾಖೆಯ ಮುಖ್ಯಸ್ಥರಾದರು.ಅವರ ಮಾರ್ಗದರ್ಶನದಲ್ಲಿ ಶಾಸನ ತಜ್ಞರಾಗಿ ಕೃಷ್ಣಶಾಸ್ತ್ರಿಗಳು ಕೆಲಸ ಪ್ರಾರಂಭಿಸಿದರು. ಆ ಕಾಲದಲ್ಲಿ   ದಕ್ಷಿಣ ಭಾರತವು  ಅವರ ವ್ಯಾಪ್ತಿಯಲ್ಲಿ ಬರುತಿತ್ತು. ತಮಿಳುನಾಡು, ಆಂಧ್ರ , ಕರ್ನಾಟಕ ಮತ್ತು ಕೇರಳದಲ್ಲಿ ಎಲ್ಲಪುರಾತತ್ತ್ವವಿಷಯಗಳನ್ನೂ ಅವರು ಗಮನಿಸ ಬೇಕಿತ್ತು . ತಮಿಳು, ಕನ್ನಡ, ತೆಲಗು ಸಂಸ್ಕೃತ ಭಾಷೆಗಳಲ್ಲಿನ ಶಾಸನಗಳ  ಸಂಗ್ರಹವು ಅವರ ಸಂಸ್ಥೆಗೆ ಬಂದು ಸೇರಿದವು. ಅವನ್ನು ಸಂಗ್ರಹಿಸಿ ನಂತರ ತಮ್ಮಲ್ಲಿರುವ ಶಾಸನಗಳ ಓದಿ ಅಧ್ಯಯನ ಮಾಡಿ ,ದಾಖಲು ಮಾಡುವುದು ಅವರ ಮೊದಲ ಕೆಲಸವಾಗಿತ್ತು  . ಈ ದಿಶೆಯಲ್ಲಿ ಶಾಸ್ತ್ರಿಗಳಿಗೆ ಒಂದು ಅನುಕೂಲವಿತ್ತು. ಕನ್ನಡ, ಸಂಸ್ಕೃತ ಇಂಗ್ಲಿಷ್‌ಗಳಲ್ಲದೆ ಅವರ ಊರಿನ ಹಿನ್ನೆಲೆಯಿಂದಾಗಿ  ತೆಲುಗು ಮತ್ತು ತಮಿಳು ಭಾಷೆಯ ಪರಿಚಯವೂ ಚೆನ್ನಾಗಿಯೇ ಇತ್ತು ಅದರ ಸದುಪಯೋಗಕ್ಕೆ ಈಗ ಅವಕಾಶ ದೊರೆಯಿತು.ಶಾಸನ ಮತ್ತುಪುರಾತತ್ತ್ವವಸ್ತುಗಳ ಸಂಗ್ರಹಣೆ, ಸಂರಕ್ಷಣೆ ವಿಶ್ಲೇಷಣೆ ಮತ್ತು ಪ್ರಕಟಣೆಯ ಹೊಣೆ ಅವರದಾಯಿತು.
ಶಾಸ್ತ್ರಿಗಳುತಮ್ಮ ಲಿಪಿಶಾಸ್ತ್ರ ಮತ್ತು ಪುರಾತತ್ತ್ವದ  ಅನುಭವದಿಂದ ರಚಿಸಿದ ಕೃತಿ”” South Indian Images of Gods and Godesses “ ಪುಸ್ತಕವು ದಕ್ಷಿಣಭಾರತದಲ್ಲೇ ಶಿಲ್ಪಶಾಸ್ತ್ರದ ಬಹುಮುಖ್ಯ ಆಧಾರ ಗ್ರಂಥವಾಗಿದೆ.ಅದರಲ್ಲಿ ದಕ್ಷೀಣ ಭಾರತದಲ್ಲಿರುವ ದೇವಾಲಯಗಳ ಮತ್ತು ಮೂರ್ತಿಗಳ  ಸೂಕ್ಷ್ಮ ವಿವರಗಳ ಸಮಗ್ರ ವಿವರವಿದೆ
 ಅವರು ೧೯೦೮ ರಲ್ಲಿ ಸಹಾಯಕ ಅಧೀಕ್ಷಕರಾದರು. ನಂತರ ಮುಖ್ಯ ಅಧೀಕ್ಷಕರಾಗಿ ೧೯೨೫ ರಲ್ಲಿನಿವೃತ್ತರಾದರು.
ಕೃಷ್ಣಶಾಸ್ತ್ರಿಗಳು ಕನ್ನಡ, ಸಂಸ್ಕೃತ ತೆಲುಗು, ತಮಿಳು ಮತ್ತು ಇಂಗ್ಲಿಷ್‌ಗಳಲ್ಲಿ ಘನ ವಿದ್ವಾಂಸರು.. ಅವರು ಪುರಾತತ್ತ್ವಮತ್ತು ಶಾಸನ ಆಧ್ಯಯನದಲ್ಲಿ ಗಣನೀಯ ಸೇವೆ ಸಲ್ಲಿಸಿದರು.ಅವರ ಪ್ರಕಟಿತ ಕೃತಿಗಳೆಲ್ಲ  ಬಹುತೇಕ ಕಚೇರಿಯ ಅಧಿಕೃತ ದಸ್ತಾವೇಜುಗಳು ಮತ್ತು ವರದಿಯ ರೂಪದಲ್ಲಿವೆ. ಅವುಗಳನ್ನು ಸ್ವತಂತ್ರ ಕೃತಿಗಳಾಗಿ ಪ್ರಕಟಿಸಿಲ್ಲ.ಅವರ “ಸೌತ್‌ ಇಂಡಿಯನ್‌ ಐಕಾನೊಗ್ರಫಿ “  ಪುಸ್ತಕವು ಬಹು ಅಮೂಲ್ಯವಾದ ಕೃತಿ. ಶಿಲ್ಪಶಾಸ್ತ್ರ ಕುರಿತಾದ ಆಕರ ಗ್ರಂಥವಾಗಿ ಇಂದಿಗೂ ಪರಿಗಣಿತವಾಗಿದೆ.ಇತ್ತೀಚೆಗೆ ಅದರ ಮರು ಮುದ್ರಣವಾಗಿದೆ.
ನೇಗಿಲ ಮೇಲಿನ ಲಿಪಿಗಳು

ಅವರು ಅನೇಕ ದಕ್ಷಿಣ ಭಾರತದ ಶಾಸನಗಳ ಕುರಿತಾದ ವಾರ್ಷಿಕ ವರದಿಗಳ ಸಂಪಾದಕರಾಗಿದ್ದರು. ಅವರು ಎಪಿಗ್ರಾಫಿಕಾಇಂಡಿಕಾದ  ೧೭, ೧೮, ೧೯ ನೆಯ ಸಂಪುಟಗಳ ಸಂಪಾದಕರಾಗಿದ್ದರು. ಅದರಂತೆ ದಕ್ಷಿಣ ಭಾರತದ  ಶಾಸನಗಳು ಮೂರು, ನಾಲ್ಕು ಮತ್ತು ಐದನೆಯ ಸಂಪುಟಗಳ ಸಂಪಾದಕರೂ ಆಗಿದ್ದರು. ಅವರು ಮಸ್ಕಿಯಲ್ಲಿ ದೊರೆತ ಅಶೋಕನ ಶಾಸನ ಮತ್ತು ಮಹಾಬಲಿಪುರದ ಶಿವ ದೇವಾಲಯದಲ್ಲಿನ ಐದು ಶಾಸನಗಳನ್ನು ಕುರಿತಾದ ವಿದ್ವತ್‌ ಪೂರ್ಣ ಲೇಖನ ಬರೆದಿರುವರು.
 ಸ್ತ್ರಿಗಳು ಕೋಲಾರದಲ್ಲಿ ೧೯೨೪ ರಲ್ಲಿ ನಡೆದ  ೧೦ನೆಯ ಕರ್ನಾಟಕ ಸಾಹಿತ್ಯ    ಸಮ್ಮೇಳನದ ಅಧ್ಯಕ್ಷರಾ  ಗಿದ್ದರು. ಅವರಿಗೆ ೧೯೧೨ ರಲ್ಲಿ ರಾವ್‌ಸಾಹೇಬ್‌ ಮತ್ತು ೧೯೨೦ ರಲ್ಲಿ ರಾವ್‌ ಬಹದ್ದೂರ್‌ ಪ್ರಶಸ್ತಿ ಪ್ರಾಪ್ತವಾಗಿತ್ತು. ಕೃಷ್ಣಶಾಸ್ತ್ರಿಗಳ ಶೋಧನೆಗಳೆಲ್ಲ ಇಲಾಖೆಯ ಕಾರ್ಯದ ಒಂದು ಭಾಗವಾದ್ದರಿಂದ   ಕೊನೆಯ ತನಕ ಎಲೆಯ ಮರೆಯ ಕಾಯಿಯಾಗಿಯೇ ಉಳಿದರು.ಪುರಾತತ್ವ ಶೋಧನ ಕೆಲಸದಲ್ಲಿ ತೊಡಗಿದ ಮೊದಲ ಕನ್ನಡಿಗರು ಎಂಬುದನ್ನು ಯಾರೂ ಮರೆಯುವ ಹಾಗಿಲ್ಲ.

Monday, January 21, 2013

ಬಸ್ತಿಕೋಟೆಯ ಜೈನ ಅವಶೇಷಗಳು-ಒಂದು ಅವಲೋಕನ

                                                               ಲಿಂಗರಾಜು
                                                                                               ಇತಿಹಾಸ ಪ್ರಾಧ್ಯಾಪಕರು
                                                                                                 ಸರ್ಕಾರಿ ಮಹಾವಿದ್ಯಾಲಯ
                                                                                                                         ಮಂಡ್ಯ-೫೭೧೪೦೧
ಡ್ಯ ಜಿಲ್ಲೆ ಕರ್ನಾಟಕ ರಾಜ್ಯದ ದಕ್ಷಿಣ ಭಾಗದ ಮಧ್ಯದಲ್ಲಿದೆ. ಮೈಸೂರು ಜಿಲ್ಲೆಗೆ ಸೇರಿದ್ದ ಮಂಡ್ಯ ೧೯೩೯ರ ಜುಲೈ ೧ರಂದು ಸ್ವತಂತ್ರ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿತು. ಜಿಲ್ಲೆಯ ಒಟ್ಟು ವಿಸ್ತೀರ್ಣ ೪೯೬೧ ಚ.ಕಿ.ಮೀ ಸಮುದ್ರ ಮಟ್ಟಕ್ಕಿಂತ ೭೬೨ರಿಂದ ೯೧೪ ಮೀಟರ್ ಎತ್ತರದಲ್ಲಿದೆ. ಜಿಲ್ಲೆಯಲ್ಲಿ ಒಟ್ಟು ಏಳು ತಾಲ್ಲೂಕುಗಳಿವೆ. ಪ್ರಾಚೀನ ಕಾಲದಿಂದಲೂ ಮಂಡ್ಯ ಜಿಲ್ಲೆಯ ನಾನಾ ಕಡೆಗಳಲ್ಲಿ ಜೈನ ಧರ್ಮಕ್ಕೆ ಸಂಬಂಧಿಸಿದ ಬಸದಿಗಳು, ಗೊಮ್ಮಟನ ವಿಗ್ರಹಗಳು, ಸಾಕಷ್ಟು ಸಂಖ್ಯೆಯಲ್ಲಿ ಕಂಡುಬರುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ. ನಾಗಮಂಗಲದ ಕಂಬದಹಳ್ಳಿಯ ಪಂಚಕೂಟ ಬಸದಿ, ಬೆಳ್ಳೂರಿನ ವಿಮಲ ತೀರ್ಥಂಕರ ಬಸದಿ, ಕೆ.ಆರ್. ಪೇಟೆಯ ಹೊಸಹೊಳಲಿನ ಹಾಗೂ ಮುರುಕನಹಳ್ಳಿಯ ಪಾರ್ಶ್ವನಾಥ ಬಸದಿಗಳು, ಬಸ್ತಿಹೊಸಕೋಟೆಯ ಬಸದಿಗಳು ಮತ್ತು ಗೊಮ್ಮಟನ ವಿಗ್ರಹ, ಅರೆತಿಪ್ಪೂರಿನ ಗೊಮ್ಮಟನ ವಿಗ್ರಹ ಪ್ರಮುಖವಾದವು. ಇವುಗಳಲ್ಲಿ ಕೆ.ಆರ್. ಪೇಟೆ ತಾಲ್ಲೂಕಿನ ಬಸ್ತಿಹೊಸಕೋಟೆಯ ಜೈನ ಅವಶೇಷಗಳ ಇಂದಿನ ಸ್ಥಿತಿಗತಿಯ ಬಗ್ಗೆ ಸಂಬಂಧ ಪಟ್ಟ ಇಲಾಖೆಯ, ಅಧಿಕಾರಿಗಳ ಹಾಗೂ ಆಸಕ್ತ ಇತಿಹಾಸ ಸಂಶೋಧಕರ ಗಮನ ಸೆಳೆಯಲು ಪ್ರಯತ್ನಿಸಿದ್ದೇನೆ.
ಬಸ್ತಿಹೊಸಕೋಟೆ: ಬಸ್ತಿ ಹೊಸಕೋಟೆ ಮಂಡ್ಯ ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಕೆ.ಆರ್. ಪೇಟೆಯಿಂದ ಸು.೨೮ ಕಿ.ಮೀ. ದಕ್ಷಿಣದಲ್ಲಿ ಕೆ.ಆರ್.ಎಸ್. ಹಿನ್ನೀರಿಗೆ ಹೊಂದಿಕೊಂಡಂತಿದೆ. ಮಾವಿನಕೆರೆಗೆ ಎರಡು ಕಿ.ಮೀ. ದೂರದಲ್ಲಿ ಕಣಿವೆ ಪ್ರದೇಶದಿಂದ ಕೂಡಿದೆ. ಬಸ್ತಿಯಲ್ಲಿ ಹಿಂದೆ ಅಧಿಕ ಸಂಖೈಯಲ್ಲಿ ಜೈನರಿದ್ದರು ಆದರೆ ಇಂದಿನ  ಬಸ್ತಿಯಲ್ಲಿ ಕುರುಬ ಜನಾಂಗದವರು ಅಧಿಕ ಸಂಖೈಯಲ್ಲಿರುವುದರಿಂದ ಕುರುಬರ ಬಸ್ತಿಯೆಂದು ಕರೆಯುತ್ತಿದ್ದಾರೆ. ಇಂದಿನ ಬಸ್ತಿ ಹೊಸಕೋಟೆಯಲ್ಲಿ ಹರಿಜನರು ಅಧಿಕ ಸಂಖೈಯಲ್ಲಿರುವುದರಿಂದ ಎ.ಕೆ. ಬಸ್ತಿ ಎಂದು ಕರೆಯುತ್ತಿದ್ದಾರೆ. ಹರಿಜನರು ತಮಗೆ ಸಮೀಪದ ಬಸ್ತಿಯನ್ನು ಒಕ್ಕಲಗೇರಿ ಎಂದೇ ಕರೆದುಕೊಳ್ಳುತ್ತಾರೆ.೧ ಈ ಎರಡು ಗ್ರಾಮಗಳಿಗೆ ಹೊಂದಿಕೊಂಡಂತೆ ಹಿಂದೆ ಬಸ್ತಿ ಅಥವ ಬಸ್ತಿಹೊಸಕೋಟೆ ಇದ್ದಿತ್ತೆಂದು ಹೇಳಬಹುದು. ಇಂದಿನ ಕುರುಬರ ಬಸ್ತಿ ಹಾಗೂ ಎ.ಕೆ. ಬಸ್ತಿ ಎಂಬ ಗ್ರಾಮಗಳ ಬಳಿಯ ಕೆ.ಆರ್.ಎಸ್. ಹಿನ್ನೀರಿನ ಗುಡ್ಡದಲ್ಲಿ ಗಂಗರಸರ ಹಾಗೂ ಹೊಯ್ಸಳರ ಕಾಲಗಳ ಗೊಮ್ಮಟನ ವಿಗ್ರಹ, ತೀರ್ಥಂಕರರ ಮೂರ್ತಿಶಿಲ್ಪಗಳೂ, ಜೈನ ಬಸದಿಯ ಅವಶೇಷಗಳು, ಹಾಗೂ ಸುಂದರ ಕೆತ್ತನೆಯಿಂದ ಕೂಡಿರುವ ಜೈನ ಅವಶೇಷಗಳ ಕುರುಹುಗಳನ್ನು ಕಾಣಬಹುದು. ಇದು (ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ) ಬಸ್ತಿಹೊಸಕೋಟೆಯು ಹಿಂದೆ ಜೈನ ಧರ್ಮಿಯರ ಪ್ರಮುಖ ಕೇಂದ್ರವಾಗಿತ್ತೆಂದು ಸೂಚಿಸುತ್ತದೆ. ಕಣ್ಣಾಂಬಾಡಿ (ಕನ್ನಾಂಬಾಡಿ) ಅಣೆಕಟ್ಟೆಯ ನಿರ್ಮಾಣದಿಂದ ಹಿನ್ನೀರಿನಲ್ಲಿ ಮುಳುಗಡೆಯಾಗುತ್ತಿದ್ದ ಗೊಮ್ಮಟನ ಪ್ರತಿಮೆಯನ್ನು ಇತರೆ ತೀರ್ಥಂಕರರ ಶಿಲ್ಪಾಕೃತಿಗಳನ್ನು, ಬಸದಿಯ ಸುಂದರ ಕೆತ್ತನೆಯ ಅವಶೇಷಗಳನ್ನು ಕೆ.ಆರ್.ಎಸ್. ಹಿನ್ನೀರಿನಿಂದ ರಕ್ಷಿಸಲು, ಹಿನ್ನೀರಿನ ಗುಡ್ಡಕ್ಕೆ ತಂದು ಸಂರಕ್ಷಿಸಲಾಗಿದೆ ಎಂಬುದು ಕೆಲವರ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ ಬಸ್ತಿ ಹೊಸಕೋಟೆಯ ಜೈನ ಅವಶೇಷಗಳಿಗೆ ಸಂಬಂಧಿಸಿದಂತೆ ನನ್ನ ಸಂಶೋಧನಾ ಲೇಖನವನ್ನು ಪುನರ್‌ರಚಿಸಲು ಪ್ರಯತ್ನಿಸಿದ್ದೇನೆ. ಡಾ. ಪಿ.ಎನ್. ನರಸಿಂಹಮೂರ್ತಿ ಅವರ ಜೊತೆ ಬಸ್ತಿಹೊಸಕೋಟೆಗೆ ಕ್ಷೇತ್ರಕಾರ್ಯ ಕೈಗೊಂಡಾಗ ಇಂದು ಅಲ್ಲಿ ಕಂಡುಬಂದ ಜೈನ ಬಸದಿಗಳು, ಗೊಮ್ಮಟನ ವಿಗ್ರಹ ಹಾಗೂ ಇತರ ಅವಶೇಷಗಳು ನಿರ್ಮಾಣಗೊಂಡಿರುವ ಶೈಲಿಯ ಹಿನ್ನೆಲೆಯಲ್ಲಿ, ಹೊಯ್ಸಳರ ಕಾಲದ ಎರಡು ಶಾಸನಗಳು, ಹಾಗೂ ಸ್ಥಳಿಯ ಜನತೆಯ ಮೌಖಿಕ ಆಧಾರಗಳನ್ನು ಬಳಸಿಕೊಂಡು, ಬಸ್ತಿ ಹೊಸಕೋಟೆಯ ಜೈನ ಬಸದಿಗಳು, ಗೊಮ್ಮಟನ ವಿಗ್ರಹ ಹಾಗೂ ಇತರ ಅವಶೇಷಗಳು ಗಂಗರ ಕಾಲಕ್ಕೆ ಸಂಬಂಧಿಸಿದ್ದಾಗಿವೆ ಅಥವಾ ಹೊಯ್ಸಳರ ಕಾಲಕ್ಕೆ ಸಂಬಂಧಿಸಿದ್ದಾಗಿವೆ.
ಬಸ್ತಿಯ ಗೊಮ್ಮಟನ ವಿಗ್ರಹ: ಗೊಮ್ಮಟ ಮೂರ್ತಿಯಿರುವುದು ಮುಳುಗಡೆಯಾಗಿರುವ ಬಸ್ತಿಯ ಕೆ.ಆರ್.ಎಸ್. ಹಿನ್ನೀರಿನ ಗುಡ್ಡದಲ್ಲಿದೆ. ಬಸ್ತಿಯ ಅವಶೇಷಗಳು ಹಾಗೂ ಗೊಮ್ಮಟಮೂರ್ತಿ ಮಾತ್ರ ಹಳೆಯ ಕುರುಹಾಗಿ ಇಂದಿಗೂ ಇವೆ.
ಜೈನ ಸಂಪ್ರದಾಯದಂತೆ ಗೊಮ್ಮಟನ ವಿಗ್ರಹವನ್ನು ಕಾಯೋತ್ಸರ್ಗ ಶೈಲಿಯಲ್ಲಿ (ಸ್ಥಾನಿಕ\ಖಡ್ಗಾಸನ) ನಿರ್ಮಿಸಲಾಗಿದೆ. ಇದೇ ಶೈಲಿಯಲ್ಲಿ ಬಸ್ತಿಯ ಗೊಮ್ಮಟ ಮೂರ್ತಿಯಿದೆ. ಗೊಮ್ಮಟ ಮೂರ್ತಿಯ ಎತ್ತರಕ್ಕೂ ಕಮಾನಿನಾಕಾರದ ಗೂಡಿನಂತಹ ಗುಡಿಯನ್ನು ರಕ್ಷಣೆಗೆ ಕಟ್ಟಲಾಗಿದೆ. ಈ ಗೂಡಿನೊಳಗೆ ಸು.೧೮ ಅಡಿ ಎತ್ತರದ ಸುಂದರವಾದ ಗೊಮ್ಮಟನ ವಿಗ್ರಹ ಪ್ರಮುಖವಾದುದ್ದು. ಇಂದಿಗೂ ಗೊಮ್ಮಟಮೂರ್ತಿ ಸುಸ್ಥಿತಿಯಲ್ಲಿದೆ. ಗೊಮ್ಮಟಮೂರ್ತಿಯ ಮುಖಮುದ್ರೆಯಲ್ಲಿ ಯೋಗಿಯ ಲಕ್ಷಣಗಳಿವೆ. ತಲೆಗೂದಲು ಗುಂಗುರು ಕೂದಲಿನಿಂದ ಕೂಡಿದೆ. ಪಾದದಿಂದ ಮಂಡಿಯವರೆಗೆ ಲತಾಬಳ್ಳಿಗಳು ಹಬ್ಬಿರುವಂತೆ ಸುಂದರವಾಗಿ ಕೆತ್ತಿ ಅಲಂಕರಿಸಲಾಗಿದೆ. ಆದರೆ ಸೂಕ್ಷ್ಮತೆಯಲ್ಲಿ ಶ್ರವಣಬೆಳ್ಗೊಳದ ಬಾಹುಬಲಿ ಶಿಲ್ಪದಲ್ಲಿರುವ ಪ್ರಶಾಂತ ಭಾವವನ್ನಾಗಲೀ, ಪಕ್ಕದ ಹುತ್ತಗಳ ಮೇಲಿನಿಂದ ಬಳ್ಳಿಗಳು ಹಬ್ಬಿ ತೋಳಿನವರೆಗೆ ಹಬ್ಬಿರುವದನ್ನಾಗಲೀ, ಹುತ್ತದಿಂದ ಕುಕ್ಕಟ ಸರ್ಪಗಳು ಹೊರ ಬಂದಿರುವಂತಾಗಲೀ, ವಿಶಾಲವಾದ ಎದೆ, ಬಾಲಮುಗ್ಧ ನಗೆ, ಸಣ್ಣ ನಡುವನ್ನು ಹೊಂದಿರುವ ಪೂರ್ಣ ಶಿಲ್ಪವಾಗಿ ಈ ಗೊಮ್ಮಟ ಮೂರ್ತಿಯನ್ನು ಶಿಲ್ಪಿಗಳು ಕೆತ್ತಿಲ್ಲ. ಆದ್ದರಿಂದ ಶ್ರವಣಬೆಳ್ಗೊಳದ ಬಾಹುಬಲಿ ಶಿಲ್ಪಕ್ಕಿಂತ ಮೊದಲೇ ಈ ಮೂರ್ತಿ ಗಂಗರಸರ ಕಾಲದಲ್ಲಿ ನಿರ್ಮಾಣವಾಗಿದೆಯೆಂದು ಡಾ. ಪಿ.ಎನ್. ನರಸಿಂಹಮೂರ್ತಿ ಅಭಿಪ್ರಾಯಪಡುತ್ತಾರೆ. ಆದರೆ ಅನಂತರಾಮು ಕೆ. ರವರು ತಮ್ಮ ಸಕ್ಕರೆಸೀಮೆ ಕೃತಿಯಲ್ಲಿ ವಿಷ್ಣುವರ್ಧನನ ಮಂತ್ರಿ ಪುಣಿಸಮಯ್ಯ ಬಸದಿಯೊಂದನ್ನು ನಿರ್ಮಿಸಿ, ಈ ಗೊಮ್ಮಟಮೂರ್ತಿಯನ್ನು ನಿರ್ಮಿಸಿರಬಹುದೆಂದು ತಿಳಿದುಬರುತ್ತದೆ ಎಂದು ಉಲ್ಲೇಖಿಸಿದ್ದಾರೆ. ಗೊಮ್ಮಟನ ರಕ್ಷಣೆಗೆ ಗೊಮ್ಮಟನ ಎತ್ತರಕ್ಕೂ ಕಮಾನಿನಾಕಾರದ ಗೂಡಿನಂತಹ ಗುಡಿಯನ್ನು ಇತ್ತೀಚಿಗೆ ಜೈನ ಭಕ್ತರು ನಿರ್ಮಿಸಿರಬಹುದು.
ಬಸ್ತಿಯ ಬಸದಿಗಳು: ಕರ್ನಾಟಕದಲ್ಲಿ ಬಸದಿಯ ಪ್ರಯೋಗ ಮೊದಲು ಕ್ರಿ.ಶ.೮ನೇ ಶತಮಾನದ ಶ್ರವಣಬೆಳ್ಗೊಳದ ಶಾಸನದಲ್ಲಿ ದಾಖಲಿಸಿದೆ. ನಂತರ ಕ್ರಿ.ಶ.೮-೯ನೇ ಶತಮಾನದ ಸಂಪಿಗೆ ಮರದ ಶಾಸನದಲ್ಲಿ ಬಸದಿ ಎಂಬ ಶಬ್ದವಿದೆ.     
ಬಸ್ತಿಹೊಸಕೋಟೆಯಲ್ಲಿ ಇರುವ ಜೈನ ಬಸದಿಗಳ ಸ್ಥಿತಿಗತಿಗಳನ್ನು ಕೆಳಗಿನಂತೆ ಅವಲೋಕಿಸಬಹುದು.
ಗೊಮ್ಮಟನ ಮೂರ್ತಿಯ ಹಿಂಬಾಗ ನಾಲ್ಕು ಸ್ತಂಭಗಳಿಂದ ಕೂಡಿರುವ ಬಸದಿ ಶಿಥಿಲಾವಸ್ಥೆಯಲ್ಲಿರುವುದು ಕಂಡುಬರುತ್ತದೆ. ಈ ಬಸದಿಯ ಗೋಪುರದ ಸ್ಥೂಪಿ ಭಾಗ ಕೆಳಗೆಡೆ ಬಿದ್ದಿದೆ. ದಕ್ಷಿಣ ಭಾಗದ ಸ್ತಂಭಗಳು ತರಂಗ ಬೋಧಿಗೆಯಲ್ಲಿದ್ದರೆ ಉತ್ತರ ಭಾಗದ ಸ್ತಂಭಗಳು ಸಾಮಾನ್ಯ ಶೈಲಿಯಲ್ಲಿವೆ. ಮೇಲ್ಭಾಗದ ತೊಲೆಯ ಛಾವಣಿಯಲ್ಲಿ ವಿವಿಧ ಮಾದರಿಯ ಮೃದಂಗ, ತಾಳ, ಕೊಳಲು, ಶಂಖಗಳನ್ನು ನುಡಿಸುತ್ತಿರುವ ವಿವಿಧ ನೃತ್ಯ ಭಂಗಿಯಲ್ಲಿರುವ ಶಿಲ್ಪಾಕೃತಿಗಳ ಸಾಲು ನೋಡುಗರನ್ನು ಆಕರ್ಷಿಸುತ್ತವೆ.
ಗೊಮ್ಮಟನ ಮೂರ್ತಿಯ ಉತ್ತರ ಭಾಗದಲ್ಲಿ ಪೂರ್ವಕ್ಕೆ ಪ್ರವೇಶದ್ವಾರವಿರುವ ಆರು ಸ್ತಂಭಗಳಿಂದ ಕೂಡಿರುವ ಬಸದಿಯು ಸಹ ಶಿಥಿಲಾವಸ್ಥೆಯಲ್ಲಿರುವುದು ಕಂಡುಬರುತ್ತದೆ.
ಈ ಬಸದಿಯ ತೊಲೆಯಲ್ಲಿರುವ ವೈವಿಧ್ಯಮಯವಾದ ಶಿಲ್ಪಾಕೃತಿಗಳು ನೋಡುಗರನ್ನು ಆಕರ್ಷಿಸುತ್ತವೆ.
ಗೊಮ್ಮಟಮೂರ್ತಿಯ ಉತ್ತರ ಭಾಗದ ಕೆ.ಆರ್.ಎಸ್. ಹಿನ್ನೀರಿನಲ್ಲಿ ಆರು ಸ್ತಂಭಗಳಿಂದ ಕೂಡಿರುವ ಉತ್ತರಕ್ಕೆ ಪ್ರವೇಶದ್ವಾರವಿರುವ ಬಸದಿಯು ಸಹ ಶಿಥಿಲಾವಸ್ಥೆಯಲ್ಲಿದೆ.
ಈ ಬಸದಿಯು ಕೆ.ಆರ್.ಎಸ್.ನ ಹಿನ್ನೀರಿನಿಂದ ಆವೃತವಾಗಿದ್ದರಿಂದ ಬಸದಿಯ ಬಳಿ ಹೋಗಲು ಸಾಧ್ಯವಾಗಲಿಲ್ಲ. ಇದು ಸಹ ಸಾಮಾನ್ಯ ಶೈಲಿಯಲ್ಲಿ ನಿರ್ಮಾಣವಾಗಿದೆ. ಬಹುಶಃ ಈ ಬಸದಿ ಹೊಯ್ಸಳರ ದಂಡನಾಯಕ ಪುಣಿಸಮಯ್ಯನ ಕಾಲದಲ್ಲಿ ನಿರ್ಮಾಣವಾಗಿರಬಹುದು.
ಮತ್ತೆ ಕೆಲವು ಬಸದಿಗಳಿರುವುದಕ್ಕೆ ಸಂಬಂಧಿಸಿದ ಕುರುಹುಗಳು ಕೆ.ಆರ್.ಎಸ್. ಹಿನ್ನೀರಿನ ದಡದಲ್ಲಿ ಬಿದ್ದಿರುವ ಮೇಲ್ಛಾವಣಿಯ ಚಪ್ಪಡಿಗಳ ಕುರುಹುಗಳಿಂದ, ಅಲ್ಲಲ್ಲಿ ಬಿದ್ದಿರುವ ಸ್ತಂಭಗಳು, ಹಾಗೂ ತರಂಗ(ಸ್ತಂಭ) ಬೋದಿಗೆಗಳಿಂದ ತಿಳಿದುಬರುತ್ತದೆ. ಇಲ್ಲಿನ ಬಸದಿಗಳ ಅವಶೇಷಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಸಂಶೋಧನೆಯಾಗಬೇಕಾಗಿದೆ.
ಒಟ್ಟಾರೆ ಈ ಬಸದಿಗಳ ನಿರ್ಮಾಣ ಶೈಲಿ, ಸ್ತಂಭಗಳು, ತರಂಗ(ಸ್ತಂಭ) ಬೋಧಿಗೆಗಳು, ಸ್ಥೂಪಿಗಳ ನಿರ್ಮಾಣ ಶೈಲಿಯನ್ನು ನೋಡಿದರೆ ಇವು ಗಂಗರ ಕಾಲದಲ್ಲಿ ನಿರ್ಮಾಣವಾಗಿವೆಯೆಂದು ಡಾ. ಪಿ.ಎನ್. ನರಸಿಂಹಮೂರ್ತಿರವರು ಅಭಿಪ್ರಾಯಪಡುತ್ತಾರೆ. ಆದರೆ ಕೆ.ಆರ್.ಪೇಟೆ ತಾಲ್ಲೂಕಿನ ಬಸ್ತಿ ಎಂಬ ಗ್ರಾಮದ ಹೊಯ್ಸಳರ ಕಾಲದ ಎರಡು ಶಾಸನಗಳು ಬಸ್ತಿಹೊಸಕೋಟೆಯ ಬಸದಿಯ ಬಗ್ಗೆ ಮಾಹಿತಿ ನೀಡುತ್ತವೆ. ಈ ಶಾಸನಗಳ ಹಿನ್ನೆಲೆಯಲ್ಲಿ ನೋಡಿದಾಗ ಕೆಲವು ಬಸದಿಗಳು ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿರುವುದಕ್ಕೆ ನಿದರ್ಶನಗಳಾಗಿವೆ. ಕೆ.ಆರ್. ಪೇಟೆ ತಾಲ್ಲೂಕಿನ ಬಸ್ತಿಯ ೧೦೭ನೇ ಶಾಸನ ಬಸದಿಯ ಉತ್ತರ ದಿಕ್ಕಿನಲ್ಲಿರುವ ಪಾಳು ಮಂಟಪದ ಪೂರ್ವ ಬಾಗಿಲ ತೊಲೆಕಲ್ಲಿನಲ್ಲಿರುವ ಸ್ವಸ್ತಿ ಶ್ರೀ ಮನ್ಮಹಾಮಂಡಲೇಶ್ವರ ವಿಷ್ಣುವರ್ಧನ ಹೊಯ್ಸಳ ದೇವರು......ತತ್ಪಾದ ಪದ್ಮೋಪಜೀವಿ ಶ್ರೀ ಮನ್ಮಹಾ ಪ್ರಧಾನಂ ದಣ್ಣನಾಯಕ ಪುಣಿಸಮಯ್ಯ ಬಸದಿಯೊಂದನ್ನು ನಿರ್ಮಿಸಿ ಮೊದೂರು ನಾಡಿನ ಮಾಣಿಕ್ಯದೊಡಲೂರು, ಮತ್ತು ಮಾವಿನ ಕೆರೆಗಳನ್ನು ದಾನ ಬಿಟ್ಟ ವಿಷಯವನ್ನು ತಿಳಿಸುತ್ತದೆ. ಬಹುಶಃ ಕೆ.ಆರ್.ಎಸ್.ನ ಹಿನ್ನೀರಿನಿಂದ ಆವೃತವಾಗಿರುವ ಬಸದಿಯು ಈತನನಿಂದ ನಿರ್ಮಿಸಲ್ಪಟ್ಟ ಬಸದಿಯಾಗಿರಬಹುದು.
ಗುರುವಿನ ಅಣತಿಯಂತೆ ಪುಣಿಸಮಯ್ಯನು ಬಸ್ತಿ ಹೊಸಕೋಟೆಯಲ್ಲಿ ವಿಷ್ಣುವರ್ಧನ ಹೊಯ್ಸಳ ಜಿನಾಲಯದ ಮೂಲಸ್ಥಾನ ಬಸದಿಯನ್ನು (ಮತ್ತೊಂದು ಚಾಮರಾಜನಗರದಲ್ಲಿನ ಪಾರ್ಶ್ವನಾಥ ಬಸದಿ) ಅಲ್ಲಿ ಅವನ ಪತ್ನಿ ದಂಡನಾಯಕಿತ್ತಿ ಜಕ್ಕಿಯಬ್ಬೆ ಒಂದು ಶಿಲಾ ಬಸದಿಯನ್ನು ನಿರ್ಮಿಸಿದಳು.
ಕೆ.ಆರ್. ಪೇಟೆ ತಾಲ್ಲೋಕಿನ ಬಸ್ತಿಯ ೧೦೬ನೇ ಶಾಸನ ಜಿನದೇವರ ಬಸದಿಯ ಮುಂದಿರುವ ಮಾನಸ್ತಂಭದ ಮೇಲಿರುವ ಶಾಸನದ ವಿವರ ೧ನೇ ನರಸಿಂಹನ (ವಿಷ್ಣುವರ್ಧನ) ಕಾಲಕ್ಕೆ ಸಂಬಂಧಿಸಿದ ಕ್ರಿ.ಶ.೧೧೬೫ರ ಶಾಸನ ಶ್ರೀಮನ್ಮಹಾಪ್ರಧಾನಂ ಹೆರ್ಗಡೆ ಶಿವರಾಜನ ನಂಬಿಕಸ್ತ ಅಧಿಕಾರಿ ಸೋಮಯ್ಯನು ಮಾಣಿಕ್ಯವೊಳಲಿನ ಹೊಯ್ಸಳ ಜಿನಾಲಯಕ್ಕೆ ಪಾರ್ಥಿವ ಸಂವತ್ಸರದ ಆಷಾಡ ಶುದ್ಧ ಪಾಡಿವ ಆದಿವಾರದಂದು ಮಾಣಿಕ್ಯವೊಳಲಿನಲ್ಲಿ ಗದ್ದೆ ಹಾಗೂ ಮಗ್ಗದೆರೆಗಳನ್ನು ದಾನ ಬಿಟ್ಟ ವಿಷಯವನ್ನು ತಿಳಿಸುತ್ತದೆ..೭ ಹೀಗೆ ಈ ಶಾಸನಗಳಿಂದ ದಿನನಿತ್ಯದ ಪೂಜೆಗಾಗಿ ಪುಣಿಸಮಯ್ಯ ಹಾಗೂ ಸೋಮಯ್ಯ ಬಸದಿಹಳ್ಳಿ, ಮಾಣಿಕ್ಯದೊಡಲೂರು, ಮಾವಿನಕೆರೆ ಗ್ರಾಮಗಳನ್ನು ದತ್ತಿ ಬಿಟ್ಟಿರುವುದನ್ನೂ, ಮತ್ತು ಸೋಮಯ್ಯನು ಈ ಬಸದಿಗಳ ನಿರ್ವಹಣೆಗೆ ಧನಸಹಾಯ ಮಾಡಿರುವುದನ್ನು ತಿಳಿಸುತ್ತವೆ. ಬಹುಶಃ ಈ ಶಾಸನದಲ್ಲಿ ಉಲ್ಲೇಖಿಸಿರುವ ಮಾನಸ್ತಂಭ ಕೆ.ಆರ್.ಎಸ್. ಹಿನ್ನೀರಿನಲ್ಲಿ ಮುಳುಗಡೆಯಾಗಿರಬಹುದು.
ಮೇಲಿನ ಶಾಸನಗಳನ್ನು ಅವಲೋಕಿಸಿದಾಗ ಕ್ರಿ.ಶ.೧೨ನೇ ಶತಮಾನದಲ್ಲಿ ಬಸ್ತಿಹೊಸಕೋಟೆಗೆ ಹಿಂದೆ ಮಾಣಿಕ್ಯದೊಡಲೂರು, ಮಾಣಿಕ್ಯವೊಳಲು ಎಂಬ ಹೆಸರುಗಳಿಂದ ಕರೆಯುತ್ತಿದ್ದರೆಂದು ತಿಳಿದುಬರುತ್ತದೆ.
ಬಸ್ತಿಯ ತೀರ್ಥಂಕರರ ಶಿಲ್ಪಾಕೃತಿಗಳು: ಜೈನ ಭಕ್ತಾದಿಗಳು ಮೂಲ ಗೊಮ್ಮಟನ ಮೂರ್ತಿಯ ಎರಡುಬದಿಯಲ್ಲಿ ಇಟ್ಟಿರುವ ತೀರ್ಥಂಕರರ ಸುಂದರವಾದ ಶಿಲ್ಪಾಕೃತಿಗಳು ಗಮನ ಸೆಳೆದವು. ಇವುಗಳಲ್ಲಿ ಕೆಲವು ಗಂಗರ ಕಾಲಕ್ಕೆ ಸಂಬಂಧಿಸದ್ದಿರುಬಹುದು. ಒಂದು ಸುಂದರವಾದ ತೀರ್ಥಂಕರನ ಶಿಲ್ಪಾಕೃತಿಯ ತಳಭಾಗದಲ್ಲಿ ಸಿಂಹದ ಚಿಹ್ನೆಯಿರುವುದರಿಂದ ಇದು ಮಹಾವೀರನ ಶಿಲ್ಪಕೃತಿಯೆಂದು ತಿಳಿದುಬರುತ್ತದೆ.
ಜೈನ ಧರ್ಮದಲ್ಲಿ ಯಕ್ಷ-ಯಕ್ಷಿಣಿಯರ ಆರಾಧನೆ ರೂಢಿಯಲ್ಲಿತ್ತೆಂಬುದನ್ನು ಮಹಾವೀರನ ಮೂರ್ತಿ ಶಿಲ್ಪದಲ್ಲಿರುವ ಸುಂದರವಾದ ಕೆತ್ತನೆಯಿಂದ ಕೂಡಿರುವ ಯಕ್ಷರ ಶಿಲ್ಪಾಕೃತಿಗಳಿಂದ ತಿಳಿದುಕೊಳ್ಳಬಹುದು. ತೀರ್ಥಂಕರರಿಗೆ ಸಲ್ಲಬೇಕಾದ ಪೂಜೆಯ ಜೊತೆ ಅವನ ಪಕ್ಕದಲ್ಲಿರುತ್ತಿದ್ದ ಯಕ್ಷ-ಯಕ್ಷಿಣಿಯರಿಗೂ ಪೂಜೆ ಸಲ್ಲಿಸಲಾಗುತ್ತಿತ್ತು. ಇದನ್ನೇ ಡಾ|| ದೇಸಾಯಿರವರು ಯಕ್ಷೀ ಆರಾಧನಾ ಎಂದು ಕರೆದಿದ್ದಾರೆ.೧೦ ಇದಲ್ಲದೆ ನಾಲ್ಕು ಜೈನ ತೀರ್ಥಂಕರರ ಶಿಲ್ಪಕೃತಿಗಳು ಕಂಡುಬರುತ್ತವೆ. ಇವುಗಳಲ್ಲಿ ಒಂದು ತೀರ್ಥಂಕರರ ಶಿಲ್ಪಾಕೃತಿಯ ಶಿರದ ಭಾಗ ನಾಶವಾಗಿದ್ದರೆ. ಕಾಯೋತ್ಸರ್ಗ ಹಾಗೂ ಪದ್ಮಾಸನ ಶೈಲಿಯ ತೀರ್ಥಂಕರರ ಶಿಲ್ಪಗಳು ಮುಕ್ಕಾಗಿರುವುದನ್ನು ಕಾಣಬಹುದು.
ಆದರೆ ಈ ತೀರ್ಥಂಕರರ ಶಿಲ್ಪಕೃತಿಗಳು ಯಾವ ತೀರ್ಥಂಕರರಿಗೆ ಸಂಬಂಧಿಸಿದ್ದವು ಎಂಬುದನ್ನು ತಿಳಿಯಲು ಈ ತೀರ್ಥಂಕರರ ತಳಭಾಗದಲ್ಲಿ ಯಾವುದೇ ಚಿಹ್ನೆ ಕಂಡುಬರುವುದಿಲ್ಲ. ಆದರೂ ಈ ಶಿಲ್ಪಾಕೃತಿಗಳನ್ನು ಆದಿನಾಥ, ಶಾಂತಿನಾಥ, ನೇಮಿನಾಥ ತೀರ್ಥಂಕರರಿಗೆ ಸಂಬಂಧಿಸಿರಬಹುದು. ಏಕೆಂದರೆ ೨೪ ಮಂದಿ ತೀರ್ಥಂಕರರ ಶಿಲ್ಪ ವಿಶೇಷತೆಯ ಲಕ್ಷಣಗಳಲ್ಲಿ ವ್ಯತ್ಯಾಸ ಕಂಡುಬರದೆ ಒಂದೇ ತೆರನಾಗಿ ಕಂಡುಬರುವುದರಿಂದ ತೀರ್ಥಂಕರರನ್ನು ಗುರ್ತಿಸುವಾಗ ಪೀಠಭಾಗದಲ್ಲಿರುವ ಲಾಂಛನದಿಂದ ಗುರ್ತಿಸಬೇಕಾಗುತ್ತದೆ. ಅಲ್ಲದೆ ಜೈನ ಪರಂಪರೆಯ ೨೪ ಮಂದಿ ತೀರ್ಥಂಕರರಲ್ಲಿ ೨೧ ಮಂದಿ ತೀರ್ಥಂಕರರು ಕಾಯೋತ್ಸರ್ಗ ಭಂಗಿಯಲ್ಲಿ (ಸ್ಥಾನಿಕ\ಖಡ್ಗಾಸನ) ನಿರ್ಮಾಣವಾಗಿದ್ದರೆ ಉಳಿದ ಮೂವರು ತೀರ್ಥಂಕರರಾದ ಆದಿನಾಥ, ನೇಮಿನಾಥ, ಮಹಾವೀರ ತೀರ್ಥಂಕರರು ಪದ್ಮಾಸನ ಮಾದರಿಯಲ್ಲಿ ಧ್ಯಾನಸಕ್ತರಾಗಿರುವಂತೆ ನಿರ್ಮಿಸಿರುವುದರಿಂದ ಮೇಲಿನಂತೆ ವಿಶ್ಲೇಷಿಸಬಹುದು.೧೧ ಕ್ರಿ.ಶ.೧೧೪೭ರಲ್ಲಿ ಹೊಯ್ಸಳ ದೊರೆ ವಿಷ್ಣುವರ್ಧನನ ಮಹಾಪ್ರಧಾನ ದಂಡನಾಯಕ ಪುಣಿಸಮಯ್ಯನು ಜೈನ ತೀರ್ಥಂಕರರಾದ ಆದಿನಾಥ, ಶಾಂತಿನಾಥ, ನೇಮಿನಾಥ ಹಾಗೂ ಮಹಾವೀರರ ಸುಂದರವಾದ ಶಿಲ್ಪಾಕೃತಿಗಳನ್ನು ಬಳಪದಕಲ್ಲಿನಿಂದ ನಿರ್ಮಿಸಿರುವನೆಂದು ಮೂಲ ಗೊಮ್ಮಟನ ಮೂರ್ತಿಯ ಒಳಭಾಗದಲ್ಲಿ ಶ್ರೀಮಹಾವೀರ ಸಂಘ, ಬೆಂಗಳೂರುರವರು ಹಾಕಿಸಿರುವ ಫಲಕದಿಂದ ತಿಳಿದು ಬರುತ್ತದೆ.
ಭಾರಿ ಗಾತ್ರದ ಯಕ್ಷ-ಯಕ್ಷಿಣಿಯರ ಸುಂದರವಾದ ಶಿಲ್ಪಾಕೃತಿಗಳು ಬಹು ಆಕರ್ಷಣೀಯವಾಗಿವೆ. ಸುಂದರ ಕೆತ್ತನೆಯಿಂದ ಕೂಡಿರುವ ಹಂಸಗಳ ಹಾಗೂ ಇತರೆ ಶಿಲ್ಪಾಕೃತಿಗಳಿಂದ ಕೂಡಿರುವ ಪ್ರವೇಶದ್ವಾರದ ತೊಲೆ, ಸುಂದರವಾಗಿ ಕೆತ್ತಲ್ಪಟ್ಟಿರುವ ಅಷ್ಟದಿಕ್ಪಾಲಕರ ಶಿಲ್ಪಾಕೃತಿಗಳನ್ನೊಳಗೊಂಡ ಮೇಲ್ಛಾವಣಿಯ ಭಾಗದ ಚಪ್ಪಡಿಯ ಭಾಗಗಳನ್ನು ಮೂಲ ಗೊಮ್ಮಟಮೂರ್ತಿಯ ಬದಿಯಲ್ಲಿ ಬೆಂಗಳೂರಿನ ಜೈನ ಭಕ್ತಾದಿಗಳು ಸಂರಕ್ಷಿಟ್ಟಿರುವುದನ್ನು ಕಾಣಬಹುದು.
ಇವುಗಳಲ್ಲದೆ, ಸ್ತಂಭಗಳು, ವಿವಿಧ ಶಿಲ್ಪಾಕೃತಿಗಳು, ತರಂಗ ಬೋಧಿಗೆಗಳು, ಸ್ತಂಭ ಬೋಧಿಗೆಗಳು, ಇಟ್ಟಿಗೆಗಳು, ಎಲ್ಲಿಂದರಲ್ಲಿ ಬಿದ್ದಿರುವುದರಿಂದ ಒಂದು ರೀತಿ ಬಯಲು ವಸ್ತು ಸಂಗ್ರಹಾಲಯದಂತೆ ಗೋಚರಿಸುತ್ತದೆ.೧೨ ಜೈನ ಭಕ್ತಾದಿಗಳು ಇಲ್ಲಿನ ಸ್ತಂಭಗಳಿಗೆ ಬಣ್ಣ ಬಳಿದು ವಿರೂಪಗೊಳಿಸುವುದರ ಮೂಲಕ ಸ್ತಂಭಗಳ ಮೂಲ ಸ್ವರೂಪಕ್ಕೆ ಧಕ್ಕೆಯನ್ನುಂಟು ಮಾಡಲಾಗಿದೆ.
ಉಪಸಂಹಾರ: ಬಸ್ತಿಹೊಸಕೋಟಯಲ್ಲಿ ಕಂಡುಬರುವ ಜೈನ ಅವಶೇಷಗಳಿಂದಾಗಿ ಈ ಪ್ರದೇಶದಲ್ಲಿ ಹಿಂದೆ ಜೈನ ಧರ್ಮದ ಪ್ರಾಬಲ್ಯ ಹೆಚ್ಚಾಗಿತ್ತೆಂದು ತಿಳಿದುಬರುತ್ತದೆ. ಆದರೆ ಇಂದು ಈ ಪ್ರದೇಶದಲ್ಲಿ ಜೈನ ಧರ್ಮಿಯರಾರು ಕಂಡುಬರುವುದಿಲ್ಲ, ಆದರೆ ಮಂಡ್ಯ ಜಿಲ್ಲೆ ಗಂಗರಸರ ಹಾಗೂ ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿದ್ದ ಸಂದರ್ಭದಲ್ಲಿ ಜೈನ ಧರ್ಮೀಯರು ಅಧಿಕ ಸಂಖೈಯಲ್ಲಿ ನೆಲೆಸಿದ್ದರು ಎಂಬುದಕ್ಕೆ ಈ ಪ್ರದೇಶದಲ್ಲಿರುವ ಬಸ್ತಿಪುರ, ಬಸ್ತಿಹಳ್ಳಿ, ಬಸ್ತಿಕಟ್ಟೆ, ಬಸ್ತಿಹೊಸಕೋಟೆಗೆ ಬದಲು ಕುರುಬರಬಸ್ತಿ ಹಾಗೂ ಎ.ಕೆ. ಬಸ್ತಿ ಎಂಬ ಹೆಸರಿನ ಗ್ರಾಮಗಳು ಜೈನ ಬಸದಿಯ ಹೆಸರಿನಲ್ಲಿರುವುದೇ ನಿದರ್ಶನವಾಗಿದೆ. ಈ ಪ್ರದೇಶದಲ್ಲಿದ್ದ ಜೈನ ಧರ್ಮಿಯರು ಕಾಲಾನಂತರ ಯಾವ ಕಾರಣದಿಂದ ಬೇರೆ ಕಡೆ ಹೋಗಿದ್ದಾರೆ ಎಂಬುದನ್ನು ಅರಿಯಲು ಹೆಚ್ಚಿನ ಸಂಶೋಧನೆ ಆಸಕ್ತ ಇತಿಹಾಸಕಾರರಿಂದ ಆಗಬೇಕಾಗಿರುವುದು ಅಗತ್ಯವಿದೆ.

ಆಧಾರಸೂಚಿ ಮತ್ತು ಟಿಪ್ಪಣಿಗಳು
೧.    ಪುಟ ೫೬೫-೫೬೬, ಅನಂತರಾಮು, ಸಕ್ಕರೆಯ ಸೀಮೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು-೨೦೦೪.
೨.    ಪುಟ ೬೪, ಭಟ್‌ಸೂರಿ ಕೆ.ಜಿ. ಹಾಡುವಳ್ಳಿ ಜೈನ ಶಾಸನ ವಾಸ್ತು-ಮೂರ್ತಿಶಿಲ್ಪ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ-೨೦೧೧.
೩.    ಪುಟ ೫೬೭, ಅನಂತರಾಮು, ಸಕ್ಕರೆಯ ಸೀಮೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು-೨೦೦೪.
೪.    ಪುಟ ೧೮, ಭಟ್‌ಸೂರಿ ಕೆ.ಜಿ. ಹಾಡುವಳ್ಳಿ ಜೈನ ಶಾಸನ ವಾಸ್ತು-ಮೂರ್ತಿಶಿಲ್ಪ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ-೨೦೧೧.
೫.    ಪುಟ ೯೬, ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೬, ೧೯೭೭. (ಪರಿಷ್ಕೃತ).
೬.    ಪುಟ ೨೪೫, ಕೃಷ್ಣರಾವ್ ಎಂ.ವಿ., ಕೇಶವ ಭಟ್. ಎಂ. ಕರ್ನಾಟಕ ಇತಿಹಾಸ ದರ್ಶನ, ಕರ್ನಾಟಕ ಸಹಕಾರಿ ಪ್ರಕಾಶನ,ಬೆಂಗಳೂರು,೧೯೭೦.
೭.    ಪುಟ ೯೫, ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೬, ೧೯೭೭, (ಪರಿಷ್ಕೃತ).
೮.    ಪುಟ ೫೬೭, ಕೆ. ಅನಂತರಾಮು, ಸಕ್ಕರೆಯ ಸೀಮೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೨೦೦೪.
೯.    ಪುಟ ೨೩೮, ಗೋಪಾಲ್. ಆರ್. (ಸಂ) ಮಂಡ್ಯ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ತ್ವ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು, ೨೦೦೮.
೧೦.   ಪುಟ ೧೦೦. ಚಿದಾನಂದಮೂರ್ತಿ. ಎಂ. ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಪ್ರಸಾರಾಂಗ, ಮೈಸೂರು ವಿ.ವಿ., ೧೯೬೬.
೧೧.   ಪುಟ ೩೭, ಭಟ್ ಸೂರಿ ಕೆ.ಜಿ. ಹಾಡುವಳ್ಳಿ ಜೈನ ಶಾಸನ ವಾಸ್ತು-ಮೂರ್ತಿಶಿಲ್ಪ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೧೧.
೧೨.   ಪುಟ ೧೭, ತೈಲೂರು ವೆಂಕಟಕೃಷ್ಣ, ಮಂಡ್ಯ ಜಿಲ್ಲೆಯ ದೇವಾಲಯಗಳು ಒಂದು ಅವಲೋಕನ, ಭಾನು ಪ್ರಕಾಶನ, ಮಂಡ್ಯ, ೨೦೧೦.


Ÿ